ಪ್ರತಿಯೊಬ್ಬ ತೆರಿಗೆ ಪಾವತಿದಾರನಿಗೂ ಹಣಕಾಸು ವರ್ಷದ ಅಂತ್ಯ ಪ್ರಮುಖವಾಗುತ್ತದೆ. ಆತನಲ್ಲಿ ಕೆಲ ಗೊಂದಲಗಳು ಏರ್ಪಡುವ ಸಂಭವವಿರುತ್ತದೆ. ತೆರಿಗೆ ವಿನಾಯಿತಿಗೆ ಯಾವ ತಂತ್ರಗಳನ್ನು ಅನುಸರಿಸಬೇಕು? ಅಥವಾ ಯಾವ ದಾಖಲೆಗಳನ್ನು ಹಾಜರುಪಡಿಸಬೇಕು ಎಂಬುದು ಗೊತ್ತಿದ್ದರೂ ಒಂದು ಕ್ಷಣ ಗೊಂದಲಕ್ಕೀಡಾಗುತ್ತಾರೆ.
ಹಾಗಾದರೆ ಹಣಕಾಸು ವರ್ಷದ ಅಂತ್ಯದ ಒಳಗೆ ಅಂದರೆ ಮಾರ್ಚ್ 31ರೊಳಗೆ ನೀವು ಮಾಡಬೇಕಾದ್ದೇನು? ಇಲ್ಲಿದೆ ಮಾಹಿತಿ.[ಪಿಪಿಎಫ್ ಖಾತೆಗೆ ಆನ್ ಲೈನ್ ಹಣ ರವಾನೆ ಹೇಗೆ?]

1. ತೆರಿಗೆ ತುಂಬಿ
ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಮೊದಲು ಅದನ್ನು ತುಂಬಿ. ಜತೆಗೆ ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ ಕುರಿತಾದ ಎಲ್ಲಾ ದಾಖಲೆಗಳನ್ನು ಮಾರ್ಚ್ 31 ರೊಳಗೆ ಸಂಬಂಧಿಸಿದವರಿಗೆ ನೀಡಬೇಕಾಗುತ್ತದೆ.
2. ವೈದ್ಯಕೀಯ ವೆಚ್ಚ
ನಿಮ್ಮ ವೈದ್ಯಕೀಯ ವೆಚ್ಚದ ಎಲ್ಲ ವಿವರಗಳನ್ನು, ಬಿಲ್ ಗಳನ್ನು ಕಾಯ್ದಿರಿಸಿದ್ದರೆ ಉತ್ತಮ. ನೀವು ಕೆಲಸ ಮಾಡುತ್ತಿರುವ ಕಂಪನಿಗೆ ಮೆಡಿಕಲ್ ವೆಚ್ಚದ ಮಾಹಿತಿ ನೀಡಬೇಕು.[ಆದಾಯ ತೆರಿಗೆ ಪಾವತಿಸಲು ಆನ್ ಲೈನ್ ನೋಂದಣಿ ಹೇಗೆ?]
3. ಹೂಡಿಕೆ ವೆಚ್ಚದ ಮಾಹಿತಿ ನೀಡಿ
ನಿಮ್ಮ ಹೂಡಿಕೆ ವಿವರಗಳನ್ನು ಇಲ್ಲಿಯವರೆಗೆ ನೀಡಿರದಿದ್ದರೆ ಕೂಡಲೇ ಅದೆಲ್ಲವನ್ನು 80 ಸಿ ಅನ್ವಯ ನೀಡಿ. ವಿಮಾ ಹಣ ತುಂಬಿರುವ ರಸೀದಿಗಳು, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡಿದ ಹಣ, ಉಳಿತಾಯಕ್ಕೆ ಸಂಬಂಧಿಸಿ ಹೂಡಿಕೆ ಮಾಡಿದ ಹಣದ ಮಾಹಿತಿ, ಫಿಕ್ಸೆಡ್ ಡಿಪಾಸಿಟ್ ಕುರಿತಾದ ಎಲ್ಲ ಮಾಹಿತಿಯನ್ನು ನೀಡಬೇಕು.
4. ಬ್ಯಾಂಕ್ ನಿಂದ ಟಿಡಿಎಸ್ ಪಡೆದುಕೊಳ್ಳಿ
ಬ್ಯಾಂಕ್ ನಿಂದ ನಿಮಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಪಡೆದುಕೊಳ್ಳಿ. ಟಿಡಿಎಸ್ ಕುರಿತಾದ ಮಾಹಿತಿ ಪಡೆದುಕೊಂಡರೆ ಮುಂದೆ ಅದು ತೆರಿಗೆ ವಿನಾಯಿತಿ ಪಡೆಯುವಲ್ಲಿ ನೆರವಾಗುತ್ತದೆ.
5. ಮನೆ ಸಾಲದ ಪ್ರಮಾಣ ಪತ್ರ
ನೀವು ಗೃಹ ಸಾಲವನ್ನೇನಾದರೂ ಮಾಡಿದ್ದರೆ ಸಾಲ ಪಡೆದ ಬ್ಯಾಂಕ್ ನಿಂದ ಪ್ರಮಾಣ ಪತ್ರವೊಂದನ್ನು ಪಡೆದುಕೊಳ್ಳಿ. ಇದು ಸಹ ತೆರಿಗೆ ವಿನಾಯಿತಿ ಪಡೆಯುವಲ್ಲಿ ನೆರವಾಗುತ್ತದೆ.
6. ಕೆಲಸದ ಬದಲಾವಣೆ
ಹಣಕಾಸು ವರ್ಷಕ್ಕೆ ಸಂಬಂಧಿಸಿ ಕೆಲಸದಲ್ಲಿ ಬದಲಾವಣೆ ಮಾಡಿದ್ದರೆ ಫಾರಂ 16 ರ ಅಡಿ ದಾಖಲೆ ನೀಡಬೇಕು.
7. ಕನಿಷ್ಠ ಹಣ ಪಾವತಿ
ನೀವು ಪಿಪಿಎಫ್ ಅಥವಾ ಎನ್ ಪಿಎಸ್ ಖಾತೆಯನ್ನು ಹೊಂದಿದ್ದರೆ ಅದಕ್ಕೆ ಪಾವತಿ ಮಾಡಿದ ಹಣ ನಿಮಗೆ ನೆನಪಿನಲ್ಲಿ ಉಳಿಯದೇ ಹೋಗಿರಬಹುದು. ಆದರೆ ಇದಕ್ಕೆ ಸಂಬಂಧಿಸಿದ ಎಲ್ಲ ರಸೀದಿಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ,.
8. ಸಂಘ ಸಂಸ್ಥೆಗಳಿಗೆ ನೀಡಿದ ದೇಣಿಗೆ
ನೀವು ಯಾವುದಾದರೂ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದರೆ ಅದರ ಕುರಿತಾದ ರಸೀದಿ ಪಡೆದುಕೊಂಡಿದ್ದು ಹಾಜರುಪಡಿಸಿದರೆ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಸಾಧ್ಯ.
9. ಬಂಡವಾಳ ಬೆಳವಣಿಗೆ
ಹಣಕಾಸು ವರ್ಷದಲ್ಲಿ ನೀವು ಯಾವುದಾದರೂ ಆಸ್ತಿಯನ್ನು ಮಾರಿದ್ದೀರಾ? ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಯಾವ ಪ್ರಮಾಣದ ಹೂಡಿಕೆ ಮಾಡಿದ್ದಿರಿ ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ.
10. ಉಳಿದ ತಂತ್ರಗಳ ಕಡೆಗೂ ಗಮನ ಇರಲಿ
ಇದರ ಜತೆಗೆ ಇನ್ನುಳಿದ ತೆರಿಗೆ ವಿನಾಯಿತಿ ತಂತ್ರಗಳ ಬಗ್ಗೆಯೂ ಗಮನ ಇರಲಿ. ಮಕ್ಕಳ ಶಿಕ್ಷಣದ ಸಾಲ, ಕೊಡುಗೆ, ಉಡುಗೊರೆ ಈ ರೀತಿಯ ಅನೇಕ ಅಂಶಗಳನ್ನು ತಲೆಯಲ್ಲಿಟ್ಟುಕೊಂಡಿರಬೇಕಾಗುತ್ತದೆ.
ಕೊನೆ ಮಾತು: ತೆರಿಗೆ ವಿನಾಯಿತಿ ತಂತ್ರಗಳನ್ನು ಅಥವಾ ವಿಧಾನಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದರ ಜತೆಗೆ ಎಲ್ಲ ದಾಖಲೆಗಳನ್ನು ಹಾಜರುಪಡಿಸುವುದು ಅಷ್ಟೇ ಮುಖ್ಯವಾಗುತ್ತದೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications