ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಖಾತೆಯ ಕೆಲ ಪ್ರಮುಖ ನಿಯಮಗಳ ಬಗ್ಗೆ ಚರ್ಚಿಸೋಣ. ಪಿಎಫ್ ಖಾತೆ ಹೊಂದಿದರೂ ಹೆಚ್ಚಿನವರಿಗೆ ಅದರ ನಿಯಮಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರುವುದಿಲ್ಲ.
ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಖಾತೆಯ ಕೆಲ ಪ್ರಮುಖ ನಿಯಮಗಳ ಬಗ್ಗೆ ಚರ್ಚಿಸೋಣ. ಪಿಎಫ್ ಖಾತೆ ಹೊಂದಿದರೂ ಹೆಚ್ಚಿನವರಿಗೆ ಅದರ ನಿಯಮಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರುವುದಿಲ್ಲ. ನಿಮ್ಮ ಸಂಬಳದ ಶೇ. 12ರಷ್ಟು(ಬೆಸಿಕ್ ಸ್ಯಾಲರಿ) ಭಾಗವನ್ನು ಈ ಇಪಿಎಫ್ ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಇದನ್ನು ಹೊರತುಪಡಿಸಿ ಹಲವಾರು ಸಂಗತಿಗಳು ತುಂಬಾ ಜನರಿಗೆ ಗೊತ್ತಿರುವುದಿಲ್ಲ. ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?
ಅವುಗಳನ್ನು ಒಂದೊಂದಾಗಿ ಇಲ್ಲಿ ಚರ್ಚಿಸೋಣ...
1. ನಿಮ್ಮ ಇಪಿಎಫ್ ಗಾಗಿ ನಾಮನಿರ್ದೇಶನ ಮಾಡಬಹುದು
ಇಪಿಎಫ್ ಖಾತೆಯಲ್ಲೂ ಕೂಡ ನಾಮನಿರ್ದೇಶನದ ಸೌಲಭ್ಯವಿರುತ್ತದೆ. ವ್ಯಕ್ತಿಯ ಮರಣದ ಸಂದರ್ಭದಲ್ಲಿ ನಾಮಿನಿಯನ್ನು ಸಂಪರ್ಕಿಸಿ ಇಪಿಎಫ್ ಮೊತ್ತವನ್ನು ನೀಡಲಾಗುತ್ತದೆ. ಫಾರ್ಮ್ 2 ಎಂಬ ಫಾರ್ಮಿನಲ್ಲಿ ಮಾಹಿತಿಯನ್ನು ತುಂಬಿ ಮಾಹಿತಿಯನ್ನು ಅಥವಾ ನಾಮಿನಿಯ ಹೆಸರನ್ನು ಬದಲಾಯಿಸಬಹುದು. ಇದಕ್ಕಾಗಿ ನಿಮ್ಮ ಕಂಪನಿಯ ಎಚ್ಆರ್/ಹಣಕಾಸು ಇಲಾಖೆ ಅಥವಾ ಇಪಿಎಫ್ಒ ಇಲಾಖೆಗೆ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು.
2. ಇಪಿಎಫ್ ಅಡಿ ಪಿಂಚಣಿ ಪಡೆಯಬಹುದು
ಇಪಿಎಸ್(employee pension scheme) ಇರುವ ಬಗ್ಗೆ ನಿಮಗೆ ತಿಳಿದಿದೆಯೆ? ಇಪಿಎಫ್ ನಿಮ್ಮ ಪ್ರಾವಿಡೆಂಡ್ ಫಂಡ್ ಗಾಗಿ ಇದ್ದರೆ, ಇಪಿಎಸ್ ನಿಮ್ಮ ಪಿಂಚಣಿಗಾಗಿ ಇರುತ್ತದೆ. ನಿಮ್ಮ ಸ್ಯಾಲರಿಯ ಶೇ. 12ರಷ್ಟು ಭಾಗ ಇಪಿಎಫ್ ಕೊಡುಗೆಯಾಗಿ ಹೋಗುತ್ತದೆ. ಆದರೆ ಶೇ. 12ರಷ್ಟು ಉದ್ಯೋಗದಾತ ನೀಡುವ ಕೊಡುಗೆಯಲ್ಲಿ ಶೇ. 8.33ರಷ್ಟು ಮೊತ್ತ ನಿಮ್ಮ ಇಪಿಎಸ್ ಗೆ(ಗರಿಷ್ಠ ರೂ. 1250) ಹೋಗುತ್ತದೆ. ಉಳಿದ ಮೊತ್ತ ಇಪಿಎಫ್ ಗೆ ಸೇರ್ಪಡೆಯಾಗುತ್ತದೆ. ಆದರೆ ಕೆಲ ನಿಯಮಗಳು ಅನ್ವಯವಾಗುತ್ತವೆ.
1. 58 ವರ್ಷ ಮುಗಿಸಿದರೆ ಮಾತ್ರ ಪಿಂಚಣಿಗೆ ಭಾಜನರಾಗುತ್ತಾರೆ.
2. ಇನ್ನೊಂದು ನಿಯಮಾನುಸಾರ 10 ವರ್ಷ ಸೇವೆ ಸಲ್ಲಿಸಿದರೆ ಮಾತ್ರ ಪಿಂಚಣಿ ಪಡೆಯಬಹುದು. (ಒಂದಕ್ಕಿಂತ ಹೆಚ್ಚು ಕಂಪನಿಗಳನ್ನು ಬದಲಾಯಿಸಿದರೆ ಇಪಿಎಫ್ ವರ್ಗಾಯಿಸಲಾಗುತ್ತದೆ. ವಿತ್ ಡ್ರಾ ಮಾಡಲಾಗುವುದಿಲ್ಲ)
3. ಕನಿಷ್ಟ ಪಿಂಚಣಿ ಪ್ರತಿ ತಿಂಗಳಿಗೆ ರೂ. 1,000
4. ಗರಿಷ್ಠ ಪಿಂಚಣಿ ಪ್ರತಿ ತಿಂಗಳಿಗೆ ರೂ. 3,250
5. ಜೀವನ ಪರ್ಯಂತ ಪಿಂಚಣಿ ಲಭ್ಯವಿರುತ್ತದೆ. ಮರಣ ಹೊಂದಲ್ಲಿ ಕುಟುಂಬದ ಸದಸ್ಯರಿಗೆ ಪಿಂಚಣಿ ಸೇರುತ್ತದೆ.
3. ಇಪಿಎಸ್ ಮೇಲೆ ಬಡ್ಡಿದರ ಇಲ್ಲ
ನಿಮ್ಮ ಕೊಡುಗೆ ಮತ್ತು ಉದ್ಯೋಗದಾತರ ಕೊಡುಗೆ(ಇಪಿಎಸ್) ಮೇಲೆ ಪ್ರತಿ ವರ್ಷ ಕಂಪೌಂಡ್ ಬಡ್ಡಿದರ ಪಡೆಯುತ್ತಿರಿ ಎಂದುಕೊಂಡಿರುತ್ತಿರಿ. ಆದರೆ ವಾಸ್ತವದಲ್ಲಿ ನಿಮಗೆ ಬಡ್ಡಿದರ ಸಿಗುವುದಿಲ್ಲ. ಇಪಿಎಫ್ ಭಾಗವಾಗಿ ಕಂಪೌಂಡ್ ಬಡ್ಡಿದರ ಮಾತ್ರ ಸಿಗುತ್ತದೆ. ಇಪಿಎಸ್ ಮೇಲೆ ಯಾವುದೇ ರೀತಿಯ ಬಡ್ಡಿದರ ಲಭ್ಯವಿರುವುದಿಲ್ಲ. ಪಿಎಫ್ ವಿತ್ ಡ್ರಾವಲ್ ಸಂದರ್ಭದಲ್ಲಿ ಇಪಿಎಫ್ ಮತ್ತು ಇಪಿಎಸ್ ಎರಡು ಪಡೆಯುತ್ತಿರಿ.
4. ಪಿಎಫ್ ನಲ್ಲಿ ಹೆಚ್ಚು ಹೂಡಿಕೆ ಮಾಡಬಹುದು
ನೀವು ಬೆಸಿಕ್ ಸ್ಯಾಲರಿಯಲ್ಲಿ ಶೇ. 12ಕ್ಕಿಂತ ಹೆಚ್ಚಿನ ಮೊತ್ತವನ್ನು ಇಪಿಎಫ್ ನಲ್ಲಿ ಹೂಡಿಕೆ ಮಾಡಬಹುದು ಇದನ್ನೇ ವಿಪಿಎಫ್(voluntary provident fund) ಎಂದು ಕರೆಯಲಾಗುತ್ತದೆ. ನೀವೂ ಹೂಡುವ ಹೆಚ್ಚಿನ ಮೊತ್ತದ ಮೇಲೆ ಬಡ್ಡಿದರ ಪಡೆಯುತ್ತಿರುತ್ತಿರಿ. ಆದರೆ ಉದ್ಯೋಗದಾತ ನಿಮ್ಮ ಮೂಲ ಸಂಬಳದಲ್ಲಿ ಕೇವಲ ಶೇ. 12ರಷ್ಟು ಮಾತ್ರ ಹೂಡಿಕೆ ಮಾಡುತ್ತಾರೆ. ಅದಕ್ಕಿಂತ ಹೆಚ್ಚು ಮಾಡುವುದಿಲ್ಲ.
5. ಇಪಿಎಫ್ ನಿಂದ ಹೊರಗುಳಿಯಬಹುದು
ಹೌದು..! ಇದು ಹಲವರಿಗೆ ಆಶ್ಚರ್ಯವನ್ನುಂಟು ಮಾಡಬಲ್ಲದು. ನಿಮಗೆ ನಿಮ್ಮ ಮೂಲ ಸಂಬಳದಲ್ಲಿ ಇಪಿಎಫ್ ಕಡಿತವಾಗುವುದು ಬೇಡ ಎಂದುಕೊಂಡರೆ ಯಾವುದೇ ಕಡಿತವಿರದೆ ಸಂಪೂರ್ಣ ಸಂಬಳವನ್ನು ಪಡೆಯಬಹುದು. ಆದರೆ ದುಖದ ಸಂಗತಿಯೆಂದರೆ ಇಪಿಎಫ್ ನಿಂದ ಹೊರಗುಳಿಯ ಬಯಸುವವರು ಕೆಲಸದ ಆರಂಭದಲ್ಲಿ ಇದನ್ನು ಆಯ್ಕೆ ಮಾಡಬೇಕು. ಒಂದು ಬಾರಿ ಇಪಿಎಫ್ ಆಯ್ಕೆ ಮಾಡಿಕೊಂಡರೆ ಅದರಿಂದ ಹೊರಗುಳಿಯುವುದು ಸಾಧ್ಯವಿಲ್ಲ. ಈಗಾಗಲೇ ನೀವು ಇಪಿಎಫ್ ಹೊಂದಿದ್ದರೆ ಇದು ನಿಮಗೆ ಅನ್ವಯಿಸುವುದಿಲ್ಲ. ಆದರೆ ಇಲ್ಲಿಯವರೆಗೆ ನಿಮ್ಮ ಪಿಎಫ್ ಖಾತೆ ಸಂಖ್ಯೆ ಇಲ್ಲದಿದ್ದರೆ ಇಪಿಎಫ್ ಭಾಗವಾಗಿ ಇರುವುದಕ್ಕೆ ಇಷ್ಟವಿಲ್ಲ ಎಂದು ನಿಮ್ಮ ಕಂಪನಿಯವರಿಗೆ ತಿಳಿಸಬಹುದು. ಇದಕ್ಕಾಗಿ ಫಾರ್ಮ್ 11 ನ್ನು ತುಂಬಬೇಕಾಗುತ್ತದೆ.
6. ಇಪಿಎಫ್ ಲೈಫ್ ಇನ್ಸೂರೆನ್ಸ್ ಕೂಡ ಒದಗಿಸುತ್ತದೆ
ಇದು ಹೆಚ್ಚಿನ ನೌಕರರಿಗೆ ತಿಳಿದಿರುವುದಿಲ್ಲ. ಕಂಪನಿ ತನ್ನ ಉದ್ಯೋಗಿಗಳಿಗೆ ಗ್ರೂಪ್ ಲೈಫ್ ಇನ್ಸೂರೆನ್ಸ್ ಕವರ್ ನೀಡದಿದ್ದಲ್ಲಿ, ಇಪಿಎಫ್ ಮೂಲಕ ಸಣ್ಣ ಪ್ರಮಾಣದ ಲೈಫ್ ಕವರ್ ಒದಗಿಸಲಾಗುತ್ತದೆ. ಇದನ್ನು ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್(EDLI) ಯೋಜನೆ ಎನ್ನಲಾಗುತ್ತದೆ. ಈಗಾಗಲೇ ತನ್ನ ಉದ್ಯೋಗಿಗಳಿಗೆ ಲೈಫ್ ಇನ್ಸೂರೆನ್ಸ್ ಸೌಲಭ್ಯ ಒದಗಿಸುವ ಕಂಪನಿಗಳಿಗೆ ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್(EDLI) ಯೋಜನೆಯಿಂದ ವಿನಾಯಿತಿ ನೀಡಲಾಗಿದೆ.
7. ವಿಶೇಷ ಸಂದರ್ಭಗಳಲ್ಲಿ ಇಪಿಎಫ್ ವಿತ್ ಡ್ರಾ ಮಾಡಬಹುದು
ಕೆಲಸ ಮಾಡುವ ಸಂದರ್ಭದಲ್ಲಿ ಇಪಿಎಫ್ ವಿತ್ ಡ್ರಾ ಮಾಡಲು ಆಗದು ಎನ್ನುವುದು ಹಲವರ ಅನಿಸಿಕೆ. ಆದರೆ ಜೀವನದ ಕೆಲ ವಿಶೇಷ ಸಂದರ್ಭಗಳಲ್ಲಿ ಇಪಿಎಫ್ ಮೊತ್ತ ವಿತ್ ಡ್ರಾ ಮಾಡಬಹುದು.
* ಮದುವೆ, ಮಕ್ಕಳ ಶಿಕ್ಷಣ, ಸ್ವಯಂ ಶಿಕ್ಷಣ
* ವೈದ್ಯಕೀಯ ಚಿಕಿತ್ಸೆ(ಸ್ವಂತ, ಹೆಂಡತಿ, ಮಕ್ಕಳ, ಅವಲಂಬಿತ ಪೋಷಕರ)
* ಗೃಹಸಾಲ ತೀರಿಸುವಾಗ ಇಲ್ಲವೇ ಮನೆಯನ್ನು ತನ್ನ, ಹೆಂಡತಿ ಅಥವಾ ಜಂಟಿಯಾಗಿ ಮಾಲೀಕತ್ವ ಮಾಡಿಸಲು
* ಮನೆ ದುರಸ್ಥಿ/ನವೀಕರಣ ಮಾಡಲು
* ತನ್ನ, ಹೆಂಡತಿ ಅಥವಾ ಜಂಟಿ ಮಾಲೀಕತ್ವದಲ್ಲಿ ಮನೆ ಖರೀದಿ/ನಿರ್ಮಾಣ ಮಾಡಲು
8. ಇಪಿಎಫ್ ಸಮಸ್ಯೆಗಳಿಗಾಗಿ ಆರ್ಟಿಐ ಅರ್ಜಿ ಸಲ್ಲಿಸಬಹುದು
ನಿಮ್ಮ ಇಪಿಎಫ್ ಖಾತೆಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಪಡೆಯಲು ಆರ್ಟಿಐ ಅರ್ಜಿ ಸಲ್ಲಿಸಬಹುದು ಎಂಬುದನ್ನು ಮರೆಯಬೇಡಿ. ಇಪಿಎಫ್ ಬ್ಯಾಲೆನ್ಸ್, ಇಪಿಎಫ್ ವಿತ್ ಡ್ರಾವಲ್ ಅಥವಾ ವರ್ಗಾವಣೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಆರ್ಟಿಐ ಅರ್ಜಿ ಸಲ್ಲಿಸಬಹುದು.


Click it and Unblock the Notifications