ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್ ಈ ವಾರ 300 ಕೋಟಿ ಅಮೆರಿಕನ್ ಡಾಲರ್ (ಭಾರತದ ಕರೆನ್ಸಿ ಲೆಕ್ಕದಲ್ಲಿ 21,900 ಕೋಟಿ ರುಪಾಯಿ) ಮೌಲ್ಯದ ಅಮೆಜಾನ್ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಂದ ಹಾಗೆ, ಈ ವರ್ಷದಲ್ಲಿ ಅಮೆಜಾನ್ ಷೇರಿನ ಬೆಲೆಯಲ್ಲಿ ಶೇಕಡಾ 75ರಷ್ಟು ಏರಿಕೆ ಆಗಿದ್ದು, ಅದರ ಅನುಕೂಲ ಪಡೆದುಕೊಂಡಿದ್ದಾರೆ.
ಅಂದ ಹಾಗೆ, ಅಮೆಜಾನ್ ಸಿಇಒ ಆಗಿರುವ ಜೆಫ್ ಬೆಜೋಸ್ ಇಷ್ಟು ಷೇರುಗಳನ್ನು ಮಾರಾಟ ಮಾಡುವುದಕ್ಕೆ ಕಾರಣ ಏನು ಅಂತ ತಿಳಿಸಿಲ್ಲ. ಆದರೆ ಸಾಮಾನ್ಯವಾಗಿ ಷೇರುಗಳನ್ನು ಮಾರಾಟ ಮಾಡುವ ಬೆಜೋಸ್, ಆ ಮೊತ್ತವನ್ನು ಬ್ಲ್ಯೂ ಆರಿಜನ್ ಸ್ಪೇಸ್ ಕಂಪೆನಿ ಮತ್ತಿತರ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಾರೆ.
ಶತಕೋಟ್ಯಧಿಪತಿಗಳು ತಮ್ಮ ಹಣವನ್ನು ವಿವಿಧ ವ್ಯವಹಾರದಲ್ಲಿ ಹೂಡುವುದು ಕೂಡ ಒಂದು ಲೆಕ್ಕಾಚಾರವೇ. ಆ ಮೂಲಕ ಎಲ್ಲ ಮೊಟ್ಟೆಯನ್ನು ಒಂದು ಬುಟ್ಟಿಯಲ್ಲಿ ಇಟ್ಟಂತೆ ರಿಸ್ಕ್ ಇರುವುದಿಲ್ಲ ಎಂಬುದು ಉದ್ದೇಶ. ಈ ವರ್ಷದ ಆಗಸ್ಟ್ ಹಾಗೂ ಫೆಬ್ರವರಿಯಲ್ಲೂ ಜೆಫ್ ಬೆಜೋಸ್ ತಮ್ಮ ಬಳಿಯ ಷೇರು ಮಾರಾಟ ಮಾಡಿದ್ದರು.

ಇದೊಂದೇ ವರ್ಷದಲ್ಲಿ ಸಾವಿರ ಕೋಟಿ ಅಮೆರಿಕನ್ ಡಾಲರ್ (ಭಾರತದ ರುಪಾಯಿ ಲೆಕ್ಕದಲ್ಲಿ ಎಪ್ಪತ್ಮೂರು ಸಾವಿರ ಕೋಟಿ) ಮೌಲ್ಯದ ಅಮೆಜಾನ್ ಷೇರುಗಳನ್ನು ಬೆಜೋಸ್ ಮಾರಾಟ ಮಾಡಿದ್ದಾರೆ. ಬೆಜೋಸ್ ಹೀಗೆ ಮಾರಾಟ ಮಾಡಿರು ಬಗ್ಗೆ ಅಮೆಜಾನ್ ಕಂಪೆನಿ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ತಿಂಗಳು ಬ್ಲ್ಯೂ ಆರಿಜಿನ್ ನಿಂದ ಬಾಹ್ಯಾಕಾಶ ಪ್ರವಾಸೋದ್ಯಮ ರಾಕೆಟ್ ಆರಂಭಿಸಲಾಯಿತು. ಆದರೆ ಅದಿನ್ನೂ ಮನುಷ್ಯರ ಸಮೇತವಾಗಿ ಹಾರಾಟ ನಡೆಸಿಲ್ಲ.
ಜಗತ್ತಿನ ಅತ್ಯಂತ ಶ್ರೀಮಂತ ಜೆಫ್ ಬೆಜೋಸ್ ಇಷ್ಟು ಷೇರಿನ ಮಾರಾಟ ಮಾಡಿದರೂ ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, $ 191 ಬಿಲಿಯನ್ ಆಸ್ತಿ ಇದೆ. ಈ ಪೈಕಿ ಇದೊಂದೇ ವರ್ಷದಲ್ಲಿ $ 76 ಬಿಲಿಯನ್ ಏರಿಕೆ ಆಗಿದೆ.


Click it and Unblock the Notifications