ಎರಡನೇ ತ್ರೈಮಾಸಿಕ ಫಲಿತಾಂಶವನ್ನು ಒಂದೊಂದೇ ಕಂಪನಿಗಳು ಘೋಷಿಸುತ್ತಿವೆ. ಇನ್ಫೋಸಿಸ್ ಹಾಗೂ ಟಿಸಿಎಸ್ ಫಲಿತಾಂಶ ಮಾರುಕಟ್ಟೆಯ ನಿರಾಸೆಗೆ ಕಾರಣವಾಗಿದೆ.
ಇನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳ ಫಲಿತಾಂಶ ತುಂಬ ಚೆನ್ನಾಗಿರುತ್ತದೆ ಅನ್ನುವಂತಿಲ್ಲ. ಆದ್ದರಿಂದ ಷೇರುಗಳಲ್ಲಿ ಹಣ ಹಾಕುವ ಮುನ್ನ ಬೆಳವಣಿಗೆಗೆ ಅವಕಾಶ ಇರುವ ಹಾಗೂ ಉತ್ತಮ ಮೌಲ್ಯದ ಇರುವುದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.
ಇಲ್ಲಿ ಕೆಲವು ಷೇರುಗಳನ್ನು ಆಯ್ಕೆ ಮಾಡಿ ಕೊಟ್ಟಿದ್ದೇವೆ. ಇನ್ನೇನು ದೀಪಾವಳಿ ಹತ್ತಿರದಲ್ಲಿದೆ. ಅ ಸಂದರ್ಭಕ್ಕೆ ಖರೀದಿಸಲು ಅನುಕೂಲವಾಗುತ್ತದೆ. ಈ ಷೇರುಗಳನ್ನು ಕೆಲವು ವರ್ಷಗಳ ಕಾಲ ಇಟ್ಟುಕೊಂಡರೆ ಅದ್ಭುತವಾದ ಲಾಭ ಕೂಡ ತರುತ್ತವೆ. ಅಂಥ ಕೆಲವು ಕಂಪನಿ ಷೇರುಗಳ ಮಾಹಿತಿ ಇಲ್ಲಿದೆ ನಿಮಗಾಗಿ.
ಜಿಐಸಿ ಹೌಸಿಂಗ್
ಹೆಸರು ಸೂಚಿಸುವಂತೆ ಇದು ಗೃಹ ಖರೀದಿ, ನಿರ್ಮಾಣಕ್ಕೆ ಸಾಲ ನೀಡುವ ಕಂಪನಿ. ಕಳೆದ ಕೆಲವು ತಿಂಗಳಿಂದ ಒಳ್ಳೆ ಏರಿಕೆಯಾಗಿದೆ. ಹಾಗೆ ನೋಡಿದರೆ ಇದೇ ವಲಯದ ಡಿಎಚ್ ಎಫ್ ಎಲ್ ಹಾಗೂ ಎಲ್ ಐಸಿ ಹೌಸಿಂಗ್ ಫೈನಾನ್ಸ್ ಕೂಡ ಉತ್ತಮ ಏರಿಕೆ ದಾಖಲಿಸಿವೆ. ಅವುಗಳಲ್ಲಿ ಇನ್ಣೂ ಹೆಚ್ಚಿನ ಏರಿಕೆ ನಿರೀಕ್ಷಿಸುವುದು ಕಷ್ಟ. ಆದರೆ ಜಿಐಸಿ ಹೌಸಿಂಗ್ ಷೇರಿನ ಬೆಲೆ ಏರುವ ಸಾಧ್ಯತೆಗಳಿವೆ.
ಜಿಐಸಿ ಷೇರಿನ ಮೌಲ್ಯ ಚೆನ್ನಾಗಿದೆ
ವರದಿ ಪ್ರಕಾರ ಈ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಬೆಳವಣಿಗೆ ದರ ಶೇ18 ಮುಟ್ಟಿದೆ. ಗೃಹ ಸಾಲ ನೀಡುವ ಕಂಪನಿ ಷೇರುಗಳನ್ನು ಖರೀದಿಸಿಟ್ಟುಕೊಂಡರೆ ಉತ್ತಮ ಲಾಭ ನಿರೀಕ್ಷೆ ಮಾಡಬಹುದು. ಇನ್ನು ಜಿಐಸಿ ಹೌಸಿಂಗ್ ಕಂಪನಿ ಬಗ್ಗೆ ಹೇಳಬೇಕೆಂದರೆ, ಕಂಪನಿಯ ಸಾಲ ನೀಡುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇನ್ನು ಕಂಪನಿ ಮೌಲ್ಯ ನೋಡುವುದಾದರೆ ಷೇರಿನ ಬೆಲೆ ದುಬಾರಿಯಲ್ಲ. ಇದೇ ವಲಯದ ಇತರ ಕಂಪನಿಗಳಿಗೆ ಹೋಲಿಸಿದರೆ ಜಿಐಸಿ ಷೇರಿನ ಮೌಲ್ಯ ಚೆನ್ನಾಗಿದೆ. ಶುಕ್ರವಾರ ಸಂಜೆ ವೇಳೆಗೆ ಈ ಷೇರಿನ ದರ 337.25 ಇತ್ತು.
ಆರ್ತಿ ಇಂಡಸ್ಟ್ರೀಸ್
ವಿವಿಧ ಉತ್ಪನ್ನಗಳಾ ತಯಾರಿಕೆಯಲ್ಲಿ ತೊಡಗಿರುವ ಈ ಕಂಪನಿ ಆರೋಗ್ಯಕರವಾದ ಬೆಳವಣಿಗೆ ದರ ದಾಖಲಿಸಿದೆ. ಅಗ್ರೋ ಕೆಮಿಕಲ್ಸ್, ಫಾರ್ಮಾಸ್ಯುಟಿಕಲ್ಸ್, ರಬ್ಬರ್ ಕೆಮಿಕಲ್ಸ್.. ಹೀಗೆ ವಿವಿಧ ವ್ಯವಹಾರಗಳಲ್ಲಿ ತೊಡಗಿಕೊಂಡಿದೆ. ಬೆಂಜೆನ್ ನಿಂದ ಆಗುವ ಪ್ರಾಥಮಿಕ ಹಾಗೂ ಎರಡನೇ ಹಂತದ ಕೆಮಿಕಲ್ ಉತ್ಪಾದನೆಯಲ್ಲಿ ಭಾರತದಲ್ಲೇ ಅತಿ ದೊಡ್ಡ ಕಂಪೆನಿ ಆರ್ತಿ ಇಂಡಸ್ಟ್ರೀಸ್.
ಷೇರುದಾರರ ಸಂಪತ್ತು ವೃದ್ಧಿ
ಈ ಕಂಪನಿಯ 16 ಉತ್ಪಾದನಾ ಕಾರ್ಖಾನೆಗಳಿವೆ. ಆ ಪೈಕಿ ಹೆಚ್ಚಿನವು ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿವೆ. ನಿರಂತರವಾಗಿ ವಿಸ್ತರಣೆ ಅಗುತ್ತಿರುವುದರಿಂದ ಕಂಪನಿಗೆ ಅನುಕೂಲವಾಗಿದೆ. ಷೇರುದಾರರ ಸಂಪತ್ತು ವೃದ್ಧಿಯಾಗಿದೆ. ಈ ಕಂಪನಿಯ ಉತ್ಪನ್ನಗಳಿಗೆ ಒಳ್ಳೆ ಪ್ರತಿಕ್ರಿಯೆ ಇದೆ. ಆದ್ದರಿಂದಲೇ ಬಂಡವಾಳದಲ್ಲಿ ಹೆಚ್ಚಳವಾಗಿ, ಒಳ್ಳೆ ಡಿವಿಡೆಂಡ್ ಸಿಗುತ್ತದೆ. ಈ ಕಂಪೆನಿ ಮುಂಬರುವ ವರ್ಷಗಳಲ್ಲಿ ಸುಲಭವಾಗಿ 1,000 ರುಪಾಯಿ ಮುಟ್ಟುವ ಸಾಧ್ಯತೆ ಇದೆ. ಸದ್ಯಕ್ಕೆ 725 ರುಪಾಯಿಯಲ್ಲಿ ವಹಿವಾಟು ನಡೆಸುತ್ತಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಇದು ಸರಕಾರಿ ಸ್ವಾಮ್ಯದ ಬ್ಯಾಂಕ್. ಇದುವರೆಗೆ ಈ ಷೇರಿನ ಬೆಲೆಯಲ್ಲಿ ಅಂಥ ಹೆಚ್ಚಳ ಕಂಡಿಲ್ಲ. ಬಹಳ ತಜ್ಞರು ಖಾಸಗಿ ಬ್ಯಾಂಕ್ ಷೇರುಗಳನ್ನು ಖರೀದಿಸುವುದಕ್ಕೆ ಸಲಹೆ ಮಾಡ್ತಾರೆ. ಪ್ರಶ್ನೆ ಏನೆಂದರೆ: ಆ ಷೇರುಗಳ ಬೇಲೆ ಅಷ್ಟು ಕಡಿಮೆ ಇದೆಯಾ? ಖಂಡಿತಾ ಇಲ್ಲ. ಖಾಸಗಿ ಬ್ಯಾಂಕ್ ಷೇರುಗಳು ಭಯಂಕರ ದುಬಾರಿ.
ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಉತ್ತಮ ಮೌಲ್ಯ
ಎನ್ ಪಿಎ ಕಡಿಮೆ ಇದ್ದರೇನು, ಉತ್ತಮ ಬೆಳವಣಿಗೆ ದಾಖಲಿಸುತ್ತಿದ್ದರೇನು? ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಉತ್ತಮ ಮೌಲ್ಯ ಇದೆ. ಸರಕಾರದಿಂದ ಬಂಡವಾಳ ದೊರೆಯಲಿದ್ದು, ಆರ್ ಬಿಐನ ಕ್ರಮಗಳಿಂದ ಅನುತ್ಪಾದಕ ಆಸ್ತಿಯ ಪ್ರಮಾಣದಲ್ಲಿ ಕಡಿಮೆಯಾದರೆ ಉತ್ತಮ ಲಾಭ ನಿರೀಕ್ಷಿಸಬಹುದು. ಈ ಷೇರಿನ ದರ 141ರಲ್ಲಿದೆ.
ಫೋರ್ಸ್ ಮೊಟಾರ್ಸ್
ರಸ್ತೆಗಳ ಮೇಲೆ ಟೆಂಫೋ ಟ್ರಾವೆಲರ್ ಸಂಚರಿಸುವುದು ನಿಲ್ಲೋದಿಕ್ಕೆ ಸಾಧ್ಯವಾ? ಈ ಸೆಗ್ಮೆಂಟ್ ನಲ್ಲಿ ಕಂಪನಿ ಬಲಿಷ್ಠವಾಗಿದೆ. ಅದಕ್ಕೆ ಟೆಂಪೋ ಟ್ರಾವೆಲರ್ ಅತ್ಯುತ್ತಮ ಉದಾಹರಣೆ. ಕಳೆದ ಎರಡು ವರ್ಷಗಳಿಂದ ಷೇರುಗಳು ಉತ್ತಮವಾದ ಬೆಲೆ ಕಂಡಿದೆ. ಈ ಕಂಪನಿ ಮರ್ಸಿಡಿಸ್, ಬಿಎಂಡಬ್ಲ್ಯು ಗೆ ಎಂಜಿನ್ ತಯಾರಿಸುತ್ತದೆ.
ಷೇರು ದರ 5 ಸಾವಿರ ಮುಟ್ಟಬೇಕು
ಈ ಆರ್ಥಿಕ ವರ್ಷದಲ್ಲಿ ಫೋರ್ಸ್ ಮೋಟಾರ್ಸ್ 250 ರುಪಾಯಿ ಇಪಿಎಸ್ ದಾಖಲಿಸುವ ಸಾಧ್ಯತೆ ಇದೆ. ಹಾಗೆ ನೋಡಿದರೆ ಇದರ ಷೇರು ದರ 5 ಸಾವಿರ ಮುಟ್ಟಬೇಕು. ಆದರೆ 4,340ರಲ್ಲಿದೆ. ಈ ಷೇರಿನ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಸಣ್ಣ ಪ್ರಮಾಣದಲ್ಲಿ ಖರೀದಿ ಆರಂಭಿಸಬೇಕು. ಇದು ಬಿಎಸ್ ಇಯಲ್ಲಿ ಮಾತ್ರ ವಹಿವಾಟು ನಡೆಸುತ್ತದೆ ಎಂಬುದು ಗಮನದಲ್ಲಿರಲಿ.
(ಈ ಲೇಖನದ ಆಧಾರದಲ್ಲಿ ಷೇರು ಮತ್ತು ಇತರ ಫೈನಾನ್ಷಿಯಲ್ ಇನ್ ಸ್ಟ್ರುಮೆಂಟ್ ಗಳ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರದಿಂದ ಆಗುವ ನಷ್ಟ ಅಥವಾ ಹಾನಿಗೆ ಗ್ರೇನಿಯಂ ಇನ್ ಫರ್ಮೇಷನ್ ಪ್ರೈವೇಟ್ ಲಿಮಿಟೆಡ್ ಮತ್ತು ಅಂಗಸಂಸ್ಥೆಗಳು ಹೊಣೆಯಲ್ಲ)


Click it and Unblock the Notifications