"ನಿಮಗಿಂತ ನಿಮ್ಮ ಬಗ್ಗೆ ಯಾರಿಗೆ ಹೆಚ್ಚಿಗೆ ಗೊತ್ತು?" - ಇದು ಬಹಳ ರೊಮ್ಯಾಂಟಿಕ್ ಆದ ಪ್ರಶ್ನೆಯಾಯಿತು ಅಂದುಕೊಳ್ಳುತ್ತಿದ್ದೀರಾ? ಖಂಡಿತಾ ಇಲ್ಲ. ಇದು ಬಹು ಮಟ್ಟಿಗೆ ಸತ್ಯ. ಏಕೆಂದರೆ, ಲಾಕ್ ಡೌನ್ ಸಂದರ್ಭದಲ್ಲಿ ಭಾರತೀಯರ ಆದ್ಯತೆಗಳೇನು, ಅವರ ಸಿಟ್ಟು, ಸೆಡವು, ಪ್ರೀತಿ, ಆತಂಕ ಎಲ್ಲದರ ಬಗ್ಗೆಯೂ ಹೆಚ್ಚಾಗಿಯೇ ತಿಳಿದುಕೊಂಡಿದೆ 'ಗೂಗಲ್ ಮಹಾತಾಯಿ'.
ಗೂಗಲ್ ಸರ್ಚ್ ಎಂಜಿನ್ ಪ್ರಕಾರ ಭಾರತೀಯರ ಮನಸ್ಸಿನಲ್ಲೇನಿದೆ ಎಂಬುದನ್ನು ಹೊರಗಿಡುವ ವರದಿ ಇದು. ಗೂಗಲ್ ಟ್ರೆಂಡ್ ನಲ್ಲಿ ತುಂಬ ಚೆನ್ನಾಗಿ ಇದು ಗೊತ್ತಾಗುತ್ತದೆ. ಸಾಮಾಜಿಕ ವಿಜ್ಞಾನಿಗಳು ಈಗ ಇದೇ ಟ್ರೆಂಡ್ ನ ಬಳಸಿಕೊಂಡು ವಾಸ್ತವ ಸ್ಥಿತಿಯನ್ನು ಅರಿಯುವ ಪ್ರಯತ್ನದಲ್ಲಿದ್ದಾರೆ.
ಗೂಗಲ್ ಟ್ರೆಂಡ್ ಪ್ರಕಾರವೇ ಹೇಳುವುದಾದರೆ, ಲಾಕ್ ಡೌನ್ ಅವಧಿಯಲ್ಲಿ ಭಾರತೀಯರ ಒತ್ತಡದ ಪ್ರಮಾಣ ಆಕಾಶದೆತ್ತರಕ್ಕೆ ಏರಿದೆಯಂತೆ. ಕಳೆದ ಕೆಲವು ವಾರಗಳು ಹಲವು ದೇಶಗಳಲ್ಲಿ ಲಾಕ್ ಡೌನ್ ಇದೆ. ಆದರೆ ಉಳಿದೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತೀಯರ ಒತ್ತಡ ಅಬ್ಬೋ, ಭಯಂಕರ ಜಾಸ್ತಿ ಎನಿಸುತ್ತದೆ ಈ ಟ್ರೆಂಡಿಂಗ್ ನಲ್ಲಿ.
ಗೂಗಲ್ ಟ್ರೆಂಡ್ಸ್ ಬಯಲಿಗಿಡುವ ಮಾಹಿತಿ
ಗೂಗಲ್ ಸರ್ಚ್ ಎಂಜಿನ್ ನಲ್ಲಿ ಒತ್ತಡದ (Stress) ಬಗ್ಗೆ ಹೆಚ್ಚು ಹುಡುಕಾಡಿದ್ದಾರೆ. ಈ ಪ್ರಮಾಣ ಎಷ್ಟು ಎಂಬುದನ್ನು ಅಳೆಯುವ ಸಲುವಾಗಿ 0- 100ರ ತನಕ ಅಂಕಿಯನ್ನು ಸಹ ನೀಡಲಾಗಿದೆ. 100 ಎಂಬ ಸಂಖ್ಯೆ ಗರಿಷ್ಠ ಪ್ರಮಾಣದ್ದು. ಏಪ್ರಿಲ್ ತಿಂಗಳಲ್ಲಿ ಈ ಪ್ರಮಾಣ ವಿಪರೀತ ಜಾಸ್ತಿ ಆಗಿದೆ. ಈ ಲಾಕ್ ಡೌನ್ ಅವಧಿಯಲ್ಲಿ ಗಾಬರಿ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗಿದೆ. ಈಚೆಗೆ ನಡೆದ ಸಮೀಕ್ಷೆಯ ಪ್ರಕಾರ, ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಪ್ರಕರಣಗಳು ಶೇಕಡಾ 20ರಷ್ಟು ಹೆವ್ವಾಗಿದೆ. ಆರ್ಥಿಕ ಪರಿಸ್ಥಿತಿ, ಉದ್ಯೋಗ, ಆರೋಗ್ಯ ಹಾಗೂ ಸಂಬಂಧದಲ್ಲಿನ ಒತ್ತಡದ ಕಾರಣಕ್ಕೆ ಏರ್ಪಟ್ಟಿರುವ ಅನಿಶ್ವಿತತೆಯಿಂದಾಗಿ ಹೀಗಾಗಿದೆ. ಚಿಕಿತ್ಸೆ ಬಗ್ಗೆ ಸರ್ಚ್ ಮಾಡಿರುವುದರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಮಿಜೋರಾಮ್, ಪುದುಚೆರಿಯಲ್ಲಿ ಪ್ರಮಾಣ ಹೆಚ್ಚಿದೆ. ಗೂಗಲ್ ಟ್ರೆಂಡ್ಸ್ ಸಂಖ್ಯೆಯ ಪ್ರಕಾರ ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಈ ಪ್ರಮಾಣ ಕಡಿಮೆ ಇದೆ.
ಉದ್ಯೋಗಕ್ಕೆ ಸಂಬಂಧಿಸಿದ ಸರ್ಚ್ ಹೆಚ್ಚಾಯಿತು
ಇನ್ನು 'ಆತ್ಮಹತ್ಯೆ' ಎಂಬ ಪದದ ಹುಡುಕಾಟದ ಪ್ರಮಾಣ ಕಡಿಮೆ ಇದೆ. ಆದರೆ ಮಾರ್ಚ್ 29ನೇ ತಾರೀಕಿನಂದು ಜರ್ಮನಿಯ ಆರ್ಥಿಕ ಸಚಿವ ಆತ್ಮಹತ್ಯೆ ಮಾಡಿಕೊಂಡ ಮೇಲೆ 'ಆತ್ಮಹತ್ಯೆ' ಎಂಬ ಪದದ ಹುಡುಕಾಟದಲ್ಲಿ ದೊಡ್ಡ ಮಟ್ಟದ ಏರಿಕೆ ಆಗಿದೆ. ಆದರೆ ಅದನ್ನು ಹೊರತುಪಡಿಸಿದರೆ ಆ ಪದದ ಹುಡುಕಾಟ ಕಡಿಮೆ ಇದೆ. ಬೇರೆ ದೇಶಗಳಿಗೆ ಹೋಲಿಸಿದರೆ ಉದ್ಯೋಗಕ್ಕೆ ಸಂಬಂಧಿಸಿದ ಸರ್ಚ್ ಭಾರತದಲ್ಲಿ ವಿಪರೀತ ಹೆಚ್ಚಿದೆ. ಸೆಂಟರ್ ಫಾರ್ ಮಾನಿಟರಿಂದ ಇಂಡಿಯನ್ ಎಕಾನಮಿ (ಸಿಎಂಐಇ) ಮಾಹಿತಿ ಪ್ರಕಾರ, ಲಾಕ್ ಡೌನ್ ಜಾರಿಯಾದ ನಂತರ ಕೆಲಸ ಕಳೆದುಕೊಳ್ಳುವ ಪ್ರಮಾಣ ಹೆಚ್ಚಾಯಿತು. ನಗರ ಪ್ರದೇಶದ ನಿರುದ್ಯೋಗ ಸಿಕ್ಕಾಪಟ್ಟೆ ಜಾಸ್ತಿಯಾಯಿತು. ಕೆಲವರಿಗೆ ಕೆಲಸ ಇಲ್ಲದೆ, ಮತ್ತೆ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಆನ್ ಲೈನ್ ನಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಈಗ ಕೆಲಸದಲ್ಲಿ ಇದ್ದರೂ ವರ್ಚುವಲಿ ಉದ್ಯೋಗ ನಿರ್ವಹಿಸುವುದು ಮುಖ್ಯ ಸವಾಲಾಗಿದೆ. ಆ ಕಾರಣಕ್ಕೆ ಲಾಕ್ ಡೌನ್ ಅವಧಿಯಲ್ಲಿ ಝೂಮ್ ನಂಥ ಅಪ್ಲಿಕೇಷನ್ ಗಳ ಸರ್ಚ್ ಕೂಡ ಹೆಚ್ಚಾಗಿದೆ. ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಭಾರತಕ್ಕೆ ಹೋಲಿಸಿದರೆ ಜರ್ಮನಿ ಮತ್ತು ಇಟಲಿಯಲ್ಲಿ ಝೂಮ್ ಅಪ್ಲಿಕೇಷನ್ ಗಾಗಿ ಹುಡುಕಾಟ ವಿಪರೀತ ಹೆಚ್ಚಿದೆ.
ಯೂಟ್ಯೂಬ್ ನಲ್ಲಿ ಅಡುಗೆ ವಿಡಿಯೋ
ಲಾಕ್ ಡೌನ್ ಅವಧಿಯಲ್ಲಿ ಬಹಳ ಜನಕ್ಕೆ ಸಮಯ ಉಳಿದಿದ್ದರಿಂದ ನಾನಾ ಬಗೆಯ ಅಡುಗೆ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಆ ಪ್ರಮಾಣ ಭಾರತದಲ್ಲಿ ಸಿಕ್ಕಾಪಟ್ಟೆ ಜಾಸ್ತಿ ಇದೆ. ದೇಹ ದಂಡನೆ, ಆನ್ ಲೈನ್ ತರಗತಿಗಳಿಗಿಂತ ಹೆಚ್ಚಾಗಿ ಊಟ- ತಿಂಡಿ ತಯಾರಿ ಬಗ್ಗೆಯೇ ಹೆಚ್ಚು ಸರ್ಚ್ ಆಗಿದೆ. ಅದರಲ್ಲೂ ಗೋವಾ, ದಾಮನ್ ಮತ್ತು ಡಿಯು ಹಾಗೂ ಕರ್ನಾಟಕದಲ್ಲಿ ಈ ಪ್ರಮಾಣ ಹೆಚ್ಚು. ಕಳೆದ ಕೆಲವು ವಾರಗಳಲ್ಲಿ ಯೂಟ್ಯೂಬ್ ವಿಡಿಯೋಗಳ ಸರ್ಚ್ ಕೂಡ ತುಂಬ ಜಾಸ್ತಿಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯ ಯುಟ್ಯೂಬ್ ವಿಡಿಯೋಗಳಿಗೆ ಹುಡುಕಾಟ ನಡೆಸಿರುವುದು ಹೆಚ್ಚು. ಒಟ್ಟಾರೆಯಾಗಿ ಲಾಕ್ ಡೌನ್ ಅವಧಿಯಲ್ಲಿ ಇಂಟರ್ ನೆಟ್ ಮೇಲಿನ ಅವಲಂಬನೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಕೊರೊನಾ ವ್ಯಾಪಿಸಿರುವ ಈ ಸನ್ನಿವೇಶದಲ್ಲಿ ಡಿಜಿಟಲೈಸೇಷನ್ ಕಡೆಗೆ ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಂತಾಗಿದೆ. ಲಾಕ್ ಡೌನ್ ಘೋಷಣೆ ಆದ ಕೂಡಲೇ ಅತಿ ಹೆಚ್ಚು ಸರ್ಚ್ ಆಗಿದ್ದು ಏನು ಗೊತ್ತಾ? ಇಂಟರ್ ನೆಟ್ ಷಟ್ ಡೌನ್ ಎಂಬ ಪದ. ಜನರಿಗೆ ಗಾಬರಿ ಆಗಿದ್ದು ಇಂಟರ್ ನೆಟ್ ಇರುತ್ತೋ ಇಲ್ಲವೋ ಎಂಬ ಬಗ್ಗೆಯೇ. ಜನರು ತಾವು ಇಷ್ಟಪಡುವುದನ್ನು ಅಥವಾ ತಮಗೆ ಆತಂಕ ತರುವುದನ್ನು ಹುಡುಕಲು ಇಂಟರ್ ನೆಟ್ ಬಳಸಿರುವುದು ಗೂಗಲ್ ಟ್ರೆಂಡ್ಸ್ ನಿಂದ ಗೊತ್ತಾಗುತ್ತದೆ.


Click it and Unblock the Notifications