ಮನಸ್ಸಿದ್ದರೆ ಮಾರ್ಗ ಎನ್ನುವ ಗಾದೆ ಮಾತಿನಂತೆ ತಮ್ಮ ಕೈ ತೋಟ, ಹಿತ್ತಲಿನಲ್ಲಿ ಹೂವು ಹಣ್ಣುಗಳನ್ನು ಬಳಸಿಕೊಂಡು ವ್ಯವಹಾರ ಹುಟ್ಟುಹಾಕಿದ ಮಹಿಳೆಯ ಯಶೋಗಾಥೆ ಇಲ್ಲಿದೆ. ಕೇರಳದ ಮರಂಗಟ್ಟುಪಲ್ಲಿಯಲ್ಲಿ ನಿವಾಸಿಯಾದ ಬೀನಾ ಟಾಮ್ ಅವರು 'ಬೀಸ್ ಆಫ್ ಬೀನಾ' ಎಂಬ ಯಶಸ್ವಿ ಉದ್ಯಮ ನಡೆಸುತ್ತಿದ್ದು, ಇಂದು ಅವರ ಉತ್ಪನ್ನಗಳಿಗೆ ಬೆಂಗಳೂರು, ಲಕ್ನೋ ಮತ್ತು ಮುಂಬೈನಲ್ಲಿ ಅತ್ಯಧಿಕ ಬೇಡಿಕೆ ಇದೆ.
ತಮಗಿದ್ದ ಅಡುಗೆಯ ಹವ್ಯಾಸವನ್ನೇ ಉದ್ಯಮವಾಗಿ ಅಭಿವೃದ್ದಿಪಡಿಸಿದ್ದಾರೆ ಬೀನಾ. ತಮ್ಮ ಹಿತ್ತಲಿನ ಗಾರ್ಡನ್‌ನಲ್ಲೇ ಅಡುಗೆಯ ಉಗ್ರಾಣವನ್ನಾಗಿಸಿ, ಅಲ್ಲಿ ಸಿಗುವ ಹಣ್ಣುಗಳು ಮತ್ತು ಹೂವುಗಳನ್ನು ಬಳಸಿಕೊಂಡು ಹಲವು ವಿಧದ ಉತ್ಪನ್ನಗಳನ್ನು ತಯಾರಿಸುತ್ತಾರೆ.

ವ್ಯವಹಾರ ಆರಂಭ: ಕನಸು ನನಸಾಗುವ ಹಾದಿ ಉದ್ಯಮಶೀಲತೆಯ ಜಗತ್ತಿನಲ್ಲಿ ಪಾಕಶಾಲೆ ಕ್ಷೇತ್ರದಲ್ಲಿ ಬೀನಾ ಅವರ ಪ್ರಯಾಣವು ಅವರ ಪತಿ ಟಾಮ್ ಆಂಟೋನಿ ಅವರ ನಿವೃತ್ತಿಯ ನಂತರ 2017ರಲ್ಲಿ ಪ್ರಾರಂಭವಾಯಿತು. ಅವರಲ್ಲಿದ್ದ ಉತ್ಸಾಹವೇ ಅವರ ವ್ಯವಹಾರಕ್ಕೆ ಅಡಿಪಾಯವಾಗಿತ್ತು. ಪತಿ ಆಂಟೋನಿ ಟಾಮ್ ಅವರ ನಿರಂತರ ಬೆಂಬಲವು ಬೀನಾ ಅವರಿಗೆ ಉದ್ಯಮಿಯಾಗುವ ಪ್ರಯಾಣವನ್ನು ಪ್ರಾರಂಭಿಸಲು ಸಹಾಯ ಮಾಡಿತು.
ತಮ್ಮ ಮನೆಯ ತೋಟದಲ್ಲಿ ಬೆಳೆದ ಹಣ್ಣುಗಳು ಮತ್ತು ಹೂವುಗಳನ್ನು ಬಳಸಿಕೊಂಡು ಆಹಾರ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಅವರ ಈ ವ್ಯಾಪಾರ 'ಬೀಸ್ ಆಫ್ ಬೀನಾ' ಎಂಬ ಹೆಸರಿನಲ್ಲಿ ಹುಟ್ಟುಹಾಕಿದ್ದಾರೆ. ಅಡುಗೆಯ ಮೇಲಿನ ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಹವ್ಯಾಸವಾಗಿ ಪ್ರಾರಂಭವಾದ ಇದು ಕ್ರಮೇಣ ಪೂರ್ಣ ಪ್ರಮಾಣದ ವ್ಯಾಪಾರವಾಗಿ ಬೆಳೆದುನಿಂತಿತು.
'ಬೀನಾ' ಅವರು ತಮ್ಮ ಪ್ರತಿದಿನ ತಮ್ಮ ಗಾರ್ಡನ್‌ನಿಂದ ಬರುವ ಹೂವುಗಳ ಸುವಾಸನೆ ಜೊತೆ ದಿನಚರಿ ಆರಂಭಿಸುತ್ತಾರೆ. ಗಾರ್ಡನ್‌ಗೆ ತೆರಳಿ ತಾಜಾ ಉತ್ಪನ್ನಗಳನ್ನು ಕೊಯ್ಲು ಮಾಡುತ್ತಾರೆ. ತೆಂಗಿನಕಾಯಿ, ಅಡಿಕೆ, ಮಾವು, ಪೇರಳೆ..ಹೀಗೆ ಅವರ ಹಿತ್ತಲು ಹೂ ಹಣ್ಣುಗಳಿಂದ ತುಂಬಿದ್ದು, ಪದಾರ್ಥಗಳ ಖಜಾನೆಯಾಗಿದೆ.
ಬೀನಾ ಅವರು ತಮ್ಮ ಗಾರ್ಡನ್‌ನಲ್ಲಿ ಬೆಳೆದ ಉತ್ಪನ್ನಗಳಿಂದ ಅಡುಗೆ ಮಾಡಿ ಸ್ನೇಹಿತರು ಮತ್ತು ಸಂಬಂಧಿಕರು ಉಣಬಡಿಸುತ್ತಿದ್ದರು. ಅವರ ಕೈ ರುಚಿಗೆ ಮೆಚ್ಚಿ ಇದನ್ನೇ ವ್ಯಾಪಾರವಾಗಿ ಹುಟ್ಟುಹಾಕುವಂತೆ ಅನೇಕರು ಸಲಹೆ ನೀಡುತ್ತಿದ್ದರು. ಮುಂದೇ ಇದರಿಂದಲೇ ಪ್ರೇರಣೆ ಪಡೆದುಕೊಂಡು ಉದ್ಯಮ ಹುಟ್ಟುಹಾಕಿದರು.
ಬೀನಾ ಅವರು ಜಾಮ್, ಉಪ್ಪಿನಕಾಯಿ, ಸ್ಕ್ವ್ಯಾಷ್, ಜ್ಯೂಸ್, ಚಿಪ್ಸ್ ಮತ್ತು ಜೇನುತುಪ್ಪವನ್ನು ಒಳಗೊಂಡಂತೆ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಸಾವಯವ ಮತ್ತು ಸ್ಥಳೀಯವಾಗಿ ಸಿಗುವ ಪದಾರ್ಥಗಳನ್ನು ಬಳಸುವ ಕಾರಣಕ್ಕೆ ಭಾರತದಾದ್ಯಂತ ನಿಷ್ಠಾವಂತ ಗ್ರಾಹಕರನ್ನು ಅವರು ಗಳಿಸಿಕೊಂಡಿದ್ದಾರೆ.
2017ರಲ್ಲಿ ಬೀನಾ ತಮ್ಮ ಪ್ರಯಾಣವನ್ನು ಜೇನು ಸಾಕಣೆ ಕುಮಾರ ಕೋಮ್‌ನ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಮೂಲಕ ಮತ್ತು ವಿವಿಧ ಏಜೆನ್ಸಿಗಳ ಮೂಲಕ ಹಣ್ಣುಗಳು ಮತ್ತು ತರಕಾರಿಗಳ ಮೌಲ್ಯವರ್ಧನೆಯಲ್ಲಿ ತರಬೇತಿ ಪಡೆಯುವ ಮೂಲಕ ಪ್ರಾರಂಭಿಸಿದರು. ತರಬೇತಿಯ ನಂತರ, ಅವರು ಜೇನುತುಪ್ಪ ಸಂಸ್ಕರಿಸಲು ಮತ್ತು ಜೇನು ಸಾಬೂನುಗಳಂತಹ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿದರು.
ಕಾಲಾನಂತರದಲ್ಲಿ, ಅವರು ತಮ್ಮ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡು ಬಾಳೆಹಣ್ಣು, ಜಾಯಿಕಾಯಿ, ಮಾವಿನಹಣ್ಣು ಮತ್ತು ಇತರ ಹಣ್ಣುಗಳಿಂದ ವಿವಿಧ ನವೀನ ಉತ್ಪನ್ನಗಳನ್ನು ತಯಾರಿಸುವುದನ್ನು ಕಲಿತುಕೊಂಡರು. ಅವರ ತೋಟದ ಹೊರತಾಗಿ ಬೀನಾ ಮತ್ತು ಅವರ ಪತಿ 60 ಜೇನು ಪೆಟ್ಟಿಗೆಗಳನ್ನು ನಿರ್ವಹಿಸುತ್ತಾರೆ.
ಸಾವಯವ ತೋಟದ ತಾಜಾ ಹಣ್ಣು ಹೂ ಬಳಕೆ: ಬೀನಾ ಅವರು ತಮ್ಮ 3 ಹೆಕ್ಟೇರ್ ಸಾವಯವ ತೋಟದಲ್ಲಿ ತಾಜಾ ಹಣ್ಣುಗಳು ಮತ್ತು ಹೂವುಗಳನ್ನು ಬೆಳೆಸುತ್ತಾರೆ. ವಿಶೇಷವೆಂದರೆ ಅವರು ರಾಸಾಯನಿಕ ಗೊಬ್ಬರಗಳಿಲ್ಲದೆ, ನೈಸರ್ಗಿಕ ಗೊಬ್ಬರವನ್ನು ಮಾತ್ರ ಹಾಕಿ ಬೆಳೆ ಬೆಳೆಯುತ್ತಾರೆ. "ನಾವು ಯಾವುದೇ ರಾಸಾಯನಿಕ ಗೊಬ್ಬರ ಹಾಕುವುದಿಲ್ಲ. ನಮ್ಮ ಹಣ್ಣುಗಳು ಮತ್ತು ಹೂವುಗಳನ್ನು ಬೆಳೆಯಲು ನಾವು ವರ್ಮಿಕಾಂಪೋಸ್ಟ್, ಹಸುವಿನ ಸಗಣಿ ಮತ್ತು ಅಡಿಗೆ ತ್ಯಾಜ್ಯದ ಗೊಬ್ಬರವನ್ನು ಮಾತ್ರ ಬಳಸುತ್ತೇವೆ," ಎಂದು ಅವರು ತಮ್ಮ ತೋಟದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ ಬೀನಾ.
ಉತ್ಪನ್ನಗಳು ಮತ್ತು ಆದಾಯ: 'ಬೀಸ್ ಆಫ್ ಬೀನಾ' ಹೆಸರಿನಡಿ ಅವರು, 140ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಾರೆ. ಹೂವಿನ ಜ್ಯೂಸ್ ಪ್ರತಿ ಲೀಟರ್‌ಗೆ 350ರಿಂದ 400 ರೂಪಾಯಿ, ಪಲ್ಪ್ ಮತ್ತಿತರ ಉತ್ಪನ್ನಗಳ ಬೆಲೆ 1,500ರಿಂದ 2,000 ರೂಪಾಯಿ, ಬೀನಾ ಪ್ರತಿದಿನ ಎಂಟರಿಂದ 10 ಆರ್ಡರ್‌ಗಳನ್ನು ಪೂರೈಸುತ್ತಾರೆ. ಅವರ ಹೇಳಿಕೆ ಪ್ರಕಾರವೇ ಅವರು ತಿಂಗಳಿಗೆ ಸುಮಾರು 50,000 ರೂಪಾಯಿಗಳನ್ನು ಲಾಭವಾಗಿ ಗಳಿಸುತ್ತಾರೆ.
ವಯಸ್ಸಾದ ಪೋಷಕರು, ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಇತ್ತು. ಮಕ್ಕಳನ್ನು ಬೆಳೆದು ದೊಡ್ದವರಾಗಿದ್ದಾರೆ. ಪೋಷಕರು ಅಗಲಿದ್ದಾರೆ. ಹೀಗಾಗಿ ನನ್ನ 56 ನೇ ವಯಸ್ಸಿನಲ್ಲಿ ಹೋಂ ಪ್ರೋಡಕ್ಟ್ ಗಳನ್ನು ತಯಾರಿಸಲು ಆರಂಭಿಸಿದೆ. ನಿವೃತ್ತಿಯ ಬಳಿಕ ನನ್ನ ಪತಿ ನನಗೆ ಬೆನ್ನೆಲುಬಾಗಿ ನಿಂತರು ಎನ್ನುತ್ತಾರೆ ಬೀನಾ. ಬೀನಾ ಟಾಮ್ ಅವರ ಈ ಕಥೆ, ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಸಾಕು ಹಿತ್ತಲಿನ ಮೂಲಕವೇ ಉದ್ಯಮವನ್ನು ಹೇಗೆ ಆರಂಭಿಸಬಹುದು ಎಂಬ ಮಹತ್ವವನ್ನು ಒತ್ತಿ ಹೇಳುತ್ತದೆ.


Click it and Unblock the Notifications