ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆಗೆ ಚರ್ಚೆಯನ್ನು ನಡೆಸಿದ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ಟೆಸ್ಲಾ ಮತ್ತು ಟ್ವಿಟ್ಟರ್‌ನ ಸಿಇಒ ಆಗಿರುವ ಎಲಾನ್ ಮಸ್ಕ್ ಭಾರತದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಟೆಸ್ಲಾವು ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಲು ಸಜ್ಜಾಗಿದೆ ಎಂದು ಹೇಳಿರುವ ಮಸ್ಕ್ ಈ ಸಂದರ್ಭದಲ್ಲಿ ಭಾರತದ ಸಾಟೆಲೈಟ್ ಇಂಟರ್‌ನೆಟ್ ಮಾರುಕಟ್ಟೆಗೆ ತನ್ನ ಸ್ಟಾರ್‌ಲಿಂಕ್ ಕೂಡಾ ಪ್ರವೇಶಿಸಲು ಉತ್ಸುಕವಾಗಿದೆ ಎಂದಿದ್ದಾರೆ.
ಎಲಾನ್ ಮಸ್ಕ್ ತನ್ನ ಹೈ ಸ್ಪೀಡ್ ಸಾಟೆಲೈಟ್ ಇಂಟರ್‌ನೆಟ್ ಸರ್ವಿಸ್ ಸ್ಟಾರ್‌ಲಿಂಕ್ ಅನ್ನು ಭಾರತದಲ್ಲಿ ಆರಂಭ ಮಾಡುವ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಇದಕ್ಕೆ ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದಿನಿಂದಲೂ ನಿರಂತರವಾಗಿ ಮುಕೇಶ್ ಅಂಬಾನಿ ಸ್ಟಾರ್‌ಲಿಂಕ್ ಭಾರತದ ಮಾರುಕಟ್ಟೆ ಪ್ರವೇಶವನ್ನು ವಿರೋಧ ಮಾಡುತ್ತಾ ಬಂದಿದ್ದಾರೆ. ಆದರೆ ಮುಕೇಶ್ ಅಂಬಾನಿ ಈ ವಿರೋಧ ವ್ಯಕ್ತಪಡಿಸಿರುವುದು ಯಾಕೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಮುಕೇಶ್ ಅಂಬಾನಿ ವಿರೋಧ ಮಾಡುವುದು ಏಕೆ?
ಟೆಸ್ಲಾ ಸಿಇಒ ಎಲಾನ್ ಮಸ್ಕ್ ಭಾರತದಲ್ಲಿ ಸ್ಟಾರ್‌ಲಿಂಕ್ ಪ್ರವೇಶ ಮಾಡಲು ಸಜ್ಜಾಗಿದೆ, ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಟರ್‌ನೆಟ್ ಸೌಲಭ್ಯ ಕಲ್ಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸ್ಟಾರ್‌ಲಿಂಕ್ ಭಾರತದಲ್ಲಿ ಈ ಸೇವೆಯನ್ನು ಆರಂಭ ಮಾಡಲು ಬರೀ ಲೈಸೆನ್ಸ್ ನೀಡಬೇಕೆಂದು ಬಯಸುತ್ತದೆ. ಸ್ಪೆಕ್ಟ್ರಮ್‌ಗಳ ಹರಾಜಿಗೆ ನಾವು ಒಪ್ಪುವುದಿಲ್ಲ. ಸ್ಪೆಕ್ಟ್ರಮ್‌ಗಳ ಹರಾಜು ಮಾಡಬಾರದು ಎಂದು ತಿಳಿಸಿದ್ದಾರೆ.
ಸ್ಪೆಕ್ಟ್ರಮ್‌ಗಳು ನೈಸರ್ಗಿಕ ಸಂಪನ್ಮೂಲವಾಗಿದೆ. ಹರಾಜು ನಿರ್ಬಂಧಗಳಿಗೆ ಎಡೆ ಮಾಡಿಕೊಡುತ್ತದೆ. ಇದರಿಂದಾಗಿ ವೆಚ್ಚವು ಅಧಿಕವಾಗುತ್ತದೆ ಎಂದು ಕೂಡಾ ಸ್ಟಾರ್‌ಲಿಂಕ್ ಹೇಳಿಕೊಳ್ಳುತ್ತಿದೆ. ಈ ಬಗ್ಗೆ ಕಂಪನಿ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು ಭಾರತ ಸರ್ಕಾರ ಈ ಪತ್ರವನ್ನು ಬಹಿರಂಗಗೊಳಿಸಿದೆ. ಆದರೆ ರಿಲಯನ್ಸ್ ಸಂಸ್ಥೆಯು ಸ್ಟಾರ್‌ಲಿಂಕ್‌ನ ಈ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದೆ. ಸ್ಪೆಕ್ಟ್ರಮ್ ಅನ್ನು ಹರಾಜು ಮಾಡಬೇಕು ಎಂದು ರಿಲಯನ್ಸ್ ಸಂಸ್ಥೆ ಹೇಳುತ್ತದೆ.
ಈ ವಿಚಾರದಲ್ಲಿ ಎಲಾನ್ ಮಸ್ಕ್ ವಾದ ಹಾಗೂ ಮುಕೇಶ್ ಅಂಬಾನಿ ವಾದ ವಿರುದ್ಧವಾಗಿದೆ. ರಿಲಯನ್ಸ್ ಜಿಯೋ ಈಗಾಗಲೇ 439 ಮಿಲಿಯನ್ ಟೆಲಿಕಾಂ ಬಳಕೆದಾರರನ್ನು ಹೊಂದಿದೆ. ಮಾರುಕಟ್ಟೆಯಲ್ಲೇ ರಿಲಯನ್ಸ್ ಜಿಯೋ ಅತೀ ಪ್ರಮುಖ ಸ್ಥಾನ ಹೊಂದಿದೆ. 8 ಮಿಲಿಯನ್ ವೈರ್ಡ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳು, ಶೇಕಡ 25ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
ಆದರೆ ಈಗ ವಿದೇಶಿ ಸಂಸ್ಥೆಯ ಎಂಟ್ರಿಯು ಅಂಬಾನಿಗೆ ತೊಂದರೆ ಉಂಟು ಮಾಡಬಹುದು ಎಂಬ ಅಭಿಪ್ರಾಯವಿದೆ. ಈ ನಡುವೆ ಅಂಬಾನಿ ಸ್ಟಾರ್‌ಲಿಂಕ್ ಭಾರತಕ್ಕೆ ತರುವ ಮಸ್ಕ್ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹರಾಜಿನ ಬಗ್ಗೆ ಸ್ಟಾರ್‌ಲಿಂಕ್‌ನ ಅಭಿಪ್ರಾಯವನ್ನು ಅಮೆಜಾನ್‌ನ ಸಾಟೆಲೈಂಟ್ ಇಂಟರ್‌ನೆಟ್, ಪ್ರಾಜೆಕ್ಟ್ ಕೈಪರ್ ಮತ್ತು ಬ್ರಿಟಿಷ್ ಸರ್ಕಾರದ ಬೆಂಬಲಿತ ಒನ್‌ವೆಬ್ ಕೂಡಾ ಹೊಂದಿದೆ ಎಂಬ ಮಾಹಿತಿಯಿದೆ.
ಮಸ್ಕ್ ಪರವಾಗಿ ನಿಲ್ಲುತ್ತಾ ಇತರೆ ಸಂಸ್ಥೆಗಳು
ಇನ್ನು ಸ್ಪೆಕ್ಟ್ರಮ್ ಅನ್ನು ಹರಾಜು ಹಾಕುವ ವಿಚಾರಕ್ಕೆ ಬಂದಾಗ ಹಲವಾರು ಸಂಸ್ಥೆಗಳು ಇದಕ್ಕೆ ವಿರೋಧವಾಗಿದೆ. ರತನ್ ಟಾಟಾರ ಟಾಟಾ ಗ್ರೂಪ್, ಸುನಿಲ್ ಭಾರ್ತಿ ಮಿತ್ತಲ್‌ರ ಭಾರ್ತಿ ಏರ್‌ಟೆಲ್ ಸಂಸ್ಥೆ, ಅಮೆಜಾನ್ ಮೊದಲಾದವುಗಳು ಸ್ಪೆಕ್ಟ್ರಮ್ ಅನ್ನು ಹರಾಜು ಹಾಕುವುದಕ್ಕೆ ವಿರೋಧವಾಗಿದೆ. ಎಲಾನ್ ಮಸ್ಕ್ ಭಾರತದ ಸಾಟೆಲೈಟ್ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ, ಈ ಎಲ್ಲ ಸಂಸ್ಥೆಗಳು ಎಲಾನ್ ಮಸ್ಕ್‌ನ ಅಭಿಪ್ರಾಯಕ್ಕೆ ಬೆಂಬಲ ನೀಡುವ ಸಾಧ್ಯತೆಯಿದೆ.


Click it and Unblock the Notifications