For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಶುಲ್ಕ ಮತ್ತು ದಂಡಗಳ ಬಗ್ಗೆ ನಿಮಗೆಷ್ಟು ಗೊತ್ತು?

ಇತ್ತೀಚಿನ ದಶಕಗಳಲ್ಲಿ ಕ್ರೆಡಿಟ್ ಕಾರ್ಡ್ ಗಳು ಜಗತ್ತಿನ ಕೋಟ್ಯಂತರ ಜನರ ಬಹು ಮೆಚ್ಚಿನ ಹಣಕಾಸು ವ್ಯವಹಾರದ ಸಾಧನಗಳಾಗಿ ಮಾರ್ಪಟ್ಟಿವೆ.

|

ಇತ್ತೀಚಿನ ದಶಕಗಳಲ್ಲಿ ಕ್ರೆಡಿಟ್ ಕಾರ್ಡ್ ಗಳು ಜಗತ್ತಿನ ಕೋಟ್ಯಂತರ ಜನರ ಬಹು ಮೆಚ್ಚಿನ ಹಣಕಾಸು ವ್ಯವಹಾರದ ಸಾಧನಗಳಾಗಿ ಮಾರ್ಪಟ್ಟಿವೆ. ಕ್ರೆಡಿಟ್ ಕಾರ್ಡ್ ಎಂದಾಕ್ಷಣ ಕೆಲವರು ಈಗಲೂ 'ಬೇಡ ಬಿಡಿ ಕ್ರೆಡಿಟ್ ಕಾರ್ಡ್ ಸಹವಾಸ, ಅದರಿಂದ ಹಾಳಾಗಿ ಹೋದೆವು' ಎನ್ನುವವರೂ ಇದ್ದಾರೆ. ಆದರೆ ವಿವೇಚನೆ ಹಾಗೂ ಜಾಣತನದಿಂದ ಬಳಸಿದಲ್ಲಿ ಈ ಸುಂದರವಾದ ಕಾರ್ಡ್ ಗಳು ಸಾಕಷ್ಟು ಅನುಕೂಲತೆಗಳನ್ನು ಜೀವನದಲ್ಲಿ ತರಬಲ್ಲವು.

ಕ್ರೆಡಿಟ್ ಕಾರ್ಡ್ ಕ್ಯಾಶಬ್ಯಾಕ್ ಹಾಗೂ ಡಿಸ್ಕೌಂಟ್ ಆಫರ್

ಕ್ರೆಡಿಟ್ ಕಾರ್ಡ್ ಕ್ಯಾಶಬ್ಯಾಕ್ ಹಾಗೂ ಡಿಸ್ಕೌಂಟ್ ಆಫರ್

ದಿನನಿತ್ಯದ ಖರ್ಚು ವೆಚ್ಚಗಳಾದ ಕಿರಾಣಿ, ಪೆಟ್ರೋಲ್ ಹಾಗೂ ಬಿಲ್ಲುಗಳ ಪಾವತಿಗೆ ಹಲವಾರು ಕ್ಯಾಶಬ್ಯಾಕ್, ಹೊಟೇಲುಗಳಲ್ಲಿ ಊಟ ಮಾಡಿದ ಬಿಲ್ ಮೇಲೆ ಡಿಸ್ಕೌಂಟ್, ಇನ್ನಿತರ ಖರ್ಚುಗಳ ಪಾವತಿಯ ಮೇಲೆ ರಿವಾರ್ಡ್ ಪಾಯಿಂಟ್ಸ್ ಹೀಗೆ ಇನ್ನೂ ಅನೇಕ ಹೆಚ್ಚುವರಿ ಸೌಲಭ್ಯಗಳನ್ನು ಕ್ರೆಡಿಟ್ ಕಾರ್ಡ್ ಗಳು ಗ್ರಾಹಕರಿಗೆ ನೀಡುತ್ತವೆ. ರಿವಾರ್ಡ್ ಪಾಯಿಂಟ್ಸ್ ಗಳನ್ನು ಬಳಸಿ ಗಿಫ್ಟ್ ಖರೀದಿಸಬಹುದು, ಇನ್ನಾರಿಗೋ ಉಡುಗೊರೆ ಕಳುಹಿಸಬಹುದು ಅಥವಾ ಪ್ರಯಾಣದ ಸಂದರ್ಭದಲ್ಲಿ ವಿಮಾನದ ಟಿಕೆಟ್ ಮೇಲೆ ಡಿಸ್ಕೌಂಟ್ ಸಹ ಪಡೆಯಬಹುದು. ಇದನ್ನೆಲ್ಲ ಗಮನಿಸಿದರೆ ಕ್ರೆಡಿಟ್ ಕಾರ್ಡ್ ಗಳು ನಿಜವಾಗಿಯೂ ಆಕರ್ಷಕವಾಗಿವೆ ಎಂದೆನಿಸುವುದು ಸಹಜ.

ಎಚ್ಚರಿಕೆಯಿಂದ ಕಾರ್ಡ್ ಬಳಸಿ

ಎಚ್ಚರಿಕೆಯಿಂದ ಕಾರ್ಡ್ ಬಳಸಿ

ಕಾರ್ಡ್ ನ ಸೌಲಭ್ಯಗಳು ಹಾಗೂ ಅನುಕೂಲತೆಗಳ ಜೊತೆಗೆ ಅದಕ್ಕಾಗಿ ಭರಿಸಬೇಕಿರುವ ಶುಲ್ಕಗಳ ಬಗ್ಗೆಯೂ ತಿಳಿದುಕೊಳ್ಳುವುದು ಓರ್ವ ಜವಾಬ್ದಾರಿಯುತ ಗ್ರಾಹಕನ ಕರ್ತವ್ಯ. ಕ್ರೆಡಿಟ್ ಕಾರ್ಡ್ ಕಂಪನಿಗಳು ವಿಧಿಸುವ ವಿವಿಧ ರೀತಿಯ ಶುಲ್ಕಗಳು ಹಾಗೂ ವೆಚ್ಚಗಳ ಬಗ್ಗೆ ಎಚ್ಚರಿಕೆಯಿಂದ ಸಂಪೂರ್ಣವಾಗಿ ಅರಿತುಕೊಳ್ಳುವುದು ಸೂಕ್ತ. ವಿವೇಚನೆಯಿಂದ ಕಾರ್ಡ್ ಬಳಸಬೇಕಾದರೆ ಈ ಜ್ಞಾನ ಬೇಕೇ ಬೇಕು. ಹಾಗಾದರೆ ಕ್ರೆಡಿಟ್ ಕಾರ್ಡ್ ಕಂಪನಿಗಳು ಗ್ರಾಹಕರಿಗೆ ಯಾವೆಲ್ಲ ರೀತಿಯ ಶುಲ್ಕಗಳನ್ನು ವಿಧಿಸುತ್ತವೆ ಎಂಬುದನ್ನು ತಿಳಿಯೋಣ.

ಬಡ್ಡಿ ಶುಲ್ಕಗಳು

ಬಡ್ಡಿ ಶುಲ್ಕಗಳು

ಕಾರ್ಡ್ನಿಂದ ಖರ್ಚು ಮಾಡಿದ ಹಣಕ್ಕೆ ಕಂಪನಿಗಳು ಬಡ್ಡಿ ವಿಧಿಸುವುದು ಅತಿ ಪ್ರಮುಖ ಶುಲ್ಕವಾಗಿದೆ. ಸಾಮಾನ್ಯವಾಗಿ ಬಾಕಿ ಉಳಿಸಿಕೊಂಡ ಮೊತ್ತಕ್ಕೆ ಮಾತ್ರ ಬಡ್ಡಿ ಶುಲ್ಕಗಳು ಅನ್ವಯಿಸುತ್ತವೆ. ಅಂದರೆ ತಿಂಗಳ ಕಾರ್ಡ್ ಸ್ಟೇಟಮೆಂಟ್ನಲ್ಲಿ ತಿಳಿಸಲಾದ ಒಟ್ಟು ಬಾಕಿ ಮೊತ್ತವನ್ನು ಆಯಾ ತಿಂಗಳ ನಿಗದಿತ ಕೊನೆಯ ದಿನಾಂಕದೊಳಗೆ ಪಾವತಿಸದಿದ್ದಲ್ಲಿ ಆ ಮೊತ್ತಕ್ಕೆ ಬಡ್ಡಿ ಕಟ್ಟಬೇಕಾಗುತ್ತದೆ.
ಉದಾಹರಣೆಗೆ ನೋಡುವುದಾದರೆ, ಒಂದು ನಿರ್ದಿಷ್ಟ ತಿಂಗಳಲ್ಲಿ ನೀವು ನಿಮ್ಮ ಕಾರ್ಡ್ ಕಂಪನಿಗೆ 20,000 ರೂ. ಪಾವತಿಸಬೇಕಿದೆ ಎಂದಿಟ್ಟುಕೊಳ್ಳೋಣ. ಆದರೆ ಆ ತಿಂಗಳು ನೀವು 10,000 ರೂ. ಪಾವತಿಸಿ ಇನ್ನುಳಿದ ಮೊತ್ತವನ್ನು ಬಾಕಿ ಉಳಿಸಿಕೊಂಡಲ್ಲಿ ಆ ಬಾಕಿ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಪೂರ್ಣ ಬಾಕಿ ಪಾವತಿಯಾಗುವವರೆಗೆ ಪ್ರತಿ ಮಾಸಿಕ ಬಿಲ್ ಸೈಕಲ್ ಆಧಾರದಲ್ಲಿ ಬಡ್ಡಿ ಸೇರಿಸಲಾಗುತ್ತದೆ. ಇನ್ನು ಬಡ್ಡಿದರ ಪ್ರಮಾಣವು ಆಯಾ ಕಂಪನಿಯ ನಿಯಮ ಹಾಗೂ ಷರತ್ತುಗಳಿಗುಣವಾಗಿ ವಿಭಿನ್ನವಾಗಿರುತ್ತದೆ. ಆದರೂ ಸಾಮಾನ್ಯವಾಗಿ ಕಾರ್ಡ್ ಕಂಪನಿಗಳು ವಾರ್ಷಿಕ ಶೇ.40 ರಿಂದ 45 ಬಡ್ಡಿದರ ವಿಧಿಸುತ್ತವೆ.

ವಾರ್ಷಿಕ ಶುಲ್ಕಗಳು

ವಾರ್ಷಿಕ ಶುಲ್ಕಗಳು

ಕಾರ್ಡ್ ಕೊಡುವ ಆರಂಭದಲ್ಲಿಯೇ ಬಹುತೇಕ ಕಂಪನಿಗಳು ಮೊದಲ ಬಾರಿಯ ವಾರ್ಷಿಕ ಶುಲ್ಕವನ್ನು ವಿಧಿಸುತ್ತವೆ ಹಾಗೂ ವರ್ಷಕ್ಕೊಮ್ಮೆ ಈ ಶುಲ್ಕ ಭರಿಸಿಕೊಳ್ಳುತ್ತವೆ. ಆದರೆ ಈ ಶುಲ್ಕಗಳು ಎಲ್ಲ ರೀತಿಯ ಕಾರ್ಡ್ಗಳಿಗೆ ಒಂದೇ ತೆರನಾಗಿರುವುದಿಲ್ಲ. ಕಾರ್ಡ್ ನೀಡುವ ಕಂಪನಿ ಹಾಗೂ ಕಾರ್ಡ್ನಲ್ಲಿರುವ ಸೌಲಭ್ಯಗಳ ಆಧಾರದಲ್ಲಿ ಶುಲ್ಕಗಳು ವ್ಯತ್ಯಾಸವಾಗುತ್ತವೆ. ಇನ್ನು ಕೆಲ ಕಂಪನಿಗಳು ನಿರ್ದಿಷ್ಟ ಅವಧಿಯಲ್ಲಿ ಗ್ರಾಹಕ ನಿಗದಿತ ಮೊತ್ತವನ್ನು ಖರ್ಚು ಮಾಡಿದ ತಕ್ಷಣ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡುವ ಸೌಲಭ್ಯ ಸಹ ನೀಡುತ್ತವೆ. ಇದರ ಜೊತೆಗೆ ಶೂನ್ಯ ವಾರ್ಷಿಕ ಶುಲ್ಕದೊಂದಿಗೆ ಸಹ ಹಲವಾರು ಕಂಪನಿಗಳು ಕಾರ್ಡ್ ನೀಡುತ್ತವೆ. ಆದರೂ ಕಾರ್ಡ್ಗೆ ಅರ್ಜಿ ಸಲ್ಲಿಸುವ ಮುನ್ನ ಅದರ ವಾರ್ಷಿಕ ಶುಲ್ಕಗಳ ಕುರಿತು ಎಲ್ಲ ರೀತಿಯ ನಿಯಮ ಹಾಗೂ ಷರತ್ತುಗಳ ಬಗ್ಗೆ ಅಭ್ಯಾಸ ಮಾಡಿ ತಿಳಿದುಕೊಳ್ಳಲೇಬೇಕು. ವಾರ್ಷಿಕ ಶುಲ್ಕ ಪಾವತಿಸುವುದೇ ಆದಲ್ಲಿ ಅದರ ಬದಲಾಗಿ ಯಾವ ಡಿಸ್ಕೌಂಟ್ ಅಥವಾ ರಿವಾರ್ಡ್ ಗಳನ್ನು ಕಂಪನಿ ನೀಡುತ್ತದೆ ಎಂಬುದು ಮುಖ್ಯವಾಗುತ್ತದೆ.

ವಿದೇಶಿ ವ್ಯವಹಾರ ಶುಲ್ಕಗಳು

ವಿದೇಶಿ ವ್ಯವಹಾರ ಶುಲ್ಕಗಳು

ಕಾರ್ಡ್ ನಿಂದ ಮಾಡುವ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಾಮಾನ್ಯವಾಗಿ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಇದನ್ನು ವಿದೇಶಿ ವ್ಯವಹಾರ ಶುಲ್ಕ ಎಂದು ಕರೆಯಲಾಗುತ್ತದೆ. ಈ ಶುಲ್ಕಗಳು ಸಾಮಾನ್ಯವಾಗಿ ವ್ಯವಹಾರದ ಮೊತ್ತದ ಶೇ.1 ರಿಂದ 3 ರಷ್ಟಿರುತ್ತವೆ. ವಿದೇಶಿ ಕರೆನ್ಸಿಯಲ್ಲಿ ವ್ಯವಹಾರ ಮಾಡಿದಾಗ ಅಥವಾ ವಿದೇಶಿ ಬ್ಯಾಂಕ್ ಮೂಲಕ ವ್ಯವಹಾರ ನಡೆದಲ್ಲಿ ಈ ಶುಲ್ಕಗಳನ್ನು ಆಕರಿಸಲಾಗುತ್ತದೆ. ವಿದೇಶಗಳಲ್ಲಿನ ಎಟಿಎಂನಿಂದ ಹಣ ತೆಗೆಯುವುದು ಅಥವಾ ವಿದೇಶಗಳಲ್ಲಿ ಕಾರ್ಡ್ ಸ್ವೈಪ್ ಮಾಡುವುದು ಹೀಗೆ ಎಲ್ಲ ರೀತಿಯ ವಿದೇಶಿ ವ್ಯವಹಾರಗಳಿಗೆ ಈ ಶುಲ್ಕ ಅನ್ವಯಿಸುತ್ತವೆ.
ಹಲವಾರು ಕಾರ್ಡ್ ಕಂಪನಿಗಳು ಇತ್ತೀಚೆಗೆ ಟ್ರಾವೆಲ್ ಕ್ರೆಡಿಟ್ ಕಾರ್ಡ್ಗಳನ್ನು ನೀಡುತ್ತಿದ್ದು, ಇವುಗಳಲ್ಲಿ ಶೂನ್ಯ ವಿದೇಶಿ ವ್ಯವಹಾರ ಶುಲ್ಕ ಅಥವಾ ಒಂದು ನಿಗದಿತ ಶುಲ್ಕವನ್ನು ಆಕರಿಸಲಾಗುತ್ತದೆ.

ವಿಳಂಬ ಪಾವತಿ ಶುಲ್ಕ

ವಿಳಂಬ ಪಾವತಿ ಶುಲ್ಕ

ಒಂದು ವೇಳೆ ತಿಂಗಳಿನ ನಿಗದಿತ ಕೊನೆಯ ದಿನಾಂಕದೊಳಗೆ ಬಾಕಿ ಮೊತ್ತವನ್ನು ನೀವು ಪಾವತಿಸದಿದ್ದಲ್ಲಿ ಕಂಪನಿ ಇಡೀ ಬಾಕಿ ಮೊತ್ತದ ಮೇಲೆ ವಿಳಂಬ ಪಾವತಿ ಶುಲ್ಕ (ಲೇಟ್ ಪೇಮೆಂಟ್ ಫೀ) ವಿಧಿಸುತ್ತದೆ. ಬಾಕಿ ಮೊತ್ತವನ್ನು ಆಧರಿಸಿ ಈ ಶುಲ್ಕಗಳು ನಿಗದಿಯಾಗುತ್ತವೆಯದರೂ ಬ್ಯಾಂಕಿನಿಂದ ಬ್ಯಾಂಕಿಗೆ ಇವು ಭಿನ್ನವಾಗಿವೆ. ಇನ್ನು ಸತತವಾಗಿ ಕೆಲ ತಿಂಗಳು ಬಾಕಿ ಪಾವತಿಸದೇ ಇದ್ದಲ್ಲಿ ಬ್ಯಾಂಕು ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಮಾಡುತ್ತದೆ. ಹೀಗಾಗಿ ಆಯಾ ತಿಂಗಳಿನ ಕನಿಷ್ಠ ಪಾವತಿ ಮೊತ್ತವನ್ನಾದರೂ ಭರಿಸುವುದು ಸೂಕ್ತ. ಒಂದೊಮ್ಮೆ ನೀವು ಕನಿಷ್ಠ ಬಾಕಿ ಮೊತ್ತ ಮಾತ್ರ ಪಾವತಿಸಿ ಇನ್ನುಳಿದ ಮೊತ್ತವನ್ನು ಹಾಗೆಯೇ ಉಳಿಸಿಕೊಂಡಿದ್ದಲ್ಲಿ ಅದರ ಮೇಲೆ ಸಹ ಬಡ್ಡಿ ಕಟ್ಟಬೇಕಾಗುತ್ತದೆ. ಹೀಗಾಗಿ ಕೊನೆಯ ದಿನಾಂಕದೊಳಗೆ ಸಂಪೂರ್ಣ ಬಾಕಿ ಮೊತ್ತ ಪಾವತಿಸುವುದು ಜಾಣತನವಾಗಿದೆ.

ನಗದು ವಿತ್ ಡ್ರಾವಲ್ ಶುಲ್ಕಗಳು

ನಗದು ವಿತ್ ಡ್ರಾವಲ್ ಶುಲ್ಕಗಳು

ಕ್ರೆಡಿಟ್ ಕಾರ್ಡ್ನಿಂದ ನಗದು ಪಡೆಯುವುದು ಯಾವತ್ತೂ ಸರಿಯಲ್ಲ. ಆದಾಗ್ಯೂ ಕೆಲ ತುರ್ತು ಸಂದರ್ಭಗಳಲ್ಲಿ ನೀವು ನಗದು ವಿತ್ ಡ್ರಾ ಮಾಡಿದಲ್ಲಿ ಇದಕ್ಕೆ ಕ್ಯಾಶ್ ಅಡ್ವಾನ್ಸ್ ಫೀ ಭರಿಸಬೇಕಾಗುತ್ತದೆ. ಈ ಶುಲ್ಕ ನಿರ್ದಿಷ್ಟ ಮೊತ್ತದ ಶುಲ್ಕವಾಗಿರಬಹುದು ಅಥವಾ ವಿತ್ ಡ್ರಾ ಮೊತ್ತದ ಶೇಕಡಾವಾರು ಮೊತ್ತವಾಗಿರಬಹುದು. ನಿಮ್ಮ ಕಾರ್ಡ್ನಲ್ಲಿ ನೀಡಲಾಗಿರುವ ಕ್ರೆಡಿಟ್ ಲಿಮಿಟ್ ಮೇಲೆ ಈ ನಗದು ವಿತ್ಡ್ರಾ ಮೊತ್ತ ನಿರ್ಧರಿಸಲ್ಪಡುತ್ತದೆ. ಕಾರ್ಡ್ ನಲ್ಲಿ ಲಭ್ಯವಿರುವ ಲಿಮಿಟ್ ಮೊತ್ತದ ಶೇ.40 ರಷ್ಟು ಮೊತ್ತವನ್ನು ನಗದಾಗಿ ವಿತ್ಡ್ರಾ ಮಾಡಬಹುದು. ನಗದು ಪಡೆದ ತಕ್ಷಣದಿಂದಲೇ ಇದಕ್ಕೆ ಬಡ್ಡಿದರಗಳು ಅನ್ವಯಿಸುತ್ತವೆ. ಸಾಮಾನ್ಯವಾಗಿ ನಗದು ವಿತ್ ಡ್ರಾಗಳಿಗೆ ಶೇ.3 ರಿಂದ 5 ರಷ್ಟು ಬಡ್ಡಿ ವಿಧಿಸಲಾಗುತ್ತದೆ.

ಜಿಎಸ್ಟಿ ಶುಲ್ಕಗಳು

ಜಿಎಸ್ಟಿ ಶುಲ್ಕಗಳು

ಕ್ರೆಡಿಟ್ ಕಾರ್ಡ್ ನ ಶುಲ್ಕಗಳಾದ ಬಡ್ಡಿ ಶುಲ್ಕ, ವಿಳಂಬ ಪಾವತಿ ಶುಲ್ಕ, ವಾರ್ಷಿಕ ಶುಲ್ಕ, ನಗದು ಹಿಂಪಡೆತ ಶುಲ್ಕ, ಇಎಂಐ ಶುಲ್ಕಗಳು ಇತ್ಯಾದಿಗಳ ಮೇಲೆ ಶೇ.18 ರಷ್ಟು ಜಿಎಸ್ ಟಿ ದರಗಳು ಅನ್ವಯವಾಗುವುದರಿಂದ ಆದಷ್ಟೂ ಸಮಯಕ್ಕೆ ಸರಿಯಾಗಿ ಬಾಕಿ ಪಾವತಿಸವುದು ಸೂಕ್ತ. ಇಲ್ಲವಾದಲ್ಲಿ ಬಾಕಿ ಮೊತ್ತ ಹೆಚ್ಚಾಗುತ್ತಿದ್ದಂತೆಯೇ ಜಿಎಸ್ ಟಿ ಶುಲ್ಕಗಳು ಸಹ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತವೆ.

ವಿವೇಚನೆಯಿಂದ ಬಳಸಿ, ಜಾಣ ಗ್ರಾಹಕರಾಗಿ

ವಿವೇಚನೆಯಿಂದ ಬಳಸಿ, ಜಾಣ ಗ್ರಾಹಕರಾಗಿ

ನಿಮ್ಮ ಆದಾಯ ಹಾಗೂ ಖರ್ಚು ವೆಚ್ಚಗಳನ್ನು ನೋಡಿಕೊಂಡು ಹಿತಮಿತವಾಗಿ ಕ್ರೆಡಿಟ್ ಕಾರ್ಡ್ ಬಳಸಿದಲ್ಲಿ ಅದರಿಂದ ಹಲವಾರು ಅನುಕೂಲತೆಗಳಿವೆ. ಯಾವ ಸಂದರ್ಭಗಳಲ್ಲಿ ಕಾರ್ಡ್ ಬಳಸಬೇಕೆಂಬುದನ್ನು ವಿವೇಚನೆಯಿಂದ ನಿರ್ಧರಿಸಿ. ಕಾರ್ಡ್ ಜೇಬಿನಲ್ಲಿದೆ ಎಂದು ಕಂಡದ್ದನ್ನೆಲ್ಲ ಕೊಂಡರೆ ಆಪತ್ತು ಖಚಿತ. ಇಲ್ಲಿ ತಿಳಿಸಲಾದ ಕಾರ್ಡ್ನ ಶುಲ್ಕ ಹಾಗೂ ಇನ್ನಿತರ ವೆಚ್ಚಗಳ ಬಗ್ಗೆ ಸರಿಯಾಗಿ ಅಭ್ಯಾಸ ಮಾಡಿ ಜಾಣ ಗ್ರಾಹಕರಾಗಿ.

English summary

Credit card fees and charges you need to know

Credit cards are fast becoming the preferred payment tool for countless users across the globe.
Story first published: Friday, May 31, 2019, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X