ಮಾರ್ಚ್ ತಿಂಗಳಾಂತ್ಯ ಸಮೀಪಿಸಿದ್ದು ಇನ್ನೇನು ಒಂದೆರಡು ದಿನಗಳಲ್ಲಿ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ತಾವು ಪಾವತಿಸಬೇಕಾದ ತೆರಿಗೆ ಉಳಿತಾಯಕ್ಕೆ ವರ್ಷವಿಡೀ ಏನೂ ಮಾಡದೆ ಇರುವವರು ಮಾರ್ಚ್ ಕೊನೆಯ ವಾರಗಳಲ್ಲಿ ಧಾವಂತದಿಂದ ಓಡಾಡತೊಡಗುತ್ತಾರೆ.
ಮಾರ್ಚ್ ತಿಂಗಳಾಂತ್ಯ ಸಮೀಪಿಸಿದ್ದು ಇನ್ನೇನು ಒಂದೆರಡು ದಿನಗಳಲ್ಲಿ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ತಾವು ಪಾವತಿಸಬೇಕಾದ ತೆರಿಗೆ ಉಳಿತಾಯಕ್ಕೆ ವರ್ಷವಿಡೀ ಏನೂ ಮಾಡದೆ ಇರುವವರು ಮಾರ್ಚ್ ಕೊನೆಯ ವಾರಗಳಲ್ಲಿ ಧಾವಂತದಿಂದ ಓಡಾಡತೊಡಗುತ್ತಾರೆ. ಕೊನೆಯ ಕ್ಷಣದಲ್ಲಿ ತೆರಿಗೆ ಉಳಿತಾಯ ಯೋಜನೆ ಹಾಗೂ ತೆರಿಗೆ ಉಳಿತಾಯದ ಹೂಡಿಕೆಗಳ ಬಗ್ಗೆ ಇನ್ನಿಲ್ಲದಷ್ಟು ಲಗುಬಗೆಯಿಂದ ಚಿಂತಿಸತೊಡಗುತ್ತಾರೆ.
ತೆರಿಗೆ ಉಳಿತಾಯದ ಸಮರ್ಪಕ ಪೂರ್ವ ಯೋಜನೆ ಇರದಿದ್ದಲ್ಲಿ ಅಂಥವರು ಸಾಮಾನ್ಯವಾಗಿ ಅವಶ್ಯಕತೆಗಿಂತ ಹೆಚ್ಚು ತೆರಿಗೆ ಕಟ್ಟುವಂತಾಗುತ್ತದೆ. ಅಂದರೆ ತೆರಿಗೆ ಉಳಿತಾಯಕ್ಕೆ ಪೂರಕವಾದ ಯೋಜನೆಗಳಲ್ಲಿ ಮೊದಲೇ ಹೂಡಿಕೆ ಮಾಡಿದ್ದಲ್ಲಿ ಸಾಕಷ್ಟು ತೆರಿಗೆ ಉಳಿಸಬಹುದು.
ಆದಾಗ್ಯೂ ಕೊನೆಕ್ಷಣಗಳಲ್ಲಿ ತೆರಿಗೆ ಉಳಿತಾಯಕ್ಕಾಗಿ ಯಾವೆಲ್ಲ ರೀತಿಯ ಯೋಜನೆ ಹಾಗೂ ಹೂಡಿಕೆಗಳನ್ನು ಮಾಡಬಹುದು ಎಂಬ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಕೊನೆ ಕ್ಷಣದಲ್ಲಿ ತೆರಿಗೆ ಉಳಿತಾಯಕ್ಕಾಗಿ ಪ್ರಯತ್ನಿಸುವವರಲ್ಲಿ ನೀವೂ ಒಬ್ಬರಾಗಿದ್ದಲ್ಲಿ ಇದನ್ನು ಓದಿ ತಿಳಿದುಕೊಳ್ಳಿ.
ಕೊನೆ ಕ್ಷಣದಲ್ಲಿ ತೆರಿಗೆ ಉಳಿತಾಯದ ಬೆಸ್ಟ್ ಐಡಿಯಾಗಳು:
ಸೆಕ್ಷನ್ 80ಸಿ/80ಸಿಸಿಸಿ/80ಸಿಸಿಡಿ ಪ್ರಯೋಜನಕ್ಕಾಗಿ ಹೂಡಿಕೆ ಯೋಜನೆಗಳು
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ಗಳಾದ 80ಸಿ/80ಸಿಸಿಸಿ/80ಸಿಸಿಡಿ ಅನ್ವಯ ಎಲ್ಲ ಸೆಕ್ಷನ್‌ಗಳನ್ನು ಸೇರಿಸಿ ಗರಿಷ್ಠ 1,50,000 ರೂ. ಮೊತ್ತಕ್ಕೆ ತೆರಿಗೆ ವಿನಾಯಿತಿಯನ್ನು ಕ್ಲೇಮ್ ಮಾಡಬಹುದಾಗಿದೆ. ಈ ಸೆಕ್ಷನ್‌ಗಳು ಅನ್ವಯವಾಗುವ ಯಾವುದಾದರೂ ಒಂದು ಹೂಡಿಕೆ ಯೋಜನೆ ಅಥವಾ ಇವುಗಳ ಸಮ್ಮಿಶ್ರ ಫಲ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಿದಲ್ಲಿ ತೆರಿಗೆ ಉಳಿತಾಯದ ಲಾಭ ಪಡೆಯಬಹುದು. ಇಂಥ ಕೆಲ ಹೂಡಿಕೆ ಯೋಜನೆಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ ನೋಡಿ.
ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ (ELSS)
ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ ಅಥವಾ ಇಎಲ್‌ಎಸ್‌ಎಸ್ ಇದು ಬಹು ಆಯಾಮಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಆಗಿದ್ದು, ಇದರಲ್ಲಿನ ಬಹುತೇಕ ಮೊತ್ತವನ್ನು ಇಕ್ವಿಟಿಗಳಲ್ಲಿ ಹೂಡಲಾಗುತ್ತದೆ. ಇವುಗಳಲ್ಲಿನ ಆದಾಯವು ಇಕ್ವಿಟಿ ಮಾರುಕಟ್ಟೆಗಳಲ್ಲಿನ ಆದಾಯವನ್ನು ಆಧರಿಸಿರುತ್ತದೆ. ಇದರಲ್ಲಿ ಏಕಗಂಟಿನಲ್ಲಿ ಹೂಡಿಕೆ ಮಾಡಬಹುದು. ಸಾಕಷ್ಟು ಮೊದಲೇ ಯೋಜನೆ ಆರಂಭಿಸಿದಲ್ಲಿ, 3 ವರ್ಷದ ಲಾಕ್ ಇನ್ ಅವಧಿಯ ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲಾನ್ (ಸಿಪ್) ಆಯ್ದುಕೊಳ್ಳಬಹುದು. ಇವು ವಾರ್ಷಿಕವಾಗಿ ಶೇ.15 ರವರೆಗೆ ಪ್ರತಿಫಲ (ಹಿಂದಿನ ವರ್ಷಗಳ ಕಾರ್ಯನಿರ್ವಹಣೆಯಂತೆ) ನೀಡಬಹುದಾಗಿದ್ದು, ಗರಿಷ್ಠ 1,50,000 ರೂ. ಗಳವರೆಗೆ ಸೆಕ್ಷನ್ 80ಸಿ ಅನ್ವಯ ತೆರಿಗೆ ವಿನಾಯಿತಿಯೂ ಸಿಗುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF)
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಇದೊಂದು ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ತೆರಿಗೆ ಉಳಿತಾಯ ಸೌಲಭ್ಯ ಹೊಂದಿರುವ ಉಳಿತಾಯ ಯೋಜನೆಯಾಗಿದೆ. ಇದರಲ್ಲಿನ ಹೂಡಿಕೆಗೆ ಕೇಂದ್ರ ಸರಕಾರದ ಖಾತರಿ ಇದ್ದು, ವಾರ್ಷಿಕ ಸುಮಾರು ಶೇ.8 ರಷ್ಟು ಬಡ್ಡಿದರ ಸಿಗುತ್ತದೆ. ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸಲಾಗುತ್ತದೆ.
ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ (EPF)
ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಇದು ಎಲ್ಲ ಉದ್ಯೋಗಸ್ಥ ಜನರಿಗಾಗಿ ರೂಪಿಸಲಾಗಿರುವ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಯ ಮೂಲ ಸಂಬಳ ಹಾಗೂ ತುಟ್ಟಿಭತ್ಯೆಯ ಶೇ.12 ರಷ್ಟು ಮೊತ್ತವನ್ನು ಕಡಿತ ಮಾಡಿ ಉದ್ಯೋಗದಾತರು ಆ ಮೊತ್ತವನ್ನು ಇಪಿಎಫ್ ಅಥವಾ ಇನ್ನಾವುದೇ ಮಾನ್ಯತೆ ಪಡೆದ ಪಿಎಫ್ ಯೋಜನೆಯಲ್ಲಿ ತೊಡಗಿಸುತ್ತಾರೆ. ಉದ್ಯೋಗಿಯ ಒಪ್ಪಿಗೆ ಇದ್ದಲ್ಲಿ ಈ ಮೊತ್ತ ಶೇ.12 ಕ್ಕೂ ಹೆಚ್ಚಾಗಿರಬಹುದು. ಪ್ರಸ್ತುತ ಇಪಿಎಫ್‌ಗೆ ಶೇ.8.55 ರಷ್ಟು ಬಡ್ಡಿ ದರ ಇದ್ದು, ಸತತ 5 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಹೂಡಿಕೆಯನ್ನು ಹಿಂಪಡೆಯಲು ಬಯಸಿದಲ್ಲಿ, ಇಪಿಎಫ್ ಬ್ಯಾಲೆನ್ಸ್ ಹಾಗೂ ಅದಕ್ಕೆ ಸಿಗುವ ಸಂಪೂರ್ಣ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಸೌಲಭ್ಯವಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆ (NPS)
ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ನ್ಯಾಷನಲ್ ಪೆನ್ಷನ್ ಸ್ಕೀಂ ಇದು ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಹಾಗೂ ವೃತ್ತಿಪರರಿಗೆ ನಿವೃತ್ತ ಜೀವನಕ್ಕಾಗಿ ಉಳಿತಾಯ ಮಾಡಲು ರೂಪಿಸಿರುವ ಕೇಂದ್ರ ಸರಕಾರದ ಯೋಜನೆಯಾಗಿದೆ. ಅಂದರೆ ನಿವೃತ್ತಿಯ ನಂತರ ನಿರ್ದಿಷ್ಟ ಮೊತ್ತದ ಪಿಂಚಣಿ ಸಿಗುವಂತೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ಇದೊಂದು ಇಕ್ವಿಟಿ ಮಾರುಕಟ್ಟೆ ಆಧರಿತ ಯೋಜನೆಯಾಗಿದ್ದು ಸುಮಾರು ಶೇ.12 ರಿಂದ ಶೇ.14 ರವರೆಗೆ ಪ್ರತಿಫಲವನ್ನು ನಿರೀಕ್ಷಿಸಬಹುದು. ಇದರಲ್ಲಿ ಗರಿಷ್ಠ 50 ಸಾವಿರ ರೂ.ಗಳವರೆಗೆ ಸೆಕ್ಷನ್ 80ಸಿಸಿಡಿ (1ಬಿ) ಅನ್ವಯ ಹೆಚ್ಚುವರಿ ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು. ಹಾಗೆಯೇ ಸೆಕ್ಷನ್ 80ಸಿ ಅನ್ವಯ 1,50,000 ರೂ.ಗಳವರೆಗೆ ಮೂಲ ತೆರಿಗೆ ವಿನಾಯಿತಿ ಇದ್ದೇ ಇದೆ.
• ಇನ್ನೂ ಹಲವಾರು ಪಿಂಚಣಿ ಯೋಜನೆಗಳು, ಜೀವ ವಿಮಾ ಪಾಲಿಸಿಗಳು, ಬ್ಯಾಂಕಿನ 5 ವರ್ಷದ ನಿಶ್ಚಿತ ಠೇವಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮುಖಾಂತರವೂ ಸೆಕ್ಷನ್ 80ಸಿ/80ಸಿಸಿಸಿ/80ಸಿಸಿಡಿ ಅನ್ವಯ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಬಹುದು.
ಸೆಕ್ಷನ್ 80ಸಿ/80ಸಿಸಿಸಿ/80ಸಿಸಿಡಿ ಅನ್ವಯ ಖರ್ಚುಗಳ ಮೇಲೆ ತೆರಿಗೆ ವಿನಾಯಿತಿ ಸೌಲಭ್ಯಗಳು
ನಿಮ್ಮ ಆದಾಯದ ಕೆಲ ಭಾಗವನ್ನು ನಿಮಗಾಗಿ ನಿರ್ದಿಷ್ಟ ಆರೋಗ್ಯ ಚಿಕಿತ್ಸೆಗಾಗಿ ಅಥವಾ ನಿಮ್ಮನ್ನು ಅವಲಂಬಿಸಿದ ವಿಶೇಷಚೇತನರ ಆರೋಗ್ಯ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಲ್ಲಿ ಆ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು. ನಿಮಗಾಗಿ, ನಿಮ್ಮ ಸಂಗಾತಿ, ಮಕ್ಕಳು ಮತ್ತು ಪಾಲಕರ ಹೆಸರಲ್ಲಿ ಮೆಡಿಕಲ್ ಇನ್ಸೂರೆನ್ಸ್ ಪಾಲಿಸಿ ಪಡೆದುಕೊಂಡರೆ ಅದರ ಮೇಲೆ ಕ್ರಮವಾಗಿ 15 ಸಾವಿರ ರೂ. ಹಾಗೂ 20 ಸಾವಿರ ರೂ. ತೆರಿಗೆ ವಿನಾಯಿತಿ ಪಡೆಯಬಹುದು.
ಸಾಲಗಳನ್ನು ಸಮರ್ಪಕವಾಗಿ ನಿಭಾಯಿಸಿ ತೆರಿಗೆ ಉಳಿತಾಯ ಮಾಡುವುದು
ನೀವು ಗೃಹ ಸಾಲ ಪಡೆದುಕೊಂಡಿದ್ದಲ್ಲಿ ಅದರ ಮೂಲ ಸಾಲ ಬಾಕಿ ಪಾವತಿಯ ಮೇಲೆ ಸೆಕ್ಷನ್ 80ಸಿ ಅನ್ವಯ ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು. ಮನೆಸಾಲದ ಬಡ್ಡಿ ಪಾವತಿ ಹಾಗೂ ಶೈಕ್ಷಣಿಕ ಸಾಲಗಳ ಮೇಲೆ ಸಹ ಕ್ರಮವಾಗಿ ಸೆಕ್ಷನ್ 24 ಹಾಗೂ ಸೆಕ್ಷನ್ 80ಇ ಅನ್ವಯ ತೆರಿಗೆ ವಿನಾಯಿತಿ ಇರುತ್ತದೆ. ಬಡ್ಡಿ ಪಾವತಿಯ ಮೇಲೆ ತೆರಿಗೆ ಕಡಿತಕ್ಕೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ.
ದಾನ-ಧರ್ಮಗಳ ಮೂಲಕ ತೆರಿಗೆ ಉಳಿತಾಯ
ನೋಂದಾಯಿತ ಟ್ರಸ್ಟ್ ಅಥವಾ ಸಂಸ್ಥೆಗಳಿಗೆ ದಾನ ಅಥವಾ ದೇಣಿಗೆ ನೀಡಿ ಆ ಮೊತ್ತಕ್ಕೆ ತೆರಿಗೆ ವಿನಾಯಿತಿ ಕ್ಲೇಮ್ ಮಾಡಬಹುದು. ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡಿ ಸೆಕ್ಷನ್ 80ಜಿ ಅನ್ವಯ ತೆರಿಗೆ ವಿನಾಯಿತಿ ಪಡೆಯಬಹುದು. ಯಾವ ಉದ್ದೇಶಕ್ಕೆ ದೇಣಿಗೆ ನೀಡಲಾಗಿದೆ ಎಂಬುದನ್ನು ಆಧರಿಸಿ ಶೇ.50 ರಿಂದ ಶೇ.100 ರವರೆಗೆ ತೆರಿಗೆ ವಿನಾಯಿತಿ ಲಭಿಸುತ್ತದೆ. ನಿಮ್ಮ ಬಳಿ ಹೆಚ್ಚುವರಿ ಹಣವಿದ್ದು ಸಮಾಜದ ಒಳಿತಿಗಾಗಿ ದಾನ, ಧರ್ಮ ಮಾಡಲು ಬಯಸುತ್ತೀರಾದರೆ ಅದರ ಮೂಲಕ ತೆರಿಗೆ ವಿನಾಯಿತಿಯನ್ನೂ ಪಡೆಯಬಹುದು.
ಆದರೆ ಚೆಕ್ ಅಥವಾ ನಗದು ಮೂಲಕ ನೀಡುವ ವಂತಿಗೆಗಳನ್ನು ಮಾತ್ರ ತೆರಿಗೆ ವಿನಾಯಿತಿಗೆ ಪರಿಗಣಿಸಲಾಗುತ್ತದೆ. ಹಣಕಾಸು ಸಚಿವಾಲಯದಿಂದ ಅಧಿಸೂಚಿತ ಸಂಸ್ಥೆಗಳಿಗೆ ದೇಣಿಗೆ ನೀಡಿ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ತೆರಿಗೆ ಉಳಿತಾಯದಲ್ಲಾಗುವ ಸಾಮಾನ್ಯ ತಪ್ಪುಗಳು
ತೆರಿಗೆ ಉಳಿಸಲು ಕೊನೆಯ ಕ್ಷಣದಲ್ಲಿ ನೀವು ಪ್ರಯತ್ನಿಸುತ್ತಿದ್ದಲ್ಲಿ ತಪ್ಪುಗಳಾಗುವುದು ಸಹಜವಾಗಿದೆ. ತೆರಿಗೆ ಉಳಿತಾಯಕ್ಕೆ ಪ್ರಯೋಜನವಾಗದ ಯಾವುದೋ ಯೋಜನೆಗಳಲ್ಲಿ ಹೂಡಿಕೆ ಮಾಡಿ ಹಣ ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯ. ಹೀಗಾಗಿ ಯಾವ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಉಳಿತಾಯ ಮಾಡಬಹುದು ಎಂಬ ಬಗ್ಗೆ ಅಧ್ಯಯನ ಮಾಡಬೇಕು. ಯಾರೋ ಮಾಡಿದ್ದಾರೆ ಎಂಬ ಕಾರಣಕ್ಕೆ ಅಥವಾ ಅಲ್ಪಾವಧಿಯ ಗುರಿ ಇಟ್ಟುಕೊಂಡು ವಿವೇಚನಾರಹಿತರಾಗಿ ಹೂಡಿಕೆ ಮಾಡುವುದು ಬೇಡ.
ಕೊನೆ ಮಾತು
ಮೇಲೆ ತಿಳಿಸಲಾದ ಕ್ರಮಗಳನ್ನು ಸರಿಯಾಗಿ ತಿಳಿದುಕೊಂಡು ಕೊನೆಯ ಕ್ಷಣದ ತೆರಿಗೆ ಉಳಿತಾಯವನ್ನು ಸಮರ್ಪಕವಾಗಿ ಪ್ಲಾನ್ ಮಾಡಿ. ಈ ವರ್ಷ ಮಾಡಿದ ತಪ್ಪನ್ನು ಹೊಸ ಆರ್ಥಿಕ ವರ್ಷದಲ್ಲಿ ಮಾಡದಂತೆ ಜಾಗ್ರತೆ ವಹಿಸಿ. ಹೊಸ ಆರ್ಥಿಕ ವರ್ಷಾರಂಭದಿಂದಲೇ ಸೂಕ್ತ ತೆರಿಗೆ ಉಳಿತಾಯ ಯೋಜನೆಗಳನ್ನು ಆರಂಭಿಸಿ ತಯಾರಿ ಮಾಡಿಕೊಳ್ಳಿ. ವರ್ಷವಿಡೀ ನಿಯಮಿತವಾಗಿ ಸೂಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತ ಬಂದಲ್ಲಿ ಮಾರ್ಚ್ ಅಂತ್ಯದ ಆತಂಕದ ಕ್ಷಣಗಳಿಂದ ಪಾರಾಗಬಹುದು. ಅಲ್ಲದೆ ಕೊನೆಗೆ ದೊಡ್ಡ ಮೊತ್ತದ ಹಣ ಕೂಡಿಸುವ ತಾಪತ್ರಯದಲ್ಲಿ ಸಿಕ್ಕು ಒದ್ದಾಡುವುದನ್ನು ತಪ್ಪಿಸಬಹುದು.


Click it and Unblock the Notifications