ಪ್ರಸ್ತುತ ಆಧಾರ್ ಕಾರ್ಡ್ ದೇಶದಲ್ಲಿ ನಮಗೆ ಬೇಕಾದ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ನಾವು ಸರ್ಕಾರದ ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ, ಬ್ಯಾಂಕ್ ಖಾತೆಯನ್ನು ತೆರೆಯಬೇಕಾದರೆ, ಇತರೆ ಕಾರ್ಯಗಳಿಗೆ ಆಧಾರ್ ಕಾರ್ಡ್ ಬಳಕೆ ಕಡ್ಡಾಯವಾಗಿದೆ. ಇದು ಆಧಾರ್ ಕಾರ್ಡ್ ದೇಶದಲ್ಲಿ ಪ್ರಮುಖ ದಾಖಲೆ ಎಂದಾಗಿಸಿದೆ. ಹಾಗಿರುವಾಗ ನಮ್ಮ ಆಧಾರ್ ಕಾರ್ಡ್‌ನಲ್ಲಿ ಎಲ್ಲ ಮಾಹಿತಿಯನ್ನು ಅಪ್ ಟು ಡೇಟ್ ಇಟ್ಟುಕೊಳ್ಳುವುದು ಅತೀ ಮುಖ್ಯವಾಗುತ್ತದೆ.
ನಮ್ಮ ಯಾವುದೇ ಕಾರ್ಯಕ್ಕೆ ಆಧಾರ್ ಮುಖ್ಯ ದಾಖಲೆಯಾಗಿರುವಾಗ ಅಡೆತಡೆ ತಪ್ಪಿಸಲು ಆಧಾರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಅಗತ್ಯವಾಗಿದೆ. ಅದಕ್ಕಾಗಿ ಸರ್ಕಾರವು ನಿಮಗೆ ಒಂದು ಉತ್ತಮ ಆಫರ್ ಅನ್ನು ನೀಡಿದೆ. ಆನ್‌ಲೈನ್‌ನಲ್ಲಿ ಆಧಾರ್ ದಾಖಲೆಗಳನ್ನು ಅಪ್‌ಡೇಟ್ ಮಾಡುವ ಸೌಲಭ್ಯವನ್ನು ಸರ್ಕಾರವು ಮೂರು ತಿಂಗಳ ಅವಧಿಗೆ ಅಂದರೆ ಜೂನ್ 14ರವರೆಗೆ ಉಚಿತವಾಗಿಸಿದೆ. ಈ ಉಚಿತ ಸೌಲಭ್ಯದ ಬಗ್ಗೆ ಯುಐಡಿಎಐ ಏನು ಹೇಳುತ್ತದೆ, ಏನೆಲ್ಲ ಉಚಿತ ಎಂದು ತಿಳಿಯಲು ಮುಂದೆ ಓದಿ...

ಆಧಾರ್ ಅಪ್‌ಡೇಟ್ ಬಗ್ಗೆ ಇಲ್ಲಿದೆ ಮಾಹಿತಿ
ಆಧಾರ್ ಪೋರ್ಟಲ್ ಮೂಲಕ ಆಧಾರ್ ಕಾರ್ಡ್ ಮಾಹಿತಿಯನ್ನು ಅಪ್‌ಡೇಟ್ ಮಾಡುವುದಾದರೆ ಜನರು 25 ರೂಪಾಯಿ ಸೇವಾ ಶುಲ್ಕವಾಗಿ ಪಾವತಿ ಮಾಡಬೇಕಾಗಿತ್ತು. ಆದರೆ ಈಗ ಈ ಸೇವೆಯನ್ನು ನಿಗದಿತ ಅವಧಿಗೆ ಉಚಿತವನ್ನಾಗಿಸಲಾಗಿದೆ. ಆದರೆ ಈ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತ ಎಂಬುವುದು ನಿಮಗೆ ತಿಳಿದಿರಲಿ. ಅಂದರೆ ನೀವಾಗಿಯೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಅಪ್‌ಡೇಟ್ ಮಾಡಿಸಿಕೊಳ್ಳುವುದಾದರೆ, 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
"ಭಾರತದ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ) ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಮಾಹಿತಿ ಅಪ್‌ಡೇಟ್ ಮಾಡುವ ಸೌಲಭ್ಯವನ್ನು ಉಚಿತವಾಗಿ ನೀಡಲು ನಿರ್ಧಾರ ಮಾಡಿದೆ. ಇದರಿಂದಾಗಿ ಲಕ್ಷಾಂತರ ಜನರಿಗೆ ಸಹಾಯವಾಗಲಿದೆ. ಉಚಿತ ಸೇವೆಯು ಮುಂದಿನ 3 ತಿಂಗಳ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಅಂದರೆ ಮಾರ್ಚ್ 15ರಿಂದ ಜೂನ್ 14, 2023ರವರೆಗೆ ಈ ಸೇವೆಯು ಲಭ್ಯವಿರುತ್ತದೆ," ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಆಧಾರ್ ಎನ್‌ರೋಲ್‌ಮೆಂಟ್ ಮತ್ತು ಅಪ್‌ಡೇಟ್ ರೆಗ್ಯೂಲೇಷನ್ , 2016ರ ಪ್ರಕಾರ ಆಧಾರ್ ಪಡೆದ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. "ಈ ಉಚಿತ ಸೇವೆಯು ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ ಮತ್ತು ನೀವು ಆಧಾರ್ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿದರೆ 50 ರೂಪಾಯಿ ಪಾವತಿ ಮಾಡಬೇಕಾಗುತ್ತದೆ ಎಂಬುವುದು ಗಮನದಲ್ಲಿ ಇರಲಿ," ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
"ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ವೇಳೆ ಗುರುತಿನ ಪುರಾವೆಯನ್ನು ಮತ್ತು ವಿಳಾಸದ ಪುರಾವೆಯನ್ನು ನೀಡಬೇಕಾಗುತ್ತದೆ. ಅದು ಕೂಡಾ ಮುಖ್ಯವಾಗಿ 10 ವರ್ಷಕ್ಕೂ ಹಿಂದೆ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿದ್ದರೆ, ಈಗ ಮತ್ತೆ ಅಪ್‌ಡೇಟ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ಆಧಾರ್ ಅಪ್‌ಡೇಟ್ ಮಾಡುವುದರಿಂದಾಗಿ ನಿಮಗೆ ಯಾವುದೇ ಸೇವೆಯು ಸರಳವಾಗಲಿದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


Click it and Unblock the Notifications