ಅಗಾಧ ಪ್ರಮಾಣದ ಸಂಪತ್ತು ಸೃಷ್ಟಿಸಲು ಮೊದಲಿಗೆ ನಿಮ್ಮ ಬಳಿ ದೊಡ್ಡ ಮೊತ್ತದ ಹಣ ಇರಬೇಕಾಗುತ್ತದೆ. ಆದರೆ ಒಂದೇ ಬಾರಿಗೆ ಕೈಯಲ್ಲಿ ದೊಡ್ಡ ಮೊತ್ತದ ಹಣ ಇಲ್ಲದಿದ್ದವರು ಏನು ಮಾಡಬೇಕು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.
ಅಗಾಧ ಪ್ರಮಾಣದ ಸಂಪತ್ತು ಸೃಷ್ಟಿಸಲು ಮೊದಲಿಗೆ ನಿಮ್ಮ ಬಳಿ ದೊಡ್ಡ ಮೊತ್ತದ ಹಣ ಇರಬೇಕಾಗುತ್ತದೆ. ಆದರೆ ಒಂದೇ ಬಾರಿಗೆ ಕೈಯಲ್ಲಿ ದೊಡ್ಡ ಮೊತ್ತದ ಹಣ ಇಲ್ಲದಿದ್ದವರು ಏನು ಮಾಡಬೇಕು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಒಂದೇ ಬಾರಿಗೆ ದೊಡ್ಡ ಮೊತ್ತ ಇಲ್ಲದವರು ಹಾಗೂ ತಿಂಗಳು ತಿಂಗಳು ಸಣ್ಣ ಪ್ರಮಾಣದಲ್ಲಿ ಉಳಿತಾಯದ ಹಣವನ್ನು ತೊಡಗಿಸುವ ಮೂಲಕ ಸಹ ಕೋಟ್ಯಧೀಶರಾಗಲು ಸಾಧ್ಯವಿದೆ ಎಂಬುದು ಆಶಾದಾಯಕ ಸಂಗತಿಯಾಗಿದೆ.
ಪ್ರತಿ ತಿಂಗಳು ಶಿಸ್ತಿನಿಂದ ಹಾಗೂ ಯೋಜನಾಬದ್ಧವಾಗಿ ದೀರ್ಘಾವಧಿಯಲ್ಲಿ ಹೂಡಿಕೆ ಮಾಡಿ ಕೋಟ್ಯಧೀಶರಾಗಬಹುದು. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಕ್ವಿಟಿ ಆಧಾರಿತ ಹೂಡಿಕೆ ಯೋಜನೆಗಳು ಸೂಕ್ತವಾಗಿವೆ. ಇಕ್ವಿಟಿ ಆಧಾರಿತ ಸಿಪ್ (Systematic investment plan - SIP) ಅಂದರೆ ಯೋಜನಾಬದ್ಧ ಹೂಡಿಕೆ ಯೋಜನೆಗಳಲ್ಲಿ ನೀವು ಹಣ ತೊಡಗಿಸಬಹುದು. ಇಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮೂಲಕ ಈಗಾಗಲೇ ಬೆಳೆದು ನಿಂತ ದೊಡ್ಡ ಕಂಪನಿಗಳು ಅಥವಾ ಈಗ ತಾನೆ ಆರಂಭವಾಗುತ್ತಿರುವ ಕಂಪನಿಗಳಲ್ಲಿ ನೀವು ನಿಮ್ಮದೇ ಆದ ಚಿಕ್ಕ ಮಾಲಿಕತ್ವದ ಪಾಲು ಪಡೆಯಬಹುದು. ಆ ಕಂಪನಿಗಳು ಬೆಳೆದಂತೆ ನಿಮ್ಮ ಹಣವೂ ಬೆಳೆಯುತ್ತ ಸಾಗುತ್ತದೆ.
ಸಿಪ್ ಯೋಜನೆಗಳು ಅತಿ ಸೂಕ್ತ
ಷೇರು ಮಾರುಕಟ್ಟೆಯಲ್ಲಿನ ಏರಿಳಿತಗಳ ಅನುಸಾರ ಅಲ್ಪಾವಧಿಯಲ್ಲಿ ಇಕ್ವಿಟಿ ಶೇರುಗಳ ಮೌಲ್ಯ ವ್ಯತ್ಯಾಸವಾಗುತ್ತಲೇ ಇರುತ್ತದೆ. ಆದರೆ ದೀರ್ಘಾವಧಿಯಲ್ಲಿ ಕಂಪನಿಗಳು ಬೆಳೆದಂತೆ ಈ ಶೇರುಗಳ ಮೌಲ್ಯ ಏರಿಳಿತ ಸ್ಥಿರಗೊಂಡು ನಿಮ್ಮ ಹಣಕ್ಕೆ ಆದಾಯ ನೀಡಲಾರಂಭಿಸುತ್ತವೆ.
ಸಣ್ಣ ಪ್ರಮಾಣದ ಹೂಡಿಕೆದಾರರಿಗೆ ಸಿಪ್ ಯೋಜನೆಗಳು ಅತಿ ಸೂಕ್ತವಾಗಿವೆ. ಇದರಲ್ಲಿ ನೀವು ಆಗಾಗ ಸಣ್ಣ ಮೊತ್ತದ ಹಣವನ್ನು ತೊಡಗಿಸುತ್ತ ಹೋಗಬಹುದು ಹಾಗೂ ರೂಪಾಯಿ ಮೌಲ್ಯದ ಸರಾಸರಿಯ ಮೂಲಕ ಮಾರುಕಟ್ಟೆಯ ಏರಿಳಿತಗಳ ಅಪಾಯದಿಂದ ಇವು ಹೂಡಿಕೆಯನ್ನು ಸಂರಕ್ಷಿಸುತ್ತವೆ.
ಸಿಪ್ ಹೂಡಿಕೆಯ ಪ್ರಮುಖ ಪ್ರಯೋಜನಗಳು ಇಲ್ಲಿವೆ..
ಒಂದೇ ಬಾರಿಗೆ ದೊಡ್ಡ ಮೊತ್ತದ ಹೂಡಿಕೆ ಬೇಕಿಲ್ಲ
ಬ್ಯಾಂಕಿನ ರೆಕರಿಂಗ್ ಡಿಪಾಸಿಟ್ ರೀತಿಯಲ್ಲಿಯೇ ಸಿಪ್ ನಲ್ಲಿ ನಿಯಮಿತವಾಗಿ ಸಣ್ಣ ಮೊತ್ತದ ಹೂಡಿಕೆ ಮಾಡುತ್ತ ಹೋಗಬಹುದು. ಮ್ಯೂಚುವಲ್ ಫಂಡ್ ಆಧರಿತ ಸಿಪ್‌ಗಳಲ್ಲಿ ತಿಂಗಳಿಗೆ ಅತಿ ಕಡಿಮೆ ಎಂದರೆ 1000 ರೂ. ಹಾಗೂ ಇನ್ನೂ ಕೆಲವು ನಿರ್ದಿಷ್ಟ ಸಿಪ್ ಯೋಜನೆಗಳಲ್ಲಿ ತಿಂಗಳಿಗೆ ಕೇವಲ 500 ರೂ. ಹೂಡಿಕೆ ಮಾಡಬಹುದು.
ಹೂಡಿಕೆ ಮಾಡಬೇಕಿರುವ ದಿನಾಂಕ ನೆನಪಿಡುವುದು ಅಗತ್ಯವಿಲ್ಲ
ಸಿಪ್ ಯೋಜನೆಗೆ ನೀವು ತೊಡಗಿಸಬೇಕೆಂದಿರುವ ಮೊತ್ತವು ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ವರ್ಗಾವಣೆಯಾಗುತ್ತದೆ. ಇದರಿಂದ ಪ್ರತಿ ತಿಂಗಳು ಬ್ಯಾಂಕಿನಲ್ಲಿ ಇಷ್ಟು ಹಣವನ್ನು ಇಟ್ಟಿರಲೇಬೇಕು ಎಂಬ ಭಾವನೆ ಬೆಳೆದು ಇದು ನಿಯಮಿತ ಉಳಿತಾಯದ ಹವ್ಯಾಸಕ್ಕೆ ಕಾರಣವಾಗುತ್ತದೆ. ನಿಯಮಿತ ಉಳಿತಾಯದಿಂದ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹಣೆಗೆ ಇದು ದಾರಿ ಮಾಡುತ್ತದೆ.
ಶುಲ್ಕಗಳ ಸರಾಸರಿ ಹೊಂದಿಸುವಿಕೆ
ನಿಮ್ಮ ಹಣವು ನಿಯಮಿತವಾಗಿ ಸಿಪ್ ಯೋಜನೆಯ ಮೂಲಕ ಹೂಡಿಕೆ ಮಾಡಲ್ಪಡುವುದರಿಂದ ಅದರಲ್ಲಿನ ಕೆಲ ಭಾಗ ಮೇಲ್ಮಟ್ಟದ ಮಾರುಕಟ್ಟೆಯಲ್ಲಿ ಹಾಗೂ ಇನ್ನು ಕೆಲ ಭಾಗವನ್ನು ಕೆಳ ಮಾರುಕಟ್ಟೆಯಲ್ಲಿಯೂ ತೊಡಗಿಸಲಾಗುತ್ತದೆ. ಹೀಗೆ ಹೂಡಿಕೆ ಮಾಡುವಾಗ ಮಾರುಕಟ್ಟೆ ದರಗಳು ಹೆಚ್ಚಾಗಿದ್ದಲ್ಲಿ ನಿಮಗೆ ಕಡಿಮೆ ಯೂನಿಟ್‌ಗಳು ಹಾಗೂ ದರಗಳು ಕಡಿಮೆಯಾಗಿದ್ದಲ್ಲಿ ಹೆಚ್ಚು ಯೂನಿಟ್‌ಗಳು ಸಿಗುತ್ತವೆ. ಇದನ್ನು ರುಪೀ ಕಾಸ್ಟ್ ಎವರೇಜಿಂಗ್ ಎಂದು ಕರೆಯಲಾಗುತ್ತದೆ. ಇದರಿಂದ ಶೇರು ಕೊಳ್ಳಲು ಮಾರುಕಟ್ಟೆಗಳು ಕೆಳ ಮಟ್ಟಕ್ಕೆ ಬರುವವರೆಗೆ ಕಾಯುವುದು ತಪ್ಪುತ್ತದೆ.
ಹೆಚ್ಚಿನ ಸಂಪತ್ತು ಸೃಷ್ಟಿಸಲು ಸಹಕಾರಿ
ನಿಮ್ಮ ಬಳಿ ನಿಯಮಿತ ಆದಾಯವಿದ್ದಲ್ಲಿ ಪ್ರತಿತಿಂಗಳು ಚಿಕ್ಕ ಮೊತ್ತದಿಂದ ಸಿಪ್‌ಗಳಲ್ಲಿ ಹೂಡಿಕೆ ಆರಂಭಿಸಬಹುದು. ಒಂದೇ ಬಾರಿಗೆ ದೊಡ್ಡ ಮೊತ್ತದ ಹಣ ಬೇಕಿಲ್ಲದಿರುವುದರಿಂದ ವೃತ್ತಿ ಜೀವನದ ಆರಂಭದಲ್ಲಿಯೇ ಈ ಯೋಜನೆಯನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು. ಇನ್ನು ಬೇಗನೆ ಯೋಜನೆ ಆರಂಭಿಸುವುದರಿಂದ ನೀವು ಹೂಡಿಕೆ ಮಾಡುವ ಹಣಕ್ಕೆ ದೀರ್ಘಾವಧಿಯಲ್ಲಿ 'ಕಂಪೌಂಡಿಂಗ್' ಅಂಶದ ಲಾಭ ದೊರಕುತ್ತದೆ. ಅಂದರೆ ಹೂಡಿದ ಹಣವು ದೊಡ್ಡದಾಗಿ ಬೆಳೆಯಲು ಸಾಕಷ್ಟು ಅವಕಾಶ ಸಿಗುತ್ತದೆ. ಉದಾಹರಣೆಗೆ ನೋಡುವುದಾದರೆ, 25 ವರ್ಷಗಳವರೆಗೆ ಪ್ರತಿ ತಿಂಗಳು 5 ಸಾವಿರ ರೂ. ಹೂಡಿಕೆ ಮಾಡುತ್ತ ಬಂದಲ್ಲಿ, ವಾರ್ಷಿಕ ಸಂಚಿತ ಬೆಳವಣಿಗೆ ದರ ಶೇ.15 ಎಂದಿಟ್ಟುಕೊಂಡಲ್ಲಿ ಕೊನೆಗೆ 1.4 ಕೋಟಿ ರೂ. ಸಂಪತ್ತು ಸಂಗ್ರಹಿಸಬಹುದು.
ಅಂದರೆ ಮ್ಯೂಚುವಲ್ ಫಂಡ್‌ಗಳ ಇಕ್ವಿಟಿ ಸಿಪ್‌ಗಳಲ್ಲಿ ತಿಂಗಳಿಗೆ 5 ಸಾವಿರ ರೂ. ಹೂಡಿಕೆ ಮಾಡಿದಲ್ಲಿ ನೀವೂ ಸಹ ಕೋಟ್ಯಧೀಶರಾಗುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದಾಗಿದೆ.


Click it and Unblock the Notifications