ಮೆಟಾ ಒಡೆತನದ ವಾಟ್ಸಾಪ್ ಸುಮಾರು 65 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದೆ. ಜನಪ್ರಿಯ ಆಪ್ ಆದ ವಾಟ್ಸಾಪ್ ಹೊಸ ಐಟಿ ನಿಯಮಗಳು 2021 ರ ಅನುಸಾರವಾಗಿ ಮೇ ತಿಂಗಳಲ್ಲಿ ಭಾರತದಲ್ಲಿ 65 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ ಎಂದು ಕಂಪನಿ ಭಾನುವಾರ ತಿಳಿಸಿದೆ. ಮೇ 1 ಮತ್ತು ಮೇ 31 ರ ನಡುವೆಯೇ ವಾಟ್ಸಾಪ್ ಸುಮಾರು 6,508,000 ಖಾತೆಗಳನ್ನು ನಿಷೇಧಿಸಿದೆ ಎಂದು ಹೇಳಿದೆ.
2023ರ ಮೇ 1 ಮತ್ತು ಮೇ 31 ರ ನಡುವೆ, ವಾಟ್ಸಾಪ್ ಸುಮಾರು 6,508,000 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದ್ಸು 2,420,700 ಈ ಖಾತೆಗಳನ್ನು ಯಾವುದೇ ವ್ಯಕ್ತಿಯ ರಿಪೋರ್ಟ್ ಇಲ್ಲದೆಯೇ ಬ್ಯಾನ್ ಮಾಡಲಾಗಿದೆ. ಸಾಮಾನ್ಯವಾಗಿ ಯಾವುದೇ ವಾಟ್ಸಾಪ್ ಖಾತೆಯಿಂದ ನಮಗೆ ತೊಂದರೆ ಉಂಟು ಮಾಡುವ ಮೆಸೇಜ್‌ಗಳು ಬರುತ್ತಿದ್ದರೆ ನಾವು ಅದನ್ನು ರಿಪೋರ್ಟ್ ಮಾಡಬಹುದು. ಹೀಗೆ ರಿಪೋರ್ಟ್ ಇಲ್ಲದೆಯೇ ಹಲವಾರು ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.

ಏಪ್ರಿಲ್ ತಿಂಗಳಲ್ಲಿ, ಭಾರತದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್, 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿತ್ತು. ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೇ ತಿಂಗಳಲ್ಲಿ "ಬ್ಯಾನ್ ಅಪೀಲ್ಸ್" ನಂತಹ 3,912 ಕುಂದುಕೊರತೆ ವರದಿಗಳನ್ನು ದೇಶದಲ್ಲಿ ಸ್ವೀಕರಿಸಿದೆ ಮತ್ತು "ಆಕ್ಷನ್ಡ್" ದಾಖಲೆಗಳು 297 ಆಗಿದೆ.
ವಾಟ್ಸಾಪ್ ವರದಿಯ ಆಧಾರದ ಮೇಲೆ ಪರಿಹಾರ ಕ್ರಮಗಳನ್ನು ತೆಗೆದುಕೊಂಡ ಖಾತೆಗಳನ್ನು "Accounts Actioned" ಎಂದು ಸೂಚಿಸಲಾಗುತ್ತದೆ. ಈ ಕ್ರಮದ ಭಾಗವಾಗಿ ಕೆಲವು ಖಾತೆಗಳನ್ನು ನಿ ಷೇಧ ಮಾಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಟ್ಸಾಪ್ ಸಂಸ್ಥೆಯು, "ಈ ಬಳಕೆದಾರರಿಗೆ ಸುರಕ್ಷತೆಯನ್ನು ನೀಡುವ ರಿಪೋರ್ಟ್ ಆಧಾರದಲ್ಲಿ ವಾಟ್ಸಾಪ್ ಬಳಕೆದಾರರ ವಿರುದ್ಧ ವಾಟ್ಸಾಪ್ ಕ್ರಮ ಕೈಗೊಳ್ಳುತ್ತದೆ. ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ದೌರ್ಜನ್ಯ ನಡೆಯುತ್ತಿದ್ದರು, ಅದನ್ನು ತಡೆಯಲು ಕ್ರಮಕೈಗೊಳ್ಳಲಾಗುತ್ತದೆ," ಎಂದು ತಿಳಿಸಿದೆ.
ಲಕ್ಷಾಂತರ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರವು ಇತ್ತೀಚೆಗೆ ಕುಂದುಕೊರತೆ ಮೇಲ್ಮನವಿ ಸಮಿತಿ (GAC) ಅನ್ನು ಪ್ರಾರಂಭಿಸಿದೆ. ಹೊಸದಾಗಿ ರಚಿಸಲಾದ ಸಮಿತಿಯು, ದೇಶದ ಡಿಜಿಟಲ್ ಕಾನೂನುಗಳನ್ನು ಬಲಪಡಿಸುವ ಕ್ರಮವಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ನಿರ್ಧಾರಗಳ ವಿರುದ್ಧ ಬಳಕೆದಾರರ ಮನವಿಗಳನ್ನು ಪರಿಶೀಲಿಸುತ್ತದೆ.
ವಂಚಿಸಲು ಬಳಸುವ ಮೊಬೈಲ್ ಸಂಖ್ಯೆ ನೋಂದಣಿ ರದ್ದು!
ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ನೋಂದಣಿ ರದ್ದುಗೊಳಿಸಲು ಮೆಟಾ ಒಡೆತನದ ವಾಟ್ಸಾಪ್ ಒಪ್ಪಿಗೆ ನೀಡಿದೆ. ವಂಚನೆಗೆ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳ ಸೇವೆಯನ್ನು ಅದರ ಪ್ಲಾಟ್‌ಫಾರ್ಮ್‌ನಿಂದ ಈಗಾಗಲೇ ಕಡಿತಗೊಳಿಸಲಾಗಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಹೇಳಿದ್ದಾರೆ.
"ನಾವು ವಾಟ್ಸಾಪ್‌ನೊಂದಿಗೆ ಮಾತುಕತೆಯನ್ನು ನಡೆಸುತ್ತಿದ್ದೇವೆ. ಸಕ್ರಿಯವಾಗಿ ಮಾತುಕತೆ ನಡೆಯುತ್ತಿದೆ. ಹೌದು, ಗ್ರಾಹಕರ ಸುರಕ್ಷತೆಯು ಅತ್ಯಂತ ಮುಖ್ಯವಾಗಿದೆ ಎಂದು ವಾಟ್ಸಾಪ್ ಸಂಸ್ಥೆಯು ಒಪ್ಪಿಕೊಂಡಿದೆ. ವಂಚನೆಗೆ ಬಳಸುವ ಮೊಬೈಲ್ ಸಂಖ್ಯೆಯ ನೋಂದಣಿ ರದ್ದುಗೊಳಿಸಲು ಅವರು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ," ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.
ಗ್ರಾಹಕರನ್ನು ವಂಚಿಸುವ ಉದ್ದೇಶದಿಂದ ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಕರೆ ಮಾಡುವ ವಂಚಕರ ತಂತ್ರವನ್ನು ನಿಲ್ಲಿಸಲು ಸರ್ಕಾರದ ಕ್ರಮಗಳ ಬಗ್ಗೆ ಪ್ರಶ್ನಿಸಿದಾಗ ಟೆಲಿಕಾಂ ಸಚಿವ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪ್ರಸ್ತುತ ವಂಚಕರು ಜನರನ್ನು ವಂಚನೆ ಮಾಡಲು ಹಲವಾರು ಮಾರ್ಗಗಳನ್ನು ಹೊಂದಿದ್ದಾರೆ. ಹೊಸ ಹೊಸ ತಂತ್ರಗಳನ್ನು ವಂಚಕರು ಅಳವಡಿಸಿಕೊಳ್ಳುತ್ತಿದ್ದಾರೆ. ವಾಟ್ಸಾಪ್ ಅನ್ನು ಕೂಡಾ ತಮ್ಮ ತಂತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ.


Click it and Unblock the Notifications