ಭಾರತದಾದ್ಯಂತ ಗಣೇಶ ಚತುರ್ಥಿ ಆಚರಣೆಯೊಂದಿಗೆ ಈಗಾಗಲೇ 2023 ರ ಹಬ್ಬದ ಸೀಸನ್ ಆರಂಭವಾಗಿದೆ. ಈ ಹಬ್ಬದ ಸೀಸನ್‌ನಲ್ಲಿ ಹಣದುಬ್ಬರವು ಕೂಡಾ ಅಧಿಕವಾಗುತ್ತಾ ಸಾಗಿದೆ. ಈ ನಡುವೆ 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಶೀಘ್ರವೇ ಆಗುವ ಸಾಧ್ಯತೆಯಿದೆ. ಹಬ್ಬದ ಗಿಫ್ಟ್ ಆಗಿ ಡಿಎ ಏರಿಕೆ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಡಿಎ ದರವನ್ನು ಮತ್ತು ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ (ಡಿಆರ್) ದರವನ್ನು ಶೇಕಡ 4 ರಷ್ಟು ಹೆಚ್ಚಿಸಬಹುದು ಎಂದು ವಿವಿಧ ವರದಿಗಳು ಹೇಳಿದೆ. ಆದರೆ ಸರ್ಕಾರವು ಡಿಎ ಮತ್ತು ಡಿಆರ್ ದರವನ್ನು ಶೇಕಡ 3 ರಷ್ಟು ಅಧಿಕ ಮಾಡಬಹುದು ಎಂದು ಈ ಹಿಂದೆಯೇ ನಿರೀಕ್ಷಿಸಲಾಗಿತ್ತು.

ತುಟ್ಟಿಭತ್ಯೆಯು ಶೇಕಡ 4 ರಷ್ಟು ಹೆಚ್ಚಳವಾದರೆ, ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಶೇಕಡ 42 ರಿಂದ ಶೇಕಡ 46 ಕ್ಕೆ ಏರಿಕೆಯಾಗುತ್ತದೆ. ಒಂದು ವೇಳೆ ಡಿಎ ಶೇಕಡ 3 ರಷ್ಟು ಏರಿಕೆಯಾದರೆ, ತುಟ್ಟಿಭತ್ಯೆಯು ಶೇಕಡ 45 ರಷ್ಟು ಆಗಿರುತ್ತದೆ.
ಕೈಗಾರಿಕಾ ಕಾರ್ಮಿಕರಿಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ- ಐಡಬ್ಲ್ಯೂ) ಆಧಾರದ ಮೇಲೆ ತುಟ್ಟಿಭತ್ಯೆ ದರವನ್ನಿ ನಿರ್ಧರಿಸಲಾಗುತ್ತದೆ. ಡಿಎ ದರವನ್ನು ನಿರ್ಧರಿಸುವ ಪ್ರಸ್ತುತ ಸೂತ್ರವು 7 ನೇ ವೇತನ ಆಯೋಗದ ಶಿಫಾರಸಿನ ಪ್ರಕಾರವಾಗಿದೆ. ಎಐಸಿಪಿಐ- ಐಡಬ್ಲ್ಯೂ ಡೇಟಾ ಮತ್ತು 7 ನೇ ವೇತನ ಆಯೋಗವು ಶಿಫಾರಸು ಮಾಡಿದ ಸೂತ್ರದ ಪ್ರಕಾರ, ಡಿಎ ಹೆಚ್ಚಳವು ಸುಮಾರು ಶೇಕಡ 4 ರಷ್ಟು ಆಗಿರಬಹುದು.
ಆದರೆ ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಪ್ರಕಾರ, ತುಟ್ಟಿಭತ್ಯೆಯು ಶೇಕಡ 3 ರಷ್ಟು ಏರಿಕೆಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಆರಂಭದಲ್ಲಿ 2023ರ ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರವು ಡಿಎ/ ಡಿಆರ್ ದರವನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಮಾಸಿಕ ವೇತನ ಹೇಗೆ ಹೆಚ್ಚಾಗುತ್ತದೆ?
ಇದನ್ನು ನಾವು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ. ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬರು ತಿಂಗಳಿಗೆ 25,600 ರೂಪಾಯಿ ಮೂಲ ವೇತನ ಪಡೆಯುತ್ತಿದ್ದಾರೆ ಎಂದುಕೊಳ್ಳೋಣ ನಾವು. ಪ್ರಸ್ತುತ ಶೇಕಡ 42 ರಷ್ಟು ಡಿಎ ದರದಲ್ಲಿ ಈ ಉದ್ಯೋಗಿ 10,752 ರೂಪಾಯಿ ತುಟ್ಟಿ ಭತ್ಯೆಗೆ ಅರ್ಹರಾಗಿರುತ್ತಾರೆ.
ಒಂದು ವೇಳೆ ತುಟ್ಟಿಭತ್ಯೆ ಶೇಕಡ 46 ರಷ್ಟು ಏರಿಕೆಯಾದರೆ, ಮಾಸಿಕವಾಗಿ 11,776 ರೂಪಾಯಿಯನ್ನು ಡಿಎ ರೂಪದಲ್ಲಿ ಪಡೆಯುತ್ತಾರೆ. ಅಂದರೆ ಉದ್ಯೋಗಿಗಳ ಮಾಸಿಕ ವೇತನವು 1024 ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಕಳೆದ ವರ್ಷ, ಸರ್ಕಾರವು ಡಿಎ ಹೆಚ್ಚಳವನ್ನು 1 ಜುಲೈ 2022 ರಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 28 ರಂದು ಘೋಷಣೆ ಮಾಡಿತು.


Click it and Unblock the Notifications