
ಎಷ್ಟು ನಿಗಾ ವಹಿಸಿದರೂ ದುಡಿದ ದುಡ್ಡು ಉಳಿಯುವುದಿಲ್ಲವೆಂದು ಹೆಚ್ಚಿನ ಮಹಿಳೆಯರು ಹೇಳುತ್ತಾರೆ. ಹಲವು ಅಧ್ಯಯನಗಳ ಪ್ರಕಾರ ಹೆಚ್ಚಿನ ಹೆಣ್ಮಕ್ಕಲು ಷೇರುಗೀರು ಅಂದ್ರೆ ದೂರ ಸರಿಯುತ್ತಾರೆ. ಉಳಿತಾಯ ಖಾತೆಯಂತಹ ರಿಸ್ಕ್ ಇಲ್ಲದ ಕ್ಷೇತ್ರದಲ್ಲಿ ಮಾತ್ರ ಹಣ ಇಡುತ್ತಾರೆ.
ಉದ್ಯೋಗದ ಮೇಲೆ ಅನಿಶ್ಚಿತತೆಯ ತೂಗುಗತ್ತಿ ಯಾವಾಗಲೂ ಇರುತ್ತದೆ. ಆರೋಗ್ಯ ಯಾವಾಗ ಕೈಕೊಡುತ್ತದೆ ಹೇಳಲಾಗದು. ಇಂತಹ ಸಮಯದಲ್ಲಿ ಕೈನಲ್ಲಿ ದುಡ್ಡಿಲ್ಲದಿದ್ರೆ ಬದುಕು ಅತಂತ್ರವಾಗುತ್ತದೆ. ಇದರಿಂದ ಪಾರಾಗುವುದು ಹೇಗೆ? ವಿಶೇಷವಾಗಿ ದುಡಿಯೋ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.
ಕಡಿಮೆ ಮೊತ್ತದಿಂದಲೇ ಉಳಿತಾಯ ಪ್ರಾರಂಭಿಸಿ: ಈಗ ದುಡ್ಡು ಹೆಚ್ಚಿಲ್ಲ. ಹಣ ಜಾಸ್ತಿಯಿದ್ದಾಗ ಹೂಡಿಕೆ, ಉಳಿತಾಯ ಮಾಡಬಹುದು ಎಂದುಕೊಳ್ಳಬೇಡಿ. ಸಣ್ಣ ಮೊತ್ತದಿಂದಲೇ ಹಣ ಉಳಿತಾಯ ಮಾಡಲು ಶುರು ಮಾಡಿ. ಷೇರು, ಇಕ್ವಿಟಿ ಮಾರುಕಟ್ಟೆಗೆ ಒಂದು ಪಾಲು ಹಣ ತೊಡಗಿಸಲು ಹಿಂಜರಿಯದಿರಿ. ತುರ್ತು ಪರಿಸ್ಥಿತಿಗೆ ಬೇಕಾದ ಹಣವನ್ನು ಕೂಡಿಟ್ಟುಕೊಳ್ಳಿ. ಚಿನ್ನ ಬೆಳ್ಳಿ ಖರೀದಿಸಿಟ್ರೆ ನಷ್ಟವಿಲ್ಲ.
ವೆಚ್ಚ ಕಡಿಮೆ ಮಾಡಿ: ಹಣ ಉಳಿತಾಯ ಮಾಡುವ ಮೊದಲ ಹೆಜ್ಜೆಯೆಂದರೆ ವೆಚ್ಚ ಕಡಿಮೆ ಮಾಡುವುದು. ವ್ಯರ್ಥ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮಕ್ಕಳಿಗೂ ಹಣದ ಉಳಿತಾಯದ ಮಹತ್ವ ಹೇಳಿಕೊಡಿ. ಗಂಡ ದುಂದುವೆಚ್ಚಗಾರನಾಗಿದ್ರೆ ಮೂಗುದಾರ ಹಿಡಿಯಲು ಪ್ರಯತ್ನಿಸಿ.
ಸಾಲವೆಂಬ ಹೊನ್ನ ಶೂಲ: ಸಾಲಗೀಲ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಸಾಲದ ಸುಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಮಾಡಿದ ಸಾಲ ನಿಮಗೆ ಲಾಭ ತಂದುಕೊಡುತ್ತದೆ ಎಂದರೆ ಸಾಲ ಮಾಡಿ. ಆದಷ್ಟು ಬೇಗ ಸಾಲ ತೀರಿಸಲು ಯತ್ನಿಸಿ.
ವಿಮೆ ಇದೆಯಾ?: ಕಷ್ಟಕಾಲದಲ್ಲಿ ವಿಮೆ ನೆರವಿಗೆ ಬರುತ್ತದೆ. ನೀವಿಲ್ಲದೇ ಇದ್ದರೂ ನಿಮ್ಮನ್ನು ಅವಲಂಬಿಸಿದವರ ನೆರವಿಗೆ ವಿಮೆ ಬರುತ್ತದೆ. ವಿಮೆ ಇರದಿದ್ರೆ ಈಗ್ಲೇ ಯಾವುದಾದರೂ ಒಳ್ಳೆಯ ಪ್ಲಾನ್ ಖರೀದಿಸಿ. ಆರೋಗ್ಯ ವಿಮೆ ಕೂಡ ಮಾಡಿಡಿ.
ಜೊತೆಜೊತೆಯಲ್ಲಿ: ಗಂಡನ ಜೊತೆಗೂ ಜಂಟಿ ಹೂಡಿಕೆ ಮಾಡಬಹುದು. ಇಬ್ಬರು ವೆಚ್ಚ ಹಂಚಿಕೊಳ್ಳಬಹುದು. ಹಣಕಾಸು ವಿಷಯ ಗಂಡ ಹೆಂಡಿರ ನಡುವೆ ಮುಕ್ತವಾಗಿರಲಿ. ಹೂಡಿಕೆ, ವೆಚ್ಚ ಜೊತೆಯಾಗಿ ಚರ್ಚಿಸಿ. ದುಂದು ವೆಚ್ಚ ತಗ್ಗಿಸಿ. ಹಣ ಎಲ್ಲಿಂದ ಬರುತ್ತದೆ ಮತ್ತು ಎಲ್ಲಿಗೆ ಹೊಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ.
ಹಣಕಾಸು ಪಂಡಿತರಾಗಿ: ಪ್ರತಿದಿನ ಹೊಸ ಹೊಸ ಹಣಕಾಸು ವಿಷಯಗಳನ್ನು ಕಲಿಯುತ್ತಿರಿ. ವೈಯಕ್ತಿಕ ಹಣಕಾಸು ಯೋಜನೆ ಮತ್ತು ನಿರ್ವಹಣೆ ಕಠಿಣವಲ್ಲ. ನಿಮ್ಮ ಜೀವನದ ಗುರಿ ಮತ್ತು ಅಗತ್ಯಗಳ ಕುರಿತು ಅರಿತುಕೊಳ್ಳಬೇಕಾದ್ದು ಅತ್ಯಂತ ಅಗತ್ಯ. ಹಣಕಾಸು ಸಲಹೆಗಾರರೊಂದಿಗೆ ಚರ್ಚಿಸುವುದಕ್ಕಿಂತ ನೀವೇ ಹಣಕಾಸು ನಿರ್ವಹಣೆ ಮಾಹಿತಿಗಳನ್ನು ಕಲಿತುಕೊಳ್ಳುವುದು ಉತ್ತಮ.


Click it and Unblock the Notifications