ಭಾರತದಲ್ಲಿ ಸಗಟು ಹಣದುಬ್ಬರವು ಮೇ ತಿಂಗಳಿನಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದೆ. ಸುಮಾರು ಹತ್ತು ವರ್ಷಗಳ ಬಳಿಕ ದೇಶದಲ್ಲಿ ಸಗಟು ಹಣದುಬ್ಬರವು ಶೇಕಡ 15.88ಕ್ಕೆ ಹೆಚ್ಚಳವಾಗಿದೆ. ಪ್ರಮುಖವಾಗಿ ಇಂಧನ, ಕೆಮಿಕಲ್, ಮೆಟಲ್, ಆಹಾರದ ಬೆಲೆ ಏರಿಕೆಯಿಂದಾಗಿ ಸಗಟು ಹಣದುಬ್ಬರ ಹೆಚ್ಚಳವಾಗಿದೆ ಎಂದು ಸರ್ಕಾರದ ಡೇಟಾ ಉಲ್ಲೇಖ ಮಾಡಿದೆ.
ಏಪ್ರಿಲ್ ತಿಂಗಳಿನಲ್ಲಿ ಸಗಟು ಹಣದುಬ್ಬರವು ಶೇಕಡ 15.08 ಮತ್ತು ಅದಕ್ಕೂ ಮುಂಚಿನ ತಿಂಗಳಿನಲ್ಲಿ ಶೇಕಡ 14.55 ಆಗಿತ್ತು. ಹಲವಾರು ತಿಂಗಳುಗಳಿಂದ ಸಗಟು ಹಣದುಬ್ಬರವು ಭಾರೀ ಹೆಚ್ಚಳವನ್ನು ಕಾಣುತ್ತಿದೆ. ಮೇ ತಿಂಗಳಿನಲ್ಲಿ ದಾಖಲೆಯ ಮಟ್ಟಕ್ಕೆ ಹೆಚ್ಚಳವಾಗಿದೆ.
ಕಳೆದ ವರ್ಷ ಅಂದರೆ 2021ರ ಮೇ ತಿಂಗಳಿನಲ್ಲಿ ಸಗಟು ಹಣದುಬ್ಬರವು ಶೇಕಡ 13.11 ಆಗಿತ್ತು. ಆದರೆ ಈ ವರ್ಷ ಮೇ ತಿಂಗಳಿನಲ್ಲಿ ಸುಮಾರು ಶೇಕಡ 15.88ಕ್ಕೆ ಹೆಚ್ಚಳವಾಗಿದೆ ಎಂದು ಸರ್ಕಾರದ ಮಾಹಿತಿ ತಿಳಿಸುತ್ತದೆ. ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದಾಗ ಮೇ ತಿಂಗಳಿನಲ್ಲಿ ಸಗಟು ಹಣದುಬ್ಬರವು ಶೇಕಡ 1.38 ಹೆಚ್ಚಳವಾಗಿದೆ.

ಇಂಧನ, ಜಾಗತಿಕ ಕಚ್ಚಾ ತೈಲ ಬೆಲೆ, ಆಹಾರದ ಬೆಲೆ, ಮೆಟಲ್, ರಾಸಾಯನಿಕ, ಆಹಾರ ಉತ್ಪನ್ನದ ಬೆಲೆಗಳು ಮೇಲೆ ತಿಂಗಳಿನಲ್ಲಿ ತೀವ್ರ ಮಟ್ಟಕ್ಕೆ ಏರಿಕೆ ಕಂಡಿದೆ. ಕಳೆದ ವರ್ಷದ ಮೇ ತಿಂಗಳಿಗೆ ನಾವು ಹೋಲಿಕೆ ಮಾಡಿದಾಗ ಭಾರೀ ಬೆಲೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದಾಗ ಜಾಗತಿಕ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಹಣದುಬ್ಬರದ ಬೆಲೆಯು ಶೇಕಡ 8.52, ಆಹಾರದಲ್ಲಿ ಶೇಕಡ 2.40 ಹೆಚ್ಚಳ ಕಂಡಿದೆ.
ಚಿಲ್ಲರೆ ಹಣದುಬ್ಬರ ಎಷ್ಟು ಏರಿಕೆ?
ಸಗಟು ಹಣದುಬ್ಬರವು ಏರಿಕೆ ಕಂಡಿರುವ ನಡುವೆ ಚಿಲ್ಲರೆ(Retail) ಹಣದುಬ್ಬರವು ಇಳಿಕೆ ಕಂಡಿದೆ. ಏಪ್ರಿಲ್ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದವು, ಆದರೆ ಮೇ ತಿಂಗಳಿನಲ್ಲಿ ಇಳಿಕೆ ಕಂಡಿದೆ. ಶೇಕಡ 7.04ಗೆ ಇಳಿಕೆಯಾಗಿದೆ. ಈ ನಡುವೆ ಆಹಾರದ ಬೆಲೆಯು ಇನ್ನು ಮುಂದಿನ ತಿಂಗಳುಗಳಲ್ಲಿ ಇಳಿಕೆ ಕಾಣಲಿದೆಯೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ.
ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಏಪ್ರಿಲ್ ತಿಂಗಳಿನಲ್ಲಿ ಶೇಕಡ 7.79ಕ್ಕೆ ಹೆಚ್ಚಳವಾಗಿತ್ತು. ಆದರೆ ಮೇ ತಿಂಗಳಿನಲ್ಲಿ ಶೇಕಡ 7.04ಗೆ ಇಳಿದಿದೆ. ಇನ್ನು 2021ರ ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 6.3ರಷ್ಟಿತ್ತು. ಇನ್ನು ಈಗಾಗಲೇ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಸಾಲದ ಬಡ್ಡಿದರ ಹೆಚ್ಚಳವಾಗಿದೆ. ಈಗ ಹಣದುಬ್ಬರವು ನಿಯಂತ್ರಣಕ್ಕೆ ಬಾರದಿದ್ದರೆ ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.


Click it and Unblock the Notifications