For Quick Alerts
ALLOW NOTIFICATIONS  
For Daily Alerts

ಇರೋ ನೌಕರಿ ಬಿಟ್ಟು ಬಿಸಿನೆಸ್ ಆರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ..

|

ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರು ಆಗಾಗ ಸ್ವಂತದ ವ್ಯಾಪಾರ, ವ್ಯವಹಾರ ಆರಂಭಿಸುವ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಕಾರ್ಪೊರೇಟ್ ಜಗತ್ತಿನ ಕೆಲಸದ ಏಕತಾನತೆ, ಸುದೀರ್ಘ ಕೆಲಸದ ಅವಧಿ, ದೂರ ಪ್ರಯಾಣ ಹಾಗೂ ಮಾಡಿದ ಕೆಲಸಕ್ಕೊಂದು ಕನಿಷ್ಠ ಥ್ಯಾಂಕ್ಸ್ ಹೇಳುವವರು ಕೂಡ ಇಲ್ಲವಲ್ಲ ಎಂಬುದು ಇಲ್ಲಿನ ಉದ್ಯೋಗಿಗಳ ಕೊರಗಾಗಿರುತ್ತದೆ. ಆದರೆ ಹಾಗಂತ ಇರೋ ಕೆಲಸ ಬಿಟ್ಟು ಯಾವುದೋ ವ್ಯಾಪಾರ ಅಥವಾ ಉದ್ಯಮ ಆರಂಭಿಸುವೆನೆಂದು ಹೊರಡುವುದು ಜಾಣತನವಲ್ಲ.

ಮಾಡುತ್ತಿದ್ದ ದೊಡ್ಡ ಸಂಬಳದ ಕೆಲಸ ಬಿಟ್ಟು ಸುಮಾರು 12 ವರ್ಷಗಳ ಕಾಲ ಸ್ವಂತದ ಉದ್ಯಮ ನಡೆಸಿದವರೊಬ್ಬರು ತಮ್ಮ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕಂಪನಿಯೊಂದರಲ್ಲಿ ಕೆಲಸ ಮಾಡುವುದಕ್ಕೂ ತನ್ನದೇ ಕಂಪನಿ ಆರಂಭಿಸುವುದಕ್ಕೂ ಇರುವ ವ್ಯತ್ಯಾಸಗಳೇನು ಎಂಬುದರ ಬಗ್ಗೆ ಮಾಹಿತಿ ನೀಡಿದ್ದು ಅದನ್ನೆಲ್ಲ ವಿವರವಾಗಿ ತಿಳಿದುಕೊಳ್ಳೋಣ.

 

ಕೆಲಸ ಬಿಟ್ಟು 12 ವರ್ಷ ಉದ್ಯಮ ನಡೆಸಿದ ವ್ಯಕ್ತಿಯು ಹೇಳುವ ಪ್ರಕಾರ ನವೋದ್ಯಮವನ್ನು ಅನವಶ್ಯಕವಾಗಿ ತೀರಾ ಹೆಚ್ಚು ವೈಭವೀಕರಿಸಲಾಗಿದೆ. ಏನೇ ಆದರೂ ಕಂಪನಿಯೊಂದರಲ್ಲಿ ಕೆಲಸ ಮಾಡುವುದೇ ಬೆಸ್ಟ್ ಎಂಬುದು ಅವರ ಅಭಿಪ್ರಾಯ.

ಉದ್ಯಮವೆಂದರೆ 24 ಗಂಟೆಯ ಕೆಲಸ

ಉದ್ಯಮವೆಂದರೆ 24 ಗಂಟೆಯ ಕೆಲಸ

ಕೈಲಿರುವ ನೌಕರಿ ಬಿಟ್ಟು ಯಾವಾಗ ಉದ್ಯಮಿಯಾಗುತ್ತೀರೋ ಅವತ್ತು ನಿಮ್ಮ ಜೀವನ ಹಾಗೂ ಕೆಲಸ ಎರಡರ ಮಧ್ಯದ ಗೆರೆ ಅಳಿಸಿ ಹೋಗುತ್ತದೆ. ಉದ್ಯಮಿಯಾದ ತಕ್ಷಣ ನೀವು 24 ಗಂಟೆ ದುಡಿಯಬೇಕಾಗುತ್ತದೆ. ಮಾಡಬೇಕಾದ ಕೆಲಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸ್ನಾನ ಮಾಡುವಾಗ, ಊಟ ಮಾಡುವಾಗ ಅಥವಾ ಮಲಗಿದಾಗಲೂ ವ್ಯವಹಾರದ್ದೇ ಚಿಂತೆಯಾಗಿರುತ್ತದೆ. ಯಾರೋ ಗ್ರಾಹಕರಿಗೆ ಕಳಿಸಬೇಕಾದ ಸರಕು ಮುಟ್ಟಿಲ್ಲ ಅಥವಾ ತಪ್ಪಾದ ಸರಕು ಹೋಗಿದೆ ಅಂತಾ ಹೀಗೆ ಏನೇನೋ ಸಮಸ್ಯೆಗಳು ಉದ್ಭವಿಸುತ್ತಿರುತ್ತವೆ. ಹೀಗೆ ದಿನದ ಎಲ್ಲ ಸಮಯವೂ ಕೆಲಸದಲ್ಲಿಯೇ ಕಳೆದು ಹೋಗಲಾರಂಭಿಸುತ್ತದೆ. ಸ್ವಂತ ಉದ್ಯಮಿಯಾಗುವುದು ಏಕ ವ್ಯಕ್ತಿ ಶೋ ಅಲ್ಲ. ಅದರೊಂದಿಗೆ ಕೈಜೋಡಿಸಲು ಮತ್ತೊಬ್ಬರು ಬೇಕೇ ಬೇಕು ಎಂಬುದು ಅರಿವಾಗತೊಡಗುತ್ತದೆ. ಯಾವುದೇ ವ್ಯಾಪಾರ ವಹಿವಾಟು ಆದರೂ ಅದಕ್ಕೆ ಕನಿಷ್ಠ ಇಬ್ಬರು ಕೆಲಸಗಾರರು ಬೇಕು.

ಆಫೀಸಿನ ಸೌಲಭ್ಯಗಳು ಇನ್ನು ದೊರೆಯಲಾರವು
 

ಆಫೀಸಿನ ಸೌಲಭ್ಯಗಳು ಇನ್ನು ದೊರೆಯಲಾರವು

ಆಫೀಸಿನಲ್ಲಿ ಕೆಲಸ ಮಾಡುವಾಗ ನಿಮಗೆ ಸಿಗುತ್ತಿದ್ದ ಸೌಲಭ್ಯಗಳು ಸಿಗಲಾರವು. ಬೇಕೆಂದಾಗ ಹೋಗಿ ಬಟನ್ ಒತ್ತಿದರೆ ಕಾಫಿ ಸುರಿಯುವ ಕಾಫಿ ವೆಂಡಿಂಗ್ ಮಶೀನ್ ಸೌಲಭ್ಯ ಇನ್ನು ಸಿಗಲಾರದು. ಕಾಫಿ ಬೇಕಾದರೆ ಕೈಸುಟ್ಟುಕೊಂಡು ಕಾಫಿ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಯಾವುದೋ ದಾಖಲೆಯ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕೆಂದರೆ ಪ್ರಿಂಟರ್ ಕೈಕೊಟ್ಟಿರುತ್ತದೆ. ಆಫೀಸಿನಲ್ಲಾದರೆ ಇಂಥ ಎಲ್ಲ ಸಮಸ್ಯೆ ಪರಿಹಾರಕ್ಕೆ ಟೆಕ್ನಿಶಿಯನ್ ಇದ್ದ. ಆದರೆ ಈಗ ನಿಮ್ಮ ಬಳಿ ಅಂಥ ವ್ಯಕ್ತಿ ಇಲ್ಲ. ಎಷ್ಟೋ ಬಾರಿ ಆಫೀಸಿನಲ್ಲಿ ನಿಮಗಾಗಿ ಆತ ಕೆಲಸ ಮಾಡಿದಾಗ ಕನಿಷ್ಠ ಒಂದು ಥ್ಯಾಂಕ್ಸ್ ಸಹ ಅವನಿಗೆ ನೀವು ಹೇಳಿರುವುದಿಲ್ಲ. ಈಗ ಅದೆಲ್ಲ ನೆನಪಾಗತೊಡಗುತ್ತದೆ. ಇನ್ನು ಆಫೀಸ್ ಸ್ಟೇಶನರಿ ಕೊಂಡು ತರುವುದು, ಟ್ಯಾಕ್ಸ್ ಫೈಲ್ ಮಾಡುವುದು ಅಥವಾ ಯಾವುದೋ ಒಂದು ಕೇಬಲ್ ಬದಲಾಯಿವುದು ಹೀಗೆ ಏನೇ ಕೆಲಸವಿದ್ದರೂ ಅದನ್ನೆಲ್ಲ ಈಗ ನೀವು ಕಲಿಯಬೇಕಾಗುತ್ತದೆ.

ನನ್ನ ಬಾಸ್ ಸರಿಯಿಲ್ಲ ಎನ್ನುವಿರಾದರೆ ಇಲ್ಲಿ ನೋಡಿ

ನನ್ನ ಬಾಸ್ ಸರಿಯಿಲ್ಲ ಎನ್ನುವಿರಾದರೆ ಇಲ್ಲಿ ನೋಡಿ

ಆಫೀಸಿನಲ್ಲಿ ನನ್ನ ಬಾಸ್ ಸರಿಯಿಲ್ಲ. ಇನ್ನು ಅವನಿಂದ ಬೈಸಿಕೊಳ್ಳುವುದು ಸಾಕು. ಇನ್ನು ಮೇಲೆ ನನ್ನ ಬಾಸ್ ನಾನೇ ಆಗುವೆ ಎಂದು ಹೊರಡುವ ಮುನ್ನ ಜಾಗ್ರತೆ ಇರಲಿ. ಆಫೀಸಿನಲ್ಲಾದರೆ ಒಬ್ಬ ಬಾಸ್ ಅನ್ನು ಮಾತ್ರ ಸಹಿಸಿಕೊಂಡರೆ ಸಾಕು. ಆದರೆ ನಿಮ್ಮದೇ ಬ್ಯುಸಿನೆಸ್ ಆದಲ್ಲಿ ಏನೇನು ಸಹಿಸಿಕೊಳ್ಳಬೇಕಾಗುತ್ತದೆ ಎಂಬ ಬಗ್ಗೆ ಯಾವತ್ತಾದರೂ ವಿಚಾರ ಮಾಡಿದ್ದೀರಾ? ಗ್ರಾಹಕರು, ಸರಕು ಪೂರೈಕೆದಾರರನ್ನು ನಿಭಾಯಿಸಬೇಕು. ನಿಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು ನಿಮ್ಮ ವ್ಯವಹಾರಕ್ಕೆ ಉಂಟು ಮಾಡುವ ಅಡ್ಡಿ ಆತಂಕಗಳನ್ನು ಎದುರಿಸಿ ನಿಲ್ಲಬೇಕು. ಯಾವುದೋ ವಸ್ತುವನ್ನು ಅರ್ಜೆಂಟಾಗಿ ಪೂರೈಸಬೇಕಿರುವ ಸಂದರ್ಭದಲ್ಲಿಯೇ ಬೇಕಾದ ಕಚ್ಚಾ ವಸ್ತು ಸಿಗದೆ ಪರಿತಪಿಸುವಂತಾಗುತ್ತದೆ. ಇನ್ನು ಕೆಲ ಬಾರಿ ಕಳಪೆ ವಸ್ತುಗಳ ಪೂರೈಕೆಯಿಂದ ಏನು ಮಾಡುವುದು ಎಂದು ತೋಚದಂತಾಗಬಹುದು. ಆಫೀಸಿನಲ್ಲಾದರೆ ಹೀಗೆ ಆದಾಗ ವಿಷಯವನ್ನು ಬಾಸ್ ಗಮನಕ್ಕೆ ತಂದು ಪೂರೈಕೆಯಾದ ಸರಕನ್ನು ಬದಲಾಯಿಸಿ ಕೊಡುವಂತೆ ಪೂರೈಕೆದಾರರಿಗೆ ಆವಾಜ್ ಹಾಕುತ್ತಿದ್ದಿರಿ. ಆದರೆ ಇಲ್ಲಿ ಅದೆಲ್ಲ ಸಾಧ್ಯವಿಲ್ಲ. ಎಲ್ಲ ಕಷ್ಟಗಳನ್ನು ನುಂಗಿ ಮತ್ತೆ ಏನೂ ಆಗಿಲ್ಲ ಎಂಬಂತೆ ಇರಬೇಕಾಗುತ್ತದೆ.

ಪ್ರತಿ ತಿಂಗಳು ಬರುತ್ತಿದ್ದ ಸಂಬಳ ಇನ್ನೆಲ್ಲಿ!

ಪ್ರತಿ ತಿಂಗಳು ಬರುತ್ತಿದ್ದ ಸಂಬಳ ಇನ್ನೆಲ್ಲಿ!

ಆಫೀಸ್ ಕೆಲಸ ಮಾಡುವಾಗ ಪ್ರತಿ ತಿಂಗಳ ಕೊನೆಯಲ್ಲಿ ಬ್ಯಾಂಕಿಗೆ ಸಂಬಳ ಜಮೆಯಾಗುತ್ತಿತ್ತು ಅಲ್ಲವೆ? ಆದರೆ ಇನ್ನು ಅದೆಲ್ಲ ಸಾಧ್ಯವಿಲ್ಲ. ಸಂಬಳ ಬರುವುದು ದೂರವೇ ಉಳಿಯಿತು, ಇರುವ ಹಣವನ್ನು ವ್ಯವಹಾರದಲ್ಲಿ ತೊಡಗಿಸಿ ಅದನ್ನು ಹೇಗೆ ನಿರ್ವಹಿಸುವುದು ಎಂಬುದು ಗೊತ್ತಾಗದೇ ಒದ್ದಾಡುವಂತಾಗುತ್ತದೆ. ನಿಜವಾಗಿಯೂ ಸಂಬಳ ಪಡೆದು ಮಾಡುವ ಉದ್ಯೋಗ ಹಾಗೂ ಸ್ವಂತದ ಉದ್ದಿಮೆಯ ಮಧ್ಯದ ನಿಜವಾದ ವ್ಯತ್ಯಾಸದ ಆರಿವು ಆಗತೊಡಗುತ್ತದೆ. ಕಚ್ಚಾ ವಸ್ತು ಪೂರೈಸಿದವರು ಹಣಕ್ಕಾಗಿ ಪೀಡಿಸುತ್ತಿದ್ದರೆ, ಸರಕು ಪಡೆದ ಗ್ರಾಹಕರು ಪ್ರತಿದಿನ ಹೊಸ ಸುಳ್ಳು ಹೇಳುತ್ತ ಪೇಮೆಂಟ್ ಮುಂದೂಡುತ್ತಲೇ ಇರುತ್ತಾರೆ. ನಿಮ್ಮ ಕೆಲಸಗಾರರಿಗೆ ಸರಿಯಾಗಿ ಸಂಬಳ ನೀಡದಿದ್ದಲ್ಲಿ ಅವರು ಎಷ್ಟು ಬೇಕೋ ಅಷ್ಟೆ ಕೆಲಸ ಮಾಡಿ ಕಾಟಾಚಾರದ ನೌಕರಿ ಮಾಡಲಾರಂಭಿಸುತ್ತಾರೆ. ಇನ್ನು ವ್ಯಾಪಾರಕ್ಕಾಗಿ ಸಾಲ ಪಡೆದಿದ್ದರೆ ಅದರ ಬಡ್ಡಿ ಬೆಳೆಯಲಾರಂಭಿಸಿರುತ್ತದೆ. ಆದರೆ ನಿಮಗಿನ್ನೂ ಸೂಕ್ತ ಆದಾಯವೇ ಇರುವುದಿಲ್ಲ.

ಏನೋ ಮಾಡಲು ಹೋಗಿ ಮತ್ತೇನೋ ಮಾಡಲಾರಂಭಿಸುವಿರಿ

ಏನೋ ಮಾಡಲು ಹೋಗಿ ಮತ್ತೇನೋ ಮಾಡಲಾರಂಭಿಸುವಿರಿ

ದಿನಗಳೆದಂತೆ ನಿಮ್ಮ ವ್ಯಾಪಾರ ವ್ಯವಹಾರದ ಉದ್ದೇಶ ಹಾಗೂ ಗುರಿಗಳು ಬದಲಾವಣೆಗೊಳ್ಳುತ್ತಿರುವುದು ನಿಮ್ಮ ಗಮನಕ್ಕೆ ಬರಲಾರಂಭಿಸುತ್ತದೆ. ನೀವೇನು ಮಾಡಲು ಹೊರಟಿದ್ದೀರಲ್ಲ ಅದು ಬರಕತ್ತಾಗುವುದಿಲ್ಲ. ಬ್ಯಾಂಕಿನಲ್ಲಿರುವ ಬಂಡವಾಳದ ಹಣ ಕರಗುವವರೆಗೆ ಹೇಗೋ ಸಮಯ ಸಾಗುತ್ತದೆ. ಅಷ್ಟರಲ್ಲಿ ಇನ್ನಾರೋ ಹೊಸದೊಂದು ಬ್ಯುಸಿನೆಸ್ ಐಡಿಯಾ ನಿಮ್ಮ ಮುಂದೆ ಇಡಬಹುದು ಅಥವಾ ಸರಕು ಪಡೆಯುತ್ತಿದ್ದ ಗ್ರಾಹಕ ತನಗೆ ಬೇಕಾದ ಸರಕು ಮಾರ್ಪಡಿಸುವುದರಿಂದ ನಿಮ್ಮ ವ್ಯವಹಾರದ ಸ್ವರೂಪವೇ ಬದಲಾಗಬಹುದು. ಹೇಗಾದರೂ ಮಾಡಿ ಉದ್ದಿಮೆಯನ್ನು ಲಾಭದಾಯಕವಾಗಿಸಬೇಕು ಎನ್ನುವ ಉದ್ದೇಶದಿಂದ ಕಂಡ ಕಂಡ ಬ್ಯುಸಿನೆಸ್ ಐಡಿಯಾಗಳನ್ನೆಲ್ಲ ಟ್ರೈ ಮಾಡುತ್ತ ಕೊನೆಗೆ ಯಾವುದೂ ಕೈಗೂಡದೇ ಮರಳುಭೂಮಿಯಲ್ಲಿ ನೀರು ಹುಡುಕಾಡಿದ ಅನುಭವ ಆಗಬಹುದು. ಉದ್ಯಮ ಆರಂಭಿಸು ಎಂದು ಹುರಿದುಂಬಿಸಿದವರೆಲ್ಲ ಈಗ ಬಂದು 'ನೀನಿನ್ನೂ ಇದರಲ್ಲಿ ಪಳಗಬೇಕಮ್ಮಾ' ಎಂದು ಟಾಂಟ್ ಕೊಟ್ಟು ಹೋಗಲಾರಂಭಿಸುತ್ತಾರೆ. ಇದೆಲ್ಲದರಿಂದ ಗಾಬರಿಬಿದ್ದಂತಾಗಿ ಮುಂದೇನು ಮಾಡುವುದು ಎಂದು ಪರಿತಪಿಸುವಂತಾಗುತ್ತದೆ.

ಒಮ್ಮೆ ಅದೃಷ್ಟ ಕೈಹಿಡಿದಿದೆ ಎಂದರೆ ಯಾವಾಗಲೂ ಹಾಗೇ ಅಲ್ಲ

ಒಮ್ಮೆ ಅದೃಷ್ಟ ಕೈಹಿಡಿದಿದೆ ಎಂದರೆ ಯಾವಾಗಲೂ ಹಾಗೇ ಅಲ್ಲ

ಉದ್ಯಮವೊಂದನ್ನು ಆರಂಭಿಸಿ ಕೆಲವೇ ಸಮಯದಲ್ಲಿ ನೀವು ಅದರಲ್ಲಿ ಯಶಸ್ವಿಯಾಗಿರುವಿರಿ ಎಂದಿಟ್ಟುಕೊಳ್ಳೋಣ. ಆಗ ನನ್ನ ಬಿಸಿನೆಸ್ ಐಡಿಯಾ ಎಷ್ಟು ಮಸ್ತ್ ಆಗಿದೆ ಎಂದು ನಿಮ್ಮ ಬಗ್ಗೆ ನೀವೇ ಹೆಮ್ಮೆಪಟ್ಟುಕೊಳ್ಳುವುದು ಸಹಜ. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸವೂ ವೃದ್ಧಿಸುತ್ತದೆ. ಆದರೆ ಇದರ ಜೊತೆಗೆ ಇಲ್ಲಿ ಕೆಲಸ ಮಾಡಿದ ಬಿಸಿನೆಸ್ ಐಡಿಯಾ ಎಲ್ಲ ಕಡೆಯೂ ಕೆಲಸ ಮಾಡುತ್ತದೆ ಎಂಬ ಭ್ರಮೆಯನ್ನು ನಿಮ್ಮಲ್ಲಿ ಮೂಡಿಸಬಹುದು. ಹೇಗೋ ಗಳಿಸಿದ ಕೊಂಚ ಹಣವನ್ನು ಮತ್ತೊಂದಿಷ್ಟು ಬಿಸಿನೆಸ್ ಐಡಿಯಾಗಳ ಮೇಲೆ ಇನ್ವೆಸ್ಟ್ ಮಾಡಿ ನಿಧಾನವಾಗಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗಿ ಬರಬಹುದು. ನಾನೊಬ್ಬ ದೊಡ್ಡ ಬಿಸಿನೆಸ್‌ಮ್ಯಾನ್ ಆಗುವೆ ಎಂಬ ಕನಸು ನೀರಿನ ಮೇಲಿನ ಗುಳ್ಳೆಯಂತೆ ಕರಗಿ ಹೋಗಬಹುದು. ಯಶಸ್ಸು ಹಾಗೂ ಹಣ ಎರಡೂ ಬಂದಾಗ ಅದನ್ನು ಕಾಪಾಡಿಕೊಳ್ಳುವುದು ಅತ್ಯಂತ ಸವಾಲಿನ ಕೆಲಸ ಎಂಬುದು ಗೊತ್ತಿರಲಿ.

ಬಂಡವಾಳ ಹೂಡಿಕೆದಾರರ ಬಗ್ಗೆ ಎಚ್ಚರವಿರಲಿ

ಬಂಡವಾಳ ಹೂಡಿಕೆದಾರರ ಬಗ್ಗೆ ಎಚ್ಚರವಿರಲಿ

ನೀವು ಬಿಸಿನೆಸ್ ಆರಂಭಿಸಿ ಎರಡರಿಂದ ಮೂರು ವರ್ಷಗಳವರೆಗೆ ಉತ್ತಮ ಲಾಭ ಗಳಿಸುತ್ತಿದ್ದೀರಿ ಎಂದಾಗ ಇಕ್ವಿಟಿ ಇನ್ವೆಸ್ಟರ್‌ಗಳು ಹಾಗೂ ಬಂಡವಾಳ ಹೂಡಿಕೆದಾರರು ನಿಮ್ಮ ಬಳಿಗೆ ಬರುತ್ತಾರೆ. ಬಿಸಿನೆಸ್ ಪ್ಲಾನ್ ಹಾಗೂ ವ್ಯಾಲ್ಯುಯೇಶನ್ ಎಂಬ ಎರಡು ವಿಷಯಗಳ ಮೂಲಕ ಅವರು ನಿಮ್ಮನ್ನು ಮರಳು ಮಾಡಲು ಯತ್ನಿಸುತ್ತಾರೆ. ನಿಮ್ಮ ಬಿಸಿನೆಸ್ ಅನ್ನು ಕೆಲವೇ ದಿನಗಳಲ್ಲಿ ಮಿಲಿಯನ್ ಡಾಲರ್ ಕಂಪನಿ ಮಾಡುವ ಕನಸನ್ನು ನಿಮ್ಮಲ್ಲಿ ಬಿತ್ತುತ್ತಾರೆ. ವ್ಯಾಪಾರ ಬೆಳಸುವ ಆಸೆಯಿಂದ ನೀವು ಅವರಿಂದ ಬಂಡವಾಳ ಹೂಡಿಕೆ ಮಾಡಿಕೊಂಡರೆ ಅಲ್ಲಿಗೆ ನಿಮ್ಮ ಮತ್ತೊಂದು ಸಮಸ್ಯೆ ಆರಂಭವಾದಂತೆ. ಮುಟ್ಟಲಾಗದ ಮಾರಾಟದ ಗುರಿಗಳಿಂದ ಕಂಗಾಲಾಗುವ ಪರಿಸ್ಥಿತಿ ಬರಬಹುದು. ನೀವು ಸುಮ್ಮನಿದ್ದರೂ ಬಂಡವಾಳ ಹಾಕಿದವರು ಸುಮ್ಮನಿರಲಾರರು. ಬೆಳಗ್ಗೆ ನಿದ್ರೆಯಿಂದ ಏಳುವ ಮೊದಲೇ 'ಇವತ್ತು ಎಷ್ಟು ಲಾಭ ಗಳಿಸಿದೆ' ಎಂದು ಅಶರೀರವಾಣಿಯೊಂದು ಕೇಳಿದಂತಾಗಿ ಇರುವ ನೆಮ್ಮದಿ ಹಾಳಾಗಿ ಹೋಗಬಹುದು.

ಕೊನೆ ಮಾತು

ಕೊನೆ ಮಾತು

ಇತ್ತೀಚಿನ ದಿನಗಳಲ್ಲಿ ನವೋದ್ಯಮದ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗುವಂಥದ್ದಲ್ಲ. ಉತ್ತಮ ಸಂಬಳದ ಕೆಲಸ ಬಿಟ್ಟು ಏಕಾಏಕಿ ಏನೋ ಸ್ವಂತದ್ದು ಮಾಡುತ್ತೇನೆ ಎಂದು ಹೊರಡುವ ಮುನ್ನ ಸಾವಿರ ಬಾರಿ ಯೋಚಿಸಿ. ಬಾಸ್ ಬೈದ ಅಂತಾಗಲಿ, ಆಫೀಸಲ್ಲಿ ತುಸು ಲೇಟಾಗುತ್ತಿದೆ ಅಂತಾಗಲಿ ಕೆಲಸ ಬಿಟ್ಟು ಬಿಡುತ್ತೇನೆ ಎನ್ನುವುದು ಶುದ್ಧ ಮೂರ್ಖತನ. ಬೇಜಾರಾಗಿದ್ದರೆ ಒಂದಿಷ್ಟು ಲೀವ್ ಹಾಕಿ ಸುತ್ತಾಡಿ ಬನ್ನಿ. ಆದರೆ ಪ್ರತಿ ತಿಂಗಳು ಐದಂಕಿಯ ಸಂಬಳ ನೀಡುವ ಕೆಲಸ ಬಿಟ್ಟು ಬಿಡುವ ಯೋಚನೆ ಮಾಡದಿರಿ. ಒಂದು ವೇಳೆ ದೃಢ ನಿರ್ಧಾರ ಮಾಡಿ ಸ್ವಂತ ಉದ್ಯಮ ಆರಂಭಿಸ ಬಯಸಿದರೆ ಪೂರ್ವಯೋಜನೆಯೊಂದಿಗೆ ಮುನ್ನುಗ್ಗಿ, ಯಶಸ್ಸು ತನ್ನಿಂದ ತಾನೇ ನಿಮ್ಮ ಕಾಲ ಬಳಿ ಬಿದ್ದಿರುತ್ತೆ!

Read more about: business money investment
English summary

Why you should not leave your job to start a business

the dividing line between work and life is erased the day you become a business owner. There is no shutting off.
Story first published: Monday, April 29, 2019, 11:05 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more