ಬೆಂಗಳೂರು, ಜೂ.11: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಇಳಿಮುಖ ಕಂಡಿದೆ. ಕಳೆದ ದಶಕದಲ್ಲೇ ಈ ರೀತಿ ಚಿನ್ನದ ದರದ ಏರುಪೇರು ಕಂಡಿಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಆದರೆ, ಇದು ಚಿನ್ನದ ಮೇಲೆ ಹೂಡಿಕೆಗೆ ಸಕಾಲವೇ?
32 ಸಾವಿರ ರು ಗಡಿಯಿಂದ ಜಾರಿ 25 ಸಾವಿರ ರು.ನಿಂದ 26 ಸಾವಿರ ರು ಗಡಿಯಲ್ಲಿ ಹಳದಿ ಲೋಹ ಅಡ್ಡಾಡಿಕೊಂಡಿದೆ. ಆದರೆ, ಚಿನ್ನದ ಬೆಲೆ ಇನ್ನಷ್ಟು ಕುಸಿತದ ನಿರೀಕ್ಷೆ ಇದ್ದರೂ ಮಾರುಕಟ್ಟೆ ತಜ್ಞರ ಪ್ರಕಾರ ಇದು ಹೂಡಿಕೆಗೆ ಅಷ್ಟು ಒಳ್ಳೆ ಕಾಲವಲ್ಲ. ಪ್ರಮುಖ ನಾಲ್ಕು ಕಾರಣ ಏನು? ಇಲ್ಲಿದೆ ನೋಡಿ
ರುಪಾಯಿ ಮೌಲ್ಯ ಕುಸಿತ
ಕಳೆದೆರಡು ದಿನಗಳಿಂದ ಡಾಲರ್ ಎದುರು ಸೆಣಸಲು ಆಗದೆ ಸೋಲುತ್ತಿರುವ ರುಪಾಯಿ ಮೌಲ್ಯ ಪುಣ್ಯಕ್ಕೆ 60 ರು ತನಕ ಕುಸಿತ ಕಾಣುವುದು ತಪ್ಪಿದೆ. 58.90ರ ಆಸುಪಾಸಿನಲ್ಲಿದೆ. ಮೇ ನಲ್ಲಿ ಶೇ 5 ರಷ್ಟು ಜೂನ್ ನಲ್ಲಿ ಮತ್ತೆ ಶೇ 2 ರಷ್ಟು ಕುಸಿತ ಕಂಡ ರುಪಾಯಿ ಮೌಲ್ಯ ಚಿನ್ನದ ದರ ಏರಿಸಿದೆ.
ರುಪಾಯಿ ಮೌಲ್ಯ ಮೇಲಕ್ಕೆತ್ತಲು ಸರ್ಕಾರ ಹರಸಾಹಸ ಪಡುತ್ತಿದೆ. ಚಿನ್ನದ ನಾಣ್ಯ ಖರೀದಿ, ಮಾರಾಟಕ್ಕೂ ಬ್ರೇಕ್ ಹಾಕಿದೆ. ಚಿನ್ನದ ಆಮದು ಮೇಲೆ ನಿಯಂತ್ರಣ ಸಾಧಿಸಿ ವಿತ್ತೀಯ ಕೊರತೆ ನೀಗಿಸುವ ಪಯತ್ನ ಫಲ ಕೊಡುವ ತನಕ ಚಿನ್ನದ ತಂಟೆಗೆ ಹೋಗದಿದ್ದರೆ ಒಳ್ಳೆಯದು.
ವಿದೇಶಿ ಹೂಡಿಕೆ ಕುಸಿತ
ಚಿನ್ನದ ಆಮದು ಮೇಲೆ ನಿರ್ಬಂಧದ ಜೊತೆಗೆ ಕಳೆದ ಕೆಲವು ತಿಂಗಳುಗಳಲ್ಲಿ ಎಚ್ ಎಸ್ ಬಿಸಿ, ಸಿಎಲ್ ಎಸ್ ಎ ಹಾಗೂ ಡ್ಯುಯೆಚ್ ಬ್ಯಾಂಕ್ ಗಳು ಚಿನ್ನದ ಮೇಲೆ ನಿರಾಸಕ್ತಿ ತೋರಿಸಿವೆ. ಮಾರುಕಟ್ಟೆ ತಜ್ಞರ ಪ್ರಕಾರ ವಿದೇಶಿ ಬ್ಯಾಂಕ್, ಹೂಡಿಕೆದಾರರ ನಿರಾಸಕ್ತಿ ಭಾರಿ ಪರಿಣಾಮ ಬೀರಲಿದ್ದು, ಚಿನ್ನದ ದರ ಏರುಪೇರು ಸಾಧ್ಯತೆ ನಿಚ್ಚಳವಾಗಿದೆ.
ಅಮೆರಿಕದ ನೀತಿ ಬದಲಾವಣೆ
ಯುಎಸ್ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಹೊಸ ನಿಯಮಗಳು ಜಾರಿಗೆ ಬರುವ ಸೂಚನೆ ಸಿಕ್ಕಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುತ್ತಿದ್ದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಕುಸಿತ ಕಾಣುತ್ತದೆ ಇದರ ಜೊತೆಗೆ ಸ್ಥಳೀಯ ದರಗಳು ಏರುಪೇರಾಗುವುದನ್ನು ನಿರೀಕ್ಷಿಸಬಹುದು.
ಆಮದು ಸುಂಕ ಹೆಚ್ಚಳ
ಚೀನಾ ನಂತರ ಚಿನ್ನ ಆಮದು ಮಾಡಿಕೊಳ್ಳುವುದರಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಜಾಗತಿಕ ಬೇಡಿಕೆಯ ಮೂರನೇ ಒಂದು ಭಾಗ ಭಾರತೀಯರಿಗೆ ಬೇಕಾಗುತ್ತದೆ. ಚಿನ್ನದ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಸರ್ಕಾರ ಚಿನ್ನದ ಬೆಲೆ ಏರಿಕೆಗೆ ಕಾರಣವಾಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಡಿಕೆ ಮೇಲೆ ಇದು ಪರಿಣಾಮ ಬೀರಲಿದ್ದು, ಮುಂಬರುವ ತಿಂಗಳುಗಳಲ್ಲಿ ಚಿನ್ನದ ದರದ ಮೇಲೆ ಪ್ರತಿಫಲಿಸಲಿದೆ.


Click it and Unblock the Notifications