ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯು ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದ ಐದು ಚುನಾವಣಾ ಪೂರ್ವ ಗ್ಯಾರಂಟಿಗಳಲ್ಲಿ ಒಂದಾಗಿತ್ತು. ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸಲು ಅವರನ್ನು ಉತ್ತೇಜಿಸಲು ಪರಿಚಯಿಸಲಾದ ಈ ಯೋಜನೆಯು 2023 ರಲ್ಲಿ ಜೂನ್ 11 ರಂದು ಪ್ರಾರಂಭವಾಯಿತು. ಈಗಾಗಲೇ ಈ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ. ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ.
ಶಕ್ತಿ ಯೋಜನೆಯ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC), ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ. ಈ ಯೋಜನೆ ಪರಿಚಚಪಡಿಸಿದ ಮೊದಲ ತಿಂಗಳಲ್ಲಿ 10 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣದ ಲಾಭ ಪಡೆದುಕೊಂಡಿದ್ದರು.

ಒಂದೇ ವರ್ಷದಲ್ಲಿ ಫಲಾನುಭವಿಗಳು 229 ಕೋಟಿ ಬಾರಿ ಪ್ರಯೋಜನ ಪಡೆದುಕೊಂಡಿದ್ದಾರೆ. ಅಂದರೆ ಇದರ ಮೊತ್ತ ಸುಮಾರು 5,500 ಕೋಟಿ ರೂ. ಆಗಿದೆ. ಹೀಗಿರುವಾಗ ಸರ್ಕಾರದ ಬೊಕ್ಕಸಕ್ಕೆ ಬಾರಿ ನಷ್ಟ ಉಂಟಾಗುತ್ತಿರುವ ಕಾರಣ ಈ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಬಹುದು ಎಂಬ ಊಹಾಪೋಹ ಆಗ್ಗಾಗ್ಗೆ ಹರಿದಾಡುತ್ತಿರುತ್ತದೆ. ಇದಕ್ಕೆ ಪೂರಕ ಎನ್ನುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಡಿಸಿಎಂ ಡಿಕೆಶಿ ಹೇಳಿದ್ದೇನು?
"ಬಹಳಷ್ಟು ಮಂದಿ ಹೆಣ್ಣು ಮಕ್ಕಳು, ಮಹಿಳೆಯರು ನಮಗೆ ಟಿಕೆಟ್ ತೆಗೆದುಕೊಳ್ಳುವ ಶಕ್ತಿಯಿದೆ. ಉಚಿತ ಪ್ರಯಾಣ ಬೇಡ ಎಂದು ಟ್ವೀಟ್ ಹಾಗೂ ಇ-ಮೇಲ್ ಮೂಲಕ ನನ್ನಲ್ಲಿ ವಿಚಾರ ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ನಾವು ಹಣ ಕೊಡಲು ಮುಂದಾದರೂ, ಕಂಡಕ್ಟರ್ ಹಣ ತೆಗೆದುಕೊಳ್ಳುತ್ತಿಲ್ಲ ಎಂದು ಅನುಕೂಲ ಸ್ಥಿತಿಯಲ್ಲಿರುವ ಶೇ 5 ರಿಂದ 10 ರಷ್ಟು ಹೆಣ್ಣು ಮಕ್ಕಳು ಹೇಳುತ್ತಿದ್ದಾರೆ. ಹೀಗಾಗಿ ಅದಷ್ಟು ಬೇಗ ಇದರ ಬಗ್ಗೆ ನಾನು ಸಚಿವರಾದ ರಾಮಲಿಂಗಾರೆಡ್ಡಿ ಅವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚೆ ನಡೆಸುತ್ತೇವೆ" ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಒಂದು ದಿನದ ಹಿಂದೆಯಷ್ಟೇ ಶಕ್ತಿ ಯೋಜನೆ (ಪರಿಷ್ಕರಣೆ ಮಾಡುವ ಸುಳಿವು ಕೊಟ್ಟಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಇದು ಚರ್ಚಾಸ್ಪದವಾಗುತ್ತಿದ್ದಂತೆ ಮರುದಿನವೇ ಯುಟರ್ನ್ ಹೊಡೆದಿದ್ದಾರೆ. ಕಳೆದ ಒಂದು ದಿನದ ಹಿಂದೆಯಷ್ಟೇ ಶಕ್ತಿ ಯೋಜನೆ ಬಗ್ಗೆ ಮರುಚಿಂತನೆ ಮಾಡುತ್ತೇವೆ ಎಂದು ಸುಳಿವು ಕೊಟ್ಟಿದ್ದ ಡಿಸಿಎಂ ಮಾರನೆ ದಿನವೇ ಯುಟರ್ನ್ ಹೊಡೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರ ಆಗುತ್ತದೆ ಎಂಬ ಚರ್ಚೆ ಜೋರಿತ್ತು. ಇದರಿಂದ ಫಲಾನುಭವಿಗಳಲ್ಲಿ ಆತಂಕ ಎದುರಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ನೀಡಿದ ಡಿಸಿಎಂ ಹೇಳಿಕೆಯಿಂದ ಅನೇಕ ಮಹಿಳೆಯರು ಕಂಗಾಲಾಗಿದ್ದರು. ಆದರೆ ಈ ಬೆಳವಣಿಗೆಯ ಬೆನ್ನಲ್ಲೇ "ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಆ ರೀತಿಯ ಉದ್ದೇಶವೂ ಸರ್ಕಾರಕ್ಕೆ ಇಲ್ಲ" ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಡಿಸಿಎಂ ಹೇಳಿಕೆ ನೀಡಿದ ಕಾರ್ಯಕ್ರದಲ್ಲಿ ನಾನು ಇರಲಿಲ್ಲ. ನಾನು ಮಂತ್ರಿಗಳ ಜೊತೆ ಮಾತಾಡುತ್ತೇನೆ. ಪರಿಷ್ಕರಣೆಯ ಯಾವುದೇ ಉದ್ದೇಶವಿಲ್ಲ. ಆ ರೀತಿ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.


Click it and Unblock the Notifications