ಭಾರತೀಯ ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ತಾನು ಸಮರ್ಥವಾಗಿ ತೊಡಗಿಸಿಕೊಂಡಿದ್ದಾಳೆ. ವೃತ್ತಿ ಹಾಗೂ ಸಂಸಾರವನ್ನು ಸುಲಲಿತವಾಗಿ ನಿಭಾಯಿಸುವ ಕಲೆ ಕಲಿತಿದ್ದಾಳೆ.
ವೃತ್ತಿಪರಳಾಗಿ ಬೆಳೆಯುವ ಮೊದಲೇ ಆಕೆಗೆ ಹಣ ಕೂಡಿಡುವುದು ಹೇಗೆ ಎಂದು ತಿಳಿದಿರುತ್ತದೆ. ಆದರೆ, ವೃತ್ತಿಯಲ್ಲಿ ಬೆಳೆಯುತ್ತಿದ್ದಂತೆ ಕೈಗೆ ಸೇರುವ ಸಂಬಳ, ಬರುವ ಆದಾಯವೂ ಹೆಚ್ಚಾಗುತ್ತದೆ ಹೀಗಾಗಿ ಇದಕ್ಕೆ ಪೂರಕವಾಗಿ ಉಳಿತಾಯ ಕೂಡಾ ಮಾಡಬೇಕಾದ್ದು ಅವಶ್ಯಕವಾಗಿದೆ.
ನಿರಂತರ ದುಡಿಮೆಯ ನಡುವೆ ಬಂಡವಾಳ ಹೂಡಿಕೆ, ಉಳಿತಾಯ,ವಿಮೆ ಬಗ್ಗೆ ಯೋಚಿಸುವುದು ತುಸು ಕಷ್ಟವೇ ಸರಿ. ಈ ಸಂದರ್ಭದಲ್ಲಿ ದುಡಿಯೋ ಮಹಿಳೆಯರಿಗಾಗಿ ದುಡ್ಡು ಉಳಿಸುವ ಒಂದಿಷ್ಟು ಸುಲಭ ವಿಧಾನಗಳನ್ನು ನೀಡುತ್ತಿದ್ದೇವೆ. ಹೂಡಿಕೆ ವಿಧಾನ ಸರಳವಾದರೂ ಅವಶ್ಯಕತೆಗೆ ತಕ್ಕಂತೆ ಹೂಡಿಕೆ ಮಾಡುವುದರಿಂದ ಕಷ್ಟಕಾಲದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಬಹುದು.
ಉದ್ಯೋಗದ ಮೇಲೆ ಅನಿಶ್ಚಿತತೆಯ ತೂಗುಗತ್ತಿ ಯಾವಾಗಲೂ ಇರುತ್ತದೆ. ಆರೋಗ್ಯ ಯಾವಾಗ ಕೈಕೊಡುತ್ತದೆ ಹೇಳಲಾಗದು. ಇಂತಹ ಸಮಯದಲ್ಲಿ ಕೈನಲ್ಲಿ ದುಡ್ಡಿಲ್ಲದಿದ್ರೆ ಬದುಕು ಅತಂತ್ರವಾಗುತ್ತದೆ. ಇದರಿಂದ ಪಾರಾಗುವುದು ಹೇಗೆ? ವಿಶೇಷವಾಗಿ ದುಡಿಯೋ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.
ಬಂಡವಾಳ ಹೂಡಿಕೆಯ ಕೆಲವು ಸರಳ ವಿಧಾನಗಳು ಇಲ್ಲಿದೆ:
ಚಿನ್ನದ ಮೇಲೆ ಹೂಡಿಕೆ
ಚಿನ್ನದ ಮೇಲೆ ಹಣ ಹೂಡಿಕೆ ಸಾಂಪ್ರದಾಯಿಕ ವಿಧಾನವಾಗಿದ್ದು, ನಷ್ಟವಂತೂ ಆಗುವುದಿಲ್ಲ. ಆಭರಣಗಳ ಖರೀದಿ, ಚಿನ್ನದ ನಾಣ್ಯ ಹಾಗೂ ಬಾರ್ ಮೇಲೆ ಹೂಡಿಕೆ, ಷೇರುಗಳನ್ನು ಕೊಂಡಂತೆ ಇ ಗೋಲ್ಡ್, ಆನ್ ಲೈನ್ ಬಂಡವಾಳ ಹೂಡಿಕೆ, ETF ಎಂಬ ಮ್ಯೂಚುವಲ್ ಫಂಡ್ ಮಾದರಿ ಹೂಡಿಕೆ. ಅನುಭವ ಬಂದ ಮೇಲೆ ಗೋಲ್ಡ್ ಫ್ಯೂಚರ್ಸ್ ಟ್ರೇಡಿಂಗ್ ನಲ್ಲಿ ಕೈಯಾಡಿಸಬಹುದು.
ಜೀವ ವಿಮೆ
ಕಷ್ಟಕಾಲದಲ್ಲಿ ವಿಮೆ ನೆರವಿಗೆ ಬರುತ್ತದೆ. ಆರೋಗ್ಯ ವಿಮೆ ಇದ್ದರೆ, ಹಣದುಬ್ಬರದ ದಿನಗಳಲ್ಲಿ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಸಾಧ್ಯ. ಕಂಪನಿ ನೀಡುವ ವಿಮೆ ಜೊತೆಗೆ ಖಾಸಗಿ ವಿಮೆಯತ್ತ ಗಮನ ಹರಿಸಬಹುದು. ಆದರೆ, ಪ್ರೀಮಿಯಂ ಹಣ ಹಾಗೂ ಕ್ಲೇಮಿಂಗ್ ಹಣದ ಬಗ್ಗೆ ಎಚ್ಚರವಿರಲಿ.
ಷೇರು ಮಾರುಕಟ್ಟೆ
ಷೇರುಪೇಟೆಯಿಂದ ಹಿಂದೆ ಸರಿಯದೆ, ಒಂದಿಷ್ಟು ಅರಿವು ಮೂಡಿಸಿಕೊಂಡರೆ, ಹೂಡಿಕೆ ಗಳಿಕೆ ಸುಲಭವಾಗುತ್ತದೆ. ಆರಂಭದಲ್ಲಿ ಹೂಡಿಕೆ ತಜ್ಞರ ಸಲಹೆ ಪಡೆಯಿರಿ. ಹೆಚ್ಚಿನ ಆದಾಯ ನಿರೀಕ್ಷೆ ಇಲ್ಲದಿದ್ದರೂ ಹೂಡಿಕೆ ಸುರಕ್ಷಿತೆ ಬಗ್ಗೆ ಆದಷ್ಟು ಗಮನ ಹರಿಸಿ, ದೀರ್ಘಕಾಲಿಕ ಹೂಡಿಕೆಯಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು.
ಬ್ಯಾಂಕಿನಲ್ಲಿ ಹೂಡಿಕೆ
ಇದು ಅತ್ಯಂತ ಜನಪ್ರಿಯ ಮಾರ್ಗವಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಗಳು ಮಹಿಳೆಯರಿಗಾಗಿ ವಿಶೇಷ ಸೌಲಭ್ಯಗಳನ್ನು ಆಗಾಗ್ಗೆ ಪ್ರಕಟಿಸುತ್ತಿರುತ್ತದೆ. ನಿಶ್ಚಿತ ಠೇವಣಿಗೂ ಮುನ್ನ ನಿಮ್ಮ ಕುಟುಂಬ ವರ್ಗದೊಡನೆ ಚರ್ಚಿಸಿ ಹೂಡಿಕೆ ಮಾಡಿ. 5 ವರ್ಷ ಅವಧಿಯ ತೆರಿಗೆ ಉಳಿಸುವ ಠೇವಣಿಯೂ ಲಭ್ಯವಿದೆ. ಐಟಿ ಕಾಯ್ದೆ 80ಸಿ ಪ್ರಕಾರ ತೆರಿಗೆ ವಿನಾಯತಿ ಕೂಡಾ ಸಿಗಲಿದೆ.
ಪಿಪಿಎಫ್
ಪಬ್ಲಿಕ್ ಪ್ರಾವಿಡೆಂಟ್ ಫಂಡ್(ppf)ನಲ್ಲಿ ಮಾಡಿದ ಹೂಡಿಕೆ ನಿವೃತ್ತಿ ನಂತರದ ದಿನಗಳಲ್ಲಿ ನಿಮ್ಮ ಖರ್ಚುವೆಚ್ಚ ತೂಗಿಸಲು ಸಹಕಾರಿಯಾಗಲಿದೆ. ರಿಟರ್ನ್ಸ್ ಕೂಡಾ ತೆರಿಗೆ ರಹಿತವಾಗಿದ್ದು, ಸುರಕ್ಷಿತ ಹಾಗೂ ಸರಳ ವಿಧಾನದ ಹೂಡಿಕೆಯಾಗಿದೆ.
ಮ್ಯೂಚುವಲ್ ಫಂಡ್ SIP
ಇದು ಆರ್ ಡಿ ಕಟ್ಟಿದಷ್ಟೇ ಸುಲಭ. ಬ್ಯಾಂಕ್ ಎಫ್ ಡಿಗಿಂತ ಅಧಿಕ ಮೊತ್ತದ ರಿಟರ್ನ್ಸ್ ಬೇಕು ಎಂದಾದರೆ ಈಕ್ವಿಟಿ ಮಾರುಕಟ್ಟೆಗೆ ಇಳಿಯಿರಿ. ನಿಮಗೆ ಸಂಬಳ ನೀಡುವ ಬ್ಯಾಂಕ್ ನಲ್ಲೇ ಸಣ್ಣ ಪ್ರಮಾಣದ ಹೂಡಿಕೆ ಬಗ್ಗೆ ಚರ್ಚಿಸಿ. ಮಾರುಕಟ್ಟೆ ಏರಿಳಿತದ ಮೇಲೆ ಆದಾಯ ಆಧಾರವಾಗಿರುವುದರಿಂದ ಕೊಂಚ ರಿಸ್ಕ್ ಇದ್ದೇ ಇರುತ್ತದೆ.
ಯಾವುದೇ ರೀತಿಯ ಹೂಡಿಕೆಗೂ ಮುನ್ನ ಬಂಡವಾಳ ಹೂಡಿಕೆ ವಿಧಾನ ಹಾಗೂ ಹೂಡಿಕೆ ಕಾಲಾವಧಿ(ಅಲ್ಪಾವಧಿ, ದೀರ್ಘಾವಧಿ) ಬಗ್ಗೆ ಪೂರ್ವ ಮಾಹಿತಿ ಇಲ್ಲದೆ ಮುಂದುವರೆಯಬೇಡಿ. ಸಣ್ಣ ಮೊತ್ತದಿಂದಲೇ ಹಣ ಉಳಿತಾಯ ಮಾಡಲು ಶುರು ಮಾಡಿ. ಹನಿ ಹನಿಗೂಡಿದರೆ ಹಳ್ಳ ಎಂಬ ಗಾದೆ ಮಾತು ಸುಳ್ಳಲ್ಲ ತಿಳಿಯಿರಿ.


Click it and Unblock the Notifications