ತೀರಾ ತುರ್ತು ಸಂದರ್ಭ ಅಂದರೆ ಯಾರು ಸಾಲ ಮಾಡಲ್ಲ ಹೇಳಿ? ಅದರಲ್ಲೂ ಕೊರೊನಾ ಲಾಕ್ ಡೌನ್ ನಂಥ ಸ್ಥಿತಿ ಬಂದರೆ ಆ ಜನರ ಸ್ಥಿತಿ ದೇವರಿಗೇ ಪ್ರೀತಿ. ಆದರೆ ಸಾಲಗಳ ಪೈಕಿ ಬ್ಯಾಂಕ್ ಗಳಿಂದ ತೆಗೆದುಕೊಳ್ಳಲು ಬಹುತೇಕ ಜನರು ಮುಂದಾಗುವುದು ಪರ್ಸನಲ್ ಲೋನ್ ಗೆ. ಸಾಲ ತೆಗೆದುಕೊಳ್ಳುತ್ತಾರೆ ಸರಿ, ಆದರೆ ಹಾಗೆ ಸಾಲಕ್ಕೆ ಅಪ್ಲೈ ಮಾಡುವಾಗ ಕೆಲವು ತಪ್ಪುಗಳನ್ನು ಮಾಡಿಬಿಡ್ತಾರೆ.
ಏನು ಆ ತಪ್ಪುಗಳು? ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳೇನು ಎಂಬ ಬಗ್ಗೆ ಐದು ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ. ಇವ್ಯಾವೂ ತಲೆಯೊಳಗೆ ಹೋಗದ ಸಂಗತಿಗಳು ಖಂಡಿತಾ ಅಲ್ಲ. ಆದರೆ ಬಹಳ ಜನರು ಈ ಬಗ್ಗೆ ತಿಳಿದುಕೊಂಡಿರಲ್ಲ, ಅಷ್ಟೇ.
ಕ್ರೆಡಿಟ್ ಸ್ಕೋರ್ ಪರೀಕ್ಷಿಸಿಕೊಳ್ಳಿ
ಯಾವುದೇ ಸಾಲಕ್ಕೆ ಅಪ್ಲೈ ಮಾಡಿದರೂ ಸಾಲ ನೀಡಬೇಕಾದ ಸಂಸ್ಥೆಯು ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುತ್ತದೆ. ಆ ವ್ಯಕ್ತಿ ಎಷ್ಟು ಜವಾಬ್ದಾರಿಯುತವಾಗಿ ಸಾಲ ಮರುಪಾವತಿ ಮಾಡಿದ್ದಾರೆ ಎಂದು ತಿಳಿದುಕೊಳ್ಳುವ ಬಗೆ ಇದೆ. ಸಾಮಾನ್ಯವಾಗಿ 900ಕ್ಕೆ 750 ಮತ್ತು ಅದಕ್ಕಿಂತ ಹೆಚ್ಚು ಅಂಕವಿದ್ದರೆ ಅತ್ಯುತ್ತಮ ಎಂದು ಭಾವಿಸಲಾಗುತ್ತದೆ. ಇಲ್ಲದಿದ್ದಲ್ಲಿ ಸಾಲದ ಅರ್ಜಿಯೇ ತಿರಸ್ಕೃತವಾಗಬಹುದು. ಕೆಲವು ಸಾಲ ನೀಡುವ ಸಂಸ್ಥೆಗಳು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಹಣ ನೀಡುತ್ತವೆ. ಆದರೆ ಬಡ್ಡಿ ದರ ಸಿಕ್ಕಾಪಟ್ಟೆ ಇರುತ್ತದೆ. ಆದ್ದರಿಂದ ಸಾಲಕ್ಕೆ ಅಪ್ಲೈ ಮಾಡುವ ಮುನ್ನ ಕ್ರೆಡಿಟ್ ಸ್ಕೋರ್ ಪರಿಶೀಲಿಸಿಕೊಳ್ಳಿ. ಅದರಲ್ಲಿ ಏನಾದರೂ ತಪ್ಪುಗಳಾಗಿದ್ದಲ್ಲಿ ಸಂಬಂಧಪಟ್ಟ ಬ್ಯುರೋಗಳನ್ನು ಸಂಪರ್ಕಿಸಿ, ಸರಿಪಡಿಸಿಕೊಳ್ಳಿ.
ಏಕಕಾಲಕ್ಕೆ ಹಲವು ಕಡೆ ಅರ್ಜಿ ಹಾಕಬೇಡಿ
ನೇರವಾಗಿ ಹಣಕಾಸು ಸಂಸ್ಥೆಗಳಿಗೆ ಸಾಲಕ್ಕೆ ಅರ್ಜಿ ಹಾಕಿಕೊಂಡ ಕೂಡಲೇ ಪ್ರಕ್ರಿಯೆಗಳು ಶುರುವಾಗುತ್ತವೆ. ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಮತ್ತಿತರ ವಿಚಾರಣೆಗಳು ಶುರುವಾಗುತ್ತವೆ. ಅಂಥದ್ದನ್ನು "ಹಾರ್ಡ್ ಎನ್ ಕ್ವೇರೀಸ್" ಎಂದು ಕರೆಯಲಾಗುತ್ತದೆ. ಇದು ಕ್ರೆಡಿಟ್ ರಿಪೋರ್ಟ್ ನಲ್ಲಿ ಸೇರ್ಪಡೆಯಾಗುತ್ತದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಲದ ಅರ್ಜಿಗಳನ್ನು ಹಾಕಿಕೊಂಡಲ್ಲಿ ಕ್ರೆಡಿಟ್ ಸ್ಕೋರ್ ಇಳಿಕೆಯಾಗುತ್ತದೆ. ಆದ್ದರಿಂದ ನೇರವಾಗಿ ಅರ್ಜಿ ಹಾಕುವ ಬದಲು ಆನ್ ಲೈನ್ ನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಎಲ್ಲಿ ಸೂಕ್ತ ಸಾಲ ಸೌಲಭ್ಯ, ಕಡಿಮೆ ಬಡ್ಡಿ ದರ ಇದೆ ಎಂಬುದನ್ನು ಪರಿಶೀಲಿಸಿಕೊಂಡು, ಆ ನಂತರ ಮುಂದುವರಿದರೆ ಒಳ್ಳೆಯದು. ಆನ್ ಲೈನ್ ಫೈನಾನ್ಸ್ ಮಾರ್ಕೆಟ್ ಪ್ಲೇಸ್ ಗಳೂ ಕ್ರೆಡಿಟ್ ರಿಪೋರ್ಟ್ ಪಡೆಯುತ್ತವೆ. ಆದರೆ ಇದನ್ನು "ಸಾಫ್ಟ್ ಎನ್ ಕ್ವೇರೀಸ್" ಎಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮವಾಗುವುದಿಲ್ಲ.
ಬಡ್ಡಿ ದರ ಎಲ್ಲಿ, ಎಷ್ಟಿದೆ ಎಂಬುದನ್ನು ಪರಿಶೀಲಿಸಬೇಕು
ಪರ್ಸನಲ್ ಲೋನ್ ಬಡ್ಡಿ ದರವು ವರ್ಷಕ್ಕೆ 10.35 ಪರ್ಸೆಂಟ್ ನಿಂದ ಶುರುವಾಗಿ 24 ಪರ್ಸೆಂಟ್ ತನಕ ಇದೆ. ಆದ್ದರಿಂದ ಯಾವ ಹಣಕಾಸು ಸಂಸ್ಥೆಯಲ್ಲಿ, ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ಅರ್ಹತಾ ಮಾನದಂಡಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ ಎಂಬುದನ್ನು ಪರಿಶೀಲಿಸಬೇಕು. ಬರೀ ಬಡ್ಡಿ ದರ ಅಷ್ಟೇ ಅಲ್ಲ, ಪ್ರೊಸೆಸಿಂಗ್ ಶುಲ್ಕ, ಪ್ರೀ ಪೇಮೆಂಟ್ ಶುಲ್ಕ ಮತ್ತಿತರ ನಿಬಂಧನೆ, ನಿಯಮಗಳನ್ನು ತಿಳಿದುಕೊಂಡು, ಆ ನಂತರವೇ ಮುಂದುವರಿಯಬೇಕು.
ಮರುಪಾವತಿ ಸಾಮರ್ಥ್ಯ ನೀವೇ ನಿರ್ಧರಿಸಿಕೊಳ್ಳಿ
ಸಾಲ ನೀಡುವ ಸಂಸ್ಥೆಗಳು ಈಗ ಪಡೆಯುವ ಸಾಲಕ್ಕೆ ನಿಮ್ಮ ಮರುಪಾವತಿ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಮಾತ್ರ ಗಮನಿಸುತ್ತವೆ. ಅಂದರೆ ಈಗಾಗಲೇ ಪಡೆದಿರುವ ಸಾಲ ಹಾಗೂ ಹೊಸದಾಗಿ ಪಡೆಯಲಿರುವ ಸಾಲ ಎರಡಕ್ಕೂ ಇಎಂಐ ಅನ್ನು ಒಟ್ಟು ಸಂಬಳದ 50ರಿಂದ 60 ಪರ್ಸೆಂಟ್ ಮೊತ್ತದಲ್ಲಿ ಕಟ್ಟಿಕೊಂಡು ಹೋಗಲು ಸಾಧ್ಯವೇ ಎಂಬುದನ್ನು ಮಾತ್ರ ನೋಡುತ್ತವೆ. ಆದ್ದರಿಂದ ಯಾರಿಗೆ ದೊಡ್ಡ ಮೊತ್ತದ ಇಎಂಐ ಕಟ್ಟಲು ಸಾಧ್ಯವಿಲ್ಲವೋ ಅಂಥವರು ದೀರ್ಘಾವಧಿ ಸಾಲ ಪಡೆಯುವುದು ಉತ್ತಮ. ಇದರಿಂದ ಬಡ್ಡಿ ಹೆಚ್ಚಿಗೆ ಕಟ್ಟಿದಂತೆ ಆಗುತ್ತದೆ. ಆದ್ದರಿಂದ ಯಾವಾಗೆಲ್ಲ ಕೈಯಲ್ಲಿ ಹಣ ಇರುತ್ತದೋ ಆಗ ಪೂರ್ವಪಾವತಿ ಮಾಡುವುದು ಉತ್ತಮ.
ಪರ್ಯಾಯ ಮಾರ್ಗಗಳನ್ನು ಸಹ ಯೋಚಿಸಿ
ಪರ್ಸನಲ್ ಲೋನ್ ಬಡ್ಡಿ ದರ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಆದ್ದರಿಂದ ಸೆಕ್ಯೂರ್ಡ್ ಲೋನ್ ಗಳಾದ ಗೃಹ ಸಾಲದ ಮೇಲಿನ ಟಾಪ್ ಅಪ್, ಸೆಕ್ಯೂರಿಟೀಸ್ ಗಳ ಮೇಲೆ ಸಾಲ, ಆಸ್ತಿ ಅಥವಾ ಎಫ್.ಡಿ. ಮೇಲೆ ಸಾಲ ಪಡೆಯುವ ಬಗ್ಗೆ ಕೂಡ ಯೋಚಿಸಬಹುದು. ಸಾಮಾನ್ಯವಾಗಿ ಈ ಸಾಲಗಳ ಮೇಲೆ ಬಡ್ಡಿ ದರ ಕಡಿಮೆ ಇರುತ್ತದೆ. ಸಾಲ ಪಡೆಯುವವರು ತಮ್ಮ ಮುಂದಿರುವ ಪರ್ಯಾಯ ಆಯ್ಕೆಯನ್ನು ಗಂಭೀರವಾಗಿ ಅಳೆದು- ತೂಗಿ ನೋಡಬೇಕು.


Click it and Unblock the Notifications