ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ನಂಬರ್ ಇಲ್ಲದಿದ್ದರೂ 'ಕಿಸಾನ್ ವಿಕಾಸ್ ಪತ್ರ' ಪಡೆಯುವ ಮೂಲಕ ಸಣ್ಣ ಮಟ್ಟದ ಹೂಡಿಕೆಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟ ಮೇಲೆ ಕಿಸಾನ್ ವಿಕಾಸ್ ಪತ್ರದ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹೆಚ್ಚುತ್ತಿದೆ. ಕಿಸಾನ್ ವಿಕಾಸ್ ಪತ್ರ ಅಂದರೇನು? ಸರ್ಕಾರ ತಂದಿರುವ ಬದಲಾವಣೆಗಳೇನು? ಹೂಡಿಕೆಯಿಂದ ಲಾಭವೇನು? ನಷ್ಟವೇನು? ಎಂಬುದರ ಬಗ್ಗೆ ವಿವರಣಾತ್ಮಕ ಲೇಖನ ಮುಂದಿದೆ ಓದಿ...
ಕಿಸಾನ್ ವಿಕಾಸ್ ಪತ್ರ ಒಂದು ತೊಡಕುಗಳಿಲ್ಲದ, ಎಚ್ಚರಿಕೆಯ ಹೂಡಿಕೆದಾರರಿಗೆ ಹೇಳಿ ಮಾಡಿಸಿದ ಹೂಡಿಕೆ ವಿಧಾನವಾಗಿದೆ. ಈ ಯೋಜನೆಯಡಿಯಲ್ಲಿ 100 ತಿಂಗಳಲ್ಲಿ ಹೂಡಿಕೆ ಮಾಡಿದ ಹಣ ದ್ವಿಗುಣಗೊಳ್ಳಲಿದೆ. ವಾರ್ಷಿಕ ಚಕ್ರಬಡ್ಡಿದರ ಶೇ 8.4ರಷ್ಟು ಕಾಯ್ದುಕೊಳ್ಳಲಾಗುತ್ತದೆ.
ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡುವುದು ಹೇಗೆ?
ಈ ಯೋಜನೆ ಭಾರತೀಯ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆ ಅರ್ಜಿ ಪಡೆದುಕೊಳ್ಳಬೇಕು. ಅರ್ಜಿ ತುಂಬಿಸಿ ನಿಮ್ಮ ಭಾವಚಿತ್ರದೊಂದಿಗೆ ಹೂಡಿಕೆ ಮೊತ್ತವನ್ನು ನಗದು ಅಥವಾ ಚೆಕ್ ಮೂಲಕ ಪಾವತಿಸಬಹುದು. ಚೆಕ್ ಕ್ಲಿಯರ್ ಆದ ಮೇಲೆ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
ಅಂಚೆ ಕಚೇರಿಯಿಂದ ನೀಡಲಾಗುವ ಕಿಸಾನ್ ವಿಕಾಸ್ ಪತ್ರದಲ್ಲಿ ಖಾತೆದಾರರ ಹೆಸರು, ಮೊತ್ತ ಹಾಗೂ ಮೆಚ್ಯುರಿಟಿ ಆಗುವ ದಿನ ಹಾಗೂ ಕೈಗೆ ಸಿಗಲಿರುವ ಮೊತ್ತ ದಾಖಲಾಗಿರುತ್ತದೆ. [ಕೆವಿಪಿಗೆ ಪ್ಯಾನ್ ಕಾರ್ಡ್ ಬೇಕಿಲ್ಲ]

ಕಿಸಾನ್ ವಿಕಾಸ್ ಪತ್ರದಲ್ಲಿ ಯಾರು ಹೂಡಿಕೆ ಮಾಡಬಹುದು?
ಭಾರತೀಯ ನಾಗರಿಕರೆಲ್ಲರಿಗೂ ಈ ಯೋಜನೆ ಮುಕ್ತವಾಗಿದೆ. ಕಿಸಾನ್ ವಿಕಾಸ್ ಪತ್ರ ನಿಮ್ಮ ಹೆಸರು ಅಥವಾ ಅಪ್ರಾಪ್ತರ ಹೆಸರಿನಲ್ಲಿ ಪಡೆಯಬಹುದು. ಇಬ್ಬರು ವಯಸ್ಕರು ಜಂಟಿಯಾಗಿ ಕೆವಿಪಿ ಪಡೆದುಕೊಳ್ಳಬಹುದಾಗಿದೆ.
ಇದೊಂದು ವೈಯಕ್ತಿಕ ಹೂಡಿಕೆಯಾಗಿದೆ. ಬಿಸಿನೆಸ್ ಸಂಸ್ಥೆಗಳು, ಸಂಘಟನೆಗಳು, ಎನ್ನಾರಿಗಳು, ಹಿಂದೂ ಅವಿಭಕ್ತ ಕುಟುಂಬ(HUF)ದಲ್ಲಿರುವವರು ಕೆವಿಪಿ ಪಡೆಯಲು ಅನರ್ಹರಾಗಿದ್ದಾರೆ.
ಕೆವಿಪಿ ವಿಶೇಷಗಳು:
1. ಬಂಡವಾಳ ಹೂಡಿಕೆ ಮಾಡುವವರು 1000, 5,000,10,000 ಮತ್ತು 50,000 ರು ನಂತೆ ಮೊತ್ತ ತೊಡಗಿಸಬಹುದು. ಹೂಡಿಕೆ ಮಿತಿಯನ್ನು ಸರ್ಕಾರ ಈಗ ಸಡಿಲಗೊಳಿಸಿದೆ.
2. ಕೆವಿಪಿ ಮೆಚ್ಯುರಿಟಿ ಅವಧಿ ಎಂಟು ವರ್ಷ ಏಳು ತಿಂಗಳುಗಳಾಗಿವೆ.
3. ಒಬ್ಬರು ಹಾಗೂ ಇಬ್ಬರ ಹೆಸರಿನಲ್ಲಿರುವ ಕೆವಿಪಿಯನ್ನು ಒಬ್ಬರಿಂದ ಒಬ್ಬರಿಗೆ ವರ್ಗಾಯಿಸಬಹುದು.
4.ಕೆವಿಪಿ ಹೊಂದಿರುವ ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಒಂದು ಸ್ಥಳದಿಂದ ಭಾರತದ ಯಾವುದೆ ಸ್ಥಳಕ್ಕೆ ವರ್ಗಾವಣೆ ಮಾಡಬಹುದು.
5. ಕೆವಿಪಿ ಆಧಾರವಾಗಿಟ್ಟುಕೊಂಡು ಬ್ಯಾಂಕ್ ಗಳಿಂದ ಸಾಲ ಪಡೆದುಕೊಳ್ಳಬಹುದಾಗಿದೆ. ಸೆಕ್ಯುರಿಟಿ ಡಿಪಾಸಿಟ್ ಅಗತ್ಯವಿದ್ದ ಕಡೆ ನೀಡಬೇಕುತ್ತದೆ.
6. ಲಿಕ್ವಿಡಿಟಿ: ಹೂಡಿಕೆದಾರರು ಲಾಕ್ ಅವಧಿ 2 ವರ್ಷ 6 ತಿಂಗಳು ಮುಗಿಯುತ್ತಿದ್ದಂತೆ ಪ್ರಮಾಣ ಪತ್ರವನ್ನು ನಗದು ರೂಪಕ್ಕಿಳಿಸಬಹುದು.
7. ಮೊದಲ 2.5 ವರ್ಷಗಳಲ್ಲಿ ಸರಳ ಬಡ್ಡಿ ಲೆಕ್ಕಾಚಾರ ಅನ್ವಯವಾಗಲಿದೆ. ನಂತರದ ಅವಧಿಯಲ್ಲಿ ಚಕ್ರಬಡ್ಡಿ ಅನ್ವಯವಾಗಲಿದೆ.
8. ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ನಂಬರ್ ಇಲ್ಲದಿದ್ದರೂ 'ಕಿಸಾನ್ ವಿಕಾಸ್ ಪತ್ರ' ಪಡೆಯುವ ಮೂಲಕ ಸಣ್ಣ ಮಟ್ಟದ ಹೂಡಿಕೆಗೆ ಅವಕಾಶವಿದೆ.
ತೆರಿಗೆ ಅನುಕೂಲ:
ಕಿಸಾನ್ ವಿಕಾಸ್ ಪತ್ರದ ಬಡ್ಡಿದರಕ್ಕೆ ತೆರಿಗೆ ವಿನಾಯತಿ ಲಭ್ಯವಿಲ್ಲ. ಆದರೆ, ಕೆವಿಪಿ ಮೇಲೆ ಯಾವುದೇ ಆಸ್ತಿ ತೆರಿಗೆ ಹೊರೆಲಾಗುವುದಿಲ್ಲ. ಕೆವಿಪಿ ಟಿಡಿಎಸ್ ಮುಕ್ತವಾಗಿಲ್ಲ. ಹೀಗಾಗಿ ಬಡ್ಡಿದರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. (ಗುಡ್ ರಿಟರ್ನ್ಸ್.ಇನ್)


Click it and Unblock the Notifications