ಬೆಂಗಳೂರು 2023 ರಲ್ಲಿ 10 ವರ್ಷಗಳಲ್ಲಿ ಮೊದಲ ಬಾರಿಗೆ ಅತೀ ಅಧಿಕ ಉಷ್ಣತೆಯನ್ನು ಹೊಂದಿರುವ ಡಿಸೆಂಬರ್ ತಿಂಗಳನ್ನು ಕಂಡಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಯ ಮಾಹಿತಿಯ ಪ್ರಕಾರ, ಡಿಸೆಂಬರ್ 2023 ರಲ್ಲಿ ನಗರವು ಸರಾಸರಿ 23.15 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಒಂದು ದಶಕದ ಹಿಂದೆ, 2013 ರಲ್ಲಿ, ತಿಂಗಳ ಸರಾಸರಿ ತಾಪಮಾನ ಸುಮಾರು 22 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಬೆಳಗಿನ ಉಷ್ಣತೆಯು 27 ಡಿಗ್ರಿ ಸೆಲ್ಸಿಯಸ್ ಸಮೀಪದಲ್ಲಿಯೇ ಇದ್ದಾಗ, ರಾತ್ರಿಯ ತಾಪಮಾನವು ಸುಮಾರು ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಿದೆ. ಡಿಸೆಂಬರ್ 2013 ರಲ್ಲಿ 15.9 ಡಿಗ್ರಿ ಸೆಲ್ಸಿಯಸ್ ಇದ್ದು, ಡಿಸೆಂಬರ್ 2023 ರಲ್ಲಿ 18.6 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.

ಎಲ್ ನಿನೋ ಪರಿಣಾಮವೇ ಈ ಏರಿಕೆಗೆ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ. "ಬೆಳಿಗ್ಗೆ ತಾಪಮಾನವು ಹೆಚ್ಚು ಅಥವಾ ಕಡಿಮೆ ಸರಾಸರಿಗೆ ಹತ್ತಿರದಲ್ಲಿದೆ. ಆದರೆ ರಾತ್ರಿಯ ಉಷ್ಣತೆಯು ಸರಾಸರಿ ತಾಪಮಾನ ಏರಿಕೆಗೆ ಕಾರಣವಾಗಿದೆ. ಇದು ಎಲ್ ನಿನೊ ಪರಿಣಾಮದಿಂದಾಗಿರಬಹುದು ಎಂದು ನಾವು ಊಹಿಸುತ್ತೇವೆ," ಎಂದು ಐಎಂಡಿಯ (ಬೆಂಗಳೂರು) ಹಿರಿಯ ವಿಜ್ಞಾನಿ ಎ ಪ್ರಸಾದ್ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದರು.
ಏನಿದು ಎಲ್ ನಿನೊ, ನಿಮಗೆ ತಿಳಿದಿದೆಯೇ?
ಎಲ್ ನಿನೊ ಒಂದು ಹವಾಮಾನ ವಿದ್ಯಮಾನವಾಗಿದ್ದು, ಈ ಸಮಯದಲ್ಲಿ ಮಧ್ಯ ಮತ್ತು ಪೂರ್ವ ಸಮಭಾಜಕ ಪೆಸಿಫಿಕ್ ಸಾಗರದಲ್ಲಿನ ತಾಪಮಾನವು ಹೆಚ್ಚಾಗುತ್ತದೆ. ಎಲ್ ನಿನೊವು ಪಶ್ಚಿಮ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿನ ಬಿಸಿ ನೀರು ಭೂಮಧ್ಯರೇಖೆಯ ಉದ್ದಕ್ಕೆ ದಕ್ಷಿಣ ಅಮೇರಿಕಾದ ಕರಾವಳಿಯತ್ತ ಪೂರ್ವದ ಕಡೆಗೆ ಸ್ಥಳಾಂತರವಾದಾಗ ಆರಂಭವಾಗುತ್ತದೆ. ಸಾಮಾನ್ಯವಾಗಿ, ಈ ಬಿಸಿ ನೀರು ಇಂಡೊನೇಷ್ಯಾ ಹಾಗೂ ಫಿಲಿಪೀನ್ಸ್‌ನ ಹತ್ತಿರ ಒಟ್ಟು ಸೇರುತ್ತದೆ.
ಎಲ್ ನಿನೊ ಪ್ರತಿ ಮೂರರಿಂದ ಐದು ವರ್ಷಗಳಿಗೊಮ್ಮೆ ಸಂಭವಿಸುತ್ತವೆ. ಆದರೆ ಪ್ರತಿ ಎರಡು ವರ್ಷದಲ್ಲಿಯೂ ಆಗಬಹುದು ಅಥವಾ ಪ್ರತಿ ಏಳು ವರ್ಷಕ್ಕೊಮ್ಮೆಯಾದರೂ ಆಗಬಹುದು. ಪ್ರತಿ ಬಾರಿ ಆರಂಭವಾದ ಬಳಿಕ ಒಂಭತ್ತರಿಂದ 12 ತಿಂಗಳು ಇರುತ್ತದೆ.
ತಾಪಮಾನ ಏರಿಕೆ, ಮಳೆ ಇಳಿಕೆ
ಎಲ್ ನಿನೊ ಕಾರಣದಿಂದಾಗಿ ಬೆಂಗಳೂರಿನಲ್ಲಿ ಚಳಿಗಾಲದಲ್ಲಿ ತಾಪಮಾನ ಏರಿಕೆಯಾಗಿದ್ದರೂ, ಮಾನ್ಸೂನ್ ಕೂಡ ಕೆಟ್ಟ ಸ್ಥಿತಿಯಲ್ಲಿದೆ. 2023 ರಲ್ಲಿ ಕೇವಲ 1020.2 ಮಿಮೀ ಮಳೆಯೊಂದಿಗೆ, ಬೆಂಗಳೂರು ಮೂರು ವರ್ಷಗಳಲ್ಲಿ ಕಡಿಮೆ ವಾರ್ಷಿಕ ಮಳೆಯನ್ನು ದಾಖಲಿಸಿದೆ.
ಜೂನ್ ಮತ್ತು ಸೆಪ್ಟೆಂಬರ್ ನಡುವೆ (ನೈಋತ್ಯ ಮಾನ್ಸೂನ್) 474.6 ಮಿಮೀ ಮಳೆ ದಾಖಲಾಗಿದ್ದರೆ, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ (ಈಶಾನ್ಯ ಮಾನ್ಸೂನ್) 202.9 ಮಿಮೀ ಮಳೆ ದಾಖಲಾಗಿದೆ. ಇಡೀ ವರ್ಷ, ನಗರವು ಕೇವಲ 54 ಮಳೆಯ ದಿನಗಳನ್ನು ಹೊಂದಿತ್ತು.
ಈ ನಡುವೆ "ಲಾ ನಿನಾ ಮತ್ತು ಎಲ್ ನಿನೋ ಪ್ರಪಂಚದಾದ್ಯಂತದ ಹವಾಮಾನ ಮಾದರಿಗಳ ಮೇಲೆ ಪ್ರಭಾವ ಬೀರುವಂತೆ ತೋರುತ್ತಿದೆ. ಏರುತ್ತಿರುವ ತಾಪಮಾನವು ಹವಾಮಾನ ಬದಲಾವಣೆಯ ಸೂಚನೆಯಾಗಿದ್ದರೂ, ಈ ಪ್ರದೇಶದಲ್ಲಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ," ಎಂದು ಮತ್ತೋರ್ವ ಹಿರಿಯ ಸಂಶೋಧಕರು ಡಿಎಚ್‌ಗೆ ತಿಳಿಸಿದ್ದಾರೆ.
ಜನವರಿ ಮತ್ತು ಫೆಬ್ರವರಿವರೆಗೆ ಬೆಚ್ಚಗಿನ ತಾಪಮಾನವು ಮುಂದುವರಿಯಬಹುದು ಎಂದು ಐಎಂಡಿ ಭವಿಷ್ಯ ನುಡಿದಿದೆ. ತಾಪಮಾನವು, ವಿಶೇಷವಾಗಿ ಸಂಜೆಯ ಸಮಯದಲ್ಲಿ, ಸಾಮಾನ್ಯಕ್ಕಿಂತ ಕನಿಷ್ಠ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚು ಎಂದು ನಿರೀಕ್ಷಿಸಲಾಗಿದೆ. ಇನ್ನು ರಾಜ್ಯದ ಕೆಲವು ಭಾಗಗಳಲ್ಲಿ ಬರಗಾಲ ಕಾಡುತ್ತಿದೆ. ರೈತರು ಕಂಗೆಟ್ಟಿದ್ದಾರೆ.


Click it and Unblock the Notifications