ದೇಶದಲ್ಲಿ ಅತೀ ಜನಪ್ರಿಯವಾದ ಆಹಾರ ಡೆಲಿವರಿ ಸಂಸ್ಥೆಯಾದ ಜೊಮ್ಯಾಟೊ ಶುಕ್ರವಾರ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ಇದಾದ ಬೆನ್ನಲ್ಲೇ ಎರಡು ದಿನಗಳ ವಾರಾಂತ್ಯದ ರಜಾ ದಿನದ ಬಳಿಕ ಸೋಮವಾರ ಜೊಮ್ಯಾಟೊ ಷೇರು ಮಾರುಕಟ್ಟೆಯಲ್ಲಿ ಶೈನ್ ಆಗಿದೆ.
ಶನಿವಾರ ಹಾಗೂ ಭಾನುವಾರ ಸಾಮಾನ್ಯವಾಗಿಯೇ ಷೇರು ಮಾರುಕಟ್ಟೆ ಬಂದ್ ಆಗಿರುತ್ತದೆ. ಸೋಮವಾರ ವಹಿವಾಟಿನ ಆರಂಭವಾಗುತ್ತಿದ್ದಂತೆ ಜೊಮ್ಯಾಟೊ ಷೇರು ಸುಮಾರು ಶೇಕಡ 5ರಷ್ಟು ಏರಿಕೆ ಕಂಡು 100 ರೂಪಾಯಿಯ ಗಡುವನ್ನು ದಾಟಿದೆ. ಹಣಕಾಸು ವರ್ಷದ 2023-24ರ ಏಪ್ರಿಲ್‌ನಿಂದ ಜೂನ್‌ನಲ್ಲಿ ಕೊನೆಯಾದ ತ್ರೈಮಾಸಿಕದ ವರದಿಯನ್ನು ಪ್ರಕಟಿಸಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

100 ರೂಪಾಯಿಯ ಗಡುವನ್ನು ದಾಟಿದ ಜೊಮ್ಯಾಟೊ ಷೇರು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಬಿಎಸ್‌ಇಯಲ್ಲಿ 52 ವಾರಗಳ ನೂತನ ಗರಿಷ್ಠ ಮಟ್ಟವನ್ನು ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಜೊಮ್ಯಾಟೊ ಷೇರು ದರ ಸುಮಾರು ಶೇಕಡ 5ರಷ್ಟು ಜಿಗಿತ ಕಂಡು 102.85 ರೂಪಾಯಿಗೆ ತಲುಪಿದೆ. ಇನ್ನು ಈ ಸಮಯಕ್ಕೆ ಷೇರು ಶೇಕಡ 4.98ರಷ್ಟು ಏರಿಕೆಯಾಗಿ, 100.15 ರೂಪಾಯಿ ಆಗಿದೆ.
ಜೊಮ್ಯಾಟೊ ಒಟ್ಟು ನಿವ್ವಳ ಲಾಭವು ಜೂನ್ 2023ರಲ್ಲಿ ಕೊನೆಯಾದ ತ್ರೈಮಾಸಿಕದಲ್ಲಿ 2 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಜೊಮ್ಯಾಟೊ ಸುಮಾರು 186 ಕೋಟಿ ರೂಪಾಯಿ ನಷ್ಟವನ್ನು ಕಂಡಿತ್ತು. ಇನ್ನು ಮಾರ್ಚ್ ತ್ರೈಮಾಸಿಕದಲ್ಲಿ ಸಂಸ್ಥೆಯಲ್ಲಿ 189 ಕೋಟಿ ರೂಪಾಯಿ ನಷ್ಟವನ್ನು ಜೊಮ್ಯಾಟೊ ಸಂಸ್ಥೆಯು ಕಂಡಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಗಳಿಸಿದ ಆದಾಯವು 2,416 ಕೋಟಿ ರೂಪಾಯಿಗಳಷ್ಟಾಗಿದೆ. ಆದರೆ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆದಾಯವು 1,414 ಕೋಟಿ ರೂಪಾಯಿಗಳಷ್ಟಾಗಿತ್ತು. ಅಂದರೆ ಸುಮಾರು ಶೇಕಡ 77ರಷ್ಟು ಏರಿಕೆ ಕಂಡು ಬಂದಿದೆ. ಈ ನಡುವೆ ಒಟ್ಟು ವೆಚ್ಚವು ಹೆಚ್ಚಳವಾಗಿದೆ. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 1,768 ಕೋಟಿ ರೂಪಾಯಿಯಷ್ಟಿದ್ದ ವೆಚ್ಚವು ಈ ವರ್ಷದಲ್ಲಿ 2,612 ಕೋಟಿ ರೂಪಾಯಿ ಆಗಿದೆ.
ಜೊಮ್ಯಾಟೊ ಷೇರು ಹೇಗಿದೆ?
ಈ ಸಮಯಕ್ಕೆ ನಾವು ನೋಡಿದಾಗ ಜೊಮ್ಯಾಟೊ ಷೇರು ಬಿಎಸ್‌ಇಯಲ್ಲಿ ಶೇಕಡ 4.98ರಷ್ಟು ಏರಿಕೆಯಾಗಿ, 100.15 ರೂಪಾಯಿ ಆಗಿದೆ. ಒಟ್ಟಾರೆಯಾಗಿ ನೋಡಿದಾಗ ಕಳೆದ ವಹಿವಾಟಿನ ಅಂತ್ಯದ ಬೆಲೆಗಿಂತ ಶೇಕಡ 5ರಷ್ಟು ಹೆಚ್ಚಳವಾಗಿದೆ. ಒಂದು ವಾರದ ಅವಧಿಯಲ್ಲಿ ಜೊಮ್ಯಾಟೊ ಷೇರು ಸುಮಾರು ಶೇಕಡ 20.04ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ ಶೇಕಡ 85.17ರಷ್ಟು ರಿಟರ್ನ್ ಲಭ್ಯವಾಗಿದೆ.
ಜೊಮಾಟೊದ ಆಹಾರ ವಿತರಣಾ ವ್ಯವಹಾರದ ಹೊಂದಾಣಿಕೆಯ ಆದಾಯವು ಮೊದಲ ತ್ರೈಮಾಸಿಕದಲ್ಲಿ 1,742 ಕೋಟಿ ರೂಪಾಯಿ ಆಗಿದ್ದು, ಹಿಂದಿನ ತ್ರೈಮಾಸಿಕದಿಂದ 1,530 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಹಾಗೆಯೇ ಹಿಂದಿನ ವರ್ಷದ ಅವಧಿಗೆ ಹೋಲಿಕೆ ಮಾಡಿದಾಗ 1,470 ಕೋಟಿ ರೂಪಾಯಿ ಆಗಿದೆ. ಒಟ್ಟು ಆರ್ಡರ್ ಮೌಲ್ಯವು (ಜಿಒವಿ) ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡ 10ರಷ್ಟು ಏರಿಕೆಯಾಗಿದ್ದು, 6,569 ಕೋಟಿ ರೂಪಾಯಿಯಿಂದ 7,318 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ವಾರ್ಷಿಕ ಆಧಾರದಲ್ಲಿ ಜಿಒವಿ 6,423 ಕೋಟಿ ರೂಪಾಯಿಗೆ ಏರಿಕೆಯಾಗಿದೆ.


Click it and Unblock the Notifications