ನಮ್ಮಲ್ಲಿ ಪ್ರತಿಯೊಬ್ಬರೂ ಸಂಬಳದ ಜೊತೆಗೆ ಇನ್ನಿತರ ನಿಯಮಿತ ಆದಾಯದ ಮೂಲಗಳನ್ನು ಹುಡುಕುತ್ತಿರುತ್ತಾರೆ.
ನಮ್ಮಲ್ಲಿ ಪ್ರತಿಯೊಬ್ಬರೂ ಸಂಬಳದ ಜೊತೆಗೆ ಇನ್ನಿತರ ನಿಯಮಿತ ಆದಾಯದ ಮೂಲಗಳನ್ನು ಹುಡುಕುತ್ತಿರುತ್ತಾರೆ. ಮತ್ತೊಂದು ಮೂಲದಿಂದ ಆದಾಯ ಪಡೆಯುವುದು ಅಥವಾ ನಿವೃತ್ತಿ ನಂತರ ಪರ್ಯಾಯ ಆದಾಯ ಮೂಲಗಳನ್ನು ಹೊಂದುವುದು ಸುಗಮ ಜೀವನಕ್ಕೆ ದಾರಿ ಮಾಡಿ ಕೊಡುತ್ತದೆ. ಪ್ರತಿ ತಿಂಗಳಿನ ನಿಶ್ಚಿತ ಖರ್ಚು-ವೆಚ್ಚಗಳು ಸೇರಿದಂತೆ ಯಾವುದಾದರೂ ಅನಿರೀಕ್ಷಿತ ವೆಚ್ಚಗಳು, ಮನೋರಂಜನೆ ಹೀಗೆ ಬೇರೆ ಖರ್ಚುಗಳಿಗೆ ಸಹ ಬಜೆಟ್ ತಯಾರಿಸಲು ಇದರಿಂದ ಅನುಕೂಲವಾಗುತ್ತದೆ.
ಪ್ರತಿ ತಿಂಗಳು ನಿಯಮಿತವಾಗಿ ಬೇರೆ ಬೇರೆ ಮೂಲಗಳಿಂದ ಆದಾಯ ಗಳಿಸಲು ನೀವು ಇಚ್ಚಿಸುವಿರಾದರೆ ಅಥವಾ ಕುತೂಹಲ ನಿಮ್ಮಲ್ಲಿದ್ದರೆ ಈ ಅಂಕಣ ಓದಿ..
ಫಿಕ್ಸೆಡ್ ಡಿಪಾಸಿಟ್ (FD)
ಹೆಚ್ಚು ಜನರ ಅತೀ ನೆಚ್ಚಿನ ಸುರಕ್ಷಿತ ಆದಾಯ ಗಳಿಕೆಯ ವಿಧಾನಗಳೆಂದರೆ ಎಫ್ಡಿ. ಹಣ ಹೂಡಿಕೆಯ ಮಾತು ಬಂದಾಗ ಜನ ಮೊದಲಿಗೆ ಸ್ಥಿರ ಠೇವಣಿ ಬಗ್ಗೆಯೇ ವಿಚಾರ ಮಾಡುತ್ತಾರೆ. ಯಾವುದೇ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಎಫ್‌ಡಿ ಖಾತೆ ತೆರೆಯಬಹುದು. ಎಫ್‌ಡಿ ಯೋಜನೆ ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಯಶಸ್ವಿ ಆಗಿರುವುದರಿಂದ ಇದೊಂದು ನಂಬಿಕಸ್ಥ ಹೂಡಿಕೆ ಯೋಜನೆಯಾಗಿದೆ. ಆದಾಗ್ಯೂ ಎಫ್‌ಡಿಗಳಲ್ಲಿ ತ್ರೈಮಾಸಿಕಕ್ಕೊಮ್ಮೆ ಬಡ್ಡಿ ಜಮೆ ಮಾಡಲಾಗುವುದರಿಂದ ಇದರಲ್ಲಿ ಮಾಸಿಕವಾಗಿ ಆದಾಯ ಪಡೆಯಲು ಸಾಧ್ಯವಿಲ್ಲ.
ಆದರೆ ಎಫ್‌ಡಿ ಹೂಡಿಕೆಯನ್ನು ತುಸು ಜಾಣ್ಮೆಯಿಂದ ಕಾರ್ಯಗತಗೊಳಿಸಿದರೆ ಪ್ರತಿ ತಿಂಗಳೂ ಆದಾಯ ಬರುವಂತೆ ಮಾಡಬಹುದು. ಅಂದರೆ ಒಂದು ನಿರ್ದಿಷ್ಟ ಅವಧಿಯನ್ನು ನಿರ್ಧರಿಸಿ ಅಷ್ಟು ತಿಂಗಳ ಕಾಲ ಪ್ರತಿ ತಿಂಗಳೂ ಒಂದು ವರ್ಷದ ಅವಧಿಯ ಎಫ್‌ಡಿ ಮಾಡುತ್ತ ಹೋಗಬೇಕು. ಮೊದಲ 12 ತಿಂಗಳು ಕೇವಲ ಹೂಡಿಕೆ ಮಾಡುತ್ತಿರಬೇಕಾಗುತ್ತದೆ. ನಂತರದ ತಿಂಗಳಿಂದ ನಿಮಗೆ ಪ್ರತಿ ತಿಂಗಳು ಬಡ್ಡಿ ಆದಾಯ ಬರಲಾರಂಭಿಸುತ್ತದೆ.
ಉದಾಹರಣೆಗೆ ನೋಡುವುದಾದರೆ- ಪ್ರತಿ ತಿಂಗಳು 1 ಲಕ್ಷ ರೂಪಾಯಿಗಳಂತೆ 1 ವರ್ಷ ಅವಧಿಯ ಎಫ್‌ಡಿ ಮಾಡಿಸಬೇಕು. ಇದಕ್ಕೆ ವಾರ್ಷಿಕ ಶೇ. 7ರಷ್ಟು ಬಡ್ಡಿ ಸಿಗುತ್ತದೆ ಹಾಗೂ ಅದನ್ನು ತ್ರೈಮಾಸಿಕಕ್ಕೊಮ್ಮೆ ಪಡೆಯಬಹುದು ಎಂದಿಟ್ಟುಕೊಂಡಾಗ, ಹೂಡಿಕೆ ಮಾಡಿದ 13 ನೇ ತಿಂಗಳಿನಿಂದ ಪ್ರತಿ ತಿಂಗಳು 1,07,185.90 ರೂಪಾಯಿಗಳಷ್ಟು ಮೊತ್ತ ನಿಮಗೆ ಸಿಗಲಾರಂಭಿಸುತ್ತದೆ. ಈ ಮೆಚುರಿಟಿ ಮೊತ್ತದಲ್ಲಿ ರೂ. 1 ಲಕ್ಷ ಮೂಲ ಬಂಡವಾಳವನ್ನು ಮರು ಹೂಡಿಕೆ ಮಾಡಿದಲ್ಲಿ ಪ್ರತಿ ತಿಂಗಳು ರೂ. 7,186 ಬಡ್ಡಿ ಆದಾಯ ಪಡೆಯಬಹುದು. ಬಡ್ಡಿ ಆದಾಯ ಆಯಾ ಕಾಲಾವಧಿಯಲ್ಲಿ ಜಾರಿಯಲ್ಲಿರುವ ಬಡ್ಡಿ ದರಗಳನ್ನು ಆಧರಿಸಿರುತ್ತದೆ.
ಪ್ರಧಾನ ಮಂತ್ರಿ ವಯವಂದನ ಯೋಜನೆ
ಎಫ್ಡಿ ಹೊರತಾಗಿ ಹಿರಿಯ ನಾಗರಿಕರಿಗೆ 10 ವರ್ಷದ ಅವಧಿಯ ಪ್ರಧಾನ ಮಂತ್ರಿ ವಯವಂದನ ಯೋಜನೆ ಸೂಕ್ತವಾಗಿದೆ. ಇದರಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಬಡ್ಡಿ ಆದಾಯ ಪಡೆಯುವ ಸೌಲಭ್ಯವಿದೆ. ಈ ಯೋಜನೆಯಲ್ಲಿ ವಾರ್ಷಿಕ ಶೇ. 8ರ ಆಸುಪಾಸಿನಲ್ಲಿರುವುದರಿಂದ ಇದು ಮಾಸಿಕ ಶೇ. 8 ರಷ್ಟು ಬಡ್ಡಿದರಕ್ಕೆ ಸಮನಾಗಿದೆ. ಅಂದರೆ ಹಿರಿಯ ನಾಗರಿಕರು ಗರಿಷ್ಠ ರೂ. 15 ಲಕ್ಷ ಹೂಡಿಕೆ ಮಾಡಿದಲ್ಲಿ ಮುಂದಿನ 10 ವರ್ಷಗಳವರೆಗೆ ಪ್ರತಿ ತಿಂಗಳು ರೂ. 10 ಸಾವಿರ ಆದಾಯ ಗಳಿಸಬಹುದು.
ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಶಾಖೆಗಳಲ್ಲಿ ಮಾಸಿಕ ಆದಾಯ ಯೋಜನೆಗಳು ಲಭ್ಯವಿದ್ದು, ಮಾಸಿಕವಾಗಿ ಬಡ್ಡಿ ಆದಾಯ ಪಡೆಯಬಹುದು. ಏಕವ್ಯಕ್ತಿ ಖಾತೆಯಾದರೆ ಇದರಲ್ಲಿ ಗರಿಷ್ಠ ರೂ. 4.5 ಲಕ್ಷ ಹಾಗೂ ಜಂಟಿ ಖಾತೆಯಲ್ಲಿ ರೂ. 9 ಲಕ್ಷ ಹೂಡಿಕೆ ಮಾಡಬಹುದು. ಅಂದರೆ ಯಾವುದೇ ವ್ಯಕ್ತಿ ಜಂಟಿ ಖಾತೆಯಲ್ಲಿ ರೂ. 9 ಲಕ್ಷ ಹೂಡಿಕೆ ಮಾಡಿದಲ್ಲಿ ಮಾಸಿಕ ಸುಮಾರು ರೂ. 5,300 ಬಡ್ಡಿ ಆದಾಯ ಪಡೆದುಕೊಳ್ಳಬಹುದು.
10 ವರ್ಷ ವಯಸ್ಸಿನ ಚಿಕ್ಕ ಮಕ್ಕಳ ಹೆಸರಲ್ಲೂ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದರೂ, ಹೂಡಿಕೆಯ ಮಿತಿಯ ಕಾರಣದಿಂದ ಆದಾಯ ಸೀಮಿತವಾಗಿರುತ್ತದೆ.
ವಿಮಾ ವರ್ಷಾಶನ ಯೋಜನೆಗಳು
ವಿಮಾ ಕಂಪನಿಗಳ ಪಿಂಚಣಿ ಯೋಜನೆಗಳು ಜೀವನದ ಅವಧಿಯುದ್ದಕ್ಕೂ ಮಾಸಿಕ ಪಿಂಚಣಿ ಸೌಲಭ್ಯ ಹೊಂದಿವೆ. ಇದರಲ್ಲಿ ಎರಡು ವಿಧಗಳಿವೆ. ಮೊದಲನೆಯದು ತಕ್ಷಣದ ವರ್ಷಾಶನ ಯೋಜನೆ (ಉದಾ: ಎಲ್‌ಐಸಿಯ ಜೀವನ ಅಕ್ಷಯ ಹಾಗೂ ಜೀವನ ಆನಂದ) ಹಾಗೂ ಎರಡನೆಯದು ಮುಂದೂಡಲ್ಪಟ್ಟ ವರ್ಷಾಶನ ಯೋಜನೆಯಾಗಿದೆ (ಉದಾ: ಜೀವನ ಶಾಂತಿ).
ತಕ್ಷಣದ ವರ್ಷಾಶನ ಯೋಜನೆಯಲ್ಲಿ ಹೂಡಿಕೆ ಮಾಡಿದ ಕೂಡಲೇ ಪಿಂಚಣಿ ಪಡೆಯಬಹುದು. ಇನ್ನು ಮುಂದೂಡಲ್ಪಟ್ಟ ವರ್ಷಾಶನ ಯೋಜನೆಯಲ್ಲಿ ಪ್ರೀಮಿಯಂಗಳ ಪಾವತಿ ಮುಗಿದ ನಂತರ ಪೂರ್ವ ನಿರ್ಧರಿತ ಅವಧಿಯ ನಂತರ ಪಿಂಚಣಿ ಪಡೆಯಲಾರಂಭಿಸಬಹುದು.
ಹಿರಿಯ ನಾಗರಿಕರು ಮಾತ್ರವಲ್ಲದೆ 30 ವರ್ಷ ಮೇಲ್ಪಟ್ಟ ಯಾರಾದರೂ ಈ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದಾಗಿದ್ದು ಇದರ ವೈಶಿಷ್ಟ್ಯತೆಯಾಗಿದೆ. ಮಾಸಿಕ ಪಿಂಚಣಿ ಮೊತ್ತವು ಯೋಜನೆಯ ಆಯ್ಕೆ ಹಾಗೂ ಹೂಡಿಕೆದಾರನ ವಯಸ್ಸಿನ ಮೇಲೆ ನಿರ್ಧರಿಸಲ್ಪಡುತ್ತದೆ.
ಮ್ಯೂಚುವಲ್ ಫಂಡ ಡಿವಿಡೆಂಡ್ ಯೋಜನೆ
ಹಲವಾರು ಅಸೆಟ್ ಮ್ಯಾನೇಜಮೆಂಟ್ ಕಂಪನಿಗಳು ಮಾಸಿಕ ಆದಾಯ ನೀಡುವ ಡೆಬ್ಟ್ ಹಾಗೂ ಇಕ್ವಿಟಿ ವರ್ಗದ ಮ್ಯೂಚುವಲ್ ಫಂಡ ಯೋಜನೆಗಳನ್ನು ಪರಿಚಯಿಸಿವೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಬರುವ ಗರಿಷ್ಠ ರೂ. 10 ಲಕ್ಷಗಳವರೆಗಿನ ಡಿವಿಡೆಂಡ್ ತೆರಿಗೆಯಿಂದ ಮುಕ್ತವಾಗಿರುವುದು ಇದರ ವೈಶಿಷ್ಟ್ಯತೆಯಾಗಿದೆ. ಆದರೆ ಫಂಡ ಆದಾಯವನ್ನು ಆಧರಿಸಿ ಡಿವಿಡೆಂಡ್ ನೀಡಲಾಗುವುದರಿಂದ ಮಾಸಿಕ ಆದಾಯದ ಮೊತ್ತಕ್ಕೆ ಖಾತರಿ ಇರುವುದಿಲ್ಲ.
ವ್ಯವಸ್ಥಿತವಾಗಿ ಹಣ ಹಿಂಪಡೆಯುವ ಮ್ಯೂಚುವಲ್ ಫಂಡ ಯೋಜನೆ
ಯಾವುದೇ ಫಂಡನಲ್ಲಿ ವರ್ಷಗಳವರೆಗೆ ನಿಯಮಿತವಾಗಿ ಹಣ ಹೂಡಿಕೆ ಮಾಡಿದ್ದಲ್ಲಿ ಹಾಗೂ ಹೂಡಿಕೆದಾರನಾಗಿಯೇ ಇದ್ದ ಸಂದರ್ಭದಲ್ಲಿ ಸಂಗ್ರಹವಾದ ಮೊತ್ತದಿಂದ ನಿರ್ದಿಷ್ಟ ಮೊತ್ತದ ಹಣವನ್ನು ನಿಯಮಿತವಾಗಿ ಹಿಂತೆಗೆದುಕೊಳ್ಳಬಹುದಾಗಿದೆ. ವ್ಯವಸ್ಥಿತ ಹಣ ಹಿಂಪಡೆಯುವ ಯೋಜನೆಯಂತೆ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ಹಣ ಸಿಗುವಂತೆ ಮಾಡಬಹುದು. ಫಂಡ ಎನ್‌ಎವಿ ಜಾಸ್ತಿ ಇದ್ದಾಗ ಕಡಿಮೆ ಯುನಿಟ್‌ಗಳನ್ನು ಮಾರಿ ಆದಾಯ ಪಡೆಯಬಹುದು. ಆದರೆ ಎನ್‌ಎವಿ ತೀರಾ ಕಡಿಮೆ ಆದಾಗ ಹೆಚ್ಚು ಪ್ರಮಾಣದ ಯುನಿಟ್‌ಗಳನ್ನು ಮಾರಬೇಕಾಗುವುದರಿಂದ ಫಂಡ ಮೌಲ್ಯ ಕುಸಿಯುವ ಅಪಾಯವಿರುತ್ತದೆ.


Click it and Unblock the Notifications