ರಿಷಭ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರಾ ಈಗ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಸಿನಿಮಾ. ಬಹಳ ಮಂದಿ ಈ ಕನ್ನಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕ್ರಿಕೆಟಿಗರೂ ಕಾಂತಾರಾ ಕೂಗಿಗೆ ಧ್ವನಿಗೂಡಿಸಿದ್ದಾರೆ. ಈಗ ಉದಯೋನ್ಮುಖ ಉದ್ಯಮಿ ನಿತಿನ್ ಕಾಮತ್ ಕಾಂತಾರಾ ಸಿನಿಮಾ ನೋಡಿ ಬೆರಗು ವ್ಯಕ್ತಪಡಿಸಿದ್ದಾರೆ.
ಹಣಕಾಸು ತಂತ್ರಜ್ಞಾನ ಸಂಸ್ಥೆ ಝಿರೋಧದ ಸಿಇಒ ನಿತಿನ್ ಕಾಮತ್ ಮೊನ್ನೆ ಸೋಷಿಯಲ್ ಮೀಡಿಯಾದಲ್ಲಿ ಕಾಂತರಾ ಬಗ್ಗೆ ಪ್ರಶಂಸೆ ಮಾಡಿದ ಟ್ವೀಟ್ ಇದೀಗ ವೈರಲ್ ಆಗುತ್ತಿದೆ.
"ಈಗಷ್ಟೇ ಕಾಂತಾರಾ ನೋಡಿದೆ. ನೀವು ಕನ್ನಡಿಗ ಎಂದು ಹೆಮ್ಮೆ ಪಡುವ ಕ್ಷಣ ಅದು. ಅಷ್ಟೇ ಅಲ್ಲ ಈ ಸಿನಿಮಾ ಶೂಟ್ ಮಾಡಿದ ಸ್ಥಳದಿಂದ ಬಂದವ ನಾನು" ಎಂದು ಅವರು ಹೇಳಿಕೊಂಡಿದ್ದಾರೆ.
ನಿತಿನ್ ಕಾಮತ್ ಮಂಗಳೂರಿನವರು, ಕನ್ನಡಿಗರು. ಕಾಂತಾರಾ ಸಿನಿಮಾ ಮಸ್ಟ್ ವಾಚ್ ಎಂದು ಹೇಳಿರುವ ಅವರು, ಕಳೆದ 30 ನಿಮಿಷಗಳಿಂದ ಗೂಸ್‌ಬಂಪ್ಸ್ (ರೋಮಾಂಚನ) ಬರುತ್ತಿದೆ ಎಂದಿದ್ದಾರೆ. ಹಾಗೆಯೇ, ರಿಷಭ್ ಶೆಟ್ಟಿಗೆ ಪ್ರೀತಿಯ ಸಂಕೇತವಾಗಿ ಹಾರ್ಟ್ ಸಿಂಬಲ್‌ನ ಇಮೋಜಿ ಹಾಕಿದ್ದಾರೆ.
ನಿತಿನ್ ಕಾಮತ್‌ರ ಕಂಪನಿ
ಝಿರೋಧ 12 ವರ್ಷಗಳ ಹಿಂದೆ ಹುಟ್ಟಿಕೊಂಡ ಸಂಸ್ಥೆ. ಷೇರುಪೇಟೆಯಲ್ಲಿ ಬ್ರೋಕರ್ ಆಗಿದ್ದ ನಿತಿನ್ ಕಾಮತ್ ಮತ್ತವರ ಸಹೋದರ ಕಟ್ಟಿದ ಸಂಸ್ಥೆ ಇದು. ಇಂಗ್ಲೀಷ್‌ನ ಝೀರೋ ಮತ್ತು ಸಂಸ್ಕೃತದ ರೋಧ ಪದ ಮಿಶ್ರಣ ಝೀರೋಧ. ಅಂದರೆ ಶೂನ್ಯ ತಡೆ.
ಝೀರೋಧ ಷೇರು ಪೇಟೆಯ ಒಂದು ಬ್ರೋಕರೇಜ್ ಸಂಸ್ಥೆ. ಅಂದರೆ ಷೇರುಗಳ ವಹಿವಾಟು ನಡೆಸುವ ಕಂಪನಿ. ಭಾರತದಲ್ಲಿ ನಡೆಯುವ ಶೇ. 15ರಷ್ಟು ಷೇರು ವಹಿವಾಟು ಝೀರೋಧದಿಂದಲೇ ಆಗುತ್ತದೆ.
ನಿತಿನ್ ಕಾಮತ್ ಅವರ ಮಾಲಿಕತ್ವದಲ್ಲಿ ರೈನ್‌ಮ್ಯಾಟರ್ ಎಂಬ ಫೈನಾನ್ಸ್ ಟೆಕ್ನಾಲಜಿ ಕಂಪನಿ ಇದೆ. ಅದು ಹಲವು ಸ್ಟಾರ್ಟಪ್‌ಗಳಿಗೆ ಹಣ ಹೂಡಿಕೆ ಮಾಡಿ ಉತ್ತೇಜಿಸುವ ಕೆಲಸ ಮಾಡುತ್ತದೆ.
ಕಾಂತಾರಾ ಹವಾ
ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಮೊದಲು ಬಿಡುಗಡೆಯಾದ ಕಾಂತಾರಾ ಸಿನಿಮಾ ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಂಡು ಬಾಕ್ಸಾಫೀಸ್ ದಾಖಲೆಗಳನ್ನೆಲ್ಲಾ ಚಿಂದಿ ಮಾಡುತ್ತಾ ಹೋಗುತ್ತಿದೆ. ಮಂಗಳೂರಿನ ಭೂತಕೋಲ, ದೈವಾಚರಣೆ, ನಾಡು-ಕಾಡು ಬದುಕು ಸುತ್ತಲಿನ ಕಥಾವಸ್ತು ಇರುವ ಕಾಂತಾರಾ ಸಿನಿಮಾ ನೋಡಿ ಪ್ರಶಂಸಿಸದವರು ವಿರಳ. ಅದರಲ್ಲೂ ಕೊನೆಯ 20 ನಿಮಿಷದ ದೃಶ್ಯಗಳಿಂದ ಬಹುತೇಕ ಎಲ್ಲರೂ ರೋಮಾಂಚನಗೊಂಡಿದ್ದಾರೆ. ಈ ಇಪ್ಪತ್ತು ನಿಮಿಷ ಗೂಸ್ ಬಂಪ್ ಬಂದಿದೆ ಎಂದು ಹೇಳುವವರೇ ಹೆಚ್ಚು.
ಕನ್ನಡದಲ್ಲಿ ಮೊದಲು ಬಿಡುಗಡೆಯಾದ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಕನ್ನಡದ ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಡಬ್ ಆಗಿ ರಿಲೀಸ್ ಆಗಿದೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲೂ ಸಾಕಷ್ಟು ಯಶಸ್ಸು ಗಳಿಸಿದೆ.
ಗಲ್ಲಾಪೆಟ್ಟಿಗೆ ದಾಖಲೆ
ಇತ್ತೀಚಿನ ಮಾಹಿತಿ ಪ್ರಕಾರ ಕಾಂತಾರಾ ಸಿನಿಮಾ ಒಟ್ಟಾರೆ ಗಳಿಕೆ 350 ಕೋಟಿ ರೂ ದಾಟಿದೆ. ಅಲ್ಲು ಅರ್ಜುನ್ ನಟನೆಯ ಪುಷ್ಪಾ ಸಿನಿಮಾದ ಬಾಕ್ಸಾಫೀಸ್ ಗಳಿಕೆಯನ್ನು ಮೀರಿಸಿದೆ. ಕೆಜಿಎಫ್-2 ನಂತರ ಹಿಂದಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಕನ್ನಡ ಸಿನಿಮಾ ಕಾಂತಾರಾ. ಕಾಂತಾರಾ ಹಿಂದಿ ಸಿನಿಮಾ 70 ಕೋಟಿ ರೂ ಸಮೀಪ ಗಳಿಕೆ ಮಾಡಿದೆ. ತೆಲುಗು ಅವತರಣಿಕೆಯ ಕಾಂತಾರಾ ಕೂಡ ಭಾರೀ ಹಣ ಮಾಡುತ್ತಿದೆ. ಅತಿ ಹೆಚ್ಚು ಹಣ ಮಾಡಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರಾವೂ ಸೇರಿಕೊಂಡಿದೆ.
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮತ್ತು ಚಲುವೇಗೌಡ ನಿರ್ಮಾಣದ ಕಾಂತಾರಾ ಸಿನಿಮಾವನ್ನು ರಿಷಭ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದಾರೆ. ಅಚ್ಯುತ್ ಕುಮಾರ್ ಮತ್ತು ಕಿಶೋರ್ ಈ ಸಿನಿಮಾದಲ್ಲಿರುವ ಇತರ ಚಿರಪರಿಚಿತ ನಟರು. ನಾಯಕಿ ಸಪ್ತಮಿ ಗೌಡಗೆ ಇದು ಮೊದಲ ಸಿನಿಮಾ. ನಾಯಕಿಯ ಅಮ್ಮನ ಪಾತ್ರಧಾರಿಗೂ ಇದು ಚೊಚ್ಚಲ ಸಿನಿಮಾ. ಕೇವಲ 15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಈ ಪರಿ ಹಣ ಗಳಿಸಿರುವುದು ಸಾಧಾರಣವಲ್ಲ. ಕಡಿಮೆ ಬಜೆಟ್ ಸಿನಿಮಾವೊಂದು ಇಷ್ಟು ದೊಡ್ಡ ಯಶಸ್ಸು ಗಳಿಸಿದ್ದು ಹಿಂದೆಂದೂ ಇಲ್ಲ.


Click it and Unblock the Notifications