For Quick Alerts
ALLOW NOTIFICATIONS  
For Daily Alerts

ಪ್ರಸ್ತುತ ಆರ್ಥಿಕ ಕುಸಿತವು 2008ಕ್ಕಿಂತ ಅತ್ಯಂತ ಭೀಕರವಾಗಿದೆ, ಯಾಕೆ ಗೊತ್ತೆ?

|

ಕಳೆದ 70 ವರ್ಷಗಳಲ್ಲೇ ಭಾರತದ ಅರ್ಥ ವ್ಯವಸ್ಥೆಯ ಕುಸಿತದ ಬಗ್ಗೆ ಈಗ ಎಲ್ಲೆಲ್ಲೂ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. 5 ಟ್ರಿಲಿಯನ್ ಡಾಲರ್ ಎಕಾನಮಿಯ ಗುರಿ ಇಟ್ಟುಕೊಂಡಿರುವ ದೇಶದ ಆರ್ಥಿಕತೆ ಕಳೆದ ಕೆಲ ತಿಂಗಳುಗಳಲ್ಲಿ ಪಾತಾಳಕ್ಕೆ ಮುಟ್ಟಿದೆ. ಬಹುತೇಕ ಉತ್ಪಾದನಾ ವಲಯಗಳು ಹಿಂದೆಂದೂ ಕಾಣದ ಕೆಳಮಟ್ಟಕ್ಕೆ ಕುಸಿದಿವೆ. ಪ್ರಸ್ತುತ ಶೇ. 5 ರ ಆರ್ಥಿಕಾಭಿವೃದ್ಧಿಯನ್ನು ನಿರೀಕ್ಷಿಸಿದರೂ ಹಳೆಯ ಜಿಡಿಪಿ ಲೆಕ್ಕಾಚಾರದ ಮಾನದಂಡಗಳ ಪ್ರಕಾರ ಅದು ಶೇ. 3.5 ಕ್ಕೆ ಬಂದು ನಿಲ್ಲುತ್ತದೆ. ಇನ್ನು ದೇಶದ ಜನಸಂಖ್ಯಾ ವೃದ್ಧಿಯನ್ನು ಪರಿಗಣಿಸಿದಲ್ಲಿ ಆರ್ಥಿಕಾಭಿವೃದ್ಧಿಯ ದರ ಮತ್ತೂ ಕಡಿಮೆಯಾಗುತ್ತದೆ.

ಸ್ಲೋಡೌನ್ ಆಗಿದ್ದು ಸತ್ಯ
 

ಸ್ಲೋಡೌನ್ ಆಗಿದ್ದು ಸತ್ಯ

ಸ್ಲೋಡೌನ್ ಅಥವಾ ಆರ್ಥಿಕ ಹಿಂಜರಿತದ ಬಗ್ಗೆ ಮುಕ್ತವಾಗಿ ಮಾತನಾಡಲು ಸಹ ಕೆಲವರು ಹಿಂಜರಿಯುತ್ತಿದ್ದಾರೆ. ಅದರಲ್ಲೂ ಸರಕಾರಿ ನೌಕರರು ಈ ಬಗ್ಗೆ ಸೊಲ್ಲೆತ್ತಿದರೆ ಅವರು ತಮ್ಮ ನೌಕರಿಯನ್ನೇ ಕಳೆದುಕೊಳ್ಳಬಹುದು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಸರಕಾರಿ ಅಧಿಕಾರಿಯೊಬ್ಬರು.

ಕಳೆದೊಂದು ದಶಕದ ಅತಿ ಕೆಟ್ಟ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕತೆ ಇರುವುದು ಸತ್ಯ. ಇದನ್ನು ಅರಿತುಕೊಂಡು ಮುನ್ನಡೆಯುವುದು ಜಾಣತನ. ಕಳೆದ 2008 ರಲ್ಲಿಯೂ ಭಾರತ ಇಂಥದೇ ಆರ್ಥಿಕ ಹಿಂಜರಿತವನ್ನು ಕಂಡಿತ್ತು. ಆದರೆ ಆಗ ಇಡೀ ವಿಶ್ವದಲ್ಲಿ ಉಂಟಾಗಿದ್ದ ಆರ್ಥಿಕ ಕುಸಿತದ ಪರಿಣಾಮ ಭಾರತದ ಮೇಲಾಗಿತ್ತು. ಅಂದರೆ ಅದು ಕೇವಲ ದೇಶದ ಆಂತರಿಕ ಸಮಸ್ಯೆಗಳಿಂದ ಆಗಿರಲಿಲ್ಲ.

- ಅಮೆರಿಕಾದ ಲೆಹಮ್ಯಾನ್ ಬಿಕ್ಕಟ್ಟಿನ ನೆನಪು ಮರುಕಳಿಕೆ

ಕಳೆದ ದಶಕದಲ್ಲಿ ಅಮೆರಿಕಾದಲ್ಲಿ ತಲ್ಲಣ ಸೃಷ್ಟಿಸಿದ್ದ ಲೆಹಮ್ಯಾನ್ ಬಿಕ್ಕಟ್ಟಿನ ನೆನಪು ಈಗ ಮತ್ತೆ ಮರುಕಳಿಸುವಂತಾಗಿದೆ. ಆಗ ಇಡೀ ಅಮೆರಿಕಾದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿತ್ತು. ಬೇಕಾಬಿಟ್ಟಿಯಾಗಿ ಸಾಲ ಹಂಚಿದ್ದು ಹಾಗೂ ಅವು ಮರುಪಾವತಿಯಾಗದೆ ಇಡೀ ಅಮೆರಿಕದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿದ್ದು ಇತಿಹಾಸ.

ಈಗ ಭಾರತದಲ್ಲಿ ಆಗುತ್ತಿರುವುದೇನು?

ಈಗ ಭಾರತದಲ್ಲಿ ಆಗುತ್ತಿರುವುದೇನು?

ಸದ್ಯದ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಪ್ರಸ್ತುತ ಭಾರತದ ಆರ್ಥಿಕ ಬಿಕ್ಕಟ್ಟಿಗೆ ದೇಶದ ಆಂತರಿಕ ಸಮಸ್ಯೆಗಳೇ ಹೆಚ್ಚು ಕಾರಣಗಳಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಸಂಗತಿಯಾಗಿದೆ. ಮೊದಲಿಗೆ ದೇಶದ ಹಣಕಾಸು ವಲಯಕ್ಕೆ ಆವರಿಸಿಕೊಂಡ ಬಿಕ್ಕಟ್ಟು ನಂತರ ಎಲ್ಲ ಕ್ಷೇತ್ರಗಳಿಗೂ ಹರಡಿದ್ದು ಕಾಣುತ್ತಿದೆ. ದೊಡ್ಡ ಮೊತ್ತದ ಸಾಲ ಪಡೆದ ಉದ್ಯಮಿಗಳು ಸಾಲ ಮರುಪಾವತಿ ಮಾಡದೇ ದೇಶ ಬಿಟ್ಟು ಓಡಿ ಹೋಗಿದ್ದರಿಂದ ಅಥವಾ ದಿವಾಳಿತನದ ಅರ್ಜಿ ಸಲ್ಲಿಸಿದ್ದರಿಂದ ಬ್ಯಾಂಕಿಂಗ್ ವಲಯದಲ್ಲಿ ತಲ್ಲಣ ಮೂಡಿಸಿದೆ. ಅದರಲ್ಲೂ ಸರಕಾರದ ಅಷ್ಟೊಂದು ಹಿಡಿತದಲ್ಲಿ ಇಲ್ಲದ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ನೀಡಿದ ಸಾಲಗಳು ಮರುಪಾವತಿಯಾಗದೆ ಇಂಥದೊಂದು ಭೀಕರ ಪರಿಸ್ಥಿತಿ ಎದುರಾಗಿದೆ. ಡೀಲರ್ ಗಳು, ಸಣ್ಣ ಉದ್ಯಮಗಳು ಹಾಗೂ ಚಿಕ್ಕ ವ್ಯಾಪಾರಿಗಳಿಗೆ ಸಾಲ ನೀಡುತ್ತಿದ್ದ ಬ್ಯಾಂಕಿಂಗ್ ಯೇತರ ಹಣಕಾಸು ಸಂಸ್ಥೆಗಳು ಬಂಡವಾಳ ಕಳೆದುಕೊಂಡು ದಿವಾಳಿ ಅಂಚಿಗೆ ಬಂದಿದ್ದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿವೆ.

ಆರ್ಥಿಕ ಬೆಳವಣಿಗೆ ದರ ಶೇ 3.5 ರಿಂದ 4 ಮಾತ್ರ !
 

ಆರ್ಥಿಕ ಬೆಳವಣಿಗೆ ದರ ಶೇ 3.5 ರಿಂದ 4 ಮಾತ್ರ !

2019ನೇ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದ ಶೇ. 5 ರ ಜಿಡಿಪಿ ಬೆಳವಣಿಗೆಯ ದರ ಹಳೆಯ ಜಿಡಿಪಿ ಲೆಕ್ಕಾಚಾರದ ಪ್ರಕಾರ ಶೇ. 3.5 ರಿಂದ 4 ರಷ್ಟು ಮಾತ್ರ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

2018 ರ ನವೆಂಬರ್ ತಿಂಗಳಿಂದೀಚೆಗೆ ಜಿಡಿಪಿ ಲೆಕ್ಕಾಚಾರದ ರೀತಿಯನ್ನು ಭಾರತ ಬದಲಾಯಿಸಿತ್ತು. ಆ ಹಳೆಯ ಲೆಕ್ಕಾಚಾರದ ಪ್ರಕಾರ 2008-09 ರಲ್ಲಿ ಶೇ. 3.9, 2002-03 ರಲ್ಲಿ ಶೇ. 3.8 ಹಾಗೂ 2000-01 ರಲ್ಲಿ ಶೇ. 3.84 ರಷ್ಟು ಅತಿ ಕಡಿಮೆ ಜಿಡಿಪಿ ಬೆಳವಣಿಗೆ ದಾಖಲಾಗಿದ್ದವು.

ಹಿಂಜರಿತ ಒಪ್ಪಿಕೊಳ್ಳದ ಸರಕಾರ

ಹಿಂಜರಿತ ಒಪ್ಪಿಕೊಳ್ಳದ ಸರಕಾರ

ಈಗ ಶೇಕಡಾ 5 ರ ಆರ್ಥಿಕ ಬೆಳವಣಿಗೆಯನ್ನು ಒಪ್ಪಿಕೊಂಡರೂ ಆ ಲೆಕ್ಕಾಚಾರ 2008-09 ರ ಶೇಕಡಾ 3.09 ರ ಮಟ್ಟಕ್ಕೆ ಬಂದು ನಿಲ್ಲುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ಆರ್ಥಿಕ ತಜ್ಞರು ಹಿಂಜರಿತ ಬಂದಿದೆ ಎಂಬುದನ್ನು ಒಪ್ಪಿಕೊಳ್ಳಲು ಮಾತ್ರ ಇನ್ನೂ ತಯಾರಿಲ್ಲ. ಈ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸರಕಾರಿ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಅಥವಾ ಹಾಗೇನೂ ಇಲ್ಲ ಎಂದು ವಾದಿಸುತ್ತಿದ್ದಾರೆ. ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳದೆ ಸಮಸ್ಯೆ ಇನ್ನಷ್ಟು ಜಟೀಲವಾಗಲು ಸರಕಾರವೇ ಕಾರಣವಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಸರಿಯಾದ ಅರ್ಥಿಕ ನೀತಿ ಹಾಗೂ ನಿಯಮಗಳನ್ನು ತಕ್ಷಣ ಅಳವಡಿಸಿಕೊಳ್ಳದೆ ಸರಕಾರ ಬಿಕ್ಕಟ್ಟು ಮತ್ತಷ್ಟು ಜಟಿಲವಾಗುವಂತೆ ಮಾಡುತ್ತಿದೆ.

ಆರ್ಥಿಕ ಹಿಂಜರಿತದ ಹಲವಾರು ಮುಖಗಳು

ಆರ್ಥಿಕ ಹಿಂಜರಿತದ ಹಲವಾರು ಮುಖಗಳು

ಲೋಕಸಭಾ ಚುನಾವಣೆಗಳ ಮುಂಚೆ ಭಾರತದ ಆರ್ಥಿಕಾಭಿವೃದ್ಧಿಯ ಗುರಿಯೇ ಮುಂಚೂಣಿಯಲ್ಲಿತ್ತು. ಆದರೆ ಈಗ ಆಗುತ್ತಿರುವುದು ಮಾತ್ರ ಅದಕ್ಕೆ ವ್ಯತಿರಿಕ್ತವಾದದ್ದು. ಸ್ಟ್ರಕ್ಚರಲ್ ಸ್ಲೋಡೌನ್ ಅಥವಾ ರಚನಾತ್ಮಕ ಆರ್ಥಿಕ ಹಿಂಜರಿತವು ಬಹುತೇಕ ಗ್ರಾಹಕರ ಕೊಳ್ಳುವ ಶೈಲಿಯ ಬದಲಾವಣೆ ಅಥವಾ ಜನಸಂಖ್ಯಾ ಬೆಳವಣಿಗೆಯನ್ನು ಆಧರಿಸಿರುತ್ತದೆ ಹಾಗೂ ಇದು ಅತ್ಯಂತ ಜಟಿಲವಾದ ಬಿಕ್ಕಟ್ಟಾಗಿದೆ.

ಇನ್ನು ಆಗಾಗ ಮರುಕಳಿಸುವ ಆರ್ಥಿಕ ಹಿಂಜರಿತದ ಅವಧಿಗಳು ಸಾಮಾನ್ಯವಾಗಿ ಮಧ್ಯಮಾವಧಿ ಅಥವಾ ಅಲ್ಪಾವಧಿಯದ್ದಾಗಿರುತ್ತವೆ. ಅಥವಾ ಇಂಥ ಬಿಕ್ಕಟ್ಟುಗಳು ಕೆಲ ನಿರ್ದಿಷ್ಟ ವಲಯಗಳಿಗೆ ಮಾತ್ರ ಮೀಸಲಾಗಿರುತ್ತವೆ. ಆರ್ಬಿಐ ಪ್ರಕಾರ ಈಗಿನ ಬಿಕ್ಕಟ್ಟು ಪುನರಾವರ್ತಿಸುವ ಆರ್ಥಿಕ ಹಿಂಜರಿಕೆಯಾಗಿದೆ. ಅಂದರೆ ಇದನ್ನು ಎದುರಿಸಲು ಸೂಕ್ತ ಹಣಕಾಸು ಹಾಗೂ ಬಂಡವಾಳ ನಿಯಮಗಳನ್ನು ರೂಪಿಸುವುದು ಅಗತ್ಯ ಎಂದು ಕಂಡು ಬರುತ್ತದೆ.

ದೂರಗಾಮಿ ಪರಿಣಾಮದ ಕ್ರಮ ಏಕಿಲ್ಲ?

ದೂರಗಾಮಿ ಪರಿಣಾಮದ ಕ್ರಮ ಏಕಿಲ್ಲ?

ಸರಕಾರದ ನೀತಿ ನಿಯಮಗಳನ್ನು ರೂಪಿಸುವ ಆರ್ಥಿಕ ತಜ್ಞರ ಆಮೆಗತಿಯ ಕ್ರಮಗಳಿಂದ ದೇಶದ ಜನತೆ ಭ್ರಮನಿರಸನವಾಗುವಂತಾಗಿದೆ. ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಾವು ಕೇವಲ ಒಂದು ತಿಂಗಳ ಹಿಂದೆ ಜಾರಿ ಮಾಡಿದ್ದ ಸರ್ಚಾರ್ಜ್ ಹೆಚ್ಚಳವನ್ನು ಹಿಂಪಡೆದರು. ಆದರೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದ ವಿದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆ ಮೇಲಿನ ಸರ್ಚಾರ್ಜ್ ಹೆಚ್ಚಳದಿಂದ ಜುಲೈ ಹಾಗೂ ಆಗಸ್ಟ್ ತಿಂಗಳ ಅವಧಿಯಲ್ಲಿ ಸ್ವದೇಶಿ ಇಕ್ವಿಟಿ ಮಾರುಕಟ್ಟೆಯಲ್ಲಿನ 24,500 ಕೋಟಿ ರೂಪಾಯಿ ಬಂಡವಾಳವನ್ನು ವಿದೇಶಿ ಹೂಡಿಕೆದಾರರು ಹಿಂಪಡೆದು ಆಗಿ ಹೋಗಿತ್ತು.

ಮಾರುಕಟ್ಟೆಯ ಬೇಡಿಕೆಗಳಿಗೆ ಅಥವಾ ಇನ್ನಾವುದೋ ಒತ್ತಡಕ್ಕೆ ಒಳಗಾಗಿ ಹಣಕಾಸು ಸಚಿವರು ಸರ್ಚಾರ್ಜ್ ಇಳಿಕೆಗೆ ಮುಂದಾದರಾ ಎಂಬುದು ಸ್ಪಷ್ಟವಿಲ್ಲ. ಆದರೂ ತನ್ನ ಕೆಲ ತಪ್ಪು ಆರ್ಥಿಕ ಕ್ರಮಗಳನ್ನು ಹಿಂಪಡೆಯಲು ಸರಕಾರ ಮುಂದಾಗಿರುವುದು ಕಂಡುಬರುತ್ತಿದೆ. ಕಲ್ಲಿದ್ದಲು ಗಣಿಗಾರಿಕೆಗೆ ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದ್ದು ಇಂಥದೇ ಒಂದು ಕ್ರಮವಾಗಿದೆ. ಆದರೆ ಈ ಕ್ರಮ ತಕ್ಷಣದಲ್ಲಿ ಆರ್ಥಿಕಾಭಿವೃದ್ಧಿಗೆ ವೇಗ ನೀಡುತ್ತದೆ ಎಂದು ನಿರೀಕ್ಷಿಸಲಾಗದು.

ತೆರಿಗೆ ಮೂಲಗಳ ಆದಾಯದಲ್ಲಿ ಹಿನ್ನಡೆ

ತೆರಿಗೆ ಮೂಲಗಳ ಆದಾಯದಲ್ಲಿ ಹಿನ್ನಡೆ

ಆಂತರಿಕ ಬೇಡಿಕೆ ಹಾಗೂ ಬಂಡವಾಳ ಹೂಡಿಕೆಯ ಬೇಡಿಕೆಗಳ ಬಗ್ಗೆ ಅರ್ನ್ಸ್ಟ್ ಆಂಡ್ ಯಂಗ್ ಸಂಸ್ಥೆಯ ಪಾಲಿಸಿ ಅಡ್ವೈಸರ್ ಡಿಕೆ ಶ್ರೀವಾಸ್ತವ ಅವರು ಹೇಳುವುದು ಹೀಗೆ- "2011-12 ರಿಂದ 2017-18 ರ ಅವಧಿಯಲ್ಲಿ ಬಂಡವಾಳ ಹೂಡಿಕೆಯು ಶೇಕಡಾ 7 ರ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆಂತರಿಕ ಉಳಿತಾಯದ ಕೊರತೆಯಿಂದ ಈ ರೀತಿಯ ಬಂಡವಾಳ ಹೂಡಿಕೆಯ ಇಳಿಕೆ ಉಂಟಾಗಿದೆ. ಇದು ಬೇಡಿಕೆ ಹಾಗೂ ಪೂರೈಕೆಯ ಚಕ್ರದ ಭಾಗವೇ ಆಗಿದೆ. ಪ್ರಸ್ತುತ ಒಟ್ಟಾರೆ ಬಡ್ಡಿದರ ಇಳಿಸುವುದು ಹಾಗೂ ಆರ್ಥಿಕ ಪುನಶ್ಚೇತನಕ್ಕೆ ದಾರಿ ಮಾಡಿಕೊಡುವುದು ಎರಡೇ ದಾರಿ ಸರಕಾರದ ಬಳಿ ಇವೆ. ಆದರೆ ಸರಕಾರ ಆರ್ಥಿಕ ಕೊರತೆಯನ್ನು ನೀಗಿಸಲು ಹೆಣಗಾಡುತ್ತಿದ್ದರೆ, ತೆರಿಗೆ ಮೂಲಗಳ ಆದಾಯ ಕಡಿಮೆಯಾಗುತ್ತಿರುವುದು ಸಂಕಷ್ಟ ಉಂಟು ಮಾಡಿದೆ."

ಸರ್ಕಾರದ ದೂರಗಾಮಿ ಪರಿಣಾಮದ ಕ್ರಮಗಳು

ಸರ್ಕಾರದ ದೂರಗಾಮಿ ಪರಿಣಾಮದ ಕ್ರಮಗಳು

ಬ್ಯಾಂಕುಗಳಿಗೆ ಹಣಕಾಸು ಸಹಾಯ, ಜಿಎಸ್ಟಿ ರಿಫಂಡ್ ತೀವ್ರಗೊಳಿಸುವುದು, ಸರಕಾರದ ಸಾಲ ಚುಕ್ತಾ ಮಾಡುವುದು, 2020 ರ ವರೆಗೆ ಖರೀದಿ ಮಾಡಲಾದ ವಾಹನಗಳಿಗೆ ಶೇ. 15 ರಷ್ಟು ಹೆಚ್ಚುವರಿ ಸವಕಳಿ ಸೌಲಭ್ಯ, 2020 ರ ವರೆಗೆ ಖರೀದಿ ಮಾಡಲಾದ ಎಲ್ಲ ಬಿಎಸ್-4 ವಾಹನಗಳಿಗೆ ಅವುಗಳ ನೋಂದಣಿ ಅವಧಿಯುದ್ದಕ್ಕೂ ಮಾನ್ಯತೆ, ಕಲ್ಲಿದ್ದಲು ಗಣಿಗಾರಿಕೆಗೆ ನೇರ ವಿದೇಶಿ ಬಂಡವಾಳ ಹೂಡಿಕೆ ಅವಕಾಶ, ಸಿಂಗಲ್ ಬ್ರ್ಯಾಂಡ್ ರಿಟೇಲ್ ಕ್ಷೇತ್ರದಲ್ಲಿ ನಿಯಮಗಳ ಸರಳೀಕರಣ ಮುಂತಾದ ಸರಕಾರದ ಎಲ್ಲ ಕ್ರಮಗಳು ದೂರಗಾಮಿ ಪರಿಣಾಮ ಬೀರುವಂಥವಾಗಿದ್ದು, ಇವುಗಳಿಂದ ತಕ್ಷಣದಲ್ಲಿ ಬೇಡಿಕೆ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗದು.

ಆಗಿನ ಪರಿಸ್ಥಿತಿಯೇ ಬೇರೆ !

ಆಗಿನ ಪರಿಸ್ಥಿತಿಯೇ ಬೇರೆ !

"2008-09 ರಲ್ಲಿನ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಆರ್ಥಿಕ ವ್ಯವಸ್ಥೆ ಗಟ್ಟಿಯಾಗಿತ್ತು ಹಾಗೂ ಅದು ವೇಗದಿಂದ ಸಾಗುತ್ತಿರುವಾಗಲೇ ಗೋಡೆಗೆ ಅಪ್ಪಳಿಸಿತ್ತು. ಆದರೆ ಈಗಿನ ಸ್ಥಿತಿಯಲ್ಲಿ ವ್ಯವಸ್ಥೆ ಅಷ್ಟೊಂದು ಗಟ್ಟಿಯಾಗಿಲ್ಲದ ಕಾರಣ ಚೇತರಿಕೆಗೆ ಬಹಳಷ್ಟು ಸಮಯ ಹಿಡಿಯಲಿದೆ. 2008-09 ರಲ್ಲಿ ಉಂಟಾದ ಬಿಕ್ಕಟ್ಟಿನ ಸಮಯದಲ್ಲಿ ಆಗಿನ ಸರಕಾರ ತಕ್ಷಣಕ್ಕೆ ಬೇಕಾದ ಚೇತರಿಕೆಯ ಕ್ರಮಗಳನ್ನು ಕೈಗೊಂಡು ಆರ್ಥಿಕಾಭಿವೃದ್ಧಿ ಮತ್ತೆ ಪುಟಿದು ನಿಲ್ಲುವಂತೆ ಮಾಡಿತ್ತು. ಆದರೆ ಅದಾವುದೋ ಗೊತ್ತಿಲ್ಲದ ಕಾರಣಗಳಿಂದ ಈಗಿನ ಸರಕಾರ ಅಂಥ ಯಾವುದೇ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸಿದ ಖ್ಯಾತ ಆರ್ಥಿಕ ತಜ್ಞರೊಬ್ಬರು ಹೇಳುತ್ತಾರೆ.

ಆರ್ಥಿಕ ಉತ್ತೇಜಕ ಕ್ರಮಗಳು ಬೇಕು

ಆರ್ಥಿಕ ಉತ್ತೇಜಕ ಕ್ರಮಗಳು ಬೇಕು

ಭಾರತದ ಅರ್ಥ ವ್ಯವಸ್ಥೆಗೆ ತಕ್ಷಣದಲ್ಲಿ ರಚನಾತ್ಮಕ ಸುಧಾರಣೆಗಳು ಹಾಗೂ ಪರಿಣಾಮಕಾರಿ ಆರ್ಥಿಕ ಉತ್ತೇಜನದ ಕ್ರಮಗಳು ಬೇಕಿವೆ. ಒಳ್ಳೆಯ ಉದ್ದೇಶದಿಂದಲೇ ಜಾರಿಯಾದ ಜಿಎಸ್ಟಿ ಆರ್ಥಿಕ ವಲಯಕ್ಕೆ ಸಾಕಷ್ಟು ಹಾನಿ ಮಾಡಿದೆ. ಈಗಿನ ಕೇಂದ್ರ ಸರಕಾರ ತನ್ನ ಮೊದಲ ಅವಧಿಯಲ್ಲಿ ಉದ್ಯೋಗ ಸೃಷ್ಟಿಸುವ ಹಾಗೂ ಆದಾಯ ಹೆಚ್ಚಿಸುವ ವಲಯಗಳತ್ತ ಗಮನ ಹರಿಸಲಿಲ್ಲ. ಆಗ ಕೇವಲ ಮೂಲಭೂತ ಸೌಕರ್ಯಗಳಿಗೆ ಮಾತ್ರ ಆದ್ಯತೆ ನೀಡಲಾಯಿತು. ಈ ಎರಡರ ಮಧ್ಯೆ ಸಮತೋಲನ ಕಾಯ್ದುಕೊಳ್ಳಲು ಸರಕಾರ ವಿಫಲವಾಗಿದ್ದೇ ಬಿಕ್ಕಟ್ಟಿಗೆ ಕಾರಣವಾಯಿತು. ಆದರೆ ಈಗಲೂ ಸಹ ಸರಕಾರ ಪರಿಣಾಮಕಾರಿ ಸುಧಾರಣೆಗೆ ಮುಂದಾಗುತ್ತಿಲ್ಲ.

ನಿಧಾನಗತಿಯ ಕ್ರಮಗಳಿಂದ ಏನೂ ಆಗದು

ನಿಧಾನಗತಿಯ ಕ್ರಮಗಳಿಂದ ಏನೂ ಆಗದು

ನಿಧಾನಗತಿಯ ಸುಧಾರಣಾ ಕ್ರಮಗಳು ಸಾಮಾನ್ಯ ಅವಧಿಯಲ್ಲಿ ಮಾತ್ರ ಉಪಯೋಗಕ್ಕೆ ಬರಬಲ್ಲವು ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು. ಹಣದುಬ್ಬರವನ್ನು ಪರಿಗಣಿಸದೆ ಮಾರುಕಟ್ಟೆಯಲ್ಲಿ ಉತ್ಪಾದಿಸಲಾಗುವ ವಸ್ತುಗಳು ಹಾಗೂ ಅಲ್ಲಿನ ಸೇವೆಗಳ ಒಟ್ಟಾರೆ ಮೌಲ್ಯವು ನಾಮಿನಲ್ ಜಿಡಿಪಿ ಆಗಿರುತ್ತದೆ. ಆದರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡಾಗ ನಿಜವಾದ ಮಾರುಕಟ್ಟೆಯ ಜಿಡಿಪಿ ದರವನ್ನು ನಿರ್ಧರಿಸಲು ಸಾಧ್ಯ.

ಸಮಾಜವಾದಿ ವ್ಯವಸ್ಥೆ ಮರುಕಳಿಸುವುದೆ?

ಸಮಾಜವಾದಿ ವ್ಯವಸ್ಥೆ ಮರುಕಳಿಸುವುದೆ?

ಭಾರತವು ಮತ್ತೊಮ್ಮೆ ಸಮಾಜವಾದಿ ಆರ್ಥಿಕತೆಯತ್ತ ಹೊರಳುತ್ತಿದೆಯೇ ಎಂಬ ಸಂಶಯಗಳು ದಟ್ಟವಾಗುತ್ತಿವೆ. ಕಾರ್ಪೊರೇಟ್ ಲಾಭಗಳು ಜಿಡಿಪಿಯ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಈ ಮಾತಿಗೆ ಪುಷ್ಟಿ ನೀಡುವಂತಿವೆ. ಅಕ್ರಮ ಹಣ, ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಸರಕಾರ ತನ್ನ ರಾಜಕೀಯ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ. ಆದರೆ ಇಂಥ ರಾಜಕೀಯ ಕ್ರಮಗಳು ಆರ್ಥಿಕ ಕ್ರಮಗಳೊಂದಿಗೆ ಬೆಸೆದುಕೊಂಡಾಗ ಅದರಿಂದ ಅತ್ಯಂತ ಬಿಗಿಯಾದ ಆರ್ಥಿಕ ನೀತಿಗಳು ಹೊರಹೊಮ್ಮಲು ಕಾರಣವಾಗುತ್ತವೆ.

ಇಂಥದೊಂದು ಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ತಮ್ಮ ಸ್ವಾತಂತ್ರ್ಯ ದಿನ ಭಾಷಣದಲ್ಲಿ "ಸಂಪತ್ತು ಸೃಷ್ಟಿಸುವ ಉದ್ಯಮಿಗಳನ್ನು ದೇಶ ಗೌರವಿಸಬೇಕಿದೆ" ಎಂದು ಹೇಳಿದ್ದರು.

ಮಾಯಾ ದಂಡ ಯಾರ ಬಳಿಯೂ ಇಲ್ಲ

ಮಾಯಾ ದಂಡ ಯಾರ ಬಳಿಯೂ ಇಲ್ಲ

2008 ರಲ್ಲಿ ಉಂಟಾದ ಬಿಕ್ಕಟ್ಟಿಗೆ ಸರಕಾರ ತಕ್ಷಣ ಹಣಕಾಸು ಹಾಗೂ ವಿತ್ತೀಯ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಪ್ರಧಾನಿ ಮೋದಿ ಸರಕಾರ ಈಗಿನ ಬಿಕ್ಕಟ್ಟಿಗೆ ಸ್ಪಂದಿಸಲು ಸುದೀರ್ಘ ಕಾಲ ತೆಗೆದುಕೊಳ್ಳುತ್ತಿದೆ ಎನ್ನಲಾಗಿದೆ. ನಿಜ ಹೇಳಬೇಕೆಂದರೆ ಈಗಿನ ಬಿಕ್ಕಟ್ಟಿಗೆ ನಿಜವಾದ ಕಾರಣವನ್ನು ಸಹ ಸರಕಾರಕ್ಕೆ ಕಂಡುಹಿಡಿಯಲಾಗಿಲ್ಲ.

-ತಕ್ಷಣ ಸ್ಪಂದಿಸಬೇಕಿದೆ ಸರಕಾರ

ದೇಶದ ಬಹುತೇಕ ಆರ್ಥಿಕ ತಜ್ಞರು ಈಗಿನ ಸಂಕಟ ಪರಿಹಾರಕ್ಕೆ ಸರಕಾರ ತಕ್ಷಣ ಮುಂದಾಗಬೇಕಿದೆ ಎಂದು ಅಭಿಪ್ರಾಯಿಸಿದ್ದಾರೆ. ಕೇಂದ್ರ ಸರಕಾರದ ವೆಚ್ಚ, ಸಾರ್ವಜನಿಕ ವಲಯದ ವೆಚ್ಚ ಹಾಗೂ ರಾಜ್ಯ ಸರಕಾರಗಳ ವೆಚ್ಚಗಳು ಕಡಿಮೆಯಾಗುತ್ತಿವೆ. ಜನಕಲ್ಯಾಣಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಈಗ ಸರಕಾರ ಸಾಲ ಪಡೆದು ಪರಿಸ್ಥಿತಿಯನ್ನು ನಿಭಾಯಿಸಬಹುದು. ಇದರ ಜೊತೆಗೆ ರಾಜ್ಯ ಸರಕಾರಗಳು ಮಾಡುವ ವೆಚ್ಚಗಳನ್ನು ತನ್ನ ಪಟ್ಟಯಿಂದ ತೆಗೆದು ಹಾಕಿದಲ್ಲಿ ಹಾಗೂ ವಿತ್ತೀಯ ಶಿಸ್ತು ತಂದುಕೊಂಡಲ್ಲಿ ಬಿಕ್ಕಟ್ಟು ಶಮನವಾಗಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.

ರಾಜ್ಯ ಸರ್ಕಾರ vs ಕೇಂದ್ರ ಸರ್ಕಾರ

ರಾಜ್ಯ ಸರ್ಕಾರ vs ಕೇಂದ್ರ ಸರ್ಕಾರ

2015-16 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರಕಾರ ತನ್ನ ಹಣಕಾಸು ಮೂಲಗಳಲ್ಲಿ ರಾಜ್ಯ ಸರಕಾರಗಳಿಗೆ ಸಿಂಹಪಾಲು ನೀಡಿತು. ಇದು ಕೇಂದ್ರ ಸರಕಾರದ ಜನಕಲ್ಯಾಣ ನೀತಿಯನ್ನೇ ಸಂಪೂರ್ಣವಾಗಿ ಮಾರ್ಪಡಿಸಿತು. ಆದರೆ ಇದೇ ಸಂದರ್ಭದಲ್ಲಿ ರಾಜ್ಯ ಸರಕಾರಗಳಿಗೆ ವಹಿಸಲಾದ ಜನಕಲ್ಯಾಣ ಯೋಜನೆಗಳನ್ನು ತಾನೂ ಮುಂದುವರಿಸಿದ್ದು ತಪ್ಪು ಮಾಡಿದಂತಾಯಿತು. ರಾಜ್ಯ ಸರಕಾರಗಳು ಜಾರಿಗೊಳಿಸುವ ಯೋಜನೆಗಳಿಗಾಗಿ ಈಗಲೂ ಕೇಂದ್ರದಲ್ಲಿ ದೊಡ್ಡ ಮಟ್ಟದ ಸಚಿವಾಲಯಗಳನ್ನು ಇಟ್ಟುಕೊಂಡಿರುವುದು ಏಕೆಂದು ಪ್ರಶ್ನಿಸಲಾಗುತ್ತಿದೆ. ಇದರ ನಿವಾರಣೆಗೆ ರಚನಾತ್ಮಕ ವಿತ್ತೀಯ ಬದಲಾವಣೆ ತಕ್ಷಣ ಆಗಬೇಕಿದೆ.

ವಿತ್ತೀಯ ಪುನರ್ ರಚನೆ ಹಾಗೂ ಸುಧಾರಣೆ

ವಿತ್ತೀಯ ಪುನರ್ ರಚನೆ ಹಾಗೂ ಸುಧಾರಣೆ

ಕೇವಲ ವಿತ್ತೀಯ ಪುನರ್ ರಚನೆ ಹಾಗೂ ಹಣಕಾಸು ಸುಧಾರಣೆ ಕ್ರಮಗಳಿಂದ ಕೇಂದ್ರ ಸರಕಾರ ಶೇಕಡಾ 1 ರಷ್ಟು ಹೆಚ್ಚುವರಿ ನಿಧಿ ಉಳಿಸಬಹುದಾಗಿದೆ. ಇದನ್ನು ರಾಜ್ಯ ಸರಕಾರಗಳ ಈಗಿನ ಶೇಕಡಾ 2 ಅಂಶಗಳಷ್ಟು ಆರ್ಥಿಕ ವೆಚ್ಚಗಳಿಗೆ ಸೇರಿಸಿದಲ್ಲಿ ಅವು ತಮ್ಮ ಬಜೆಟ್ ಇತಿಮಿತಿಯಲ್ಲಿಯೇ ತಮ್ಮ ವೆಚ್ಚಗಳನ್ನು ಶೇಕಡಾವಾರು ಮೂರರಷ್ಟು ಹೆಚ್ಚಿಸಿಕೊಳ್ಳಬಹುದು. ಇನ್ನು ಸರಕಾರೇತರ ಸಾರ್ವಜನಿಕ ಉದ್ಯಮ ರಂಗವು ಶೇಕಡಾ 1.5 ರಷ್ಟು ವೆಚ್ಚಗಳನ್ನು ಹೆಚ್ಚಿಸಿಕೊಳ್ಳಬಹುದು. ಇವುಗಳಿಗೆ ಸಾಲ ಪಡೆಯಲು ಯಾವುದೇ ಮಿತಿ ಇರುವುದಿಲ್ಲ ಹಾಗೂ ಕಡಿಮೆ ಬಡ್ಡಿದರದಲ್ಲಿ ಇವು ಸಾಲ ಪಡೆಯಬಹುದು ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ತೆರಿಗೆ ಮೂಲ ಹೊರತುಪಡಿಸಿ ಆದಾಯ ವೃದ್ಧಿ ಆಗಬೇಕು

ತೆರಿಗೆ ಮೂಲ ಹೊರತುಪಡಿಸಿ ಆದಾಯ ವೃದ್ಧಿ ಆಗಬೇಕು

ಕೇಂದ್ರ ಸರಕಾರ ಮೊಬೈಲ್ ತರಂಗಾತರ ಮಾರಾಟದಿಂದ ಹಾಗೂ ಭೂ ಆಸ್ತಿಗಳ ಮಾರಾಟದಿಂದ ತನ್ನ ತೆರಿಗೆ ಮೂಲ ಹೊರತು ಪಡಿಸಿದ ಆದಾಯಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಹೀಗೆ ಮಾಡಿದಲ್ಲಿ ಬರುವ ಆದಾಯದಿಂದ ಮುಂದಿನ ಆರು ತಿಂಗಳ ಅವಧಿಗೆ ಜಿಡಿಪಿಯ ಶೇಕಡಾ 4 ರಷ್ಟು ಖರ್ಚು ಮಾಡಲು ಸಾಧ್ಯವಾಗುತ್ತದೆ. ಈಗ ಭಾರತದ ಆರ್ಥಿಕತೆಗೆ ಬೇಕಾಗಿರುವುದೇ ಇದು. ಈಗಿನ ಪರಿಸ್ಥಿತಿಯಲ್ಲಿ ಸರಕಾರ ಕೇವಲ ಕಾರ್ಯವಿಧಾನ ಹಾಗೂ ವಲಯ ಕೇಂದ್ರಿತ ಸುಧಾರಣಾ ಕ್ರಮಗಳನ್ನು ಮಾತ್ರ ಕೈಗೊಳ್ಳುತ್ತಿದೆ. ಇದರಿಂದ ಸಾಕಷ್ಟು ಪ್ರಯೋಜನಗಳಾದರೂ ಒಟ್ಟಾರೆಯಾಗಿ ಆರ್ಥಿಕ ಸ್ಥಿತಿ ಪುಟಿದೇಳಲು ಬೇಕಾದ ಶಕ್ತಿ ಸಿಗಲಾರದು.

ತೆರಿಗೆ ಕಡಿಮೆ ಮಾಡಿ, ಜನರ ಕೈಯಲ್ಲಿ ಹೆಚ್ಚು ಹಣ ಓಡಾಡಲಿ

ತೆರಿಗೆ ಕಡಿಮೆ ಮಾಡಿ, ಜನರ ಕೈಯಲ್ಲಿ ಹೆಚ್ಚು ಹಣ ಓಡಾಡಲಿ

ಈಗಿನ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಬೇಕೆಂಬುದು ಅನೇಕ ಆರ್ಥಿಕ ತಜ್ಞರ ವಾದವಾಗಿದೆ. ಈಗಿರುವ ಶೇಕಡಾ 28 ರ ಮಟ್ಟದ ತೆರಿಗೆ ವ್ಯವಸ್ಥೆಯನ್ನು ಇಳಿಕೆ ಮಾಡಿದಲ್ಲಿ ಜನರ ಕೈಯಲ್ಲಿ ಹೆಚ್ಚು ಹಣ ಓಡಾಡುವಂತಾಗುತ್ತದೆ. ಇದರ ಜೊತೆಗೆ ಸಾಲ ಲಭ್ಯತೆಯ ಕೊರತೆ ಸಹ ಪ್ರಮುಖವಾಗಿ ಕಾಡುತ್ತಿದೆ. 2018 ರ ಹಣಕಾಸು ವರ್ಷದಲ್ಲಿ ವಿವಿಧ ವಲಯಗಳಿಗೆ 3 ಲಕ್ಷ ಕೋಟಿ ರೂಪಾಯಿಗಳಷ್ಟು ಸಾಲ ಸೌಲಭ್ಯ ಸಿಕ್ಕಿತ್ತು. ಆದರೆ ಪ್ರಸ್ತುತ 2019 ರ ಹಣಕಾಸು ವರ್ಷದಲ್ಲಿ ಈ ಸಾಲದ ಪ್ರಮಾಣ 400 ಕೋಟಿ ರೂಪಾಯಿಗಳಿಗೆ ಕುಸಿದಿದೆ.

ಕುಸಿತದ ನಿವಾರಣೆಗೆ ಸರ್ಕಾರ ಮುಂದಾಗಲಿ

ಕುಸಿತದ ನಿವಾರಣೆಗೆ ಸರ್ಕಾರ ಮುಂದಾಗಲಿ

ಹಲವಾರು ಕಾರಣಗಳಿಂದ ಈಗ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ನಿವಾರಣೆಗೆ ಬಹು ಆಯಾಮಗಳ, ಪರಿಣಾಮಕಾರಿ ಕ್ರಮಗಳನ್ನು ಸರಕಾರ ಈಗ ಕೈಗೊಳ್ಳಲೇಬೇಕಿದೆ. ಸರಕಾರ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಆದರೆ ಪರಿಸ್ಥಿತಿ ಈಗಾಗಲೇ ಸಾಕಷ್ಟು ಹದಗೆಟ್ಟಿದ್ದು ಆರ್ಥಿಕ ಸಂಕಟ ಇನ್ನಷ್ಟು ತೀವ್ರವಾಗುವ ಮುಂಚೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದು ಆರ್ಥಿಕ ತಜ್ಞರು, ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಿಸುತ್ತಾರೆ.

English summary

india's current economic slowdown is worse than that of 2008, Why?

A 5 per cent growth rate translates into about 3.5 per cent growth if we use the old method of GDP calculation. If we take into account population growth, then the growth rate would be even lower.
Story first published: Thursday, September 26, 2019, 10:26 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more