ಕಳೆದ 12 ವರ್ಷಗಳಲ್ಲಿ ಕಾಣದ ಬೆಲೆ ಕಂಡಿರುವುದರಿಂದ ಗ್ರಾಹಕ ಖುಷಿಯಾಗಿದ್ದಾನೆ. 28 ಸಾವಿರಕ್ಕೆ ಹಳದಿ ಲೋಹ ಕೈಗುಟುಕುತ್ತಿದೆ. ಆದರೆ, ಭಾರತೀಯ ಸ್ಥಳೀಯ ಚಿನಿವಾರಪೇಟೆ ದರಗಳು ಎಂದಿಗೂ ಕೂಡಾ ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಮರೆಯುವಂತಿಲ್ಲ.
ಚಿನ್ನದ ದರ ಇಳಿಕೆಗೆ ಹೂಡಿಕೆದಾರರೇ ಕಾರಣವಾಗಿದ್ದಾರೆ. ಅದರಲ್ಲೂ ಯುಎಸ್ ನಲ್ಲಿ ಈಕ್ವಿಟಿ ಮೇಲೆ ಹೆಚ್ಚಿನ ನಿಗಾ ಇಟ್ಟಿರುವ ಹೂಡಿಕೆದಾರರು ಚಿನ್ನದ ದರ ಕುಸಿತಕ್ಕೆ ಕಾರಣರಾಗಿದ್ದಾರೆ. ಚಿನ್ನದ ETFನತ್ತ ಗಮನ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ದರ ಇಳಿಕೆಗೆ ಕಾರಣವಾಗಿದೆ. ಚಿನ್ನದ ಮೇಲಿನ ಹೂಡಿಕೆ ತನ್ನ ಸುರಕ್ಷಿತ ಕವಚವನ್ನು ಕಳೆದುಕೊಂಡಿದೆ.[ಚಿನ್ನದ ಮೇಲೆ ಹೂಡಿಕೆಗೆ ಐದಾರು ಸುಲಭ ವಿಧಾನಗಳು]
ಚಿನ್ನದ ಮೇಲೆ ಹೂಡಿಕೆ ಮಾಡಿ ಜೂಜಾಟ ಆಡಲು ಇಚ್ಛೆ ಇರುವವರು ಇನ್ನೂ 2 ರಿಂದ 3% ಇಳಿಕೆಗೆ ಕಾಯುವುದು ಒಳ್ಳೆಯದು. ಚಿನ್ನದ ಮೇಲಿನ ಹೂಡಿಕೆಗೆ ಸದ್ಯಕ್ಕೆ ಇದು ಸಕಾಲವಲ್ಲ. ಕಾರಣ ಇಷ್ಟೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೂ ಹಳದಿ ಲೋಹದ ಭವಿಷ್ಯದ ಬಗ್ಗೆ ಸ್ಪಷ್ಟನೆ ಇಲ್ಲ.
ಯುರೋಪಿನಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿದೆ. ಸೈಪ್ರಸ್ ಗೆ ಇನ್ನೂ ಹೆಚ್ಚಿನ ಬೇಲ್ ಔಟ್ ಹಣ ಅವಶ್ಯಕತೆ ಇದೆ. ಗ್ರೀಸ್, ಸ್ಪೇನ್ ಹಾಗೂ ಇಟಲಿ ಹೆಚ್ಚಿನ ಮೊತ್ತ ನಿರೀಕ್ಷೆಯಲ್ಲಿದೆ. ಜರ್ಮನಿ ಇರೋದಲ್ಲಿ ಸ್ವಲ್ಪ ಪರವಾಗಿಲ್ಲ ಎನ್ನುವ ಸ್ಥಿತಿಯಲ್ಲಿದೆ. ಈ ದೇಶಗಳ ಆರ್ಥಿಕ ಪರಿಸ್ಥಿತಿ ಏರು ಪೇರಾದರೆ ಚಿನ್ನ ಮತ್ತೆ ಕುಣಿಯಲು ಆರಂಭಿಸುತ್ತದೆ.
ಅಮೆರಿಕದ ಆರ್ಥಿಕ ಪರಿಸ್ಥಿತಿ ಸುಧಾರಣೆ ಸೂಚನೆ ಸಿಕ್ಕಿದೆ. ವರ್ಷಾಂತ್ಯಕ್ಕೆ ಅಮೆರಿಕ ಮತ್ತೆ ಜಿಡಿಪಿ ದರ ಹೆಚ್ಚಿಸಿಕೊಂಡು ವಿಜೃಂಭಿಸಲಿದೆ. ಭಾರತದ ಜಿಡಿಪಿ ದರ 5ರ ಗಡಿ ದಾಟುತ್ತಿಲ್ಲ.
ಇದಲ್ಲದೆ ಕೊರಿಯಾದಲ್ಲಿ ವಾರ್ , ಇರಾನ್ ನಲ್ಲಿ ಯುದ್ಧ ಸಂಭವ ಮುಂತಾದ ಸುದ್ದಿಗಳು ಮತ್ತೊಮ್ಮೆ ಚಿನ್ನ ನಂಬಿಕೊಂಡ ಗ್ರಾಹಕರಿಗೆ ಕಹಿ ಸುದ್ದಿಯಾಗುವ ಸಾಧ್ಯತೆಯಿದೆ. ಚಿನ್ನದ ದರ ಇಳಿಕೆ ಗ್ರಾಹಕರನ್ನು ಸೆಳೆಯಬಹುದಾದರೂ ಇನ್ನು ಕೆಲಕಾಲ ಚಿನ್ನದ ದರ ಬಗ್ಗೆ ನಿಗಾ ವಹಿಸಿ ತಾಳ್ಮೆಯಿಂದ ಕಾಯುವುದು ಒಳಿತು. ಆತುರಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡಲು ಹೊರಡಬೇಡಿ.


Click it and Unblock the Notifications

