ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಓಡುವ ಕುದುರೆ. ಆತ ನಿಂತರೂ ಸುದ್ದಿ, ಕೂತರೂ ಸುದ್ದಿ. ದೆಹಲಿ ಮೂಲದ ಈ ಸ್ಫೋಟಕ ಬ್ಯಾಟ್ಸ್ ಮನ್ ಗೆ ಒಬ್ಬ ಅಥ್ಲೀಟ್ ಗೆ ಇರುವಂಥ ದೈಹಿಕ ಕ್ಷಮತೆ, ದೃಢತೆ ಇದೆ ಎಂಬುದು ಈಗ ರಹಸ್ಯವಾಗಿಯೇನೂ ಇಲ್ಲ. ಆದರೆ ಆತನ ಆರೋಗ್ಯ ರಹಸ್ಯದ ಒಂದು ಭಾಗವೇ ಆಗಿರುವ ಕುಡಿಯುವ ನೀರಿಗಾಗಿ ಆತ ಮಾಡುವ ಖರ್ಚೆಷ್ಟು ಗೊತ್ತಾ?
ಒಂದು ಲೀಟರ್ ಕುಡಿಯುವ ನೀರಿನ ಬಾಟಲ್ ಗೆ 600 ರುಪಾಯಿ. ವಿರಾಟ್ ಕೊಹ್ಲಿಯ ಕುಡಿಯುವ ನೀರಿನ ಬಾಟಲ್ ಬರುವುದು ಫ್ರಾನ್ಸ್ ನಿಂದ. ಆಮದಾಗಿ ಬರುವ ಆ ನೀರಿನಲ್ಲಿನ ಖನಿಜಯುಕ್ತ ಅಂಶಗಳು ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ. ಇನ್ನೊಂದು ವಿಚಾರ, ಆ ನೀರನ್ನು ತುಂಬುವ ಬಾಟಲ್ ಅನ್ನು ಮಾಡುತ್ತಾರಲ್ಲ, ಅದರ ಮಟಿರೀಯಲ್ ಕೂಡ ಸಿಕ್ಕಾಪಟ್ಟೆ ಕಾಸ್ಟ್ಲಿ ಅಂತೆ.
Evian ನ್ಯಾಚುರಲ್ ಮಿನರಲ್ ವಾಟರ್
ಒಂದು ಕಾಲಕ್ಕೆ ನಾನ್ ವೆಜ್ ಬಹಳ ಇಷ್ಟಪಟ್ಟು ತಿನ್ನುತ್ತಿದ್ದ ಕೊಹ್ಲಿ, ಈಗಂತೂ ಫಿಟ್ ನೆಸ್ ಕಾರಣಕ್ಕೆ ಪೂರ್ತಿ ಬದಲಾಗಿದ್ದಾರೆ. ಅವರು ಕುಡಿಯಲು ಬಳಸುವ ನೀರಿನ ಬ್ರ್ಯಾಂಡ್ ಹೆಸರು Evian ನ್ಯಾಚುರಲ್ ಮಿನರಲ್ ವಾಟರ್. ಇದು ಭಾರತಕ್ಕೆ ಬರುವುದು ಫ್ರಾನ್ಸ್ ನಿಂದ. ಹಾಗಂತ ಇದು ಕೊಹ್ಲಿಗೆ ಮಾತ್ರ ಬರುತ್ತದೆ ಅಂದುಕೊಳ್ಳಬೇಡಿ. ಭಾರತದ ನಾನಾ ಭಾಗಗಳಲ್ಲಿ, ನಾನಾ ಅಳತೆಯ Evian ಬ್ರ್ಯಾಂಡ್ ನ ಮಿನರಲ್ ವಾಟರ್ ಖರೀದಿಗೆ ಸಿಗುತ್ತದೆ. ಆದರೆ ಖರೀದಿಗೆ ಮಾತ್ರ ಕಾಸ್ಟ್ಲಿ. ಆ ಕಾರಣಕ್ಕೆ ಎಲ್ಲೆಂದರಲ್ಲಿ ಸಿಗಲ್ಲ. ಕೊಹ್ಲಿ ತಾವೆಲ್ಲೇ ತೆರಳಿದರೂ ತಮ್ಮೊಂದಿಗೆ ಅಗತ್ಯ ಪ್ರಮಾಣದಲ್ಲಿ ಕುಡಿಯುವ ನೀರನ್ನು ಸಹ ತೆಗೆದುಕೊಂಡು ಹೋಗುತ್ತಾರೆ. ಕ್ರಿಕೆಟ್ ಮೈದಾನದಲ್ಲಿ ಇರಲಿ, ಜಿಮ್ ನಲ್ಲಿರಲಿ ಅಥವಾ ರೆಸ್ಟೋರೆಂಟ್ ಗೆ ಹೋಗಲಿ ಕೊಹ್ಲಿ ಜತೆಗೆ ಈ ನೀರು ಇದ್ದೇ ಇರುತ್ತದೆ.
ಪ್ರತಿ ಲೀಟರ್ ಗೆ 600 ರುಪಾಯಿ
ವಿರಾಟ್ ಕೊಹ್ಲಿ ದುಬಾರಿ ಬೆಲೆಯ ನೀರು ಕುಡಿಯುತ್ತಾರೆ ಅಂತ ನೀವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಓದಿದ್ದರೆ ಅದು ಸುಳ್ಳೇನಲ್ಲ. ಏಕೆಂದರೆ Evian ನೀರು ಪ್ರತಿ ಲೀಟರ್ ಗೆ 600 ರುಪಾಯಿ ಆಗುತ್ತದೆ. ಭಾರತದಲ್ಲಿ 330 ml, 500 ml, 750 ml, 1 ltr ಹಾಗೂ 1.5 ltr ಹೀಗೆ ನಾನಾ ಅಳತೆಯಲ್ಲಿ ಖರೀದಿಗೆ ಸಿಗುತ್ತದೆ. ಸರಿ, ಏನು ಈ ಸ್ವಾಮಿ ಈ ನೀರಲ್ಲಿ ವಿಶೇಷ ಎಂಬುದು ಸಹಜವಾಗಿ ಮುಂದಿನ ಪ್ರಶ್ನೆ ಆಗಿರುತ್ತದೆ. ಪಶ್ಚಿಮ ಯುರೋಪ್ ನಲ್ಲಿ ಅತಿ ದೊಡ್ಡ ಸರೋವರ ಜಿನಿವಾ. ಇದನ್ನು ಫ್ರಾನ್ಸ್ ಮತ್ತು ಸ್ವಿಟ್ಜರ್ ಲೆಂಡ್ ಹಂಚಿಕೊಳ್ಳುತ್ತವೆ. ಅದರ ಬಳಿ Evian- Les- Bains ಇದೆ. Evian ಬ್ರ್ಯಾಂಡ್ ನ ನೀರಿನ ಮೂಲವೇ ಇದು.
ಶೇಕಡಾ ನೂರರಷ್ಟು ನೈಸರ್ಗಿಕವಾದದ್ದು
ಬಾಟಲಿಯಲ್ಲಿ ತುಂಬುವ ನೀರು ಶೇಕಡಾ ನೂರರಷ್ಟು ನೈಸರ್ಗಿಕವಾದದ್ದು. ಅದನ್ನು Evian- Les- Bains ಪ್ರದೇಶದಿಂದ ತೆಗೆಯಲಾಗುತ್ತದೆ. ಈ ನೀರನ್ನು ಯಾವುದೇ ರಾಸಾಯನಿಕ ಸಂಸ್ಕರಣೆಗೆ ಒಳಪಡಿಸುವುದಿಲ್ಲ. ಜಗತ್ತಿನ ಅತ್ಯಂತ ಶ್ರೀಮಂತ ಖನಿಜಯುಕ್ತ ನೀರು ಇದು. ಶೇಕಡಾ ನೂರರಷ್ಟು ಅದರ ಗುಣವನ್ನು ಹಾಗೇ ಕಾಯ್ದುಕೊಳ್ಳಲಾಗುತ್ತದೆ. ಯಾರಾದರೂ ನೈಸರ್ಗಿಕವಾದ ಅತ್ಯುತ್ತಮ ನೀರು ಕುಡಿಯಲು ಬಯಸಿದರೆ ಅಂಥವರು Evian ಬ್ರ್ಯಾಂಡ್ ನ ನೀರು ಕುಡಿಯಬಹುದು. ಸಾಮಾನ್ಯ ನೀರಿನಲ್ಲಿ ಇರುವ ಕ್ಯಾಲ್ಷಿಯಂ, ಕ್ಲೋರೈಡ್, ಮೆಗ್ನೀಷಿಯಂ, ಪೊಟ್ಯಾಷಿಯಂ ಮತ್ತು ಸೋಡಿಯಂ ಪ್ರಮಾಣವು Evianನಲ್ಲಿ ಸರಿಯಾದ ಅಳತೆಯಲ್ಲಿ ಇರುತ್ತದೆ.
ನೀರಿನ ಖರ್ಚು ವರ್ಷಕ್ಕೆ 4,32,0000 ರುಪಾಯಿ
ನೀವು ಬೇರೆಲ್ಲೇ ಮತ್ತು ಯಾವುದೇ ಬ್ರ್ಯಾಂಡ್ ನ ಮಿನರಲ್ ವಾಟರ್ ಪ್ರಯತ್ನಿಸಿದರೂ ಅದು ನೈಸರ್ಗಿಕವಾಗಿ ಇರಲ್ಲ. ಆ ನೀರನ್ನು ರಾಸಾಯನಿಕವಾಗಿ ಸಂಸ್ಕರಿಸಲಾಗಿರುತ್ತದೆ. ಆದ್ದರಿಂದ Evianನಂಥ ಶುದ್ಧ ನೀರು ಸಿಗುವುದು ವಿರಳ. ಆ ಕಾರಣಕ್ಕೆ ಇದು ವಿಪರೀತ ದುಬಾರಿ. ತಮ್ಮ ಫಿಟ್ ನೆಸ್ ಬಗ್ಗೆ ತುಂಬ ಗಮನ ನೀಡುವ ವಿರಾಟ್ ಕೊಹ್ಲಿ, ತಾವು ಕುಡಿಯುವ ನೀರು ನೈಸರ್ಗಿಕವಾಗಿ ಇರಬೇಕು ಎಂದು ಬಯಸುವುದರಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಇನ್ನು Evian ನೀರು ತುಂಬಲು ಬಳಸುವುದು ಪಾಲಿಎಥಿಲೀನ್ ಟೆರಿಫ್ ಥ್ಲೇಟ್ (PET). ಪ್ಲಾಸ್ಟಿಕ್ ಬದಲಿಗೆ ಇದನ್ನು ಬಳಸಲಾಗುತ್ತದೆ. PET ಬಾಟಲಿಗಳು ಮರುಬಳಕೆಗೆ ಬಹಳ ಅನುಕೂಲವಾದದ್ದು. ಆದ್ದರಿಂದ ಅದರ ಕಚ್ಚಾ ಪದಾರ್ಥವು ದುಬಾರಿ. ಇದೂ ಸೇರಿಕೊಂಡು Evian ಅನ್ನು ಕಾಸ್ಟ್ಲಿ ಮಾಡಿದೆ. ಇನ್ನು ಈ ನೀರಿನಲ್ಲಿ ಉಪ್ಪಿನಂಶ ಜಾಸ್ತಿಯಂತೆ. ಭಾರತದಲ್ಲಿ ಈ ಬ್ರ್ಯಾಂಡ್ ನೀರು ಸಿಗುತ್ತದೆ. ಒಂದು ದಿನಕ್ಕೆ ಎರಡು ಲೀಟರ್ ನೀರು ಕುಡಿಯಬಹುದು ಅಂದುಕೊಂಡರೂ ವಿರಾಟ್ ಕೊಹ್ಲಿಗೆ ಕುಡಿಯುವ ನೀರಿನ ಖರ್ಚು ವರ್ಷಕ್ಕೆ 4,32,0000 ರುಪಾಯಿ ಆಗುತ್ತದೆ. ಇಂಟರೆಸ್ಟಿಂಗ್ ಅಲ್ಲವಾ?


Click it and Unblock the Notifications