ಮದುವೆ ಎಂಬುದು ಜೀವನದಲ್ಲಿ ಅಪೂರ್ವವಾದ ಅನುಬಂಧವಾಗಿದೆ. ಜೀವನದಲ್ಲಿ ಜೊತೆಯಾಗಿರುವುದು, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಭಾವನಾತ್ಮಕವಾಗಿ ಬೆಂಬಲಿಸುವುದು, ಜೊತೆಗೆ ಹಣ ಸಂಪಾದಿಸಿ ಶ್ರೀಮಂತರಾಗುವುದು.
ಮದುವೆ ಎಂಬುದು ಜೀವನದಲ್ಲಿ ಅಪೂರ್ವವಾದ ಅನುಬಂಧವಾಗಿದೆ. ಜೀವನದಲ್ಲಿ ಜೊತೆಯಾಗಿರುವುದು, ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಭಾವನಾತ್ಮಕವಾಗಿ ಬೆಂಬಲಿಸುವುದು, ಜೊತೆಗೆ ಹಣ ಸಂಪಾದಿಸಿ ಶ್ರೀಮಂತರಾಗುವುದು, ಹಾಗೆಯೇ ಜೊತೆಯಲ್ಲಿದ್ದುಕೊಂಡೇ ವೃದ್ಧಾಪ್ಯ ತಲುಪುವುದು ಹೀಗೆ ಎಲ್ಲವೂ ನಡೆಯುತ್ತವೆ. ಇದೆಲ್ಲದರ ಜೊತೆಗೆ ಒಬ್ಬರಿಗೊಬ್ಬರು ಹಣಕಾಸು ಸಹಾಯ ಮಾಡುತ್ತಾ, ಕುಟುಂಬದ ಹಣಕಾಸು ಅಗತ್ಯತೆಯ ಗುರಿಯನ್ನು ಸಾಧಿಸುವುದು ಕೂಡ ಅತಿ ಪ್ರಮುಖ ಅಂಶವಾಗಿದೆ.
ಆದರೆ ಸಾಮಾನ್ಯವಾಗಿ ನವ ದಂಪತಿಗಳು ತಮ್ಮ ಭವಿಷ್ಯದ ಹಣಕಾಸು ಜೀವನದ ಬಗ್ಗೆ ಯಾವುದೇ ಯೋಜನೆಗಳನ್ನು ಮಾತ್ರ ಹಾಕಿಕೊಳ್ಳುವುದೇ ಇಲ್ಲ. ಈ ವಿಷಯದ ಬಗ್ಗೆ ಎಲ್ಲರಿಗೂ ಒಂದು ರೀತಿಯ ತಾತ್ಸಾರ ಕಂಡು ಬರುತ್ತದೆ.
ಜೊತೆಯಾಗಿ ತಮ್ಮ ಸುಂದರ ಜೀವನ ಕಟ್ಟಿಕೊಳ್ಳುವ ಕಾಲಾವಧಿಯಲ್ಲಿ ಹಣಕಾಸು ನಿರ್ವಹಣೆ ಹಾಗೂ ಗಳಿಕೆ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದು ನವ ದಂಪತಿಗಳಿಗೆ ಕಾಲಾನುವಧಿಯಲ್ಲಿ ಅರಿವಿಗೆ ಬರುತ್ತದೆ. ಎಕನಾಮಿಕ್ ಟೈಮ್ಸ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, 2015 ರಿಂದ ಈಚೆ ಖರ್ಚು ಮಾಡುವ ಪ್ರವೃತ್ತಿಯಿಂದ ಸಂಸಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗುತ್ತಿವೆ ಎಂದು ತಿಳಿದು ಬಂದಿದೆ. ಸಮೀಕ್ಷೆ ನಡೆಸಲಾದ 1849 ಜನರಲ್ಲಿ ಶೇ. 26 ರಷ್ಟು ಜನ ಹಣಕಾಸಿನ ಕುರಿತು ತಮ್ಮ ಸಂಸಾರದಲ್ಲಿ ಜಟಾಪಟಿ ನಡೆದಿವೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಸಂಸಾರ ನೌಕೆ ಸುಗಮವಾಗಿ ಸಾಗಬೇಕಾದರೆ ಹಣಕಾಸು ನಿರ್ವಹಣೆಯ ಯೋಜನೆ ಸೂಕ್ತವಾಗಿರಬೇಕು ಎಂಬುದು ತಿಳಿದು ಬರುತ್ತದೆ. ದಂಪತಿಗಳಿಗೆ ಹಾಗು ಮದುವೆ ಆಗುವವರಿಗಾಗಿ ಈ ಲೇಖನ. ತಪ್ಪದೇ ಓದಿ..
ಹಣಕಾಸು ಸಮರ್ಪಕ ನಿರ್ವಹಣೆಗೆ ನವದಂಪತಿಗಳು ಏನು ಮಾಡಬೇಕೆಂಬುದರ ಬಗ್ಗೆ ಕೆಲ ಪ್ರಮುಖ ಟಿಪ್ಸ್‌ಗಳು ಹೀಗಿವೆ:
1. ಹಣಕಾಸು ಗುರಿ ನಿರ್ಧರಿಸಿ
ನಿಮ್ಮ ಹಣಕಾಸು ಗುರಿ ಹಾಗೂ ಯೋಜನೆಗಳ ಕುರಿತು ಸಂಗಾತಿಯೊಂದಿಗೆ ಚರ್ಚಿಸಿ. ಜೀವನಶೈಲಿಯಲ್ಲಿ ಬದಲಾವಣೆ, ನಿಮ್ಮ ಆಕಾಂಕ್ಷೆಗಳು, ಮುಖ್ಯ ಹೂಡಿಕೆಗಳು (ಕಾರು ಅಥವಾ ಮನೆ), ವಿದೇಶ ಪ್ರವಾಸ, ಸ್ಥಳ ಬದಲಾವಣೆ ಮುಂತಾದ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಅಗತ್ಯ.
2. ಹಣಕಾಸಿನ ಮೇಲೆ ನಿಗಾ ಇರಲಿ
ಸಂಗಾತಿಗಳಿಬ್ಬರ ಒಟ್ಟು ಆದಾಯ ಹಾಗೂ ಖರ್ಚಿನ ಮೇಲೆ ಕೆಲ ತಿಂಗಳುಗಳವರೆಗೆ ನಿಗಾ ವಹಿಸಿ ಹಣ ಎಲ್ಲಿ ಹೋಗುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಹಣದ ಹೊರಹರಿವು ಹಾಗೂ ನಿಶ್ಚಿತ ಖರ್ಚುಗಳ ಬಗ್ಗೆ ಒಂದು ಪಟ್ಟಿ ತಯಾರಿಸಿ. ಜೊತೆಗೆ ಸಂಸಾರ ಸಾಗಿಸಲು ಖರ್ಚಾಗುತ್ತಿರುವ ಹಣ ಎಷ್ಟೆಂದು ಲೆಕ್ಕ ಹಾಕಿ. ಇದನ್ನು ಮಾಡಲು ಈಗ ಸ್ಮಾರ್ಟ್ ಪೋನ್‌ನಲ್ಲಿ ಆಪ್‌ಗಳಿದ್ದು, ಇವುಗಳನ್ನು ಬಳಸಬಹುದು. Expensify, MyUniverse ಮುಂತಾದ ಆಪ್‌ಗಳು ಸಹಾಯ ಮಾಡಬಲ್ಲವು.
3. ಬಜೆಟ್ ನಿರ್ಧರಿಸಿ
ನಿಮ್ಮ ಹಣಕಾಸಿನ ಗುರಿಯ ದೂರದೃಷ್ಟಿಯೊಂದಿಗೆ ಮನೆ ಖರ್ಚಿನ ಸಮಗ್ರ ಬಜೆಟ್ ತಯಾರಿಸಿಕೊಳ್ಳಿ. ನಿಮಗೆ ಬರಬಹುದಾದ ಆದಾಯವನ್ನು ಗಣನೆಗೆ ತೆಗೆದುಕೊಂಡು, ಅದನ್ನು ಎಷ್ಟು ಮಿತವಾಗಿ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ. ಜೀವನೋಪಾಯಕ್ಕೆ ನಿಶ್ಚಿತ (ಕಾಲಾವಧಿಯಲ್ಲಿ ಹೆಚ್ಚಾಗುವ) ನಿಧಿ, ತುರ್ತು ನಿಧಿ, ಹೂಡಿಕೆಗಳು, ವಿಮೆ ಹಾಗೂ ಉಳಿತಾಯಕ್ಕೆ ಹಣ ಮೀಸಲಿಡಿ.
4. ಅಕೌಂಟ್ ತಯಾರಿಸಿ
ವಿವಾಹವಾದ ನಂತರ ನೀವು ನಿಮ್ಮ ಸಂಗಾತಿಯೊಂದಿಗೆ ಬ್ಯಾಂಕ್‌ನಲ್ಲಿ ಜಂಟಿ ಖಾತೆ ತೆರೆಯಬಹುದು. ಈ ಜಂಟಿ ಖಾತೆಗೆ ಪ್ರತಿ ತಿಂಗಳು ಎಷ್ಟು ಹಣವನ್ನು ಹಾಕಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಇಬ್ಬರೂ ಆರ್ಥಿಕವಾಗಿ ಸ್ವತಂತ್ರರಾಗಿರಲು ವೈಯಕ್ತಿಕ ಖಾತೆಗಳೂ ಅವಶ್ಯ. ಮನೆ ಖರ್ಚಿಗೆ ಜಂಟಿ ಖಾತೆಯಿಂದ ಹಾಗೂ ಸ್ವಂತ ಖರ್ಚಿಗೆ ವೈಯಕ್ತಿಕ ಖಾತೆಯಿಂದ ಹಣ ಖರ್ಚು ಮಾಡಲು ಆರಂಭಿಸಿ. ಖಾತೆ ತೆರೆಯುವಾಗ 'ಇಬ್ಬರೂ ಅಥವಾ ಜೀವಿತವಿರುವವರು' ನಿರ್ವಹಿಸುವಂತೆ ಆಪ್ಷನ್ ಇಟ್ಟುಕೊಳ್ಳಿ.
5. ರಿಟೈರ್‌ಮೆಂಟ್ ಫಂಡ್
ನಿವೃತ್ತ ಜೀವನಕ್ಕೆ ಬೇಕಾಗಬಹುದಾದ ಹಣಕಾಸಿನ ಬಗ್ಗೆ ಯೋಜನೆ ತಯಾರಿಸಿ. ರಿಟೈರ್‌ಮೆಂಟ್ ಪ್ಲ್ಯಾನಿಂಗ್ ಕ್ಯಾಲ್ಕುಲೇಟರ್ ಮೂಲಕ ನಿವೃತ್ತ ಜೀವನಕ್ಕೆ ಬೇಕಾಗಬಹುದಾದ ಹಣವೆಷ್ಟು ಹಾಗೂ ಅದಕ್ಕಾಗಿ ಎಷ್ಟು ಹಣ ತೊಡಗಿಸಬೇಕೆ ಎಂಬುದನ್ನು ಲೆಕ್ಕ ಹಾಕಿಟ್ಟುಕೊಳ್ಳಿ. ಇದರನ್ವಯ ಪ್ರತಿ ತಿಂಗಳು ನಿವೃತ್ತಿ ನಿಧಿಗೆ ನಿಶ್ಚಿತ ಮೊತ್ತವನ್ನು ಸಂದಾಯ ಮಾಡಿ.
6. ತುರ್ತು ನಿಧಿ
ದುಡಿಮೆಯ ಕೆಲ ಭಾಗವನ್ನು ತುರ್ತು ನಿಧಿಯಾಗಿ ಮೀಸಲಿಡುವುದು ಅಗತ್ಯ. ನಿಮ್ಮ ತಿಂಗಳ ಸರಾಸರಿ ಖರ್ಚಿನ ಮೂರು ಪಟ್ಟಿನಷ್ಟು ಮೊತ್ತವನ್ನು ಇದಕ್ಕಾಗಿ ತೆಗೆದಿಡಿ. ಆದರೆ ಅನಾರೋಗ್ಯ ಹಾಗೂ ಇನ್ನಿತರೆ ತುರ್ತು ಸ್ಥಿತಿ ಹೊರತು ಪಡಿಸಿ ಮತ್ತಾವುದೇ ಸಂದರ್ಭದಲ್ಲಿ ಈ ಮೊತ್ತವನ್ನು ಖರ್ಚು ಮಾಡುವುದು ಬೇಡ. ಈ ನಿಧಿ ಕ್ಯಾಶ್ ರೂಪದಲ್ಲಿ ಅಥವಾ ತಕ್ಷಣ ನಗದೀಕರಿಸಿಕೊಳ್ಳಬಹುದಾದ ರೂಪದಲ್ಲಿರಬೇಕು ಎಂಬುದು ಗಮನದಲ್ಲಿರಲಿ.
7. ಉಳಿತಾಯ ಹಾಗೂ ಹೂಡಿಕೆಗಳು
ಹಣ ಉಳಿತಾಯ ಮಾಡುವುದು ಯಾವಾಗಲೂ ಜಾಣತನದ ಕೆಲಸ ನಿಜ. ಆದರೆ ಉಳಿತಾಯದ ಹಣ ನಿಮಗಾಗಿ ದುಡಿಯುವಂತೆ ಮಾಡದಿದ್ದರೆ ಪ್ರಯೋಜನವಿಲ್ಲ. ಹಣದುಬ್ಬರವನ್ನು ಮೀರಿಸಿ ಆದಾಯ ಬರುವಂತ ದೀರ್ಘಾವಧಿ ಹಾಗೂ ಯೋಜನಾ ಬದ್ಧವಾದ ಯೋಜನೆಗಳಲ್ಲಿ ಹಣ ತೊಡಗಿಸುವುದು ಸೂಕ್ತ. ಇಕ್ವಿಟಿ ಆಧಾರಿತ ಮ್ಯುಚುವಲ್ ಫಂಡ್‌ಗಳು, ಯುನಿಟ್ ಲಿಂಕ್ಡ್ ಇನ್ಸೂರೆನ್ಸ್ ಯೋಜನೆಗಳು ಇದಕ್ಕಾಗಿ ಸೂಕ್ತವಾಗಿವೆ.
8. ನಾಮಿನಿ ವಿವರಗಳನ್ನು ಅಪ್‌ಡೇಟ್ ಮಾಡಿ
ನಿಮ್ಮ ಹೂಡಿಕೆಗಳು, ಇನ್ಸೂರೆನ್ಸ್ ಹಾಗೂ ಇನ್ನಿತರ ಹಣಕಾಸು ಸಂಬಂಧಿತ ದಾಖಲೆಗಳಲ್ಲಿ ನಿಮ್ಮ ಸಂಗಾತಿಯನ್ನು ಜಂಟಿ ಮಾಲೀಕರಾಗಿ ಅಥವಾ ನಾಮಿನಿಯಾಗಿ ವಿವರಗಳನ್ನು ಅಪ್‌ಡೇಟ್ ಮಾಡಿಸಿಕೊಳ್ಳಿ.
9. ಇನ್ಸೂರೆನ್ಸ್
ವೃತ್ತಿ ಜೀವನದ ಆರಂಭದಲ್ಲಿಯೇ ವಿಮೆ ಮಾಡಿಸುವುದು ಲಾಭದಾಯಕ. ಸಂಗಾತಿಗಳಿಬ್ಬರೂ ಅಥವಾ ಒಬ್ಬರೇ ಗಳಿಸುತ್ತಿದ್ದರೂ ವಿಮೆ ಮಾತ್ರ ಇಬ್ಬರ ಹೆಸರಿನಲ್ಲಿಯೂ ಇರಲೇಬೇಕು. ನಿಮ್ಮ ಹಣಕಾಸು ಸ್ಥಿತಿ ಹಾಗೂ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ವಿಮಾ ಯೋಜನೆಯನ್ನು ಆಯ್ದುಕೊಳ್ಳಿ.
ಸೂಕ್ತ ಹಣಕಾಸು ಯೋಜನೆ ರೂಪಿಸಿ, ಮಿತವ್ಯಯದಿಂದ ಖರ್ಚು ಮಾಡಿ ಹಾಗೂ ಉಳಿತಾಯ ಮಾಡಿ ಆನಂದವಾಗಿರಿ..


Click it and Unblock the Notifications