ನಮಗೆ ಕೆಲವೊಮ್ಮೆ ತುರ್ತಾಗಿ ಹಣ ಬೇಕಾಗಬಹುದು. ಆದರೆ ಅಷ್ಟು ಶೀಘ್ರವೇ ಹಣವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗಬಹುದು. ಈ ರೀತಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯಕ್ಕಾಗಿ ಅನೇಕ ಪ್ರಮುಖ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲವನ್ನು ನೀಡುತ್ತದೆ. ಆದರೆ ಸಾಲವನ್ನು ಪಡೆಯುವುದು ಕೊಂಚ ಸಮಯ ತೆಗದುಕೊಳ್ಳುತ್ತದೆ. ಹಾಗೆಯೇ ಅದಕ್ಕೆ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ. ಆದರೆ ಚಿನ್ನದ ಸಾಲಕ್ಕೆ ಕಡಿಮೆ ಬಡ್ಡಿದರ ಇರುತ್ತದೆ. ಆದ್ದರಿಂದ ಚಿನ್ನ ಅಡವಿಟ್ಟು ಸಾಲ ಪಡೆಯುವುದು ಉತ್ತಮ ಆಯ್ಕೆ.
ನಮಗೆ ಸಾಮಾನ್ಯ ಸಾಲಕ್ಕಿಂತ ಚಿನ್ನದ ಸಾಲಗಳನ್ನು ಆಯ್ಕೆಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಸಾಲಗಳು ತ್ವರಿತವಾಗಿ ನಮಗೆ ಲಭ್ಯವಾಗಲಿದೆ. ಚಿನ್ನವನ್ನು ಮೇಲಾಧಾರವಾಗಿ ಪಡೆದುಕೊಂಡು ಹಲವಾರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲವನ್ನು ನೀಡುತ್ತದೆ. ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತದೆ. ಒಟ್ಟು ಮೌಲ್ಯದ ಶೇಕಡ 75ರಷ್ಟು ಮೌಲ್ಯದ ಸಾಲವನ್ನು ನೀಡುತ್ತದೆ. ಆದರೆ ಚಿನ್ನದ ಸಾಲವನ್ನು ಪಡೆಯುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.
ಸಾಲ ನೀಡುವ ಸಂಸ್ಥೆ ವಿಶ್ವಾಸಾರ್ಹವೇ?
ನೀವು ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಸಾಲ ನೀಡುವ ಸಂಸ್ಥೆಯು ವಿಶ್ವಾಸಾರ್ಹವೇ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಚಿನ್ನವನ್ನು ಪಡೆದುಕೊಂಡು ಕಡಿಮೆ ಬಡ್ಡಿದರಕ್ಕೆ ಸಾಲವನ್ನು ನೀಡಲಾಗುತ್ತದೆ. ಆದರೆ ಎಂದಿಗೂ ಕೂಡಾ ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ ಸುರಕ್ಷಿತ ಆಯ್ಕೆಯಾಗಿದೆ. ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಇಂತಹ ಸುರಕ್ಷಿತ ಆಯ್ಕೆ ಉತ್ತಮ. ಬಡ್ಡಿದರವನ್ನು ಹೋಲಿಕೆ ಮಾಡಿಕೊಳ್ಳಿ, ಅರ್ಹತೆ ಮೊದಲಾದ ಮಾಹಿತಿಯನ್ನು ನೋಡಿಕೊಳ್ಳಿ.
ಸಾಲದ ಬಡ್ಡಿದರ ಮತ್ತು ಇತರೆ ಶುಲ್ಕಗಳು
ಬೇರೆ ಬೇರೆ ಬ್ಯಾಂಕುಗಳಲ್ಲಿ ಬಡ್ಡಿದರ, ಪ್ರಕ್ರಿಯಾ ಶುಲ್ಕ ಬೇರೆ ಬೇರೆ ಇರುತ್ತದೆ. ನೀವು ಇದನ್ನು ಹೋಲಿಕೆ ಮಾಡಿ, ಎಲ್ಲಿ ಕಡಿಮೆ ಬಡ್ಡಿದರವಿದೆಯೋ ಆ ಸಂಸ್ಥೆಯಲ್ಲಿ ಚಿನ್ನ ಅಡಿವಿಟ್ಟು ಸಾಲ ಪಡೆದರೆ ಉತ್ತಮ. ಸ್ಪರ್ಧಾತ್ಪಕ ಬಡ್ಡಿದರವನ್ನು ನೀಡುವ, ಕಡಿಮೆ ಶುಲ್ಕ ಇರುವ ಸಂಸ್ಥೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಹೆಚ್ಚಾಗಿ ಚಿನ್ನದ ಸಾಲದ ಮೇಲೆ ಮಾಸಿಕವಾಗಿ ಶೇಕಡ 0.83ರಷ್ಟು ಬಡ್ಡಿದರ ವಿಧಿಸಲಾಗುತ್ತದೆ. ಈ ಮೇಲೆ ಹೇಳಿದಂತೆ ಬೇರೆ ಎಲ್ಲ ಸಾಲಕ್ಕಿಂತ ಚಿನ್ನದ ಸಾಲ ಅಗ್ಗವಾಗಿದೆ.
ಚಿನ್ನ ಸಾಲದ ಅವಧಿ
ನೀವು ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುವ ಮೊದಲೇ ಸಾಲದ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸಾಲದ ಅವಧಿ ಎಂದರೆ ನೀವು ಸಂಪೂರ್ಣ ಮೊತ್ತವನ್ನು ಪಾವತಿ ಮಾಡಲು ಎಷ್ಟು ಅವಧಿ ಹೊಂದಿದ್ದೀರಿ ಎಂಬುವುದು ಆಗಿದೆ. ಆಯ್ಕೆ ಮಾಡುವ ಸಂದರ್ಭದಲ್ಲಿ ಅಷ್ಟೇ ಸಮಯದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವೇ ಎಂದು ನೋಡಿಕೊಳ್ಳಿ. ಹಾಗೆಯೇ ಸಮಯಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿ ಮಾಡಿ. ಇಲ್ಲವಾದರೆ ಅಧಿಕ ಶುಲ್ಕ, ದಂಡವನ್ನು ತೆರಬೇಕಾಗುತ್ತದೆ.
ಸಾಲ ಮರುಪಾವತಿ ಆಯ್ಕೆ
ಚಿನ್ನದ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಮರುಪಾವತಿ ಆಯ್ಕೆಯನ್ನು ಕೂಡಾ ಗಮನದಲ್ಲಿಟ್ಟುಕೊಳ್ಳಿ. ಕೆಲವು ಎನ್‌ಬಿಎಫ್‌ಸಿಗಳಲ್ಲಿ ಹಲವಾರು ಮರುಪಾವತಿ ಆಯ್ಕೆಗಳು ಇದೆ. ಸಾಲದ ಅವಧಿ ಆರಂಭದಲ್ಲೇ ಸಂಪೂರ್ಣ ಬಡ್ಡಿದರವನ್ನು ಮರುಪಾವತಿ ಮಾಡಿ ಬಳಿಕ ಉಳಿದ ಮೊತ್ತ ಪಾವತಿಸುವ ಆಯ್ಕೆಯಿದೆ. ಹಾಗೆಯೇ ಮಾಸಿಕವಾಗಿ, ಅರ್ಧ ತಿಂಗಳ ಆಧಾರದಲ್ಲಿ, ಮಾಸಿಕವಾಗಿ, ಅರ್ಧವಾರ್ಷಿಕವಾಗಿ, ವಾರ್ಷಿಕವಾಗಿಯೂ ಕೂಡಾ ಬಡ್ಡಿದರವನ್ನು ಪಾವತಿ ಮಾಡುವ ಆಯ್ಕೆಯಿದೆ.
ಚಿನ್ನದ ಶುದ್ಧತೆ
ನೀವು ಅಡವಿಡಲು ನಿರ್ಧಾರ ಮಾಡಿರುವ ಚಿನ್ನದ ಶುದ್ಧತೆಯನ್ನು ಮೊದಲೇ ಚಕ್ ಮಾಡಿಕೊಳ್ಳಿ. ಹಲವಾರು ಸಂಸ್ಥೆಗಳು 22 ಕ್ಯಾರೆಟ್ ಚಿನ್ನವನ್ನು ಮಾತ್ರ ಅಡವಿಟ್ಟುಕೊಳ್ಳುತ್ತದೆ. ನಿಮ್ಮಲ್ಲಿರುವ ಚಿನ್ನ ಹಳೆಯದಾದರೆ, ಶುದ್ಧತೆ ಕಡಿಮೆ ಇದ್ದರೆ, ನಿಮಗೆ ಸಾಲ ಲಭ್ಯವಾಗಲು ತೊಂದರೆಯಾಗಬಹುದು. ಆದ್ದರಿಂದಾಗಿ ನೀವು ಸಾಲವನ್ನು ಪಡೆಯುವಾಗ ಅದರ ಶುದ್ಧತೆಯನ್ನು ಕೂಡಾ ಚೆಕ್ ಮಾಡುವುದು ಅತೀ ಮುಖ್ಯವಾಗುತ್ತದೆ.


Click it and Unblock the Notifications