ದುಬೈನಲ್ಲಿ ಇತ್ತೀಚೆಗೆ ನಡೆದಿದ್ದ ವಿಶ್ವ ಸರ್ಕಾರಿ ಶೃಂಗಸಭೆಯಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಭಾಗವಹಿಸಿದ್ದು ಚಿತ್ರರಂಗದಲ್ಲಿ ನಾನಾ ರೀತಿಯಲ್ಲಿ ಚರ್ಚೆ ಹುಟ್ಟು ಹಾಕಿದೆ. ಶಾರುಖ್ ಖಾನ್ ಅವರು ತಮ್ಮ ದುಬೈ ಬಗೆಗಿನ ಒಲವನ್ನು ಹಂಚಿಕೊಂಡಿದ್ದು, ತಮ್ಮ ನೆರೆಹೊರೆಯ ಮನೆಯವರು ಜಗತ್ತಿನ ಬಿಲಿಯನೇರ್ ವ್ಯಕ್ತಿ ಎಂಬುದನ್ನು ಕೂಡ ಬಹಿರಂಗಪಡಿಸಿದ್ದಾರೆ. ಹಾಗಾದರೆ, ದುಬೈನಲ್ಲಿರುವ ಶಾರುಖ್ ಖಾನ್ ಅವರ ಮನೆಯ ನೆರೆಹೊರೆಯ ಆ ಅಗರ್ಭ ಶ್ರೀಮಂತ ವ್ಯಕ್ತಿ ಯಾರು ಎನ್ನುವ ಕುತೂಹಲ ಸಹಜವಾಗಿಯೇ ಮೂಡುತ್ತದೆ.
ಆ ವ್ಯಕ್ತಿ ಬೇರೆ ಯಾರು ಅಲ್ಲ; ದುಬೈ ಆಡಳಿತಗಾರ ಹಾಗೂ ಯುಎಇ ಪ್ರಧಾನ ಮಂತ್ರಿ, ಉಪಾಧ್ಯಕ್ಷ ಹಾಗೂ ರಕ್ಷಣಾ ಸಚಿವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್. ತಮ್ಮ ನೆರೆಹೊರೆಯವರ ಬಗ್ಗೆ ಮಾತನಾಡಿರುವ ಶಾರುಖ್ ಖಾನ್, ನಾನು ನನ್ನ ಹೆಚ್ಚಿನ ಸಮಯವನ್ನು ದುಬೈನಲ್ಲಿ ಕಳೆಯುತ್ತಿದ್ದೇನೆ. ಇಲ್ಲಿನ ಸರ್ಕಾರಿ ಸ್ವಾಮ್ಯದ ನಖೀಲ್ ರಿಯಲ್ ಎಸ್ಟೇಟ್ ಕಂಪನಿ ನಿರ್ಮಿಸಿದ ಅತಿ ಸುಂದರವಾದ ಮನೆಯನ್ನು ಪಡೆದುಕೊಂಡಿದ್ದೇನೆ.

ಇದು ನನ್ನ ನೆಚ್ಚಿನ ತಾಣವಾಗಿದ್ದು, ಇಲ್ಲಿ ಯಾವುದೇ ರೀತಿಯ ಸಮಸ್ಯೆ ಅಥವಾ ತೊಂದರೆ ಕೊಡುವವರು ಇಲ್ಲ. ಪ್ರಧಾನಿ ರಶೀದ್ ಕೂಡ ನನ್ನ ಮನೆಯ ಪಕ್ಕದಲ್ಲೇ ವಾಸವಾಗಿರುವುದಾಗಿ ಹೇಳಿದ್ದಾರೆ. ಹೀಗಾಗಿ, ಮುಂದಿನ ಹೊಸ ವರ್ಷದ ಪಾರ್ಟಿಯನ್ನು ಅವರೊಂದಿಗೆ ಆಯೋಜಿಸುತ್ತೇನೆ. ನಾನು ದುಬೈನಲ್ಲಿ ನೆಲೆಸುವುದಕ್ಕೆ ಬಹಳ ಇಷ್ಟಪಡುತ್ತಿದ್ದು, ಅದು ನನ್ನ ನೆಚ್ಚಿನ ತಾಣವಾಗಿದೆ ಎಂದಿದ್ದಾರೆ.
ಸೆಲೆಬ್ರಿಟಿ ನೆಟ್ ವರ್ತ್ ಹಾಗೂ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಶೇಖ್ ಮೊಹಮ್ಮದ್ ರಶೀದ್ ಅವರು 14 ಶತಕೋಟಿ ಡಾಲರ್‌ನಿಂದ 18 ಶತಕೋಟಿ ಡಾಲರ್ ಆಸ್ತಿ ಸಂಪತ್ತನ್ನು ಹೊಂದಿದ್ದಾರೆ. ಅಂದರೆ ಅವರ ಆಸ್ತಿ ಮೌಲ್ಯ 1.4 ಲಕ್ಷ ಕೋಟಿ ರೂ.ನಿಂದ 1.4 ಲಕ್ಷ ಕೋಟಿ ರೂ.

ಎಮಿರೇಟ್ ರಾಜಮನೆತನದ ಮುಖ್ಯ ಆದಾಯ ಮೂಲವೆಂದರೆ ರಿಯಲ್ ಎಸ್ಟೇಟ್. ಎಮಿರೇಟ್ಸ್ ಏರ್‌ಲೈನ್ಸ್, ಡಿಪಿ ವರ್ಲ್ಡ್ ಹಾಗೂ ಜುಮೇರಾ ಗ್ರೂಪ್‌ನಂಥ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಪ್ರಾರಂಭಿಸುವ ಮೂಲಕ ದುಬೈಯನ್ನು ವಿಶ್ವದ ಬಹುದೊಡ್ಡ ವಾಣಿಜ್ಯ ನಗರಿಯನ್ನಾಗಿ ಬೆಳೆಸುವಲ್ಲಿಯೂ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರ ಕೊಡುಗೆ ಗಮನಾರ್ಹ.
20022-23ರ ವರದಿಯೊಂದರ ಪ್ರಕಾರ, ದುಬೈ ಸರ್ಕಾರದ ಒಡೆತನದ ಎಮಿರೇಟ್ಸ್, ಎಮಿರೇಟ್ಸ್ ಏರ್‌ಲೈನ್ಸ್ ಹಾಗೂ ವಿಮಾನ ನಿಲ್ದಾಣಗಳ ಸೇವೆಯನ್ನು ಒದಗಿಸುವ ಈ ಕಂಪನಿಯು 9.9 ಲಕ್ಷ ಕೊಟಿ ರೂ. ಆದಾಯವನ್ನು ಗಳಿಸಿದೆ. ಅಷ್ಟೇಅಲ್ಲ, ಜಗತ್ತಿನ ಅತಿ ಸುಂದರ ಹಾಗೂ ಎತ್ತರದ ಟವರ್ ಬುರ್ಜ್ ಖಲೀಫಾ, ಸೆವನ್ ಸ್ಟಾರ್ ಹೋಟೆಲ್‌ಗಳನ್ನು ಹೊಂದಿರುವ ಬುರ್ಜ್ ಅಲ್ ಅರಬ್(ಬುರ್ಜ್ ದುಬೈ) ಕಟ್ಟಡ ನಿರ್ಮಾಣದ ಹಿಂದಿನ ಮಾಸ್ಟರ್ ಮೈಂಡ್ ಕೂಡ ಶೇಖ್ ಮೊಹಮ್ಮದ್ ಬುನ್ ರಶೀದ್ ಆಗಿದ್ದಾರೆ.

ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಶೇಖ್ ಮೊಹಮ್ಮದ್ ಅವರು ಇಂಗ್ಲೆಂಡ್‌ನಲ್ಲಿರುವ ಬೆಲ್ ಕೇಂಬ್ರಿಡ್ಜ್ ಮತ್ತು ಮಾನ್ಸ್ ಆಫೀಸರ್ ಕ್ಯಾಡೆಟ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ದುಬೈನಲ್ಲಿರುವ ಶಾರುಖ್ ಖಾನ್ ಅವರ ನೆರೆ ಹೊರೆಯ ವ್ಯಕ್ತಿಯಾಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರು ಹಲವು ಮದುವೆಯಾಗಿದ್ದು, 23 ಮಂದಿ ಮಕ್ಕಳು ಕೂಡ ಇದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಈ ಪೈಕಿ ಅವರ ಹಿರಿಯ ಪತ್ನಿ ಶೇಖಾ ಹಿಂದ್ ಬಿಂತ್ ಮಕ್ತೌಮ್ ಅಲ್ ಮಕ್ತೌಮ್ ಅವರನ್ನು ವಿವಾಹವಾಗಿದ್ದಾರೆ. ಅವರು 12 ಮಕ್ಕಳ ತಾಯಿಯಾಗಿದ್ದಾರೆ. ಇವರ ಮಗ ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ದುಬೈನ ಕ್ರೌನ್ ಪ್ರಿನ್ಸ್ ಆಗಿದ್ದಾರೆ.
ಮಕ್ತೌಮ್ ಕುಟುಂಬವು ಜಬೀಲ್ ಅರಮನೆಯಲ್ಲಿ ನೆಲೆಸಿದ್ದು, ಇದು ಸುಮಾರು 15 ಎಕರೆ ಪ್ರದೇಶವನ್ನು ಹೊಂದಿದೆ. ಈ ಐಷಾರಾಮಿ ಅರಮನೆಯು 150 ಕೊಠಡಿಗಳನ್ನು ಹೊಂದಿದೆ. ಅಲ್ಲದೆ, ಖಾಸಗಿ ಮೃಗಾಲಯ, ಕುದುರೆ ರೇಸ್ ಟ್ರ್ಯಾಕ್ ಅನ್ನು ಕೂಡ ಹೊಂದಿರುವುದಾಗಿ ವರದಿಯಾಗಿದೆ. ಇದು ಶೇಖ್ ಮೊಹಮ್ಮದ್ ಬಿನ್ ರಶೀದ್ ಕುಟುಂಬಕ್ಕೆ ಪ್ರಾಣಿಗಳ ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿದೆ.


Click it and Unblock the Notifications