ಭಾರತದಲ್ಲಿ ನದಿ ಜೋಡಣೆ ಮಾಡಬೇಕು ಎಂಬುದು ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಾಗಿತ್ತು. ಹಾಗೆ ಮಾಡಿದಲ್ಲಿ ದೇಶದ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು ಎಂಬುದು ಅವರ ನಂಬಿಕೆ ಆಗಿತ್ತು. ಆದರೆ ಆ ಆಲೋಚನೆಯನ್ನು ಜಾರಿಗೆ ತರುವುದಕ್ಕೆ ಅವರಿಂದ ಆಗಲಿಲ್ಲ.
ಹಾಗಂತ ಅವರು ಕಂಡಿದ್ದ ಕನಸು ಅಲ್ಲಿಗೆ ನಿಂತುಹೋಗಲಿಲ್ಲ. ಅದನ್ನು ಬಿಜೆಪಿಯಿಂದಲೇ ಆರಿಸಿ, ಗೆದ್ದು ಬಂದು ಪ್ರಧಾನಿ ಆದ ನರೇಂದ್ರ ಮೋದಿ ಅವರು ಸಾಕಾರಗೊಳಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನದಿ ಜೋಡಣೆಯಿಂದ ನಿಜವಾಗಲೂ ಅಷ್ಟು ದೊಡ್ಡ ಮಟ್ಟದಲ್ಲಿ ಪ್ರಯೋಜನ ಆಗುತ್ತಾ ಎನ್ನುವುದು ಹಲವರ ಪ್ರಶ್ನೆ. ಅಂಥವರಿಗೆ ಇಲ್ಲಿ ಉತ್ತರ ಇದೆ.
ನೀರಾವರಿಗೆ ಅನುಕೂಲ
ನದಿ ಜೋಡಣೆ ಮಾಡುವುದರಿಂದ ದೊಡ್ಡ ಪ್ರಮಾಣದಲ್ಲಿನ ಭೂಮಿಗೆ ನೀರಾವರಿ ಒದಗಿಸಬಹುದು. ಯಾವ ಭೂಪ್ರದೇಶದಲ್ಲಿ ಹೆಚ್ಚಿನ ನೀರು ಅಗತ್ಯ ಇರುತ್ತದೋ ಅಂಥವರು ನದಿ ನೀರನ್ನು ಬಳಸಿಕೊಂಡು ಉತ್ತಮವಾದ ಬೆಳೆ ಬೆಳೆಯಬಹುದು. ಮುಖ್ಯವಾಗಿ ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ ಎಂಬುದು ಪ್ರಮುಖ ಉದ್ದೇಶ. ಏಕೆಂದರೆ, ಭಾರತದಲ್ಲಿ ಮಳೆಯಾಶ್ರಿತ ಕೃಷಿ ಪದ್ಧತಿಯೇ ಹೆಚ್ಚು ರೂಢಿಯಲ್ಲಿದೆ. ಇನ್ನು ಅಗತ್ಯ ಪ್ರಮಾಣದಲ್ಲಿ ನೀರು ಕೂಡ ಲಭ್ಯವಿಲ್ಲ. ಆದ್ದರಿಂದ ಮುಖ್ಯವಾಗಿ ನೀರಾವರಿ ಉದ್ದೇಶಕ್ಕೆ ಇದರಿಂದ ಅನುಕೂಲ ಆಗುತ್ತದೆ.
ಪ್ರವಾಹ ಮತ್ತು ಬರ ಪರಿಸ್ಥಿತಿಗೆ ಪರಿಹಾರ
ಮಳೆಗಾಲದ ಸಂದರ್ಭದಲ್ಲಿ ಭಾರೀ ಮಳೆ ಸುರಿದು ಕೆಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಡುತ್ತದೆ. ಇನ್ನು ಅದೇ ಮಳೆಗಾಲದ ಸಮಯದಲ್ಲಿ ಸರಿಯಾದ ಮಳೆ ಆಗದೆ ಕೆಲವು ಪ್ರದೇಶದಲ್ಲಿ ಬರಗಾಲದ ಸನ್ನಿವೇಶ ಇರುತ್ತದೆ. ನದಿಗಳ ಜೋಡಣೆ ಮಾಡುವುದರಿಂದ ಈ ಸಮಸ್ಯೆಯನ್ನು ದೊಡ್ಡ ಮಟ್ಟದಲ್ಲಿ ನಿಯಂತ್ರಣ ಮಾಡಲು ಸಾಧ್ಯವಿದೆ. ಯಾವ ಪ್ರದೇಶದಲ್ಲಿ ಹೆಚ್ಚಿನ ನೀರಿನ ಹರಿವಿದೆಯೋ ಆ ನೀರನ್ನು ಎಲ್ಲಿ ನೀರಿನ ಕೊರತೆ ಇದೆಯೋ ಆ ಪ್ರದೇಶಕ್ಕೆ ಹರಿಸಬಹುದು. ಆ ಮೂಲಕ ಎರಡೂ ಕಡೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶ ಸಿಗುತ್ತದೆ.
ಜಲ ಮಾರ್ಗಕ್ಕೆ ಹೊಸ ಅವಕಾಶಗಳು
ಇನ್ನು ಹೊಸ ಕಾಲುವೆಗಳ ನಿರ್ಮಾಣ, ಹೊಸ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ಜಲ ವಿದ್ಯುತ್ ಯೋಜನೆಗಳನ್ನು ಪರಿಣಾಮಕಾರಿಯಾಗಿ ರೂಪಿಸಲು ಇದರಿಂದ ಬಹಳ ಅನುಕೂಲ ಆಗುತ್ತದೆ. ಯಾವಾಗ ಹೊಸ ಕಾಲುವೆಗಳ ನಿರ್ಮಾಣ ಆಗುತ್ತದೋ ಆಗ ಜಲಮಾರ್ಗಕ್ಕೆ ಹೊಸ ಅವಕಾಶಗಳು ತೆರೆದುಕೊಂಡಂತೆ. ರಸ್ತೆ ಸಾರಿಗೆಗೆ ಹೋಲಿಸಿಕೊಂಡರೆ ಜಲ ಸಾರಿಗೆ ಬಹಳ ಅಗ್ಗವಾಗುತ್ತದೆ ಮತ್ತು ಪರಿಣಾಮಕಾರಿ ಆಗಿರುತ್ತದೆ. ಇದರಿಂದ ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ಅನುಕೂಲ. ಜತೆಗೆ ವ್ಯಾಪಾರ- ವ್ಯವಹಾರಗಳಿಗೆ ಕೂಡ ವೆಚ್ಚ ತಗ್ಗಿಸುವುದಕ್ಕೆ ನೆರವಾಗುತ್ತದೆ.
ಸಮಸ್ಯೆಗಳು ಏನೇನು?
ಹಾಗಂತ ಈ ಯೋಜನೆಯಲ್ಲಿ ಎಲ್ಲ ಸಲೀಸಾಗಿಯೇನೂ ಇಲ್ಲ. ಪ್ರತಿ ಎಪ್ಪತ್ತರಿಂದ ನೂರು ವರ್ಷದಲ್ಲಿ ನದಿಗಳು ಕೆಲವು ಬದಲಾವಣೆಗೆ ಒಳಗಾಗುತ್ತವೆ. ನದಿಗಳ ಜೋಡಣೆ ಆದ ಮೇಲೆ ಈ ಬದಲಾವಣೆಯಿಂದ ಹಲವು ವಾಸ್ತವ ಸಮಸ್ಯೆಗಳು ಎದುರಾಗುತ್ತವೆ. ಪರಿಸರ ತಜ್ಞರು ಹೇಳುವಂತೆ ಇದು ಪರಿಸರ ನಾಶಕ್ಕೆ ದಾರಿ ಮಾಡಿಕೊಡುತ್ತದೆ. ಸಮದ್ರಕ್ಕೆ ಹರಿದು ಹೋಗುವ ನೀರಿನ ಪ್ರಮಾಣ ಕಡಿಮೆಯಾಗಿ, ಜಲಚರಗಳಿಗೆ ಸಮಸ್ಯೆಯಾಗುತ್ತದೆ. ಇನ್ನು ಕಾಲುವೆಗಳ ನಿರ್ಮಾಣಕ್ಕೆ ಅಪಾರ ಪ್ರಮಾಣದಲ್ಲಿ ಭೂಮಿ ಬೇಕಾಗುವುದರಿಂದ ಅರಣ್ಯ ನಾಶವಾಗುತ್ತದೆ. ಹೊಸ ಅಣೆಕಟ್ಟುಗಳ ನಿರ್ಮಾಣದ ವೇಳೆ ಜನ ಮತ್ತು ಪ್ರಾಣಿಗಳು ವಾಸವಿರುವ ಪ್ರದೇಶಗಳ ಮುಳುಗಡೆಗೆ ಕಾರಣವಾಗುತ್ತದೆ. ಜನರು ಗುಳೇ ಹೋಗಬೇಕಾಗುತ್ತದೆ. ಕೊನೆಯದಾಗಿ ಮಲಿನ ನೀರು ಶುದ್ಧ ನೀರಿನ ಜತೆ ಬೆರೆತು, ಉತ್ತಮ ಗುಣಮಟ್ಟದ ನೀರು ಸಹ ಗಲೀಜಾಗುತ್ತದೆ.


Click it and Unblock the Notifications