ಬೆಂಗಳೂರು, ಜೂನ್ 12: ಕೇಂದ್ರ ಸರ್ಕಾರದಲ್ಲಿ ಹೊಸದಾಗಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ವಹಿಸಿಕೊಂಡಿರುವ ಹೆಚ್‌ಡಿ ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಟೆಸ್ಲಾ ಕಂಪೆನಿ ತರುವ ಕುರಿತು ಹೇಳಿಕೆ ನೀಡಿದ್ದಾರೆ.
ನಿನ್ನೆ ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡು ಅಧಿಕಾರಿಗಳ ಸಭೆ ನಡೆಸಿರುವ ಅವರು ಬಳಿಕ ಮಾತನಾಡಿ, ನಾನು ಸ್ವಾರ್ಥಿಯಲ್ಲ. ಈಗ ನನ್ನ ಗಮನ ಕೇವಲ ಕರ್ನಾಟಕವಲ್ಲ ಇಡೀ ದೇಶವಾಗಿದೆ. ರಾಜ್ಯಕ್ಕೆ ಟೆಸ್ಲಾ ತರುವ ಆಸೆ ಇದೆ, ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಆರಂಭಿಸುವಂತೆಯೂ ಸೂಚನೆ ನೀಡಿದ್ದಾರೆ.

ಚೀನಾದೊಂದಿಗೆ ಸ್ಪರ್ಧೆಗೆ ರೆಡಿಯಾಗುವಂತೆಯೂ ಕರೆ ನೀಡಿದ್ದಾರೆ. ಭಾರತಕ್ಕೆ ಟೆಸ್ಲಾ ಕಾರು ತಯಾರಿಕಾ ಕಂಪೆನಿ ಹೂಡಿಕೆ ಮಾಡುವ ಬಗ್ಗೆ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಟೆಸ್ಲಾ ಮಾಲೀಕ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬೇಕಿದ್ದವರು ಕೊನೆಗೆ ಆಗಲೇ ಇಲ್ಲ. ಅವರು ಭಾರತಕ್ಕೆ ಬರುವ ಬದಲು ಚೀನಾಕ್ಕೆ ಹಾಗೂ ನೆರೆಯ ಶ್ರೀಲಂಕಾಗೂ ಭೇಟಿ ಭಾರತಕ್ಕೆ ಬರಲಿಲ್ಲ.
ಈಗ ಮತ್ತೆ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗ ಟೆಸ್ಲಾ ಕಾರುಗಳ ಕಾರ್ಖಾನೆ ತೆರೆಯುವ ಬಗ್ಗೆ ಮತ್ತೆ ಚರ್ಚೆಗಳು ಶುರುವಾಗಿದ್ದು, ಕುಮಾರಸ್ವಾಮಿ ಅವರ ಹೇಳಿಕೆ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಕರ್ನಾಟಕವೂ ಭಾರತದಲ್ಲಿ ಹೂಡಿಕೆ ಆಯ್ಕೆಯ ಮೊದಲ ರಾಜ್ಯವಾಗಿ ನಿಲ್ಲುತ್ತದೆ, ಇದಕ್ಕೆ ಇಲ್ಲಿನ ಸುಲಲಿತ ನೀತಿಗಳೇ ಕಾರಣವಾಗಿವೆ.
ಅದ್ಯಾಗೂ ಕರ್ನಾಟಕಕ್ಕೆ ಟೆಸ್ಲಾ ಕಾರ್ಖಾನೆಯು ಘಟಕ ತೆರೆಯವುದರಿಂದ ಸಾಕಷ್ಟು ಪ್ರಯೋಜನೆಗಳು ಉಂಟಾಗಲಿವೆ. ಕುಮಾರಸ್ವಾಮಿ ಅವರು ಹಳೆ ಮೈಸೂರು ಭಾಗಕ್ಕೆ ಹೆಚ್ಚು ಆದ್ಯತೆ ನೀಡಿದರಂತೂ ಟೈರ್ 2 ನಗರಗಳ ಬೆಳವಣಿಗೆಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಸಲಹೆಗಳು ಬರತೊಡಗಿವೆ. ಒಂದು ವೇಳೆ ಟೆಸ್ಲಾ ಕಾರು ತಯಾರಿಕ ಕಂಪೆನಿ ಕರ್ನಾಟಕಕ್ಕೆ ಬಂದರೆ ಆಗುವ ಪ್ರಯೋಜನಗಳ ಇಂತಿವೆ.
ಉದ್ಯೋಗ:
ಭಾರತದಲ್ಲಿ ನಿರುದ್ಯೋಗ ಪ್ರಮಾಣ ಸಾಕಷ್ಟು ಕಾಡುತ್ತಿದ್ದು, ಈಗಾಗಲೇ ಐಟಿ ಕಂಪೆನಿಗಳು ಸೇರಿದಂತೆ ಹಲವಾರು ಕಡೆ ನೌಕರರ ವಜಾ ಪ್ರಕ್ರಿಯೆಗಳು ಮುಂದುವರೆದಿವೆ. ಒಂದು ವೇಳೆ ಟೆಸ್ಲಾ ಕಂಪೆನಿ ಬಂದಿದ್ದೇ ಆದರೆ ನಿರುದ್ಯೋಗ ಪ್ರಮಾಣ ಕರ್ನಾಟಕದ ಮಟ್ಟಿಗೆ ಕಡಿಮೆಯಾಗಲಿದೆ.
ತೆರಿಗೆ:
ಟೆಸ್ಲಾ ಕಂಪೆನಿ ಕರ್ನಾಟಕದಲ್ಲಿ ಘಟಕ ತೆರೆಯುವುದರಿಂದ ಸರ್ಕಾರಕ್ಕೆ ಅಧಿಕ ಪ್ರಮಾಣದ ತೆರಿಗೆ ಸಂದಾಯವಾಗಲಿದೆ. ಕರ್ನಾಟಕದಲ್ಲಿ ಕಾರ್ಫೋರೇಟ್ ತೆರಿಗೆ ಅಧಿಕವಿದೆ. ಈ ಮೂಲಕ ಸರ್ಕಾರಕ್ಕೆ ಅಧಿಕ ಪ್ರಮಾಣದ ತೆರಿಗೆ ಹರಿದು ಬರಲಿದ್ದು, ಜನಪಯೋಗಿ ಯೋಜನಗಳಿಗೆ ಉಪಯೋಗವಾಗಲಿದೆ. ಈಗಾಗಲೇ ಜಿಎಸ್‌ಟಿ ಕಟ್ಟುವುದರಲ್ಲಿ ಕರ್ನಾಟಕ ಎರಡನೇ ರಾಜ್ಯವಾಗಿದ್ದು, ಈ ಮೂಲಕ ದೇಶದ ತೆರಿಗೆ ಕೊಡುಗೆ ಪಾಲು ಮತ್ತಷ್ಟು ಬೆಳೆಯಲಿದೆ.
ತಲಾ ಆದಾಯ ಹೆಚ್ಚಳ:
ಟೆಸ್ಲಾ ಕಂಪನಿ ಕರ್ನಾಟಕದಲ್ಲಿ ಬರುವುದರಿಂದ ಕಂಪೆನಿಯಿಂದ ಸೃಷ್ಟಿಯಾಗುವ ಉದ್ಯೋಗಗಳ ಮೂಲಕ ಸ್ಥಳೀಯ ಜನರ ತಲಾ ಆದಾಯವೂ ಹೆಚ್ಚಳವಾಗಲಿದೆ. ಈ ಮೂಲಕ ಅವರ ಕೊಳ್ಳುವ ಶಕ್ತಿಯೂ ಹೆಚ್ಚಳವಾಗಲಿದ್ದು, ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಟೆಸ್ಲಾ ಬಹುರಾಷ್ಟ್ರೀಯ ಕಂಪೆನಿಯಾಗಿರುವುದರಿಂದ ಹೆಚ್ಚಳ ವೇತನವನ್ನೂ ನೀಡಲಿದೆ. ಇದರಿಂದ ಹಲವಾರು ಉದ್ಯೋಗಿಗಳ ಜೀವನಮಟ್ಟ ಸುಧಾರಣೆಯಾಗಲಿದೆ.
ಟೈರ್ ೨ ನಗರಗಳ ಬೆಳವಣಿಗೆ:
ಬೆಂಗಳೂರಿನಂತ ಮೆಟ್ರೋ ಸಿಟಿಗಳು ಬೆಳವಣಿಗೆಯಾಗುತ್ತಲೇ ಇರುತ್ತವೆ. ಇದರಿಂದ ನಗರೀಕರಣಗಳ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಟೆಸ್ಲಾದಂತಹ ಕಂಪನಿಯು ಬೆಂಗಳೂರಿನ ಬದಲಿಗೆ ಮೈಸೂರು, ರಾಮನಗರ, ಚಿತ್ರದುರ್ಗ, ಬಾಗಲಕೋಟೆಯಂತಹ ನಗರಗಳ ಬಳಿ ಘಟಕ ತೆರೆಯುವುದರಿಂದ ಟೈರ್ ೨ ಸಿಟಿಗಳು ಬೆಳವಣಿಗೆಯಾಗಲಿವೆ.
ಉತ್ತಮ ಮೂಲಭೂತ ಸೌಕರ್ಯ :
ಯಾವುದೇ ನಗರ ಅಭಿವೃದ್ಧಿಯಾಗಬೇಕಿದ್ದರೆ ಮೂಲಭೂತ ಸೌಕರ್ಯಗಳು ಹೆಚ್ಚಾಗಬೇಕು. ಹೀಗಾಗಿ ಬಹುರಾಷ್ಟ್ರೀಯ ಕಂಪೆನಿಯೊಂದು ಬಾಗಿಲು ತೆರೆಯುವುದರಿಂದ ರಸ್ತೆ, ನೀರು ಹಾಗೂ ಎಲೆಕ್ಟ್ರಿಸಿಟಿಯಂತ ಮೂಲಭೂತ ಸೌಕರ್ಯಗಳು ಹೆಚ್ಚಾಗುತ್ತವೆ.


Click it and Unblock the Notifications