ಬೆಂಗಳೂರು: ಮೊನ್ನೆಯಷ್ಟೇ ಚಿನ್ನದ ಮೇಲಿನ ಸಾಲ ನಿಜಕ್ಕೂ ಚಿನ್ನದಂತಹದ್ದು ಯಾಕೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಈಗ ಚಿನ್ನದ ಮೇಲೆ ಸಾಲ ಪಡೆಯುವುದು ಹೇಗೆ? ಚಿನ್ನದ ಸಾಲಕ್ಕಾಗಿ ಪಾಲಿಸಬೇಕಾದ ಷರತ್ತುಗಳೇನು? ಅರ್ಹತೆ ಏನು ಎಂಬುದರ ಮೇಲೆ ಒಂದಷ್ಟು ಹೊಂಬೆಳಕು ಚೆಲ್ಲಲಾಗಿದೆ.
ಮೊತ್ತ ಮೊದಲ ಪ್ರೋತ್ಸಾಹದಾಯಕ ಅಂಶವೆಂದರೆ ಅತ್ಯಂತ ಕಡಿಮೆ ದಾಖಲೆಗಳೊಂದಿಗೆ ಅತ್ಯಂತ ತ್ವರಿತವಾಗಿ ಪಡೆಯಬಹುದಾದ ಸಾಲವೆಂದರೆ ಚಿನ್ನದ ಸಾಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಚಿನ್ನದ ಅಡಮಾನವೇ ಮಾನದಂಡ
Muthoot Finance ಮತ್ತು Manappuram Finance ಸೇರಿದಂತೆ ಅನೇಕ ಬ್ಯಾಂಕುಗಳಿಂದಲೂ ಕ್ಷಣಾರ್ಧದಲ್ಲಿ ಗೋಲ್ಡ್ ಲೋನ್ ಪಡೆಯಬಹುದು. ಚಿನ್ನವನ್ನು ಅಡಮಾನವಿಟ್ಟುಕೊಂಡೇ ಈ ಸಾಲಗಳನ್ನು ಪಡೆಯಬೇಕಾಗುತ್ತದೆ. ವೈಯಕ್ತಿಕ ಸಾಲಕ್ಕೆ ವ್ಯಕ್ತಿಯ ಸಾಲ ಸಾಮರ್ಥ್ಯ ಬಹು ಮುಖ್ಯ ಅಂಶವಾಗಿತ್ತದೆ. ಆದರೆ ಗೋಲ್ಡ್ ಲೋನ್ ವಿಷಯದಲ್ಲಿ ಚಿನ್ನದ ಅಡಮಾನವೇ ಮಾನದಂಡವಾಗುತ್ತದೆ.
ಸಾಲದ ಪ್ರಮಾಣ ತೂಗುವುದು ಹೇಗೆ?:
ಯಾರ ಬಳಿ ಚಿನ್ನವಿದೆಯೋ ಅವರೆಲ್ಲ ಈ ಸಾಲ ಪಡೆಯಬಹುದು. ಆದರೆ ಅಗತ್ಯವಿದ್ದಲ್ಲಿ ಮಾತ್ರ ಸಾಲ ಪಡೆಯಬಹುದು. ಚಿನ್ನದ ಆಭರಣದ ಮೇಲಿನ ಸಾಲವೆಂದರೆ ಬರೀ ಚಿನ್ನವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿರುವ ಹರಳು, ವೇಸ್ಟೇಜ್ ಅನ್ನು ತೆಗೆದುಹಾಕಿ ಬರೀ ಚಿನ್ನವನ್ನು ಅಳೆದೂ ಸುರಿದೂ ಸಾಲದ ಪ್ರಮಾಣವನ್ನು ತೂಗುಹಾಕಲಾಗುತ್ತದೆ.
ಯಾವೆಲ್ಲ ದಾಖಲೆ ಬೇಕಾಗುತ್ತದೆ?:
ವಾಸ ಸ್ಥಳದ ದಾಖಲಾತಿ ಜತೆಗೆ ವೈಯಕ್ತಿಕ ಗುರುತಿನ ದಾಖಲಾತಿಯಷ್ಟೇ ಸಾಕಾದೀತು.
ಬಡ್ಡಿ, ಸಾಲ ಅವಧಿ, ಸಾಲದ ಮೊತ್ತ ಎಷ್ಟು?:
ಸಾಮಾನ್ಯವಾಗಿ ಚಿನ್ನದ ಸಾಲ ತುರ್ತು ಸಾಲವಾಗಿರುವುದರಿಂದ 1 ವರ್ಷದ ಮಟ್ಟಿಗೆ ಸಾಲ ಸಿಗುತ್ತದೆ. ಇನ್ನು ಬಡ್ಡಿ ದರ ಶೇ. 12 ರಿಂದ ಏರುತ್ತಾ ಹೋಗುತ್ತದೆ. ಉದಾಹರಣೆಗೆ ನಿಮ್ಮ ಬಳಿ 1 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದೆಯೆಂದರೆ 60,000 ರೂಪಾಯಿ ನಗದು ಮೊತ್ತ ಸಾಲವಾಗಿ ಕ್ಷಣಾರ್ಧದಲ್ಲಿ ನಿಮ್ಮ ಕೈಸೇರಲಿದೆ. ಪ್ರತಿ ತಿಂಗಳೂ ಸೇವಾ ಶುಲ್ಕ ಮಾತ್ರವೇ ಕಟ್ಟಬಹುದು. ಸಾಲದ ಅವಧಿ ಮುಕ್ತಾಯಕ್ಕೆ ಮೂಲ ಸಾಲದ ಮೊತ್ತವನ್ನು ಇಡಗಂಟಿನಲ್ಲಿ ಅಷ್ಟೂ ಪಾವತಿಸಿ, ನಿಮ್ಮ ಚಿನ್ನವನ್ನು ಬಿಡಿಸಿಕೊಳ್ಳಬಹುದು.
ಚಿನ್ನದ ಭದ್ರತೆ ವಿಷಯ ಹೇಗಪ್ಪಾ?
ನೂ ಯೋಚನೆ ಮಾಡಬೇಕಾದ್ದಿಲ್ಲ. ನಿಮ್ಮ ಚಿನ್ನಕ್ಕಿಂತ ಸಾಲ ನೀಡುತ್ತಿರುವ ಸಂಸ್ಥೆ ಚಿನ್ನದಷ್ಟೇ ಗಟ್ಟಯಾಗಿದ್ದರೆ ಸಾಕಾದೀತು. ಏಕೆಂದರೆ ಪಕ್ಕದ ಕೇರಳದಲ್ಲಿ ವಾರ್ಷಿಕ 4,000 ಕೋಟಿ ರೂ. ಚಿನ್ನದ ಸಾಲ ವ್ಯವಹಾರ ಖಾಸಗಿ/ವೈಯಕ್ತಿಕ ನೆಲೆಯಲ್ಲಿ ನಡೆಯುತ್ತದೆ. ಇದರಲ್ಲಿ ಎಷ್ಟು ಕೈಯೆತ್ತುತ್ತವೋ ಆ ದೇವರೇ ಬಲ್ಲ. ಹಾಗಾಗಿ ಸಾಲ ನೀಡುತ್ತಿರುವ ಸಂಸ್ಥೆಯ ಬಗ್ಗೆ ಖಾತ್ರಿಯಿದ್ದರೆ ಸಾಕಾದೀತು. ಮತ್ತೆ ಯಾವುದರ ಬಗ್ಗೆಯೂ ವರಿ ಮಾಡಿಕೊಳ್ಳಬೇಕಾಗಿಲ್ಲ.


Click it and Unblock the Notifications