ದೇಶದಲ್ಲಿ ಇಂದು ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯಾವನ್ನು ಆಚರಣೆ ಮಾಡಲಾಗುತ್ತಿದ್ದು, ದೇಶದಲ್ಲಿ ಭರ್ಜರಿ ಚಿನ್ನ ಖರೀದಿ ನಡೆದಿದೆ. ಈ ದಿನ ಚಿನ್ನ ಖರೀದ ಮಾಡಿದರೆ ಮನೆಯಲ್ಲಿ ಸಮೃದ್ಧಿ ಹಾಗೂ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದಾಗಿ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಇದು ದೇಶದಲ್ಲಿ 15,000 ಕೋಟಿ ಮೌಲ್ಯದ ಚಿನ್ನದ ವಹಿವಾಟು ನಡೆದಿದೆ ಎಂದು ವ್ಯಾಪಾರಿಗಳ ಒಕ್ಕೂಟದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕದ ನಿರ್ಬಂಧಗಳು ಕಡಿಮೆ ಆದ ನಡುವೆ ದೇಶದಲ್ಲಿ ಚಿನ್ನದ ವ್ಯಾಪಾರ ಕೊಂಚ ಹೆಚ್ಚಳವಾಗಿದೆ. ಅಕ್ಷಯ ತದಿಗೆಗೂ ಮುಂಚಿನ ಹಲವು ದಿನಗಳಿಂದ ಚಿನ್ನದ ಬೆಲೆಯು ಇಳಿಕೆ ಕಂಡಿರುವುದು ಇಂದು ವ್ಯಾಪಾರ ಮತ್ತಷ್ಟು ಹೆಚ್ಚಳವಾಗಲು ಕಾರಣವಾಗಿದೆ. ಹಳದಿ ಲೋಹವು ಮಾರ್ಚ್‌ನಲ್ಲಿ ಏರಿದ್ದು, ಆದರೆ ಈಗ ಸುಮಾರು 5,000 ಕುಸಿದಿದೆ. ಈ ನಡುವೆ ವ್ಯಾಪಾರ ಭರ್ಜರಿಯಾಗಿದೆ.
2019 ರಲ್ಲಿ ಅಕ್ಷಯ ತೃತೀಯ ದಿನದಂದು ದೇಶದಾದ್ಯಂತ 10,000 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಮಾರಾಟ ಮಾಡಲಾಗಿದೆ ಎಂದು ಸಿಎಐಟಿ ಅಂದಾಜು ಮಾಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ನಿರ್ಬಂಧ ಹೇರಲಾಗಿದ್ದ ಕಾರಣ ಜನರು ಆರ್ಥಿಕ ಬಿಕ್ಕಟ್ಟಿನಲ್ಲಿ ಇದ್ದರು. ಈ ಸಂದರ್ಭದಲ್ಲಿ ಚಿನ್ನದ ಖರೀದಿಯು ಕಡಿಮೆ ಆಗಿತ್ತು. ಅಷ್ಟೇ ಅಲ್ಲದೆ ಹಲವಾರು ಮಂದಿ ಚಿನ್ನವನ್ನು ಮಾರಾಟ ಮಾಡಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಕಾರಣ 2020 ಮತ್ತು 2021 ರಲ್ಲಿ ಮಾರಾಟವು ಕುಸಿಯಿತು.

ಜ್ಯುವೆಲ್ಲರಿ ಮಳಿಗೆಯಲ್ಲಿ ತುಂಬಿದ ಜನರು
"ಕಳೆದ ಎರಡು ವರ್ಷಗಳಿಂದ ಕೋವಿಡ್ ಬಿಕ್ಕಟ್ಟಿನಿಂದಾಗಿ ಭಾರಿ ಕುಸಿತವನ್ನು ಕಂಡ ನಂತರ, ದೇಶಾದ್ಯಂತದ ಚಿನ್ನದ ಮಾರುಕಟ್ಟೆಯು ಪುಟಿದಿದೆ. ಇಂದು ಅಕ್ಷಯ ತದಿಗೆ ಹಿನ್ನೆಲೆ ಚಿನ್ನದ ಮಳಿಗೆಯಲ್ಲಿ ಜನರು ತುಂಬಿದ್ದರು. ಅಕ್ಷಯ ತೃತೀಯದಲ್ಲಿ ಇಂದು 15,000 ಕೋಟಿ ಮೌಲ್ಯದ ಆಭರಣ ವ್ಯವಹಾರ ನಡೆದಿದೆ ಎಂದು ಅಂದಾಜಿಸಲಾಗಿದೆ," ಎಂದು ಸಿಎಐಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದರು.
ಹೆಚ್ಚು ಹಗುರವಾದ ಆಭರಣಗಳು ಅಧಿಕ ಮಾರಾಟವಾಗಿದೆ ಎಂದು ಅಖಿಲ ಭಾರತ ಜ್ಯುವೆಲರ್ಸ್ ಮತ್ತು ಗೋಲ್ಡ್ ಸ್ಮಿತ್ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಅರೋರಾ ಹೇಳಿದ್ದಾರೆ. ಮುಂಬರುವ ಮದುವೆಯ ಋತುವಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆಗಬಹುದು ಎಂದು ಹಲವಾರು ಮಂದಿ ಈ ಅಕ್ಷಯ ತದಿಗೆಯಂದೇ ಚಿನ್ನ ಖರೀದಿ ಮಾಡಿದ್ದಾರೆ ಎಂದು ವರದಿ ಉಲ್ಲೇಖ ಮಾಡಿದೆ.
ಕಡಿಮೆ ತೂಕದ ಫ್ಯಾಶನ್ ಆಭರಣಗಳ ಮೆಲೆ ಗ್ರಾಹಕರ ಒಲವು
"ವಧುವಿನ ಆಭರಣಗಳಿಗೆ ಹೆಚ್ಚು ಬೇಡಿಕೆ ಇದ್ದವು. ಮದುವೆಗೆ ಮಂಗಳಕರವಾದ ತಿಂಗಳು ಎಂದು ಪರಿಗಣಿಸಲಾದ ಹಿನ್ನೆಲೆ ಈ ತಿಂಗಳು ಅಧಿಕ ವಿವಾಹ ಸಮಾರಂಭಗಳು ಇದೆ. ಮದುವೆಗಾಗಿ ಈ ಅಕ್ಷಯ ತದಿಗೆಯಂದು ಚಿನ್ನವನ್ನು ಖರೀದಿ ಮಾಡಿದ್ದಾರೆ. ಅಲ್ಲದೆ, ಹೆಚ್ಚುತ್ತಿರುವ ಉದ್ಯೋಗಿ ಮಹಿಳೆಯರು ಮತ್ತು ಹೆಚ್ಚುತ್ತಿರುವ ಯುವ ಗ್ರಾಹಕರು ಹೂಡಿಕೆಗಿಂತ ಆಭರಣಗಳನ್ನು ಖರೀದಿಸಲು ಆದ್ಯತೆ ನೀಡುತ್ತಾರೆ. ಕಡಿಮೆ ತೂಕದ ಫ್ಯಾಶನ್ ಆಭರಣಗಳ ಮೇಲೆ ಗ್ರಾಹಕರ ಒಲವು ಬದಲಾಗುತ್ತಿದೆ," ಎಂದು ಸೆಂಕೋ ಗೋಲ್ಡ್ ಮತ್ತು ಡೈಮಂಡ್ಸ್‌ನ ಎಂಡಿ ಮತ್ತು ಸಿಇಒ ಸುವಾಂಕರ್ ಸೇನ್ ಹೇಳಿದ್ದಾರೆ.

ಅಕ್ಷಯ ತೃತೀಯವು ಭಾರತದಲ್ಲಿನ ಅತಿದೊಡ್ಡ ಆಭರಣ ಖರೀದಿ ಉತ್ಸವಗಳಲ್ಲಿ ಒಂದಾಗಿದೆ. ಈ ಸಮಯದಲ್ಲಿ ಆಭರಣ ವ್ಯಾಪಾರಿಗಳು ಸಾಮಾನ್ಯವಾಗಿ ಹೆಚ್ಚಿನ ಮಾರಾಟವನ್ನು ದಾಖಲಿಸುತ್ತಾರೆ ಎಂದು ಸೇನ್ ಹೇಳಿದರು. "ನಾವು ವೀಡಿಯೊ ಕರೆ, ಡಿಜಿಟಲ್ ಕ್ಯಾಟಲಾಗ್ ಮೂಲಕ ಆಭರಣ ಖರೀದಿಯಂತಹ ವಿವಿಧ ಡಿಜಿಟಲ್ ಮತ್ತು 'ಫೈ-ಗಿಟಲ್' ಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಗ್ರಾಹಕರಿಗೆ ನಮ್ಮ ಶೋರೂಮ್‌ಗಳಿಗೆ ವರ್ಚುವಲ್ ಪ್ರವೇಶವನ್ನು ನೀಡಲು ಆನ್‌ಲೈನ್ ಮುಂಗಡ ಬುಕಿಂಗ್ ವ್ಯವಸ್ಥೆ ಇದೆ," ಎಂದು ಮಾಹಿತಿ ನೀಡಿದರು.
2019 ರಲ್ಲಿ, 10 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ 35,220 ರೂಪಾಯಿ ಆಗಿತ್ತು. ಇದೇ 2022ರಲ್ಲಿ 51,510 ರೂಪಾಯಿಗೆ ಏರಿಕೆಯಾಗಿದೆ.


Click it and Unblock the Notifications