ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡಲು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾನುವಾರ ಹೇಳಿದರು. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಬೆಂಗಳೂರಿನ ನವೋದಯನ್ಸ್, ಬೆಂಗಳೂರಿನ ಸರ್ಜಿಕಲ್ ಸೊಸೈಟಿ, ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ 'ಕ್ಯಾನ್ ವಾಕ್' ಎಂಬ ವಾಕಥಾನ್‌ಗೆ ಭಾನುವಾರ ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಾಗೃತಿ ಮೂಡಿಸಲು ಆಯೋಜಿಸಿದ್ದ 5 ಕಿ.ಮೀ ರ‍್ಯಾಲಿಯು ಶ್ರೀಕಂಠೀರವ ಕ್ರೀಡಾಂಗಣದಿಂದ ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಪಾರ್ಕ್, ವಿಧಾನಸೌಧ, ಕೆಆರ್ ವೃತ್ತ, ಗ್ಲೋಬಲ್ ಇನ್‌ಸ್ಟಿಟ್ಯೂಟ್ ರಸ್ತೆ ಮೂಲಕ ಸಾಗಿ ಮತ್ತೆ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ತಲುಪಿದ್ದು ಇದರಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.

ಕನ್ನಡ ನಟರಾದ ಪ್ರೇಮ್ ಮತ್ತು ಅಭಿಜಿತ್ ಮತ್ತು ಆರೋಗ್ಯ ಆಯುಕ್ತ ಡಿ ರಣದೀಪ್ ಸಹ ಭಾಗವಹಿಸುವವರೊಂದಿಗೆ ನಡೆದು ರ‍್ಯಾಲಿಯಲ್ಲಿ ಭಾಗವಹಿಸಿದರು. "ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಮಿತಿಗೊಳಿಸಬಹುದು," ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
"ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಅನ್ನು ಪತ್ತೆಹಚ್ಚುವ ಮೂಲಕ ಜೀವಗಳನ್ನು ಉಳಿಸಬಹುದು. ಆದ್ದರಿಂದ, ಸರ್ಕಾರವು ಆ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ. ಕ್ಯಾನ್ಸರ್ ಬಗ್ಗೆ ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು," ಎಂದು ತಿಳಿಸಿದರು.
ತೀವ್ರ ಅನಾರೋಗ್ಯ ಪೀಡಿತ ರೋಗಿಗಳು ಮತ್ತು ಅವರ ಕುಟುಂಬಗಳನ್ನು ಬೆಂಬಲಿಸಲು ಕರ್ನಾಟಕ ಸರ್ಕಾರವು ಸಮುದಾಯ ಮತ್ತು ಗೃಹಾಧಾರಿತ ಉಪಶಾಮಕ ಆರೈಕೆಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಕ್ಯಾನ್ಸರ್‌ನ ತೀವ್ರ ಅಥವಾ ಮುಂದುವರಿದ ಹಂತಗಳಿಂದ ಬಳಲುತ್ತಿರುವ ಎಲ್ಲಾ ಕ್ಯಾನ್ಸರ್ ರೋಗಿಗಳಿಗೆ ನೋವು ನಿವಾರಕ ಚಿಕಿತ್ಸೆಗಳು ಲಭ್ಯವಿವೆ.
ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಪೂನಂ ಪಾಂಡೆ ಎಚ್ಚರಿಕೆ
ಮಾಡೆಲ್ ಕಂ ರಿಯಾಲಿಟಿ ಶೋ ಕಿರುತೆರೆ ತಾರೆ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಇದಾದ ಬೆನ್ನಲ್ಲೇ ಕಾಣಿಸಿಕೊಂಡಿರುವ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿಲ್ಲ, ಜೀವಂತವಾಗಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ, "ನಾನು ಜೀವಂತವಾಗಿದ್ದೇನೆ. ನಾನು ಗರ್ಭಕಂಠದ ಕ್ಯಾನ್ಸರ್‌ನಿಂದ ಸತ್ತಿಲ್ಲ. ದುರದೃಷ್ಟವಶಾತ್, ಗರ್ಭಕಂಠದ ಕ್ಯಾನ್ಸರ್‌ನಿಂದ ನೂರಾರು, ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ನಿಮ್ಮೆಲ್ಲರಿಗೂ ಆಘಾತ ಕೊಟ್ಟದ್ದಕ್ಕಾಗಿ ನನ್ನನ್ನು ಕ್ಷಮಿಸಿ," ಎಂದು ಹೇಳಿದ್ದಾರೆ.
"ನಾನು ನೋಯಿಸಿದವರಿಗೆ ಕ್ಷಮೆಯಾಚಿಸುತ್ತೇನೆ. ಗರ್ಭಕಂಠದ ಕ್ಯಾನ್ಸರ್‌ನಿಂದ ಹಲವಾರು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದರೂ ನಾವು ಆ ಬಗ್ಗೆ ಮಾತನಾಡುವುದೇ ಇಲ್ಲ, ನಮ್ಮಲ್ಲಿ ಅನೇಕರಿಗೆ ಅದರ ಬಗ್ಗೆ ಅರಿವು ಇಲ್ಲ. ಅದರ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿತ್ತು," ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.


Click it and Unblock the Notifications