ನಾಳೆ (ಮೇ 3ರಂದು) ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯಾವನ್ನು ದೇಶದಲ್ಲಿ ಆಚರಣೆ ಮಾಡಲಾಗುತ್ತದೆ. ಈ ದಿನ ಚಿನ್ನವನ್ನು ಖರೀದಿ ಮಾಡಿದರೆ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಲಿದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಅಷ್ಟು ಮಾತ್ರವಲ್ಲದೇ ಆಭರಣ ಮಳಿಗೆಗಳು ಕೂಡಾ ಆಫರ್‌ಗಳನ್ನು ನೀಡುತ್ತದೆ.
ಅಕ್ಷಯ ತೃತೀಯದ ಇಡೀ ದಿನವೂ ಸುಮುಹೂರ್ತವೆಂದು ನಂಬಲಾಗಿದೆ. ಈ ದಿನದಂದು ಹೆಚ್ಚಿನ ಜನರು ಚಿನ್ನವನ್ನು ಖರೀದಿ ಮಾಡುತ್ತಾರೆ ಅಥವಾ ಚಿನ್ನಕ್ಕೆ ಹೂಡಿಕೆ ಮಾಡುತ್ತಾರೆ. ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ ದಿನದಂದು ಜನರು ನಾಣ್ಯಗಳಿಂದ ಹಿಡಿದು ಆಭರಣಗಳಿಂದ ಡಿಜಿಟಲ್ ಚಿನ್ನದವರೆಗೆ ಎಲ್ಲಾ ರೀತಿಯ ಚಿನ್ನವನ್ನು ಖರೀದಿಸುತ್ತಾರೆ.
ಸ್ವಲ್ಪ ಸಮಯದಿಂದ ಚಿನ್ನದ ಬೆಲೆಗಳು ರೂ 50,000 ದ ಆಸುಪಾಸಿನಲ್ಲಿ ಇದೆ. ಚಿನ್ನದ ಬೆಲೆಯು ನಿರಂತರವಾಗಿ ಇಳಿಕೆ ಕಾಣುತ್ತಿದೆ. ಈ ನಡುವೆ ಚಿನ್ನ ಖರೀದಿಯು ಉತ್ತಮ ಆಯ್ಕೆಯೂ ಹೌದು. ನೀವು ಈ ವರ್ಷ ಚಿನ್ನದ ಆಭರಣ ಅಥವಾ ಚಿನ್ನದ ನಾಣ್ಯವನ್ನು ಖರೀದಿ ಮಾಡಲು ಮುಂದಾಗಿದ್ದರೆ, ಅದಕ್ಕೂ ಮುನ್ನ ಈ ಪ್ರಮುಖ ಐದು ವಿವರವನ್ನು ಓದಿ...

ಚಿನ್ನದ ಐದು ಪ್ರಮುಖ ಅಂಶಗಳನ್ನು ತಿಳಿಯಿರಿ
ಹಾಲ್‌ಮಾರ್ಕ್: ಚಿನ್ನದ ನಾಣ್ಯದ ಮೇಲೆ ಹಾಲ್‌ಮಾರ್ಕ್ ಚಿನ್ನದ ನಾಣ್ಯದ ಶುದ್ಧತೆಯನ್ನು ತಿಳಿಯುವ ವಿಧಾನವಾಗಿದೆ. ಚಿನ್ನದ ವಸ್ತುಗಳನ್ನು ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್) ಹಾಲ್‌ಮಾರ್ಕಿಂಗ್ ಕೇಂದ್ರದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಚಿನ್ನದ ನಾಣ್ಯಗಳನ್ನು ಖರೀದಿಸುವ ಮೊದಲು ನೀವು ಹಾಲ್‌ಮಾರ್ಕಿಂಗ್ ಚಿಹ್ನೆಗಳನ್ನು ಪರಿಶೀಲಿಸಿ ಚಿನ್ನದ ಶುದ್ಧತೆಯನ್ನು ತಿಳಿಯಬಹುದು.
ಚಿನ್ನದ ಶುದ್ಧತೆ: ಚಿನ್ನದ ಶುದ್ಧತೆಯನ್ನು ನಿರ್ಣಯಿಸಲು ಕ್ಯಾರೆಟ್ ಎಂಬ ಮಾಪನವನ್ನು ಬಳಸಲಾಗುತ್ತದೆ. ನಿಮ್ಮ ಚಿನ್ನದ ನಾಣ್ಯವು 24 ಕ್ಯಾರೆಟ್ ಆಗಿದ್ದರೆ, ನಾಣ್ಯದ ಸಂಯೋಜನೆಯ 24 ಭಾಗಗಳಲ್ಲಿ 24 ಭಾಗಗಳು ಚಿನ್ನದಿಂದ ಮಾಡಲ್ಪಟ್ಟಿದೆ ಎಂದರ್ಥ. 22 ಕ್ಯಾರಟ್ ಚಿನ್ನದ ನಾಣ್ಯಗಳಲ್ಲಿ, 24 ಭಾಗಗಳಲ್ಲಿ 22 ಭಾಗಗಳು ಚಿನ್ನದಿಂದ ಮಾಡಲ್ಪಟ್ಟಿದೆ, ಉಳಿದ ಎರಡು ಭಾಗಗಳು ಇತರ ಕೆಲವು ಲೋಹಗಳಾಗಿವೆ ಎಂದು ಅರ್ಥ.
ಮೇಕಿಂಗ್ ಚಾರ್ಜ್: ಮೇಕಿಂಗ್ ಚಾರ್ಜ್ ವಿಚಾರಕ್ಕೆ ಬಂದಾಗ ಚಿನ್ನದ ಆಭರಣ ಉತ್ತಮವೇ ಅಥವಾ ಚಿನ್ನದ ನಾಣ್ಯ ಖರೀದಿ ಉತ್ತಮವೇ ಎಂಬ ಪ್ರಶ್ನೆ ಮೂಡುತ್ತದೆ. ಚಿನ್ನದ ನಾಣ್ಯಕ್ಕಿಂತ ಚಿನ್ನದ ಆಭರಣಕ್ಕೆ ಅಧಿಕ ಮೇಕಿಂಗ್ ಚಾರ್ಜ್ ಇರುತ್ತದೆ. ಚಿನ್ನದ ನಾಣ್ಯದ ತಯಾರಿಯು ಸುಲಭವಾದ ಕಾರಣದಿಂದಾಗಿ ಮೇಕಿಂಗ್ ಚಾರ್ಜ್ ಕಡಿಮೆ ಇರುತ್ತದೆ. ಆದರೆ ಆಭರಣವನ್ನು ಖರೀದಿ ಮಾಡಬೇಕಾದರೆ ಅಧಿಕ ಮೇಕಿಂಗ್ ಚಾರ್ಜ್ ಇರುತ್ತದೆ.

ಚಿನ್ನದ ನಾಣ್ಯಗಳ ಮರುಮಾರಾಟ: ಬ್ಯಾಂಕ್‌ನಿಂದ ಚಿನ್ನದ ನಾಣ್ಯಗಳನ್ನು ಖರೀದಿಸಿದರೆ, ಅವನು ಅಥವಾ ಅವಳು ಅದನ್ನು ಬ್ಯಾಂಕ್‌ಗೆ ಮಾರಾಟ ಮಾಡಲು ಸಾಧ್ಯ ಆಗುವುದಿಲ್ಲ. ತಮ್ಮ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲು ಬಯಸುವ ವ್ಯಕ್ತಿಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಅಥವಾ ಹಾಗೆ ಖರೀದಿ ಮಾಡಲು ಮಾನ್ಯತೆ ಪಡೆದ ಆಭರಣ ಮಳಿಗೆಗಳಲ್ಲಿ ಮಾರಾಟ ಮಾಡಬೇಕು.
ಚಿನ್ನದ ತೂಕ: ಚಿನ್ನದ ನಾಣ್ಯಗಳನ್ನು ಖರೀದಿಸುವ ಮೊದಲು ಅದರ ತೂಕ ಅಥವಾ ಮುಖಬೆಲೆ ಪ್ರಮುಖವಾಗಿದೆ. 1 ಗ್ರಾಂ, 5 ಗ್ರಾಂ ಮತ್ತು 10 ಗ್ರಾಂಗಳಲ್ಲಿ ಸಾಮಾನ್ಯವಾದವುಗಳೊಂದಿಗೆ ಲಭ್ಯವಿರುವ ಆಯ್ಕೆಗಳ ಶ್ರೇಣಿಯ ನಡುವೆ ನೀವು ಆಯ್ಕೆ ಮಾಡಬಹುದು. ಚಿನ್ನದ ನಾಣ್ಯಗಳು 0.5 ಗ್ರಾಂನಿಂದ 50 ಗ್ರಾಂಗಳವರೆಗೆ ಬರುತ್ತವೆ.
ಅಕ್ಷಯ ತೃತೀಯ ಅಥವಾ ಅಕ್ಷಯ ತದಿಗೆ ದಿನದಂದು ಜನರು ನಾಣ್ಯಗಳಿಂದ ಹಿಡಿದು ಆಭರಣಗಳಿಂದ ಡಿಜಿಟಲ್ ಚಿನ್ನದವರೆಗೆ ಎಲ್ಲಾ ರೀತಿಯ ಚಿನ್ನವನ್ನು ಖರೀದಿಸುತ್ತಾರೆ. ಬದಲಾಗುತ್ತಿರುವ ಸಮಯದೊಂದಿಗೆ ಹೂಡಿಕೆದಾರರು ಭೌತಿಕ ಚಿನ್ನಕ್ಕಿಂತ ಹೆಚ್ಚಾಘು ಚಿನ್ನದ ಇಟಿಎಫ್ ಅನ್ನು ಆರಿಸಿಕೊಳ್ಳುತ್ತಿದ್ದಾರೆ.
ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುವಲ್ ಫಂಡ್‌ಗಳ ಉತ್ಪನ್ನ ಅಭಿವೃದ್ಧಿ ಮತ್ತು ಕಾರ್ಯತಂತ್ರದ ಮುಖ್ಯಸ್ಥ ಚಿಂತನ್ ಹರಿಯಾ ಈ ಬಗ್ಗೆ ಮಾತನಾಡಿ, "ಗೋಲ್ಡ್ ಇಟಿಎಫ್‌ಗಳು ಕೆಲವು ವಿಭಿನ್ನ ಪ್ರಯೋಜನಗಳನ್ನು ನೀಡುವುದರಿಂದ ಇದು ಉತ್ತಮ," ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಹಾಗೂ ಕಳ್ಳತನದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ ಚಿನ್ನವನ್ನು ಡಿಮ್ಯಾಟ್ ರೂಪದಲ್ಲಿ ಇರಿಸಲಾಗುತ್ತದೆ. ಮೇಕಿಂಗ್ ಶುಲ್ಕವೂ ಇಲ್ಲ, ಇತರೆ ವೆಚ್ಚಗಳು ಕೂಡಾ ಇಲ್ಲ," ಎಂದು ತಿಳಿಸಿದ್ದಾರೆ.


Click it and Unblock the Notifications