ಬಿಟ್‌ಕಾಯಿನ್ ಅಥವಾ ಎಥೆರಿಯಮ್ ಬಗ್ಗೆ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಮಹತ್ವದ ಹೇಳಿಕೆ ನೀಡಿದ್ದಾರೆ. "ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳು ಕಾನೂನುಬದ್ಧ ಅಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿದ ಡಿಜಿಟಲ್ ರೂಪಾಯಿ ಮಾತ್ರ ಕಾನೂನುಬದ್ಧ ಆಗಿದೆ," ಎಂದು ತಿಳಿಸಿದ್ದಾರೆ.
ಈಗಾಗಲೇ ಕ್ರಿಪ್ಟೋಕರೆನ್ಸಿಗಳು ಮತ್ತು ಎನ್‌ಎಫ್‌ಟಿ ಸೇರಿದಂತೆ ಡಿಜಿಟಲ್ ಆಸ್ತಿ ವಹಿವಾಟುಗಳ ಲಾಭದ ಮೇಲೆ ಏಪ್ರಿಲ್ 1 ರಿಂದ ಶೇಕಡಾ 30 ತೆರಿಗೆಯನ್ನು ವಿಧಿಸಲಿದೆ ಎಂದು ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಾಡಲು ಸರ್ಕಾರ ಮುಂದಾದಂತೆ ಕಂಡು ಬಂದಿದೆ. ಈ ನಡುವೆ ಮುಂದಿನ ವರ್ಷದಿಂದ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳು ಕ್ರಿಪ್ಟೋಕರೆನ್ಸಿಗಳಿಂದ ಪಡೆದ ಆದಾಯದ ವಿವರಕ್ಕಾಗಿ ಪ್ರತ್ಯೇಕ ಕಾಲಮ್ ಅನ್ನು ಹೊಂದಿರುತ್ತವೆ ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. ಈಗ ಹಣಕಾಸು ಕಾರ್ಯದರ್ಶಿ ಕ್ರಿಪ್ಟೋಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
"ಆರ್‌ಬಿಐನ ಡಿಜಿಟಲ್ ಕರೆನ್ಸಿಯಲ್ಲಿ ಹಣ ಆರ್‌ಬಿಐದ್ದು ಆಗಿರಲಿದ್ದು, ಸ್ವರೂಪ ಮಾತ್ರ ಡಿಜಿಟಲ್ ಆಗಿರುತ್ತದೆ. ಆರ್‌ಬಿಐ ನೀಡುವ ಡಿಜಿಟಲ್ ರೂಪಾಯಿ ಕಾನೂನುಬದ್ಧ ಆಗಿದೆ. ಆದರೆ ಬೇರೆ ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳು ಕಾನೂನುಬದ್ಧವಲ್ಲ. ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಬೆಂಬಲಿಸುತ್ತದೆ, ಅದು ಎಂದಿಗೂ ತಪ್ಪು ಅಲ್ಲ," ಸ್ಪಷ್ಟಣೆ ನೀಡಿದ್ದಾರೆ.
ಆರ್‌ಬಿಐನ ಡಿಜಿಟಲ್ ಕರೆನ್ಸಿ ಹೇಗಿರಲಿದೆ?
ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಆರ್‌ಬಿಐನ ಡಿಜಿಟಲ್ ರೂಪಾಯಿಗಳ ಬಗ್ಗೆಯೂ ವಿವರಣೆಯನ್ನು ನೀಡಿದ್ದಾರೆ. "ಡಿಜಿಟಲ್ ರೂಪಾಯಿ ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ನಂತೆ ಇರುವುದು ಅಲ್ಲ. ಆರ್‌ಬಿಐನ ಡಿಜಿಟಲ್ ಕರೆನ್ಸಿ ಮೂಲಕ ನೀವು ವ್ಯವಹಾರವನ್ನು ಮಾಡಬಹುದು. ಈ ವ್ಯವಹಾರ ನಿಮ್ಮ ಡಿಜಿಟಲ್ ವ್ಯಾಲೆಟ್‌ಗಳಾದ ಪೇಟಿಎಂ, ಯುಪಿಐ ಮೂಲಕ ನಡೆಸುವಂತಹ ವಹಿವಾಟಿನಂತೆಯೇ ಇರುತ್ತದೆ. ಡಿಜಿಟಲ್ ಸ್ವತ್ತುಗಳು ಡಿಜಿಟಲ್ ರೂಪಾಯಿಯೊಂದಿಗೆ ನಾವು ಐಸ್ ಕ್ರೀಮ್ ಅಥವಾ ಇತರ ವಸ್ತುಗಳನ್ನು ನಮ್ಮ ವ್ಯಾಲೆಟ್ ಬಳಸಿ ಅಥವಾ ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಖರೀದಿ ಮಾಡಬಹುದು. ಡಿಜಿಟಲ್ ರೂಪಾಯಿ ಕಾನೂನುಬದ್ಧ. ನಾವು ಮಾಡುವ ನಗದು ಪಾವತಿಗೆ ಸಮಾನವಾಗಿದೆ," ಎಂದು ಟಿವಿ ಸೋಮನಾಥನ್ ವಿವರಣೆ ನೀಡಿದ್ದಾರೆ.
ಕ್ರಿಪ್ಟೋಕರೆನ್ಸಿ ನಿಯಂತ್ರಣ ಬಂದರೆ ಏನಾಗುತ್ತದೆ?
ಇನ್ನು ದೇಶದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಾಡುವಂತಹ ಕಾನೂನು ಜಾರಿಗೆ ಬಂದರೆ ಏನಾಗಬಹುದು ಎಂಬ ಬಗ್ಗೆಯೂ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ವಿವರಣೆ ನೀಡಿದ್ದಾರೆ. "ದೇಶದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಾಡುವ ಕಾನೂನು ಜಾರಿಗೆ ಬಂದರೆ, ಜನರು ಕ್ರಿಪ್ಟೋಕರೆನ್ಸಿ ಹೂಡಿಕೆ ಮಾಡಬೇಕಾದರೆ ಮೊದಲು ಕೆವೈಸಿ ಮಾಡಿಸಿಕೊಳ್ಳಬೇಕಾಗಬಹುದು. ಹಾಗೆಯೇ ಕ್ರಿಪ್ಟೋಕರೆನ್ಸಿ ಮಾರಾಟಗಾರರು ಪರವಾನಗಿಯನ್ನು ಪಡೆಯಬೇಕಾಗಬಹುದು. ಏನೇ ಆದರೂ ಈ ಬಗ್ಗೆ ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಿಯೇ ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಹಾಗೆಯೇ ಬೇರೆ ಬೇರೆ ದೇಶಗಳಲ್ಲಿ ಕ್ರಿಪ್ಟೋ ಸ್ಥಿತಿಗತಿ ಹೇಗಿದೆ ಎಂದು ನೋಡಿಕೊಂಡು ನಿರ್ಧಾರಕೈಗೊಳ್ಳುತ್ತೇವೆ," ಎಂದು ಹೇಳಿದ್ದಾರೆ.
ನಷ್ಟವಾದರೆ ಸರ್ಕಾರ ಹೊಣೆ ಹೊರದು
"ನೀವು ಚಿನ್ನ, ವಜ್ರ ಮತ್ತು ಕ್ರಿಪ್ಟೋ ಆಸ್ತಿಗಳನ್ನು ಖರೀದಿ ಮಾಡಬಹುದು. ಆದರೆ ಆ ಮೌಲ್ಯಕ್ಕೆ ಸರ್ಕಾರದಿಂದ ಯಾವುದೇ ಅಧಿಕೃತವಾದ ಮೌಲ್ಯವಿಲ್ಲ. ನೀವು ಖಾಸಗಿ ಕ್ರಿಪ್ಟೋಗಳ ಮೇಲೆ ಹೂಡಿಕೆ ಮಾಡಬಹುದು. ಅದು ನಿಮಗೆ ಬಿಟ್ಟ ವಿಚಾರ. ಆದರೆ ಖಾಸಗಿ ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವಾಗ ಅದು ಸರ್ಕಾರದ ಅಧೀನದಲ್ಲಿ ಬರುವುದಿಲ್ಲ ಎಂಬುವುದು ನೀವು ನೆನಪಿನಲ್ಲಿ ಇಟ್ಟಿಕೊಳ್ಳಬೇಕು. ಹೂಡಿಕೆ ಮಾಡಿ ಅದರಲ್ಲಿ ಹಣ ಬರುತ್ತದೋ, ನಷ್ಟವಾಗುತ್ತದರೋ ಎಂಬ ಯಾವುದೇ ಖಚಿತತೆ ಇರಲ್ಲ. ಅದು ಬಹಳ ಅಪಾಯದ ಹೂಡಿಕೆ. ಒಂದು ವೇಳೆ ನೀವು ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳಲ್ಲಿ ಹಣವನ್ನು ಕಳೆದುಕೊಂಡರೆ ಅದಕ್ಕೆ ಸರ್ಕಾರ ಹೊಣೆಯಾಗುವುದಿಲ್ಲ. ಅದು ನಿಮ್ಮ ಜವಾಬ್ದಾರಿ," ಎಂದು ಹೂಡಿಕೆದಾರರಿಗೆ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಎಚ್ಚರಿಸಿದ್ದಾರೆ.
ಕಾನೂನುಬದ್ಧ ಎಂದ ಕಾನೂನುಬಾಹಿರವಲ್ಲ
ಇನ್ನು ಕಾನೂನುಬದ್ಧ ಎಂದರೆ ಕಾನೂನುಬಾಹಿರ ಎಂದು ಅರ್ಥವಲ್ಲ ಎಂದು ಕೂಡಾ ಈ ಸಂದರ್ಭದಲ್ಲೇ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಸ್ಪಷ್ಟಪಡಿಸಿದ್ದಾರೆ. "ಕಾನೂನುಬದ್ಧವಲ್ಲದ ವಿಷಯಗಳು ಕಾನೂನುಬಾಹಿರ ಎಂದು ಅರ್ಥವಲ್ಲ. ನಾನು ಬಿಟ್‌ಕಾಯಿನ್ ಅಥವಾ ಎಥೆರಿಯಮ್ ಕಾನೂನುಬಾಹಿರ ಎಂದು ಹೇಳುತ್ತಿಲ್ಲ. ಆದರೆ ಅದು ಕಾನೂನುಬದ್ಧವಲ್ಲ ಎಂದು ಮಾತ್ರ ಹೇಳುತ್ತಿದ್ದೇನೆ. ಕ್ರಿಪ್ಟೋಕರೆನ್ಸಿಗೆ ನಿಯಂತ್ರಣ ಬಂದರೆ ಆಗಲೂ ನಾನು ಇದ್ದನ್ನೇ ಹೇಳುತ್ತೇನೆ. ಬಿಟ್‌ಕಾಯಿನ್ ಅಥವಾ ಎಥೆರಿಯಮ್ ಕಾನೂನುಬದ್ಧವಲ್ಲ," ಎಂದು ಸ್ಪಷ್ಟಣೆ ನೀಡಿದರು.


Click it and Unblock the Notifications