ಶಾರ್ಟ್ ಟರ್ಮ್ ಅಥವಾ ಕಡಿಮೆ ಅವಧಿ ಬಂಡವಾಳ ಹೂಡಿಕೆ ಎಂಬ ಪದದ ಅರ್ಥ ವ್ಯಕ್ತಿಗತವಾಗಿ ಭಿನ್ನವಾಗಿರುತ್ತದೆ. ಕೆಲವರು ಒಂದು ವರ್ಷಕ್ಕಿಂತ ಕಡಿಮೆ ಅವಧಿಯನ್ನು ಶಾರ್ಟ್ ಟರ್ಮ್ ಎಂದು ನಂಬಿದರೆ ಇನ್ನು ಕೆಲವರ ಪ್ರಕಾರ ಮೂರು ವರ್ಷವೂ ಆಗಿರಬಹುದು. ಮತ್ತೆ ಕೆಲವರು ಮೂವತ್ತು ದಿನ ಎಂದು ಹೇಳಬಹುದು. ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಇದು ಬದಲಾಗುತ್ತಿರುತ್ತದೆ.
ಒಂದು ವರ್ಷದ ಕಡಿಮೆ ಅವಧಿಗೆ ಭಾರತದಲ್ಲಿ ಕೆಲವೇ ಕೆಲವು ಬಂಡವಾಳ ಹೂಡಿಕೆ ಯೋಜನೆಗಳು ಲಭ್ಯವಿವೆ. ವಾಣಿಜ್ಯ ಬ್ಯಾಂಕ್ ಗಳ ಡೆಪಾಸಿಟ್, ಕಂಪನಿ ಡೆಪಾಸಿಟ್, ಭಾರತೀಯ ಅಂಚೆ ಉಳಿತಾಯ ಖಾತೆ ಹೊರತುಪಡಿಸಿದರೆ ಉಳಿದವುಗಳಲ್ಲಿ ಒಂದು ವರ್ಷ ಹೂಡಿಕೆ ಮಾಡುವುದು ಕಡ್ಡಾಯ. ಆದರೆ ಕೆಲವೊಂದು ಚಿಕ್ಕ ಅವಧಿಯ ಪ್ಲಾನ್ ಗಳು ಲಭ್ಯವಿದ್ದು ಅವುಗಳ ಮೇಲೊದು ನೋಟ.[ಹೊಸ ಹೂಡಿಕೆದಾರ ಅರಿತಿರಬೇಕಾದ ಸಪ್ತ ಸೂತ್ರ]

ಸ್ಟೇಟ್ ಬ್ಯಾಂಕ್ ಆಫ್ ಬಿಕನರ್ ಮತ್ತು ಜೈಪುರ
ಸ್ಟೇಟ್ ಬ್ಯಾಂಕ್ ಆಫ್ ಬಿಕನರ್ ಮತ್ತು ಜೈಪುರ ವ್ಯಕ್ತಿಗತವಾಗಿ ಶಾರ್ಟ್ ಟರ್ಮ್ ಇನ್ ವೆಸ್ಟ್ ಮೆಂಟ್ ಗೆ ಉತ್ತಮ ಬಡ್ಡಿ ನೀಡುತ್ತಿದೆ. 91 ದಿನ ಮತ್ತು 179 ದಿನದ ಡೆಪಾಸಿಟ್ ಗೆ ಶೆ.8 ಬಡ್ಡಿ ದರ ನೀಡಲಾಗುತ್ತದೆ. ಅಲ್ಲದೇ ಆರು ತಿಂಗಳ ಅವಧಿಯ ಡೆಪಾಸಿಟ್ ಗೆ ಶೇ. 8.7 ರಷ್ಟು ಬಡ್ಡಿ ನೀಡಲಾಗುತ್ತಿದ್ದು ಸಾರ್ವಜನಿಕ ವಲಯದಲ್ಲಿ ಅತಿ ಹೆಚ್ಚಿನದಾಗಿದೆ.
ಯೆಸ್ ಬ್ಯಾಂಕ್ ಉಳಿತಾಯ ಖಾತೆ
ಯೆಸ್ ಬ್ಯಾಂಕ್ ಉಳಿತಾಯ ಖಾತೆ ನಿಮಗೆ ಶೇ. 7 ಬಡ್ಡಿ ದರ ನೀಡುತ್ತದೆ. ಇಲ್ಲಿ ಅವಧಿ ಮುಖ್ಯವಾಗುವುದಿಲ್ಲ. ನಿಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಎಷ್ಟು ದಿನಗಳ ಕಾಲ ಇರುತ್ತದೆಯೋ ಅಲ್ಲಿಯವರೆಗೆ ಬಡ್ಡಿ ದೊರೆಯುತ್ತದೆ. ಇಲ್ಲಿ ಹಣವನ್ನು ಒಂದು ನಿರ್ದಿಷ್ಟ ಅವಧಿಗೆ ನೀವು ಹೂಡಿಕೆ ಮಾಡಿಲ್ಲವಾದರೂ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ. ಒಂದು ವೇಳೆ ನಿಮ್ಮ ಹಣಕ್ಕೆ ನೀಡಿದ ಬಡ್ಡಿ ವರ್ಷಕ್ಕೆ 10 ಸಾವಿರ ರೂ. ಗೂ ಮಿಕ್ಕಿದರೆ ತೆರಿಗೆ ಕಟ್ಟಬೇಕಾಗುತ್ತದೆ.[ಫಿಕ್ಸೆಡ್ ಡೆಪಾಸಿಟ್ ಹಣ ಯಾರಿಗೆ ಸೇರಬೇಕು?]
ಕೆನರಾ ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್
270 ದಿನಗಳ ಅವಧಿಗೆ ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಟ್ಟರೆ ಶೇ. 8.5 ರಷ್ಟು ದರದ ಬಡ್ಡಿ ಪಡೆಯಬಹುದು. ಆರು ತಿಂಗಳಿಂದ ಒಂದು ವರ್ಷದ ನಡುವೆ ಹಣ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಇದು ಉತ್ತಮ ಯೋಜನೆಯಾಗಿದೆ. ಅಲ್ಲದೇ ಇದು ರಾಷ್ಟ್ರೀಕೃತ ಬ್ಯಾಂಕ್ ಆಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದಲೂ ಒಳ್ಳೆಯದು.
ಬಾಂಡ್ ಗಳಲ್ಲಿ ಹೂಡಿಕೆ
ಕೆಲ ಬಾಂಡ್ ಗಳು ಸಹ ಕಡಿಮೆ ಅವಧಿಗೆ ಉತ್ತಮ ಆದಾಯ ತಂದುಕೊಡಬಲ್ಲದು. ಐಡಿಎಫ್ ಸಿ ಡೈನಾಮಿಕ್ ಬಾಂಡ್ ಫಂಡ್ ಮತ್ತು ಐಡಿಎಫ್ ಸಿ ಬಾಂಡ್ ಫಂಡ್ ಗಳು ಈ ಸಾಲಿಗೆ ಸೇರುತ್ತವೆ. ಆದರೆ ಇಂಥವುಗಳಲ್ಲಿ ಹೂಡಿಕೆ ಮಾಡುವ ಮೊದಲು ಮ್ಯೂಚುವಲ್ ಫಂಡ್ ತಜ್ಞರನ್ನು ಒಮ್ಮೆ ಮಾತನಾಡಿಸುವುದು ಉತ್ತಮ.
ಕೊಟಾಕ್ ಮಹೀಂದ್ರಾ ಬ್ಯಾಂಕ್ ಉಳಿತಾಯ ಖಾತೆ
ಕೊಟಾಕ್ ಮಹೀಂದ್ರಾ ಬ್ಯಾಂಕ್ ಉಳಿತಾಯ ಖಾತೆಯೂ ಶೇ.6 ಬಡ್ಡಿ ದರವನ್ನು ನೀಡುತ್ತದೆ. ದೊಡ್ಡ ಮೊತ್ತದ ಹಣವನ್ನು ನಿಮ್ಮ ಉಳಿತಾಯ ಖಾತೆಯಲ್ಲಿ ತೊಡಗಿಸುತ್ತಿದ್ದರೆ ಇದು ಒಳ್ಳೆಯ ಆಯ್ಕೆ ಆಗಬಲ್ಲದು. ಆದರೆ ಯೆಸ್ ಬ್ಯಾಂಕ್ ನ ಶೇ. 7 ಬಡ್ಡಿ ದರವನ್ನು ಇದು ಮೀರಿಸುವುದಿಲ್ಲ.
ಅಲ್ಟ್ರಾ ಶಾರ್ಟ್ ಟರ್ಮ್ ಬಾಂಡ್
ಅಲ್ಟ್ರಾ ಶಾರ್ಟ್ ಟರ್ಮ್ ಬಾಂಡ್ ಗಳು ಸಹ ಉತ್ತಮ ರಿಟರ್ನ್ಸ್ ತಂದು ಕೊಡಬಲ್ಲವು. ಇವು ಶೇ. 9 ರವೆಗೂ ಬಡ್ಡಿ ನೀಡಬಲ್ಲವು. ಆದರೆ ಮಾರುಕಟ್ಟೆಯ ಸ್ಥಿತಿ ಆಧರಿಸಿಯೇ ಮುಂದುವರಿಯಬೇಕಾಗುತ್ತದೆ.(ಗುಡ್ ರಿಟರ್ನ್.ಇನ್)


Click it and Unblock the Notifications