ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪದಗಳನ್ನು ಬಳಸಿ ನಿಂದಿಸುವುದು ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕುವುದು ಸೈಬರ್ ಪೊಲೀಸರಿಗೂ ಸಾಧ್ಯವಾಗುತ್ತಿಲ್ಲ. ಫೇಕ್ ಅಕೌಂಟ್‌ಗಳನ್ನು ಕ್ರಿಯೇಟ್ ಮಾಡಿ ಕಿಡಿಗೇಡಿಗಳು ಕೆಟ್ಟ ಕೆಟ್ಟ ಪದಗಳನ್ನು ಬಳಸಿ ತೇಜೋವಧೆ ಮಾಡುತ್ತಿದ್ದಾರೆ. ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ನಡುವೆ ಕೆಲವರು ಕೀಳುಮಟ್ಟಕ್ಕಿಳಿದು ಟ್ರೋಲ್ ಮಾಡುತ್ತಿದ್ದಾರೆ.
ಇದೀಗ ಕಿಡಿಗೇಡಿಗಳು ನಟ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಬಗ್ಗೆ ಬಹಳ ಕೆಟ್ಟದಾಗಿ ಪೋಸ್ಟ್ ಮಾಡುತ್ತಿದ್ದಾರೆ. ಆ ಪದಗಳನ್ನು ಕೂಡ ಇಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಅಷ್ಟು ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ನಿಜಕ್ಕೂ ಈ ಫ್ಯಾನ್ಸ್ ಬೇರೆಯದ್ದೇ ಸ್ವರೂಪ ಪಡೆಯುತ್ತಿದೆ. ಈ ಹಿಂದೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟಿ ರಮ್ಯಾ ಅಷ್ಟೆಲ್ಲ ಯಾಕೆ, ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಕೂಡ ಇದೇ ರೀತಿ ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು.

ಎದುರು ನಿಂತು ಮಾತನಾಡಲು ಧೈರ್ಯ ಇಲ್ಲದ ಹೇಡಿಗಳು ಹೀಗೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಯಾವುದೋ ಮೂಲೆಯಲ್ಲಿ ಕೂತು ಅವಹೇಳನಕಾರಿ ಪದಗಳನ್ನು ಬಳಸಿ ಮಾನಸಿಕವಾಗಿ ಕಿರುಕುಳ ಕೊಡುತ್ತಾರೆ. 'ಮಾರ್ಕ್' ಸಿನಿಮಾ ಪೈರಸಿ ಬಗ್ಗೆ ಇಲ್ಲಿ ಚರ್ಚೆ ನಡೀತಿದೆ. ಕೆಲವರು ಸಿನಿಮಾ ಪೈರಸಿ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಯಾವುದೇ ಯುದ್ಧಕ್ಕೆ ಸಿದ್ಧ ಎಂದು ಸುದೀಪ್ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಅದರ ಬೆನ್ನಲ್ಲೇ ರಾಮನಗರದಲ್ಲಿ ವಿಜಯಲಕ್ಷ್ಮಿ ದರ್ಶನ್ ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದರು. ಆದರೆ ಯಾರಿಗೆ, ಯಾವ ವಿಚಾರಕ್ಕೆ ಎನ್ನುವುದನ್ನು ಸ್ಪಷ್ಟಪಡಿಸಲಿಲ್ಲ. ಇದ್ದೆಲ್ಲದರ ನಡುವೆ ನಟ ಸುದೀಪ್ ಅವರ ಪತ್ನಿ, ಮಗಳ ಹೆಸರು ಎಳೆದು ತರುವುದು ಯಾಕೆ?
ಯಾವುದು ಕೂಡ ಅತಿಯಾಗಬಾರದು. ಕೈಲಾಗದವರು ಮೈ ಪರಚಿಕೊಂಡರು ಎನ್ನುವಂತೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿ ಕೆಲವರು ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಇದೇ ರೀತಿ ನಟಿ ರಮ್ಯಾ ಅವರಿಗೆ ಕಿಡಿಗೇಡಿಗಳು ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದರು. ಕೇಸ್ ದಾಖಲಾಗಿ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಬಳಿಕ ಅವರೆಲ್ಲಾ ಕ್ಷಮೆ ಕೇಳಿ ಅಳಲು ತೋಡಿಕೊಂಡಿದ್ದರು. ಫ್ಯಾನ್ಸ್ ವಾರ್‌ಗೆ ಕೂಡ ಎಲ್ಲೆ ಇರಬೇಕು. ಯಾವುದು ಕೂಡ ಅತಿಯಾಗಬಾರದು.

ಒಂದ್ಕಡೆ ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಸರೆರಚಾಟ ನಡೀತಿದೆ. ಆದರೆ ಧನ್ವೀರ್ ಗೌಡ ಇದಕ್ಕೆ ಮತ್ತಷ್ಟು ಇಂಬು ಕೊಡುವಂತಹ ಪೋಸ್ಟ್ ಮಾಡಿ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದು ಯಾರ ಅಭಿಮಾನಿ ಆಗಿದ್ದರೂ ಸರಿ ವೈಯಕ್ತಿಕ ನಿಂದನೆ, ಹೆಣ್ಣು ಮಕ್ಕಳ ಬಗ್ಗೆ ಕೊಳಕ ಭಾಷೆ ಬಳಸಿ ಟ್ರೋಲ್ ಮಾಡುವುದು ಸಮಂಜಸವಲ್ಲ. ಇದರಿಂದ ಕೆಸರೆರಚಾಟ ಹೆಚ್ಚಾಗುತ್ತದೆ ಹೊರತು ಕಮ್ಮಿ ಆಗುವುದಿಲ್ಲ.
ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ಕಿವಿಮಾತು ಹೇಳಬೇಕು. ಅವರು ಹೇಳಿದರೆ ಅಭಿಮಾನಿಗಳು ಕೇಳುತ್ತಾರೆ ಎನ್ನುವ ವಾದ ಕೂಡ ಇದೆ. ಆದರೆ ಇಲ್ಲಿ ಮಾತ್ರ ದರ್ಶನ್, ಸುದೀಪ್ ವಿಚಾರದಲ್ಲಿ ಅದು ಸಾಧ್ಯವಾಗುತ್ತಿಲ್ಲ. ದರ್ಶನ್ ಈವರೆಗೆ ತಮ್ಮ ಅಭಿಮಾನಿಗಳಿಗೆ ತಿಳಿ ಹೇಳಲಿಲ್ಲ. ವಿಜಯಲಕ್ಷ್ಮಿ ದರ್ಶನ್ ಕೂಡ ಹೆಣ್ಣು ಮಕ್ಕಳಿಗೆ ಗೌರವ ಕೊಡುವುದು ನಮ್ಮ ಸೆಲೆಬ್ರೆಟಿಗಳಿಗೆ ಗೊತ್ತು ಎನ್ನುತ್ತಾರೆ. ಸುದೀಪ್ ಮಾತನಾಡುವ ಸಮಯದಲ್ಲಿ ಮಾತನಾಡಿ ಎಂದು ಅಭಿಮಾನಿಗಳಿಗೆ ಎಂದಿದ್ದಾರೆ. ಹಾಗಿದ್ದರೆ ಹೀಗೆ ಕೆಟ್ಟದಾಗಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನ ಮಾಡುವವರು ಯಾರು? ಅಭಿಮಾನಿಗಳ ಹೆಸರಿನಲ್ಲಿ ಕಿಡಿಗೇಡಿಗಳ ಈ ಕೃತ್ಯ ಮತ್ತಷ್ಟು ಬೆಂಕಿ ಹಚ್ಚುತ್ತಿದೆ.
Credit: Filmibeat


Click it and Unblock the Notifications