ಕೇಂದ್ರ ಬಜೆಟ್ 2017ರಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಅನುಕೂಲವಾಗುವ ಹಲವು ಅಭಿವೃದ್ಧಿ ಯೋಜನೆಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.
ಕೇಂದ್ರ ಬಜೆಟ್ 2017ರಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ಅನುಕೂಲವಾಗುವ ಹಲವು ಅಭಿವೃದ್ಧಿ ಯೋಜನೆಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದಾರೆ.
ವಿವಿಧ ರೀತಿಯಲ್ಲಿ ಹಾಗೂ ಭಿನ್ನ ಆಯಾಮಗಳಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಾಧನೆಗಾಗಿ ಕೆಲ ಪ್ರಮುಖ ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ. ಕೇಂದ್ರ ಬಜೆಟ್ ನಲ್ಲಿ ಪರಿಚಯಿಸಲಾಗಿರುವ ಕೆಲ ಪ್ರಧಾನ ಅಭಿವೃದ್ಧಿ ಯೋಜನೆಗಳ ಸಂಕ್ಷೀಪ್ತ ನೋಟ ಇಲ್ಲಿದೆ... ಬಜೆಟ್ 2017: ಯಾವುದು ದುಬಾರಿ, ಯಾವುದು ಅಗ್ಗ?
1. ಪ್ರಧಾನಮಂತ್ರಿ ಅವಾಸ್ ಯೋಜನೆಗೆ 23 ಸಾವಿರ ಕೋಟಿ
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಬಜೆಟ್ ನಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗ(Economically Weaker Section) ಮತ್ತು ಕಡಿಮೆ ವರಮಾನ ಗುಂಪಿನ(Low Income Group)ಜನರಿಗಾಗಿ 15 ಸಾವಿರ ಕೋಟಿಯಿಂದ 23 ಸಾವಿರ ಕೋಟಿಗೆ ಬಜೆಟ್ ಹೆಚ್ಚಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಫಲಾನುಭವಿ ಮನೆ ಖರೀದಿ/ ಬಡ್ಡಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
2. ಫಸಲ್ ಭಿಮಾ ಯೋಜನೆ
ಫಸಲ್ ಭಿಮಾ ಯೋಜನೆ ಬೆಳೆ ಹಾನಿ ವಿಮೆಯಾಗಿದ್ದು, ಶೇ. 40ರಷ್ಟು ಹೆಚ್ಚಳ ಮಾಡಲಾಗಿದೆ. ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ(PMFBY) ಬೆಳೆ ಹಾನಿ ವಿಮೆ ಯೋಜನೆಯಾಗಿದ್ದು, ಕೇಂದ್ರ ಬಜೆಟ್ 2016 ಅನುಮೋದಿಸಲಾಗಿತ್ತು. ಪ್ರಾಕೃತಿಕ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮಳೆ ಇಲ್ಲದಿರುವುದು, ಭೂಕುಸಿತ ಇತ್ಯಾದಿಗಳಿಂದ ಬೆಳೆ ನಾಶವಾದಲ್ಲಿ ಈ ಯೋಜನೆ ಅಡಿಯಲ್ಲಿ ಬೆಳೆ ಹಾನಿ ವಿಮೆ ಅಥವಾ ಪರಿಹಾರ ನೀಡಲಾಗುತ್ತದೆ.
3. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ(PMGSY) ಅಡಿಯಲ್ಲಿ 2011-14ರ ಅವಧಿಯಲ್ಲಿ ಇದ್ದ ಒಂದು ದಿನಕ್ಕೆ 73 ಕಿ.ಮೀ ರಸ್ತೆ ನಿರ್ಮಾಣ ಕಾರ್ಯವನ್ನು 2016-17ರ ಅವಧಿಯಲ್ಲಿ 133 ಕಿ.ಮೀಟರ್ ಗೆ ಹೆಚ್ಚಿಸಲಾಯಿತು.
ಭಾರತ ಸರ್ಕಾರದಿಂದ ಆರಂಭಿಸಲಾದ ಈ ಯೋಜನೆ ದೇಶದ ಎಲ್ಲ ಭಾಗಗಳಿಗೂ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ.
4. ಅದ್ಭುತ ಭಾರತ (Incredible India)
ರಾಜ್ಯಗಳ ಸಹಭಾಗಿತ್ವದಲ್ಲಿ 5 ವಿಶೇಷ ಪ್ರವಾಸೋದ್ಯಮ ವಲಯಗಳನ್ನು ಸ್ಥಾಪಿಸಲಾಗುವುದು. ಅದ್ಭುತ ಭಾರತ ಪ್ರಚಾರವನ್ನು ಜಗತ್ತಿನಾದ್ಯಂತ ಪರಿಚಯಿಸಲಾಗುವುದು.
5. ನರೇಗಾ ಯೋಜನೆಗೆ 48 ಸಾವಿರ ಕೋಟಿ
ನರೇಗಾ ಯೋಜನೆಗೆ ರೂ. 48 ಸಾವಿರ ಕೋಟಿಯನ್ನು ಘೋಷಿಸಲಾಗಿದ್ದು, ಪ್ರಸ್ತುತ ಸಾಲಿನ ನರೇಗಾ ಯೋಜನೆಗಳಿಗೆ ಬಜೆಟ್‌ನಲ್ಲಿ ಈ ಬಾರಿ ದಾಖಲೆಯ 48 ಸಾವಿರ ಕೋಟಿ ಮೀಸಲಿರಿಸಲಾಗಿದೆ.
6. ವಿದ್ಯುತ್ ಯೋಜನೆಗಳಿಗೆ 4500 ಕೋಟಿ
ದೇಶದಾದ್ಯಂತ ಮುಂಬರಲಿರುವ ನೂತನ ವಿದ್ಯುತ್ ಯೋಜನೆಗಳಿಗೆ 4500 ಕೋಟಿ ಒದಗಿಸಲಾಗುವುದು. ಇದರ ಜತೆಗೆ ಗ್ರಾಮೀಣ ಶಿಕ್ಷಣ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಗಮನ ನೀಡಲಾಗುವುದು.
7. ಸಾರಿಗೆ ವಲಯಕ್ಕೆ 2.41 ಲಕ್ಷ ಕೋಟಿ
ಪ್ರಸ್ತುತ ಬಜೆಟ್ ನಲ್ಲಿ ಅರುಣ್ ಜೇಟ್ಲಿ ಸಾರಿಗೆ ಕ್ಷೇತ್ರಕ್ಕೆ 2.41 ಲಕ್ಷ ಕೋಟಿ ಮೀಸಲಿರಿಸಿದ್ದು, ಕರಾವಳಿ ಭಾಗದ ಹೆದ್ದಾರಿಗಳ ಅಭಿವೃದ್ಧಿಗೆ ಕ್ರಮಕ್ಕೆ ಹೆಚ್ಚಿನ ಗಮನ ನೀಡಲಾಗಿದೆ.
8. ರೇಲ್ವೆ ವಲಯ
ಮುಂದಿನ 5 ವರ್ಷಗಳ ಅವಧಿಗೆ ರೈಲ್ವೆ ಸುರಕ್ಷತಾ ಧನವನ್ನು 1 ಲಕ್ಷ ಕೋಟಿ ಮೂಲನಿಧಿಯಾಗಿ ಪರಿವರ್ತಿಸಲಾಗುವುದು. ರೈಲ್ವೆ ಇ-ಟಿಕೆಟ್ ಮೇಲಿನ ಸೇವಾ ಶುಲ್ಕ ತೆರಿಗೆ ರದ್ದು ಪಡಿಸಲಾಗುವುದು. 2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್‌ಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ (Bio-toilet) ನಿರ್ಮಿಸಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆ.
9. ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ
2017-18 ಸಾಲಿನಲ್ಲಿ ರೈತರಿಗೆ ಕೃಷಿ ಸಾಲದ ಮಿತಿ 10 ಲಕ್ಷ ಕೋಟಿಗೆ ಏರಿಸಲಾಗುವುದು. ಗ್ರಾಮೀಣಾಭಿವೃದ್ಧಿ, ಕೃಷಿ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ 1,87,223 ಕೋಟಿ ಮೀಸಲು ಇರಿಸಲಾಗಿದೆ. ಕಳೆದ ಬಾರಿಗಿಂತ ಇದು 24% ಹೆಚ್ಚಳ ಮಾಡಲಾಗಿದೆ. ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಜತೆಗೆ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
10. 10 ಲಕ್ಷ ಪಿಒಎಸ್ ಮಷಿನ್ ಅಳವಡಿಕೆ
ಮಾರ್ಚ್ ಅಂತ್ಯಕ್ಕೆ ಬ್ಯಾಂಕುಗಳಲ್ಲಿ ಹೆಚ್ಚುವರಿ 10 ಲಕ್ಷ ಪಿಒಎಸ್(Point Of Sale) ಮಷಿನ್ ಅಳವಡಿಕೆ ಮಾಡಲಾಗುವುದು. ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ಆಧ್ಯತೆ. ಆಧಾರ್ ಕಾರ್ಡ್ ಜೋಡಣೆ ಮೂಲಕ ವ್ಯವಹಾರದಲ್ಲಿ ಪಾರದರ್ಶಕತೆ ತರಲಾಗುವುದು. ಮುಂಬರುವ ದಿನಗಳಲ್ಲಿ ಪ್ರಮುಖ ಅಂಚೆ ಕಚೇರಿಗಳು ಪಾಸ್‌ಪೋರ್ಟ್ ಸೇವಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಿವೆ.


Click it and Unblock the Notifications