ನಿಮ್ಮ ನಿವೃತ್ತ ಜೀವನಕ್ಕಾಗಿ ಯೋಜನೆ ಹೀಗಿರಲಿ

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ನಿವೃತ್ತಿಯ ನಂತರದ ಜೀವನದ ಬಗ್ಗೆ ಯೋಜನೆ ರೂಪಿಸುವುದು ಜೀವನದ ಅಗತ್ಯಗಳಲ್ಲೊಂದಾಗಿದೆ. ಆದಷ್ಟು ಬೇಗ ನಿವೃತ್ತಿ ಜೀವನದ ಯೋಜನೆ ತಯಾರಿಸಿದಲ್ಲಿ ಅದಕ್ಕೆ ತಕ್ಕಂತೆ ಹಣದ ಉಳಿತಾಯ ಹಾಗೂ ಹೂಡಿಕೆಯನ್ನು ಆರಂಭಿಸಬಹುದು. ಇದು ನಿವೃತ್ತಿಯ ನಂತರದ ಜೀವನೋಪಾಯಕ್ಕೆ ಭದ್ರ ಅಡಿಪಾಯ ಹಾಕಬಲ್ಲದು.

  20ನೇ ವಯೋಮಾನದ ಆರಂಭಿಕ ವರ್ಷಗಳಲ್ಲಿಯೇ ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಆರಂಭಿಸುವುದು ಸೂಕ್ತ. ಇದರಿಂದ ಸುಖಕರ ನಿವೃತ್ತಿ ಜೀವನಕ್ಕೆ ಬೇಕಾಗುವಷ್ಟು ಹಣವನ್ನು ಸುಲಭವಾಗಿ ಒಟ್ಟುಗೂಡಿಸಲು ಸಾಕಷ್ಟು ಸಮಯಾವಕಾಶ ದೊರಕುತ್ತದೆ. ಇತ್ತೀಚೆಗೆ ಎಚ್‌ಎಸ್‌ಬಿಸಿ ಬ್ಯಾಂಕ್ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಕೇವಲ ಶೇ. 33 ರಷ್ಟು ಭಾರತೀಯರು ಮಾತ್ರ ನಿವೃತ್ತಿ ಜೀವನಕ್ಕಾಗಿ ನಿಯಮಿತವಾಗಿ ಉಳಿತಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

  ಆದಷ್ಟು ಬೇಗನೆ ಉಳಿತಾಯ ಆರಂಭಿಸುವುದು ಹಾಗೂ ನಿಯಮಿತವಾಗಿ ಉಳಿತಾಯ ಮಾಡುವುದರಿಂದ ದೊಡ್ಡ ಮೊತ್ತದ ರಿಟೈರಮೆಂಟ್ ಫಂಡ್ ಕೂಡಿಸಲು ಸಾಧ್ಯವಿದೆ. ಬೇಗನೆ ಉಳಿತಾಯ ಆರಂಭಿಸಿದಲ್ಲಿ, ಕಾಲಾವಧಿಯಲ್ಲಿ ಹಣ ದ್ವಿಗುಣಗೊಳ್ಳುತ್ತ ಬೃಹತ್ ಮೊತ್ತ ಸಂಗ್ರಹವಾಗುತ್ತದೆ. ನಿವೃತ್ತ ಜೀವನದ ಬಗ್ಗೆ ಯೋಜನೆ ತಯಾರಿಸುವಾಗ ಯಾವ ಅಂಶಗಳನ್ನು ಗಮನಿಸಬೇಕು, ಯಾವ ವಿಷಯಗಳನ್ನು ಮಾಡದಿದ್ದರೆ ಕ್ಷೇಮ ಎಂಬುದನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!

   

  ರಿಟೈರಮೆಂಟ್ ಪ್ಲ್ಯಾನಿಂಗ್ ಮಾಡುವಾಗ ಈ 7 ಅಂಶಗಳನ್ನು ಅವಶ್ಯವಾಗಿ ಗಮನಿಸಿ..

  ಹಣದುಬ್ಬರದ ಕಡೆಗಣನೆ

  ದೊಡ್ಡ ಮೊತ್ತದ ರಿಟೈರಮೆಂಟ್ ಫಂಡ್ ಅನ್ನು ಕೂಡಿಸಲು ನೀವು ಯೋಜನೆ ಹಾಕಿಕೊಂಡಿದ್ದರೆ ಹಣದುಬ್ಬರದ ಅಂಶವನ್ನು ಮಾತ್ರ ಕಡೆಗಣಿಸಬೇಡಿ. ಹಣದುಬ್ಬರದ ಅಂಶವನ್ನು ಗಣನೆಗೆ ತೆಗೆದುಕೊಳ್ಳದೆ ಉಳಿತಾಯ ಮಾಡುತ್ತ ಹೋದಲ್ಲಿ, ವಾಸ್ತವ ಅವಶ್ಯಕತೆಗಿಂತ ಕಡಿಮೆ ಹಣವನ್ನು ನೀವು ಸಂಗ್ರಹಿಸುವ ಸಾಧ್ಯತೆ ಇದೆ. ಇದರಿಂದ ಮುಪ್ಪಿನ ಕಾಲದಲ್ಲಿ ಬೇರೆಯವರ ಮೇಲೆ ಅವಲಂಬನೆಯಾಗುವ ಪರಿಸ್ಥಿತಿಯೂ ಎದುರಾಗಬಹುದು.
  ಆಗಾಗ ಹೆಚ್ಚಾಗುವ ಹಣದುಬ್ಬರದಿಂದ ಪ್ರತಿ ತಿಂಗಳು ಜೀವನ ನಡೆಸಲು ಬೇಕಾಗುವ ಖರ್ಚು ಸಹ ಹೆಚ್ಚಳವಾಗುತ್ತಿರುತ್ತದೆ. ಅಂದರೆ ಈಗ ನೀವು ಪ್ರತಿ ತಿಂಗಳು ಜೀವನಕ್ಕೆ ಖರ್ಚು ಮಾಡುತ್ತಿರುವುದಕ್ಕಿಂತ ಹೆಚ್ಚು ಹಣವನ್ನು ಭವಿಷ್ಯದಲ್ಲಿ ಖರ್ಚು ಮಾಡಬೇಕಾಗುತ್ತದೆ ಎಂಬುದು ಗೊತ್ತಿರಲಿ. ಹೀಗಾಗಿ ಹಣದುಬ್ಬರದ ಅಂಶವನ್ನು ಲೆಕ್ಕ ಹಾಕಿಯೇ ರಿಟೈರಮೆಂಟ್ ಪ್ಲ್ಯಾನ್ ಮಾಡಿ.

  ಹೂಡಿಕೆಯ ಆಯ್ಕೆ

  ನಿವೃತ್ತ ಜೀವನಕ್ಕಾಗಿ ಹೂಡಿಕೆ ಮಾಡುವುದಾದರೆ ಬೇರೆ ಬೇರೆ ವಿಧಾನಗಳನ್ನು ಹೂಡಿಕೆ ಮಾಡಬೇಕು. ಇದರಿಂದ ರಿಸ್ಕ್ ಕಡಿಮೆಯಾಗುತ್ತದೆ. ಒಂದೇ ಕಡೆ ಹೂಡಿಕೆ ಮಾಡಿದಲ್ಲಿ ಹಣ ಕಳೆದುಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ. ಹಲವಾರು ಕಡೆ ಹೂಡಿಕೆ ಮಾಡಿದಾಗ ಎಲ್ಲ ಕಡೆಗೂ ನಷ್ಟ ಸಂಭವಿಸುವ ಸಾಧ್ಯತೆಗಳು ಕಡಿಮೆ. ಆದರೂ ತೀರಾ ಹೆಚ್ಚು ವಿಧಾನಗಳಲ್ಲಿ ಹೂಡಿಕೆ ಮಾಡುವುದು ಬೇಡ.

   

  ವಿಶ್ಲೇಷಣೆ

  ಹೂಡಿಕೆ ಮಾಡಿದ ಯಾವುದೋ ಯೋಜನೆ ಕಳೆದ ೨ ವರ್ಷಕ್ಕಿಂತಲೂ ಹೆಚ್ಚು ಕಾಲ ನಷ್ಟದಲ್ಲಿ ನಡೆಯುತ್ತಿದೆ ಎಂದಾಗ ಎಚ್ಚರಗೊಳ್ಳುವುದು ಅಗತ್ಯ. ಆದಷ್ಟು ಬೇಗ ಆ ಹೂಡಿಕೆಯನ್ನು ಬೇರೆಡೆ ವರ್ಗಾಯಿಸಬೇಕು. ಅಂದರೆ ನಿವೃತ್ತ ಜೀವನಕ್ಕೆ ಮಾಡಿದ ಹೂಡಿಕೆಯನ್ನು ಆಗಾಗ ಪರಿಶೀಲಿಸುತ್ತಿರಬೇಕು. ನಷ್ಟವಾಗುತ್ತಿದ್ದರೆ ತಕ್ಷಣ ಹೂಡಿಕೆಯ ವಿಧಾನವನ್ನು ಬದಲಾಯಿಸಬೇಕು. ಕೆಲವೊಮ್ಮೆ ಹೂಡಿಕೆಗೆ ಉತ್ತಮ ಆದಾಯ ಬರುತ್ತಿರುವಾಗ ಏಕಾಏಕಿ ನಷ್ಟ ಆರಂಭವಾಗುತ್ತದೆ. ಹೀಗಾದಾಗ ಆತಂಕ ಪಡಬೇಡಿ. ಸ್ವಲ್ಪ ತಾಳ್ಮೆಯಿಂದ ಕಾದು ನೋಡಿ.

  ತಕ್ಷಣದ ಖರ್ಚಿಗೆ ಸಿಗದಂತಿರಲಿ

  ನಿವೃತ್ತ ಜೀವನಕ್ಕೆ ಉಳಿತಾಯ ಮಾಡುತ್ತಿರುವ ಹಣ ದೈನಂದಿನ ಖರ್ಚು ವೆಚ್ಚಗಳಿಗೆ ಸಿಗದಂತಿರಬೇಕು. ಕಾರು ಕೊಳ್ಳುವುದು, ಮದುವೆ ಮಾಡುವುದು ಹೀಗೆ ಯಾವುದೋ ಖರ್ಚಿಗೆ ಈ ಹಣ ಬಳಕೆಗೆ ಸಿಗದಂತೆ ಸುಭದ್ರವಾಗಿರಿಸಬೇಕು. ಹೀಗಾಗಿ ದೀರ್ಘಾವಧಿ ಲಾಕ್ ಇನ್ ಅವಧಿ ಹೊಂದಿರುವ ಪಿಪಿಎಫ್, ಎಫ್‌ಡಿ, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ರಿಟೈರಮೆಂಟ್ ಫಂಡ್ ತಕ್ಷಣ ಕೈಗೆ ಸಿಗದಂತಿದ್ದರೆ ಕ್ಷೇಮ. ನಿವೃತ್ತ ಜೀವನಕ್ಕಾಗಿ ದೊಡ್ಡ ಮೊತ್ತವನ್ನು ಸಂಗ್ರಹಿಸಲು ಇದು ನೆರವಾಗುವುದು.

  ಸಾಲ

  ನೌಕರಿ ಮಾಡುತ್ತ ಕೌಟುಂಬಿಕ ಜೀವನ ನಡೆಸುವ ಸಂದರ್ಭದಲ್ಲಿ ಬಹುತೇಕ ಎಲ್ಲರೂ ಒಂದಿಲ್ಲೊಂದು ರೀತಿಯ ಸಾಲ ಪಡೆದುಕೊಂಡಿರುತ್ತಾರೆ. ಮನೆ ಸಾಲ, ಕಾರು ಸಾಲ, ಶಿಕ್ಷಣ ಸಾಲ ಮುಂತಾದ ರೀತಿಯ ಸಾಲಗಳನ್ನು ಪಡೆದು ಕಂತು ಕಟ್ಟುತ್ತಿರುತ್ತಾರೆ. ಆದರೆ ನಿವೃತ್ತಿಗಿಂತ ಮೊದಲೇ ಇಂಥ ಎಲ್ಲ ಸಾಲಗಳನ್ನು ತೀರಿಸಿಬಿಡಬೇಕು. ಒಂದು ವೇಳೆ ಈ ಸಾಲಗಳು ನಿವೃತ್ತಿಯ ನಂತರವೂ ಮುಂದುವರೆದಲ್ಲಿ ನಮ್ಮ ಉಳಿತಾಯದ ಹಣ ಇವುಗಳಿಗೆ ವ್ಯಯವಾಗಿಬಿಡುತ್ತದೆ. ಇದರಿಂದ ನಿವೃತ್ತಿಯ ನಂತರ ಜೀವನ ಆರ್ಥಿಕ ಅಭದ್ರತೆಗೆ ಸಿಲುಕುವ ಅಪಾಯವಿರುತ್ತದೆ. ಹಾಗಾಗಿ ಎಲ್ಲ ಸಾಲಗಳ ಕಂತುಗಳನ್ನು ಸಕಾಲಕ್ಕೆ ಪಾವತಿ ಮಾಡುತ್ತ, ನಿವೃತ್ತಿಗೆ ಮುನ್ನವೇ ಸಾಲಮುಕ್ತರಾಗುವಂತೆ ಯೋಜನೆ ರೂಪಿಸಿಕೊಳ್ಳಿ.

  ಅವಧಿ

  ನಿವೃತ್ತ ಜೀವನದ ಯೋಜನೆಯನ್ನು ಆದಷ್ಟು ಬೇಗ ಆರಂಭಿಸಬೇಕು. ಕಾಲಾವಧಿ ಹೆಚ್ಚಾಗಿದ್ದರೆ ಮಾತ್ರ ಹಣ ಸಂಯೋಜನೆಯ ಶಕ್ತಿ ಕೆಲಸ ಮಾಡುತ್ತದೆ. ಅಂದರೆ ಹೂಡಿಕೆ ಮಾಡಿದ ಹಣ ದ್ವಿಗುಣಗೊಳ್ಳುತ್ತ ದೊಡ್ಡ ಮೊತ್ತವಾಗಲು ಸಹಕಾರಿಯಾಗುತ್ತದೆ. ೨೦ನೇ ವಯೋಮಾನದಿಂದ ಪ್ರತಿತಿಂಗಳು 5 ಸಾವಿರ ರೂ. ಉಳಿಸುವುದು ಹಾಗೂ 35ನೇ ವರ್ಷದಿಂದ ತಿಂಗಳಿಗೆ 15 ಸಾವಿರ ರೂ. ಉಳಿಸುವುದು ಬೇರೆ ಬೇರೆಯಾಗಿವೆ. 35ನೇ ವರ್ಷದಿಂದ ತಿಂಗಳಿಗೆ 15 ಸಾವಿರ ರೂ. ಉಳಿಸಿದರೂ 20ನೇ ವರ್ಷದಿಂದ 5 ಸಾವಿರ ರೂ. ಉಳಿಸುವುದಕ್ಕೆ ಸಮನಾಗಲಾರದು. ಅಂದರೆ ಕಾಲಾವಧಿ ಕಡಿಮೆ ಸಿಗುವುದರಿಂದ ಹಣದ ಸಂಯೋಜನೆ ಸಾಧ್ಯವಾಗುವುದಿಲ್ಲ.

  ವೆಚ್ಚಗಳು

  ವಯಸ್ಸಾದಂತೆ ಮನುಷ್ಯನ ಆರೋಗ್ಯ ಕ್ಷೀಣಿಸುತ್ತ ಬರುತ್ತದೆ. ಹೀಗಾಗಿ ನಿವೃತ್ತಿಯ ನಂತರದ ಜೀವನದಲ್ಲಿ ವೈದ್ಯಕೀಯ ವೆಚ್ಚಗಳು ಅಧಿಕವಾಗುತ್ತವೆ. ರಿಟೈರಮೆಂಟ್ ಪ್ಲ್ಯಾನ್ ಮಾಡುವಾಗ ಈ ಅಂಶವನ್ನು ಕಡೆಗಣಿಸಬೇಡಿ. ಪ್ರಸ್ತುತ ಇರುವ ವೈದ್ಯಕೀಯ ವೆಚ್ಚಗಳು ಹಾಗೂ ಹಣದುಬ್ಬರ ಎರಡನ್ನೂ ಲೆಕ್ಕ ಹಾಕಿ ನಿವೃತ್ತ ಜೀವನದ ಯೋಜನೆ ರೂಪಿಸಿ. ಇದರಿಂದ ನಿಮ್ಮೆಲ್ಲ ಉಳಿತಾಯ ವೈದ್ಯಕೀಯ ವೆಚ್ಚಕ್ಕೆ ಖರ್ಚಾಗಿ ಹೋಗದಂತೆ ತಡೆಯಬಹುದು. ಬಹುತೇಕ ಎಲ್ಲ ವೈದ್ಯಕೀಯ ಚಿಕಿತ್ಸೆಗೂ ಕವರೇಜ್ ನೀಡಬಲ್ಲ ಒಳ್ಳೆಯ ಹೆಲ್ಥ ಇನ್ಸುರೆನ್ಸ್ ಪಾಲಿಸಿ ಕೊಂಡುಕೊಳ್ಳುವುದು ಸೂಕ್ತ. ಇದರಿಂದ ತಿಂಗಳ ಖರ್ಚಿಗಾಗಿ ಉಳಿಸಿದ ಮೊತ್ತವನ್ನು ಸುರಕ್ಷಿತವಾಗಿರಿಸಬಹುದು.

  ಕೊನೆ ಮಾತು

  ವಯಸ್ಸಾದ ಮೇಲೆ ಯಾರ ಮೇಲೂ ಅವಲಂಬಿಸದೆ ಸ್ವತಂತ್ರವಾಗಿ ಬದುಕಲು ನಿವೃತ್ತಿ ಜೀವನದ ಯೋಜನೆಯನ್ನು ಪ್ರತಿಯೊಬ್ಬರೂ ರೂಪಿಸಿಕೊಳ್ಳುವುದು ಅಗತ್ಯ. ವೃತ್ತಿ ಜೀವನದ ಆರಂಭದಿಂದ ಚಿಕ್ಕ ಮೊತ್ತವನ್ನು ಇದಕ್ಕಾಗಿ ಎತ್ತಿಡುತ್ತ ಬಂದರೂ ಸಾಕು. ವೃದ್ಧಾಪ್ಯದಲ್ಲಿ ಇದೇ ಚಿಕ್ಕ ಮೊತ್ತ ಬೃಹತ್ತಾಗಿ ಬೆಳೆದು ನಿಮ್ಮನ್ನು ಕಾಪಾಡುವುದು. ಸೂಕ್ತ ವಿಧಾನಗಳ ಮೂಲಕ ಹೂಡಿಕೆ ಮಾಡಿ ಸುಖಮಯ ನಿವೃತ್ತ ಜೀವನ ನಿಮ್ಮದಾಗಿಸಿಕೊಳ್ಳಿ.

  English summary

  7 things to avoid when you are planning for retirement

  Retirement planning is essential as if you plan early, you will be able to save and invest money accordingly to make sure you will be financially independent post-retirement.
  Story first published: Wednesday, September 26, 2018, 10:43 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more