ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯಲ್ಲಿ ವಿವಿಧ ಹುದ್ದೆಗಳನ್ನು ಘೋಷಣೆ ಮಾಡಲಾಗಿದೆ. ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಮಡಿಕೇರಿ ನಗರಸಭೆಗೆ ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್‍ಟೆಂಟ್ ಅನ್ನು ಹೊರಗುತ್ತಿಗೆ/ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೀವು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಮತ್ತು ಅರ್ಹರು ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು, ವಯೋಮಿತಿ ಎಷ್ಟಿದೆ, ಹೇಗೆ ಅರ್ಜಿ ಸಲ್ಲಿಸುವುದು, ವೇತನವೆಷ್ಟು? ಎಂಬ ವಿವರ ಇಲ್ಲಿದೆ ಮುಂದೆ ಓದಿ....

ವಿದ್ಯಾರ್ಹತೆ, ವೇತನ, ಅರ್ಜಿ ವಿವರ
ಆಸಕ್ತ ಅಭ್ಯರ್ಥಿಗಳು ಸ್ವಯಂ ಅರ್ಜಿ ಮತ್ತು ದೃಢೀಕೃತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಡಿಸೆಂಬರ್ 20 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹಾಗೆಯೇ ಇದು ಪೂರ್ಣವಾಗಿ ತಾತ್ಕಾಲಿಕ ಹೊರಗುತ್ತಿಗೆ ಹುದ್ದೆ ಎಂದು ತಿಳಿಸಲಾಗಿದೆ.
ಯಾರಿಗೆ ಆದ್ಯತೆ?
ಪ್ರಥಮ ಆದ್ಯತೆಯನ್ನು ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್‍ಟೆಂಟ್‌ಗೆ ನೀಡಲಾಗುತ್ತದೆ. ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಬಿ.ಎಸ್‌ಸಿ (ಕಂಪ್ಯೂಟರ್ ಸೈನ್ಸ್)/ ಬಿಸಿಎ, ಎಂಎಸ್ಸಿ (ಕಂಪ್ಯೂಟರ್ ಸೈನ್ಸ್) ಅಥವಾ ಬಿಇ (ಕಂಪ್ಯೂಟರ್ ಸೈನ್/ ಐಟಿ/ ಎಂಸಿಎ) ವಿದ್ಯಾರ್ಹತೆ ಹೊಂದಿರಬೇಕಾಗುತ್ತದೆ.
ಮಾಸಿಕವಾಗಿ ಕನಿಷ್ಠ 20,584 ರೂಪಾಯಿ ವೇತನವನ್ನು ನೀಡಲಾಗುತ್ತದೆ. ಏಜೆನ್ಸಿ ಮೂಲಕ ಅರ್ಜಿ ಸಲ್ಲಿಸುವವರು ಮಾತ್ರ ಸೇವಾ ಶುಲ್ಕವನ್ನು ನಮೂದಿಸಬೇಕಾಗುತ್ತದೆ. ಈ ನಿಗದಿತ ವೇತನವು ಪ್ರಥಮ ವರ್ಷಕ್ಕೆ ನಿಗದಿ ಮಾಡಲಾಗಿದೆ. ಮುಂದಿನ ವರ್ಷಗಳಿಗೆ ಸರ್ಕಾರವು ನಿಗದಿ ಪಡಿಸಿರುವಂತೆ/ ಪಡಿಸುವಂತೆ ಸೇವೆಯನ್ನು ಆಧರಿಸಿ ವೇತನವನ್ನು ಪರಿಷ್ಕರಣೆ ಮಾಡಲಾಗುತ್ತದೆ.
ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ
2023-24ನೇ ಸಾಲಿನಲ್ಲಿ ನವ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ನೀಡುವ ಯೋಜನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿದ್ದು, ಅರ್ಹ ನವ ಕಾನೂನು ಪದವೀಧರು ಅರ್ಜಿ ಸಲ್ಲಿಸಬಹುದು.
ಅರ್ಜಿಯನ್ನು ಭರ್ತಿ ಮಾಡಿ ಸ್ವಯಂ ದೃಢೀಕರಿಸಿದ ದಾಖಲೆಯೊಂದಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ, ಕೊಡಗು ಮಡಿಕೇರಿ ಮತ್ತು 2ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ, ಕೊಡಗು ಮಡಿಕೇರಿ (ಕಾರ್ಯ ನಿರ್ವಹಣೆ ವಿರಾಜಪೇಟೆ), ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಸೋಮವಾರಪೇಟೆ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಪೊನ್ನಂಪೇಟೆ ಹಾಗೂ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಕುಶಾಲನಗರ ಇಲ್ಲಿಗೆ ಸಂಬಂಧಪಟ್ಟ ಹಿರಿಯ ನ್ಯಾಯಾಧೀಶರುಗಳ ಮುಖಾಂತರ ಅರ್ಜಿ ಸಲ್ಲಿಸಬೇಕು.
ಕೊನೆಯ ದಿನಾಂಕ ಜನವರಿ 12 ಆಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರ ಕಚೇರಿ, ಮಡಿಕೇರಿ ಇಲ್ಲಿಗೆ ಸಂಪರ್ಕಿಸಬಹುದು. ಈ ಯೋಜನೆಯು 2023-24 ನೇ ಸಾಲಿನಲ್ಲಿ ಜಾರಿಯಾಗಲಿದೆ. ಅಭ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲರ ಷರತ್ತಿನಡಿಯಲ್ಲಿ 2022ರ ಜೂನ್ 1 ರಿಂದ 2023ರ ಮೇ 31ರವರೆಗಿನ ಅವಧಿಯಲ್ಲಿ ವಕೀಲ ವೃತ್ತಿಗೆ ನೋಂದಾಯಿಸಿದವರು ಆಗಿರಬೇಕು.
ಮಾಸಿಕ ಎರಡು ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ. ಒಟ್ಟು 24 ತಿಂಗಳುಗಳ ಅವಧಿಗೆ ನೀಡಲಾಗುತ್ತದೆ. ಸ್ವಇಚ್ಚಾ ನಿವೃತ್ತಿ ಹೊಂದಿದ, ಯಾವುದೇ ಸೇವೆಯಿಂದ ತೆಗೆದುಹಾಕಲ್ಪಟ್ಟರೆ ಪ್ರೋತ್ಸಾಹಧನ ಪಡೆಯಲು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.


Click it and Unblock the Notifications