ಈ ಹೊಸ ವರ್ಷದ ಎರಡನೇ ತಿಂಗಳಾದ ಫೆಬ್ರವರಿಯಲ್ಲಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳಿಗೆ ಹಲವಾರು ದಿನಗಳ ಕಾಲ ರಜೆಗಳು ಇದ್ದವು. ಮುಂದಿನ ನಾಲ್ಕನೇ ಶನಿವಾರ ಹಾಗೂ ಭಾನುವಾರ ಬ್ಯಾಂಕುಗಳಿಗೆ ವಾರದ ರಜೆಗಳು ಇರಲಿದೆ. ಈ ನಡುವೆ ಫೆಬ್ರವರಿ 23 (ನಾಳೆ) ಹಾಗೂ 24ರಂದು ಬ್ಯಾಂಕ್ ಮುಷ್ಕರದ ಹಿನ್ನೆಲೆ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಫೆಬ್ರವರಿ 23 ಮತ್ತು 24, 2022 ರಂದು ಬ್ಯಾಂಕ್ ಯೂನಿಯನ್‌ಗಳು ರಾಷ್ಟ್ರವ್ಯಾಪಿ ಮುಷ್ಕರವನ್ನು ಆಚರಿಸುವುದರಿಂದ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದನ್ನು ವಿರೋಧ ಮಾಡಿ ಪ್ರತಿಭಟನಾ ಮುಷ್ಕರ ನಡೆಸಲು ಬ್ಯಾಂಕ್ ಯೂನಿಯನ್ ಮುಂದಾಗಿದೆ.
ಇನ್ನು ಫೆಬ್ರವರಿ 23 ಮತ್ತು 24 ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಜೊತೆಗೆ ಬಳಿಕ 26 ಹಾಗೂ 27 ರಂದು ಕೂಡಾ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ನಿಟ್ಟಿನಲ್ಲಿ ಯಾವುದೇ ಬ್ಯಾಂಕ್ ವಹಿವಾಟು ಇದ್ದರೂ ನೀವಿನ್ನು ಶುಕ್ರವಾರಕ್ಕೆ ಮುಂದೂಡಬೇಕಾಗಬಹುದು.

ಈ ಹಿಂದೆಯೂ ನಡೆದಿತ್ತು ಎರಡು ದಿನಗಳ ಮುಷ್ಕರ
ಈ ಹಿಂದೆಯೂ ಸಹ ಖಾಸಗೀಕರಣ ಮಸೂದೆಯನ್ನು ವಿರೋಧಿಸಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಡಿಸೆಂಬರ್ 16 ಮತ್ತು ಡಿಸೆಂಬರ್ 17 ರಂದು ಮುಷ್ಕರವನ್ನು ನಡೆಸಿದ್ದವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾದಲ್ಲಿ ಸೇವೆಗಳ ಮೇಲೆ ಪರಿಣಾಮ ಬೀರಿತ್ತು.
ಇನ್ನು ಈ ಮುಷ್ಕರವೂ ಕೂಡಾ ಬ್ಯಾಂಕ್ ಮುಷ್ಕರವು ಚೆಕ್ ಕ್ಲಿಯರೆನ್ಸ್, ಫಂಡ್ ವರ್ಗಾವಣೆ, ಡೆಬಿಟ್ ಕಾರ್ಡ್ ಸಂಬಂಧಿತ ಸೇವೆಗಳು ಇತ್ಯಾದಿ ಸೇರಿದಂತೆ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇದೆ. ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಇತರ ಬ್ಯಾಂಕ್ ಒಕ್ಕೂಟಗಳು ಬ್ಯಾಂಕ್ ಮುಷ್ಕರವನ್ನು ಆಚರಿಸಲು ನಿರ್ಧಾರ ಮಾಡಿದೆ ಎಂದು ವರದಿಗಳು ಉಲ್ಲೇಖ ಮಾಡಿದೆ. ಮುಷ್ಕರದಲ್ಲಿ ಎನ್‌ಸಿಆರ್‌ನ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ರಾಷ್ಟ್ರವ್ಯಾಪಿ ಹಲವಾರು ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ಯಾಂಕ್ ಒಕ್ಕೂಟ ಹೇಳಿದೆ.
ಮುಷ್ಕರದಿಂದಾಗಿ ಚೆಕ್‌ನ ವಹಿವಾಟಿಗೂ ಬಿದ್ದಿತ್ತು ಪೆಟ್ಟು
ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣವನ್ನು ವಿರೋಧ ಮಾಡಿ ಬ್ಯಾಂಕ್ ನೌಕರರ ಸಂಘವು ಎರಡು ದಿನಗಳ ಮುಷ್ಕರವನ್ನು ನಡೆಸುತ್ತಿದೆ. ಈ ಹಿನ್ನೆಲೆಯಿಂದಾಗಿ ಹಲವಾರು ಬ್ಯಾಂಕ್ ವಹಿವಾಟಿನಲ್ಲಿ ವ್ಯತ್ಯಯ ಉಂಟಾಗಿದೆ. ಬ್ಯಾಂಕಿನಲ್ಲಿ ಚೆಕ್‌ನ ವಹಿವಾಟಿಗೂ ಈ ಮುಷ್ಕರದಿಂದಾಗಿ ಪೆಟ್ಟು ಬಿದ್ದಿದೆ ಎಂದು ಎಐಬಿಇಎ ಹೇಳಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ, ಸಿ ಎಚ್ ವೆಂಕಟಚಲಂ, "ಬ್ಯಾಂಕ್ ನೌಕರರು ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದರ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇದರಿಂದಾಗಿ ಬಹಳಷ್ಟು ತೊಂದರೆ ಉಂಟಾಗಿದೆ. ಈ ಎರಡು ದಿನಗಳ ಮುಷ್ಕರದ ಸಂದರ್ಭದಲ್ಲಿ ಈವರೆಗೆ 37,000 ಕೋಟಿ ರೂಪಾಯಿ ಮೌಲ್ಯದ ಚೆಕ್ ವಹಿವಾಟಿಗೆ ಅಡೆತಡೆ ಉಂಟಾಗಿದೆ," ಎಂದು ತಿಳಿಸಿದ್ದಾರೆ.
ಇನ್ನು ಯಾವ ಚೆಕ್ ಕ್ಲಿಯರೆನ್ಸ್ ಸೆಂಟರ್‌ಗಳಲ್ಲಿ ಎಷ್ಟು ಚೆಕ್‌ಗಳು ಬಾಕಿ ಉಳಿದಿದೆ ಎಂಬ ಬಗ್ಗೆಯೂ ಸಿ ಎಚ್ ವೆಂಕಟಾಚಲಂ ವಿವರಣೆ ನೀಡಿದ್ದಾರೆ. "ಚೆನ್ನೈನಲ್ಲಿ 10,600 ಕೋಟಿ ರೂಪಾಯಿ ಮೌಲ್ಯದ ಚೆಕ್, ಅಂದರೆ ಸುಮಾರು 10 ಲಕ್ಷ ಚೆಕ್, ಮುಂಬೈನಲ್ಲಿ 15,400 ಕೋಟಿ ಮೌಲ್ಯದ 18 ಲಕ್ಷ ಚೆಕ್, ದೆಹಲಿಯಲ್ಲಿ 11,000 ಕೋಟಿ ಮೌಲ್ಯದ 11 ಲಕ್ಷ ಚೆಕ್ ಕ್ಲಿಯರೆನ್ಸ್ ಪ್ರಕ್ರಿಯೆ ಪೂರ್ಣಗೊಳ್ಳದೆ ಬಾಕಿ ಉಳಿದಿದೆ," ಎಂದು ಸಿ ಎಚ್ ವೆಂಕಟಾಚಲಂ ತಿಳಿಸಿದ್ದಾರೆ.


Click it and Unblock the Notifications