ನವದೆಹಲಿ, ಅ. 28: ಮಾಹಿತಿ ಪ್ರಪಂಚದಲ್ಲಿ ಓದುವ ಮತ್ತು ಬರೆಯುವ ಕಾಲ ಮಿಂಚಿ ಮರೆಯಾಗುತ್ತಿರಬಹುದು. ಈಗೇನಿದ್ದರೂ ದೃಶ್ಯಗಳ ಪ್ರಪಂಚ ಎಂದು ತಂತ್ರಜ್ಞಾನ ಪರಿಣಿತರು ಹೇಳುವುದುಂಟು. ಈಗ ಇಂಟರ್ನೆಟ್‌ನಲ್ಲಿ ಜನರು ವೀಕ್ಷಿಸಲಾಗುತ್ತಿರುವ ಕಂಟೆಂಟ್ ಅನ್ನು ಗಮನಿಸಿದರೆ ಇದು ಹೌದು ಎನಿಸತ್ತದೆ. ಯೂಟ್ಯೂಟ್, ಟಿಕ್ ಟಾಕ್‌ನಂತಹ ವಿಡಿಯೋ ಪ್ಲಾಟ್‌ಫಾರ್ಮ್‌ಗಳನ್ನೇ ಹೆಚ್ಚಿನ ಜನರು ಹೆಚ್ಚಿನ ಸಮಯ ವೀಕ್ಷಿಸುತ್ತಾರೆ. ಭಾರತದಲ್ಲೂ ಇದೇ ಟ್ರೆಂಡ್ ಇರುವುದು. ಭಾರತದಲ್ಲಿ ಯೂಟ್ಯೂಬ್‌ವೊಂದರಿಂದಲೇ ದೇಶದ ಬೊಕ್ಕಸಕ್ಕೆ 6,800 ರೂ ಆದಾಯ ಹರಿದುಬರುತ್ತಿದೆ ಎಂಬ ಸುದ್ದಿ ಇದೆ.
ಕಾರ್ಯಕ್ರಮ ತಯಾರಕರು ಅಥವಾ ಕಂಟೆಂಟ್ ಕ್ರಿಯೇಟರ್‌ಗಳಿಂದ ಸೃಷ್ಟಿಯಾಗುತ್ತಿರುವ ಆರ್ಥಿಕತೆ ಭಾರತದಲ್ಲಿ ಬೃಹತ್ ಮಟ್ಟಕ್ಕೆ ಬೆಳೆಯುತ್ತಿದೆ. ಅದರಲ್ಲೂ ಯೂಟ್ಯೂಬ್‌ನಲ್ಲಿ ಸ್ಥಳೀಯ ಕಂಟೆಂಟ್ ಕ್ರಿಯೇಟರ್‌ಗಳು ಭಾರತದಲ್ಲಿ ವರ್ಷಕ್ಕೆ 6,800 ಕೋಟಿ ರೂ ಆದಾಯ ಸೃಷ್ಟಿಸುತ್ತಿದ್ದಾರೆ. ಈ ಕ್ರಿಯೇಟರ್ ಎಕನಾಮಿ ವ್ಯವಸ್ಥೆಯಲ್ಲಿ ಏಳು ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ.
ಟೆಕ್ನಾಲಜಿ, ಇನೋವೇಶನ್ ಅಂಡ್ ಸೊಸೈಟಿ ಬಗ್ಗೆ ನಡೆದ CyFy 2022 ಸಭೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಿನ್ನೆ ಗುರುವಾರ ಪಾಲ್ಗೊಂಡಿದ್ದ ಯೂಟ್ಯೂಬ್‌ನ ಚೀಫ್ ಪ್ರಾಡಕ್ಟ್ ಆಫೀಸರ್ ಮತ್ತು ಗೂಗಲ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ ನೀಲ್ ಮೋಹನ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಒಬ್ಸರ್ವರ್ ರೀಸರ್ಚ್ ಫೌಂಡೇಶನ್ (ಓಆರ್‌ಎಫ್) ಈ ವರ್ಚುವಲ್ ಕಾರ್ಯಕ್ರಮ ಆಯೋಜಿಸಿತ್ತು.
ಸಣ್ಣ ಬಿಸಿನೆಸ್‌ಗೆ ಉತ್ತಮ ವೇದಿಕೆ
"ಭಾರತದಲ್ಲಿ ಕ್ರಿಯೇಟರ್ ಎಕನಾಮಿ ಬಹಳ ಹುಲುಸಾಗಿ ಬೆಳೆಯುತ್ತಿದೆ. 6,800 ಕೋಟಿ ರೂ ಆದಾಯ ಮತ್ತು 7 ಲಕ್ಷ ಉದ್ಯೋಗ ಸೃಷ್ಟಿಗೆ ಎಡೆ ಮಾಡಿಕೊಡುತ್ತಿದೆ. ಕಂಟೆಂಟ್ ತಯಾರಕರು ತಮ್ಮದೇ ವೀಕ್ಷಕ ಬಳಗ ಸೃಷ್ಟಿಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಯೂಟ್ಯೂಬ್ ಅವಕಾಶ ಮಾಡಿಕೊಡುತ್ತದೆ" ಎಂದು ನೀಲ್ ಮೋಹನ್ ಅಭಿಪ್ರಾಯಪಟ್ಟಿದ್ದಾರೆ.
"ಯೂಟ್ಯೂಬ್ ಒಂದು ರೀತಿಯಲ್ಲಿ ಜಾಹೀರಾತು ಆದ್ಯತೆಯ ಮೀಡಿಯಾ ಪ್ಲಾಟ್‌ಫಾರ್ಮ್ ಆಗಿರುವುದರಿಂದ ಎಲ್ಲಾ ರೀತಿಯ ವ್ಯವಹಾರಗಳಿಗೆ, ಅದರಲ್ಲೂ ಸಣ್ಣ ವ್ಯವಹಾರಗಳಿಗೆ ಸೂಕ್ತ ತಾಣವಾಗಿದೆ... ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳ ಕಂಟೆಂಟ್‌ಗಳು ಇವೆ. ಲಿಂಗ ವೈವಿಧ್ಯತೆಯೂ ಇದೆ. ಕಂಟೆಂಟ್ ಕ್ರಿಯೇಟರ್‌ಗಳು ಮತ್ತು ವೀಕ್ಷಕರು ಇಬ್ಬರಿಗೂ ಸುರಕ್ಷಿತ ವೇದಿಕೆಯಾಗಿ ಉಳಿಯುವಂಥ ಸಾಧನಗಳು ನಮ್ಮಲ್ಲಿವೆ" ಎಂದು ಯೂಟ್ಯೂಬ್‌ನ ಸಿಪಿಒ ಆಗಿರುವ ನೀಲ್ ಮೋಹನ್ ಹೇಳಿದರು.
ಸರ್ಕಾರದ ಕಣ್ಣು
"ಭಾರತದಾದ್ಯಂತ ಕಂಟೆಂಟ್ ಕ್ರಿಯೇಟರ್‌ಗಳಿಗೆ ಯೂಟ್ಯೂಬ್ ಯಾವಾಗಲೂ ಮೊದಲ ಆದ್ಯತೆಯಾಗಿರುತ್ತದೆ. ಈ ತಾಣದಲ್ಲಿ ವೈವಿಧ್ಯತೆ ತರುವುದು ಮತ್ತು ಎಲ್ಲರಿಗೂ ಭಾಗಿಯಾಗುವ ಅವಕಾಶ ತರುವುದು ನಮ್ಮ ಆದ್ಯತೆಯಾಗಿದೆ. ಕ್ರಿಯೇಟರ್‌ಗಳ ಆರ್ಥಿಕತೆಯಿಂದ ಭಾರತದಲ್ಲಿ ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಏನಾಗುತ್ತದೆ ಎಂಬುದರ ಮೇಲೆ ಸರ್ಕಾರಗಳು ನಿಗಾ ಇರಿಸಬೇಕಾದ್ದು ಸಹಜ" ಎಂದು ನೀಲ್ ಮೋಹನ್ ತಿಳಿಸಿದರು.
ಯೂಟ್ಯೂಬ್ ಬಹಳ ಮಹತ್ವದ ಪ್ಲಾಟ್‌ಫಾರ್ಮ್ ಆಗಿ ಬೆಳೆದಿರುವುದರಿಂದ ಇಲ್ಲಿ ತಪ್ಪು ಮಾಹಿತಿ ಪ್ರಸರಣ ಆಗದಂತೆ ನೋಡಿಕೊಳ್ಳುವ ಗುರುತರ ಹೊಣೆ ಯೂಟ್ಯೂಬ್ ಸಂಸ್ಥೆ ಮತ್ತು ಸರ್ಕಾರಗಳ ಮೇಲಿದೆ ಎಂದ ಅವರು, "ಸರ್ಕಾರದ ನೀತಿ ಬಗ್ಗೆ ಅಭಿಪ್ರಾಯ ಮತ್ತು ದೃಷ್ಟಿಕೋನ ಹಂಚಿಕೊಳ್ಳಲು ಜನರಿಗೆ ಯೂಟ್ಯೂಬ್ ಒಂದು ವೇದಿಕೆಯಾಗಿದೆ. ಚುನಾವಣಾ ನೈತಿಕತೆ, ತಪ್ಪು ಮಾಹಿತಿ ತಡೆ, ಹಿಂಸಾಚಾರ ಇತ್ಯಾದಿ ವಿಚಾರಗಳಲ್ಲಿ ನಮ್ಮ ಧೋರಣೆ ಬಹಳ ಸ್ಪಷ್ಟವಾಗಿದೆ" ಎಂದೂ ನೀಲ್ ಮೋಹನ್ ಸ್ಪಷ್ಟಪಡಿಸಿದರು.
ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ತಪ್ಪು ಮಾಹಿತಿ ಮತ್ತು ದ್ವೇಷಕ್ಕೆ ಅವಕಾಶ ಕೊಡದ ರೀತಿಯಲ್ಲಿ ನಮ್ಮಲ್ಲಿ ಗ್ಲೋಬಲ್ ಕಮ್ಯೂನಿಟಿ ಮಾರ್ಗಸೂಚಿಗಳಿವೆ ಎಂದ ಗೂಗಲ್‌ನ ಹಿರಿಯ ಉಪಾಧ್ಯಕ್ಷ ನೀಲ್ ಮೋಹನ್, ವಿಸ್ತೃತ ಮತ್ತು ನಿರ್ಲಕ್ಷಿತ ಸಮುದಾಯಗಳಿಗೆ ಯೂಟ್ಯೂಬ್ ಬಲ ನೀಡುತ್ತದೆ ಎಂದರು.
ಭಾರತದಲ್ಲಿ 47 ಕೋಟಿ ಯೂಸರ್ಸ್
ಭಾರತದಲ್ಲಿ ಯೂಟ್ಯೂಬ್ ಬಳಸುವವರ ಸಂಖ್ಯೆ ಬರೋಬ್ಬರಿ 46.7 ಕೋಟಿ ಇದೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಮತ್ತು ಇನ್‌ಫ್ಲುಯನ್ಸರ್‌ಗಳಿದ್ದಾರೆ. ಇಲ್ಲಿ ವಿಡಿಯೋ ವೀಕ್ಷಣೆ ಹಾಗೂ ಜಾಹೀರಾತುಗಳ ಆಧಾರದ ಮೇಲೆ ಕಂಟೆಂಟ್ ಕ್ರಿಯೇಟರ್‌ಗಳಿಗೆ ಯೂಟ್ಯೂಬ್ ಆದಾಯ ಒದಗಿಸುತ್ತದೆ. ಜೊತೆಗೆ, ಕಂಟೆಂಟ್ ಕ್ರಿಯೇಟರ್‌ಗಳು ತಮ್ಮದೇ ವೀಕ್ಷಕಬಳಗ ಸೃಷ್ಟಿಸಿಕೊಂಡು ತಮ್ಮ ವ್ಯವಹಾರ ವೃದ್ಧಿಸಿಕೊಳ್ಳಬಹುದು, ಅಥವಾ ಪ್ರಾಡಕ್ಟ್ ರಿವೀವ್ ಇತ್ಯಾದಿ ಇನ್‌ಫ್ಲುಯೆನ್ಸರ್ ಆಗಿ ಕಾರ್ಯನಿರ್ವಹಿಸುತ್ತಾ ಆ ಮೂಲಕವೂ ಆದಾಯ ಮಾಡಿಕೊಳ್ಳಬಹುದು.


Click it and Unblock the Notifications