ಭಾರತೀಯ ಷೇರುಪೇಟೆಯು ಸತತ ಐದನೇ ದಿನವೂ ಏರಿಕೆ ಕಂಡಿದ್ದು, ಹೊಸ ದಾಖಲೆಯ ಮಟ್ಟಕ್ಕೆ ಸಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 117 ಪಾಯಿಂಟ್ಸ್ ಏರಿಕೆಗೊಂಡರೆ, ನಿಫ್ಟಿ 15,000 ಸಮೀಪದಲ್ಲಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 117.34 ಪಾಯಿಂಟ್ಸ್ ಅಥವಾ ಶೇಕಡಾ 0.23ರಷ್ಟು ಏರಿಕೆಗೊಂಡು 50,731.63 ಪಾಯಿಂಟ್ಸ್ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ 28.60 ಪಾಯಿಂಟ್ಸ್ ಅಥವಾ ಶೇಕಡಾ 0.23ರಷ್ಟು ಏರಿಕೆಯಾಗಿ 14,924.30 ಪಾಯಿಂಟ್ಸ್ ಮುಟ್ಟಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ. ರೆಪೋ ದರವನ್ನು 4% ರಷ್ಟು ಮುಂದುವರಿಸಲು ನಿರ್ಧರಿಸಿದ್ದು, ರಿವರ್ಸ್ ರೆಪೋ ದರವನ್ನು 3.35% ಉಳಿಸಿಕೊಳ್ಳಲಾಗಿದೆ. ಪರಿಣಾಮ ಸಾಕಷ್ಟು ಏರಿಳಿತಗೊಂಡ ಷೇರುಪೇಟೆಯಲ್ಲಿ ಇಂದು 1281 ಷೇರುಗಳು ಏರಿಕೆಗೊಂಡರೆ, 1,637 ಷೇರುಗಳು ತೀವ್ರ ಕುಸಿತಗೊಂಡಿವೆ ಮತ್ತು 146 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಎಸ್‌ಬಿಐ, ಟಾಟಾ ಸ್ಟೀಲ್, ಡಿವಿಸ್ ಲ್ಯಾಬ್, ಕೋಟಕ್ ಮಹೀಂದ್ರಾ ಬ್ಯಾಂಕ್, ಡಾ. ರೆಡ್ಡಿ ಲ್ಯಾಬ್ಸ್ ನಿಫ್ಟಿಯಲ್ಲಿ ಪ್ರಮುಖ ಲಾಭಗಳಿಸಿದ ಷೇರುಗಳಾಗಿವೆ. ಆ್ಯಕ್ಸಿಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್ ಮತ್ತು ಯುಪಿಎಲ್ ನಷ್ಟಗೊಂಡ ಪ್ರಮುಖ ಕಂಪನಿಗಳಾಗಿವೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 4 ಪೈಸೆಗಳ ಲಾಭದೊಂದಿಗೆ 72.92 ರಂತೆ ಕೊನೆಗೊಂಡಿತು.


Click it and Unblock the Notifications