2019-20ನೇ ಸಾಲಿನ ಹೊಸ ಹಣಕಾಸು ವರ್ಷ ಇದೇ ಏಪ್ರಿಲ್ 1 ರಿಂದ ಆರಂಭವಾಗಿದೆ. ಹೊಸ ಆರ್ಥಿಕ ವರ್ಷಕ್ಕಾಗಿ ಹಣಕಾಸು ಯೋಜನೆಗಳನ್ನು ಪ್ಲಾನ್ ಮಾಡಿ ಅವನ್ನು ಜಾರಿಗೊಳಿಸಲು ಮುಂದಾಗಲು ಇದಕ್ಕಿಂತ ಉತ್ತಮ ಸಂದರ್ಭ ಬೇರೊಂದಿರಲಿಕ್ಕಿಲ್ಲ.
2019-20ನೇ ಸಾಲಿನ ಹೊಸ ಹಣಕಾಸು ವರ್ಷ ಇದೇ ಏಪ್ರಿಲ್ 1 ರಿಂದ ಆರಂಭವಾಗಿದೆ. ಹೊಸ ಆರ್ಥಿಕ ವರ್ಷಕ್ಕಾಗಿ ಹಣಕಾಸು ಯೋಜನೆಗಳನ್ನು ಪ್ಲಾನ್ ಮಾಡಿ ಅವನ್ನು ಜಾರಿಗೊಳಿಸಲು ಮುಂದಾಗಲು ಇದಕ್ಕಿಂತ ಉತ್ತಮ ಸಂದರ್ಭ ಬೇರೊಂದಿರಲಿಕ್ಕಿಲ್ಲ. ಈ ಏಪ್ರಿಲ್ 1 ರಿಂದ ವೈಯಕ್ತಿಕ ಹಣಕಾಸು ಕ್ಷೇತ್ರದಲ್ಲಿ ಯಾವೆಲ್ಲ ಹೊಸ ನಿಯಮಗಳು ಜಾರಿಗೆ ಬಂದಿವೆ ಎಂಬುದನ್ನು ತಿಳಿದುಕೊಂಡು ಆರ್ಥಿಕ ವರ್ಷಕ್ಕಾಗಿ ಯೋಜನೆ ರೂಪಿಸುವುದು ಒಳಿತು.
ಪ್ರಸಕ್ತ ಆರ್ಥಿಕ ವರ್ಷದಿಂದ ಜಾರಿಗೆ ಬಂದಿರುವ 9 ಹೊಸ ತೆರಿಗೆ ನಿಯಮಗಳಲ್ಲಿನ ಬದಲಾವಣೆ ಹಾಗೂ ಇನ್ನೂ ಕೆಲ ಪ್ರಮುಖ ಬದಲಾವಣೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದ್ದು, ನೀವೂ ಅರಿತುಕೊಂಡು ಅದಕ್ಕೆ ತಕ್ಕಂತೆ ಹಣಕಾಸು ಯೋಜನೆ ರೂಪಿಸಿಕೊಳ್ಳಿ.
5 ಲಕ್ಷ ರೂ.ವರೆಗಿನ ತೆರಿಗೆ ಆದಾಯಕ್ಕೆ ಶೂನ್ಯ ತೆರಿಗೆ
2019ರ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿರುವಂತೆ ತೆರಿಗೆಗೆ ಒಳಪಡುವ ನಿಮ್ಮ ಆದಾಯ 2019-20ನೇ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ. ಮೀರದಿದ್ದಲ್ಲಿ ನೀವು ಯಾವುದೇ ಆದಾಯ ತೆರಿಗೆ ಕಟ್ಟಬೇಕಿಲ್ಲ. ಇದಕ್ಕೆ ಕೆಲ ಷರತ್ತುಗಳು ಅನ್ವಯಿಸುತ್ತವೆ.
ವ್ಯಕ್ತಿಯೊಬ್ಬರ ವಾರ್ಷಿಕ ಆದಾಯ 5 ಲಕ್ಷ ರೂ. ದಾಟದಿದ್ದರೆ ಅಂಥವರು ತೆರಿಗೆ ಪಾವತಿಸಬೇಕಿಲ್ಲ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87ಎ ಪ್ರಕಾರ ತೆರಿಗೆ ವಿನಾಯಿತಿಯ ಮಿತಿಯನ್ನು 2019-20ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ 12,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಆದಾಗ್ಯೂ ತೆರಿಗೆ ಪಾವತಿಸುವದರಿಂದ ವಿನಾಯಿತಿ ಇದ್ದರೂ ಕೆಲ ಸಂದರ್ಭಗಳಲ್ಲಿ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಮಾತ್ರ ಕಡ್ಡಾಯ. ಅಂದರೆ ಒಂದು ವೇಳೆ ನಿಮ್ಮ ಒಟ್ಟು ಆದಾಯವು ತೆರಿಗೆ ವಿನಾಯಿತಿಯ ಮಿತಿಯನ್ನು ದಾಟಿದರೆ ಐಟಿ ರಿಟರ್ನ್ ಫೈಲ್ ಮಾಡಬೇಕಾಗುತ್ತದೆ.
5 ಲಕ್ಷ ರೂ. ಮೇಲ್ಪಟ್ಟು ತೆರಿಗೆಗೆ ಒಳಪಡುವ ಆದಾಯ ಹೊಂದಿರುವ ವ್ಯಕ್ತಿಗಳು ಸೆಕ್ಷನ್ 80ಸಿ, 80ಡಿ ಪ್ರಕಾರ ಕೆಲವು ವಿನಾಯಿತಿಗಳನ್ನು ಕ್ಲೇಮ್ ಮಾಡಬಹುದು ಹಾಗೂ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ), ಪ್ರಯಾಣ ಭತ್ಯೆ (ಎಲ್‌ಟಿಎ) (ನಿರ್ದಿಷ್ಟ ಮಿತಿಯವರೆಗೆ ಮಾತ್ರ ತೆರಿಗೆ ವಿನಾಯಿತಿ ಇದೆ) ಗಳ ಮೇಲೆ ಸಹ ತೆರಿಗೆ ವಿನಾಯಿತಿಗಳನ್ನು ಕ್ಲೇಮ್ ಮಾಡಿ ಒಟ್ಟು ಆದಾಯವನ್ನು ತೆರಿಗೆ ವಿನಾಯಿತಿಯ ಮಟ್ಟದ ಒಳಗೆ ತರಬಹುದು.
ಸ್ಟ್ಯಾಂಡರ್ಡ್ ಡಿಡಕ್ಷನ್ 50 ಸಾವಿರಕ್ಕೆ ಹೆಚ್ಚಳ
ತೆರಿಗೆದಾರರಿಗೆ ಮತ್ತಷ್ಟು ತೆರಿಗೆ ವಿನಾಯಿತಿ ನೀಡುವ ಉದ್ದೇಶದಿಂದ ಮಧ್ಯಂತರ ಬಜೆಟ್‌ನಲ್ಲಿ ಸಂಬಳದಲ್ಲಿ ಕಡಿತವಾಗುವ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಮುಂಚಿನ 40 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.
2018 ರ ಬಜೆಟ್‌ನಲ್ಲಿ ಸಾರಿಗೆ ಭತ್ಯೆ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯ ಸೌಲಭ್ಯಗಳೊಂದಿಗೆ ಮೊದಲ ಬಾರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಜಾರಿಗೊಳಿಸಲಾಗಿತ್ತು. ಈ ಡಿಡಕ್ಷನ್ ವಿನಾಯಿತಿ ಸೌಲಭ್ಯವು ಎಲ್ಲ ಸಂಬಳದಾರರಿಗೆ ಹಾಗೂ ಪಿಂಚಣಿದಾರರಿಗೆ ಅನ್ವಯಿಸುತ್ತದೆ. ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಸಮಯದಲ್ಲಿ ಇದನ್ನು ಕ್ಲೇಮ್ ಮಾಡಬಹುದು.
ಸ್ವಂತ ವಾಸದ ಎರಡನೇ ಮನೆಗೆ ತೆರಿಗೆ ಇಲ್ಲ
ವ್ಯಕ್ತಿಯೊಬ್ಬ ತನ್ನ ಒಡೆತನದ ಎರಡನೇ ಮನೆಗೆ ಸಹ ಯಾವುದೇ ತೆರಿಗೆ ಪಾವತಿಸಬೇಕಿಲ್ಲ. 2019-20ನೇ ಸಾಲಿನಿಂದ ಎರಡನೇ ಮನೆ ಖಾಲಿ ಬಿಟ್ಟಿದ್ದರೂ ಅದನ್ನು ಮಾಲೀಕನ ಸ್ವಂತ ವಾಸದ ಮನೆ ಎಂದು ಪರಿಗಣಿಸಿ ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. 2018-19ನೇ ಆರ್ಥಿಕ ವರ್ಷದವರೆಗೆ ವ್ಯಕ್ತಿಯೊಬ್ಬ ಎರಡನೇ ಮನೆ ಹೊಂದಿದ್ದರೆ ಅದರ ಕಾಲ್ಪನಿಕ ಬಾಡಿಗೆ ಆಧಾರದಲ್ಲಿ ತೆರಿಗೆ ಪಾವತಿಸಬೇಕಿತ್ತು. ಒಂದು ವೇಳೆ ಮನೆಯನ್ನು ಬಾಡಿಗೆ ನೀಡಿದ್ದರೆ ಎಷ್ಟು ಬಾಡಿಗೆ ಬರಬಹುದಾಗಿತ್ತು ಎಂಬುದರ ಆಧಾರದಲ್ಲಿ ತೆರಿಗೆ ಲೆಕ್ಕ ಹಾಕಲಾಗುತ್ತಿತ್ತು.
ಎರಡು ಮನೆಗಳನ್ನು ಹೊಂದಿರುವ ವ್ಯಕ್ತಿಯೊಬ್ಬ ಅದರಲ್ಲಿ ಯಾವುದಾದರೂ ಒಂದು ಮನೆಯನ್ನು ಮಾತ್ರ ತನ್ನ ವಾಸದ ಮನೆಯಾಗಿ ತೋರಿಸಬಹುದಿತ್ತು. ಇನ್ನೊಂದು ಮನೆಯನ್ನು ಬಾಡಿಗೆಗೆ ನೀಡಿರಲಿ ಅಥವಾ ಖಾಲಿ ಬಿಟ್ಟಿರಲಿ ಅದನ್ನು ಬಾಡಿಗೆಗೆ ನೀಡಲಾಗಿದೆ ಎಂದೇ ತೋರಿಸಿ ತೆರಿಗೆ ಕಟ್ಟಬೇಕಿತ್ತು. ಆದರೆ ಪ್ರಸ್ತುತ ನಿಯಮಗಳ ಪ್ರಕಾರ ಎರಡನೇ ಮನೆಯನ್ನು ಸಹ ವಾಸಕ್ಕೆ ಬಳಸಲಾಗುತ್ತಿದೆ ಎಂದು ತೋರಿಸಿದರೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
ಟಿಡಿಎಸ್ ಗರಿಷ್ಠ ಮಿತಿ 40 ಸಾವಿರ ರೂ.ಗೆ ಹೆಚ್ಚಳ
ತೆರಿಗೆಗೆ ಒಳಪಡುವ ಮಟ್ಟದ ಆದಾಯ ಹೊಂದಿರದ ವ್ಯಕ್ತಿಗಳು ಬ್ಯಾಂಕಿನಲ್ಲಿ ಎಫ್‌ಡಿ ಇಟ್ಟಿದ್ದರೆ ಅದರಿಂದ ಬರುವ ಬಡ್ಡಿ ಆದಾಯಕ್ಕೆ ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್) ಆಗದಂತೆ ಫಾರ್ಮ್ 15ಜಿ ಸಲ್ಲಿಸಬೇಕಿತ್ತು. ಇದು ಸಣ್ಣ ಆದಾಯದ ಜನತೆಗೆ ದೊಡ್ಡ ಕಿರಿಕಿರಿಯನ್ನುಂಟು ಮಾಡುವ ವಿಷಯವಾಗಿತ್ತು. ಜನರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇಟ್ಟಿದ್ದು, ಟಿಡಿಎಸ್ ಮಿತಿಯನ್ನು ಈ ಮೊದಲಿನ 10 ಸಾವಿರ ರೂ.ಗಳಿಂದ 40 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.
ಇಲ್ಲಿ ತಿಳಿಸಲಾಗಿದ್ದು ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಕಡಿತ ಮಿತಿ ಹೆಚ್ಚಳ ಮಾತ್ರ. ಬಡ್ಡಿ ಆದಾಯದ ಮೇಲೆ ಅನ್ವಯವಾಗುವ ತೆರಿಗೆಗಳು ಇದ್ದೇ ಇರುತ್ತವೆ.
ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ 40 ಸಾವಿರ ರೂ.ವರೆಗಿನ ಬಡ್ಡಿ ಆದಾಯಕ್ಕೆ ಬ್ಯಾಂಕುಗಳು ಯಾವುದೇ ಟಿಡಿಎಸ್ ಕಡಿತ ಮಾಡುವುದಿಲ್ಲ. ಆದರೆ ಬಡ್ಡಿ ಆದಾಯಕ್ಕೆ ಅನ್ವಯವಾಗುವ ತೆರಿಗೆ ನಿಯಮಗಳು ಮಾತ್ರ ಎಂದಿನಂತೆ ಇರುತ್ತವೆ.
ಬ್ಯಾಂಕಿನ ಎಫ್ಡಿಗಳಿಂದ ಸಿಗುವ ಬಡ್ಡಿ ಆದಾಯವು ಈಗಲೂ ತೆರಿಗೆಗೆ ಒಳಪಟ್ಟಿದೆ. ಆದಾಗ್ಯೂ ಸೆಕ್ಷನ್ 80ಟಿಟಿಎ ಪ್ರಕಾರ ಬ್ಯಾಂಕು ಅಥವಾ ಪೋಸ್ಟ್ ಆಫೀಸ್‌ಗಳಲ್ಲಿನ ಉಳಿತಾಯ ಖಾತೆಗಳಲ್ಲಿನ ಮೊತ್ತಕ್ಕೆ ಸಿಗುವ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ಕ್ಲೇಮ್ ಮಾಡಬಹುದು.
ಸಾಲದ ಬಡ್ಡಿ ನಿರ್ಧಾರಕ್ಕೆ ಬಾಹ್ಯ ಮಾನದಂಡಗಳ ನಿಗದಿ
ವೈಯಕ್ತಿಕ ಅಥವಾ ರಿಟೇಲ್ ಫ್ಲೋಟಿಂಗ್ ಬಡ್ಡಿ ದರದ ಸಾಲಗಳಾದ ಗೃಹಸಾಲ, ವಾಹನ ಸಾಲ ಇತ್ಯಾದಿ ಹಾಗೂ ಸಣ್ಣ ಉದ್ದಿಮೆಗಳಿಗೆ ನೀಡಲಾಗುವ ಸಾಲದ ಬಡ್ಡಿದರಗಳನ್ನು ಇನ್ನು ಮುಂದೆ ಬಾಹ್ಯ ಮಾನದಂಡಗಳನ್ನು ಆಧರಿಸಿ ನಿರ್ಧರಿಸಲಾಗುವುದು ಎಂದು ಆರ್‌ಬಿಐ ಹೇಳಿದೆ. ಡಿಸೆಂಬರ್ 2018 ರಲ್ಲಿ ನಡೆದ ಆರ್‌ಬಿಐನ ದ್ವಿಮಾಸಿಕ ಸಭೆಯಲ್ಲಿ ಈ ನಿರ್ಧಾರ ಘೋಷಣೆ ಮಾಡಲಾಯಿತು. ಇಷ್ಟು ದಿನ ಆಂತರಿಕ ಮಾನದಂಡಗಳಾದ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಲೆಂಡಿಂಗ್ ರೇಟ್, ಪ್ರೈಮ್ ಲೆಂಡಿಂಗ್ ರೇಟ್ ಹಾಗೂ ಬೆಂಚಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್‌ಗಳ ಆಧಾರದಲ್ಲಿ ಸಾಲದ ಬಡ್ಡಿದರಗಳನ್ನು ನಿಗದಿಗೊಳಿಸಲಾಗುತ್ತಿತ್ತು.
ಕಾಗದ ರೂಪದ ಷೇರುಗಳ ವರ್ಗಾವಣೆ ಸ್ಥಗಿತ
ಕಾಗದದ ರೂಪದಲ್ಲಿರುವ ಶೇರುಗಳ ಮಾರಾಟ, ವರ್ಗಾವಣೆಯನ್ನು 2018ರ ಡಿಸೆಂಬರ್ 5 ರಿಂದಲೇ ನಿಷೇಧಿಸಿ ಸೆಬಿ ಆದೇಶ ಹೊರಡಿಸಿತ್ತು. ನಂತರ ಈ ದಿನಾಂಕವನ್ನು 2019ರ ಏಪ್ರಿಲ್ 1 ರವರೆಗೆ ವಿಸ್ತರಿಸಲಾಗಿತ್ತು. ಕಾಗದ ರೂಪದ ಶೇರುಗಳನ್ನು ಹೊಂದಿರುವ ಗ್ರಾಹಕರು ಬೇಗನೆ ಡಿಮ್ಯಾಟ್‌ಗೆ ಪರಿವರ್ತಿಸಲು ಅನುಕೂಲವಾಗುವಂತೆ ಮತ್ತಷ್ಟು ಕಾಲಾವಧಿಯನ್ನು ನೀಡಲಾಗಿತ್ತು. ಆದರೆ ಇನ್ನು ಮುಂದೆ ಮಾತ್ರ ಕಾಗದದ ಶೇರುಗಳ ವ್ಯವಹಾರ ಸಂಪೂರ್ಣ ಬಂದ್ ಆಗಲಿದೆ. ಕೇವಲ ಡಿಮ್ಯಾಟ್ ಖಾತೆಯಿಂದ ಮಾತ್ರ ಶೇರು ವ್ಯವಹಾರ ಇನ್ನು ಸಾಧ್ಯ.
ವಸತಿ ವಲಯಕ್ಕೆ ಹೊಸ ಜಿಎಸ್‌ಟಿ ದರ ಹಾಗೂ ನಿಯಮಗಳು
2019ರ ಫೆಬ್ರವರಿ 24 ರಂದು ನಡೆದ 33ನೇ ಜಿಎಸ್ಟಿ ಕೌನ್ಸಿಲ್ ಮೀಟಿಂಗ್‌ನಲ್ಲಿ ವಸತಿ ಕ್ಷೇತ್ರಕ್ಕೆ 2019ರ ಏಪ್ರಿಲ್ 1 ರಿಂದ ಅನ್ವಯಿಸುವಂತೆ ಹೊಸ ನಿಯಮಗಳನ್ನು ಘೋಷಿಸಲಾಯಿತು. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಹಳೆ ನಿಯಮದ ಪ್ರಕಾರ ಶೇ.12 ಜಿಎಸ್ಟಿ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್‌ನೊಂದಿಗೆ) ಅಥವಾ ಹೊಸ ನಿಯಮದ ಪ್ರಕಾರ ಶೇ.5 ಜಿಎಸ್ಟಿ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆ) ದರಗಳನ್ನು ಡೆವಲಪರ್ ಹಾಗೂ ಬಿಲ್ಡರ್‌ಗಳು ವಿಧಿಸಬಹುದಾಗಿದೆ.
ಕೈಗೆಟುಕುವ ದರದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳಿಗೆ ಈ ಜಿಎಸ್ಟಿ ದರಗಳು ಶೇ.8 (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್‌ನೊಂದಿಗೆ) ಹಾಗೂ ಶೇ.1 (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇಲ್ಲದೆ) ಅನ್ವಯಿಸುತ್ತವೆ. 2019ರ ಏಪ್ರಿಲ್ 1 ರ ನಂತರ ಆರಂಭವಾಗುವ ಎಲ್ಲ ರೀತಿಯ ಕಟ್ಟಡ ನಿರ್ಮಾಣಕ್ಕೆ ಹೊಸ ಜಿಎಸ್ಟಿ ದರಗಳು ಅನ್ವಯವಾಗುತ್ತವೆ.
ಆಸ್ತಿ ಮಾರಿ ಬಂದ ಹಣವನ್ನು ಎರಡು ವಾಸದ ಮನೆಗಳಲ್ಲಿ ತೊಡಗಿಸಬಹುದು
ಹಳೆಯ ಆಸ್ತಿಯನ್ನು ಮಾರಿ ಗಳಿಸಿದ ಹಣವನ್ನು ಎರಡು ವಾಸದ ಮನೆಗಳ ಮೇಲೆ ತೊಡಗಿಸುವುದರ ಮೂಲಕ ಎಲ್‌ಟಿಸಿಜಿ ತೆರಿಗೆ ಉಳಿತಾಯ ಮಾಡಬಹುದು. ಆದರೆ ಆಸ್ತಿ ಮಾರಿ ಬಂದ ಒಟ್ಟು ಮೊತ್ತ 2 ಕೋಟಿ ರೂ. ಮೀರಬಾರದು ಹಾಗೂ ಈ ರೀತಿಯ ಕ್ಯಾಪಿಟಲ್ ಗೇನ್ಸ್ ಮೇಲೆ ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ವಿನಾಯಿತಿ ಪಡೆಯಲು ಅವಕಾಶವಿದೆ.
ಇಕ್ವಿಟಿಗಳ ಮೇಲಿನ ಎಲ್‌ಟಿಸಿಜಿ ತೆರಿಗೆ ಬದಲಾವಣೆ
2018ರ ಬಜೆಟ್‌ನಲ್ಲಿ ಇಕ್ವಿಟಿ ಶೇರುಗಳು ಹಾಗೂ ಇಕ್ವಿಟಿ ಆಧರಿತ ಮ್ಯೂಚುವಲ್ ಫಂಡ್‌ಗಳ ಮೇಲೆ ಎಲ್‌ಟಿಸಿಜಿ ತೆರಿಗೆಯನ್ನು ಜಾರಿಗೊಳಿಸಲಾಗಿತ್ತು. ಹೀಗಾಗಿ 2018-19ನೇ ಅವಧಿಯಲ್ಲಿ ನೀವು ಯಾವುದೇ ಇಕ್ವಿಟಿ ಆಧರಿತ ಶೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳನ್ನು ಒಂದು ವರ್ಷಕ್ಕೂ ಅಧಿಕ ಇಟ್ಟುಕೊಂಡು ನಂತರ ಮಾರಿದ್ದಲ್ಲಿ ಇದರ ಮೇಲೆ ತೆರಿಗೆ ಪಾವತಿಸಬೇಕು ಹಾಗೂ ಈ ವ್ಯವಹಾರಗಳನ್ನು 2018-19ನೇ ಸಾಲಿನ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲಿಂಗ್‌ನಲ್ಲಿ ತೋರಿಸಬೇಕು. ಅಂದರೆ ಪ್ರಸಕ್ತ ಆರಂಭವಾಗಿರುವ ಹಣಕಾಸು ವರ್ಷ 2019-20 ರಲ್ಲಿ ಇನಕಮ್ ಟ್ಯಾಕ್ಸ್ ರಿಟರ್ನ್ ಫೈಲಿಂಗ್‌ನಲ್ಲಿ ಇವನ್ನು ನಮೂದಿಸಬೇಕು. 2018-19ನೇ ಸಾಲಿನಲ್ಲಿ ಇಕ್ವಿಟಿ ಶೇರು ಅಥವಾ ಮ್ಯೂಚುವಲ್ ಫಂಡ್‌ಗಳ ಮೇಲಿನ ಆದಾಯ 1 ಲಕ್ಷ ರೂ. ಮೀರಿದ್ದರೆ ಶೇ.10 ರಷ್ಟು ಎಲ್‌ಟಿಸಿಜಿ ತೆರಿಗೆ (ಇಂಡೆಕ್ಸೇಶನ್ ಇಲ್ಲದೆ) ಕಟ್ಟಬೇಕಾಗುತ್ತದೆ.


Click it and Unblock the Notifications