ಪಿಂಚಣಿ ಮತ್ತು ವಾರಕ್ಕೆ ಐದು ದಿನಗಳ ಕೆಲಸದ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರು ಜೂನ್ 27 ರಂದು ಮುಷ್ಕರ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‌ಬಿಯು) ಈ ಮುಷ್ಕರವನ್ನು ಮುನ್ನಡೆಸುತ್ತಿದೆ. ಯುಎಫ್‌ಬಿಯು ಒಟ್ಟು ಒಂಬತ್ತು ಬ್ಯಾಂಕ್ ಒಕ್ಕೂಟಗಳನ್ನು ಒಳಗೊಂಡಿದೆ.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ (ಎನ್ಒಬಿಡಬ್ಲ್ಯೂ) ಈ ಮಷ್ಕರವನ್ನು ನಡೆಸುತ್ತಿದೆ.
ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿದ ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮನ್ಯ ದತ್ತಾ, "ಸರ್ಕಾರವು ನಮ್ಮ ಬೇಡಿಕೆಯನ್ನು ಒಪ್ಪದಿದ್ದರೆ, ಈ ಮುಷ್ಕರದಲ್ಲಿ ಸುಮಾರು ಏಳು ಲಕ್ಷ ಉದ್ಯೋಗಿಗಳು ಭಾಗಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ," ಎಂದು ತಿಳಿಸಿದ್ದಾರೆ.

ಈ ತಿಂಗಳಿನಲ್ಲಿ ಒಟ್ಟು 8 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ಯಾಲೆಂಡರ್ ಪ್ರಕಾರ, ಜೂನ್‌ನಲ್ಲಿ ಬ್ಯಾಂಕ್ ರಜೆಯು ಎರಡು ಇದೆ. ಉಳಿದವುಗಳು ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರವಾಗಿದೆ. ಇದನ್ನು ಹೊರತುಪಡಿಸಿ ಜೂನ್ 27ರಂದು ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಈ ಮುಷ್ಕರವನ್ನು ಮಾಡುತ್ತಿರುವ ನೌಕರರ ಬೇಡಿಕೆಯೇನು?
ಎಲ್ಲಾ ಪಿಂಚಣಿದಾರರಿಗೆ ಪಿಂಚಣಿ ನವೀಕರಣ ಮಾಡುವುದು, ಪರಿಷ್ಕರಣೆ ಮಾಡುವುದು, ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತೆಗೆದುಹಾಕುವುದು, ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವುದು ನೌಕರರ ಬೇಡಿಕೆಯಾಗಿದೆ ಎಂದು ಯುಎಫ್‌ಬಿಯು ಸಭೆಯ ನಂತರ ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಹೇಳಿದರು.
ಬ್ಯಾಂಕ್‌ಗಳಲ್ಲಿ 5 ದಿನಗಳ ವಾರದ ಅವಧಿಯನ್ನು ಜಾರಿಗೆ ತರಬೇಕು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಒತ್ತಾಯಿಸಿದೆ. ಬ್ಯಾಂಕ್‌ಗಳು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬೇಕು. ಉಳಿದ ದಿನಗಳು ರಜಾ ದಿನವಾಗಿರಬೇಕು ಎಂಬ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಖಾಸಗಿ ವಲಯದ ಬಹುತೇಕ ದೊಡ್ಡ ಕಂಪನಿಗಳಲ್ಲಿ ಈ ನಿಯಮ ಅನ್ವಯವಾಗಲಿದೆ.
ಸೋಮವಾರ (ಜೂನ್ 27) ಮುಷ್ಕರ ನಡೆಯುವ ಕಾರಣದಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್ ಬಂದ್ ಆಗುವ ಸಾಧ್ಯತೆ ಇದೆ. ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜೂನ್ 25 ಮತ್ತು ಜೂನ್ 26 ರಂದು ಶನಿವಾರ ಮತ್ತು ಭಾನುವಾರ ಬ್ಯಾಂಕ್ ರಜೆ ಇರುತ್ತದೆ. ಬ್ಯಾಂಕ್‌ಗಳು ಸತತ ಮೂರು ದಿನಗಳವರೆಗೆ ಮುಚ್ಚಲಿದೆ. ಇದರಿಂದಾಗಿ ಗ್ರಾಹಕರ ಮೇಲೆ ಪರಿಣಾಮ ಬೀರಬಹುದು.


Click it and Unblock the Notifications