ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಹೊಸ ಹವಾನಿಯಂತ್ರಿತ ಬಸ್ ಮಾರ್ಗಗಳನ್ನು ಪರಿಚಯಿಸಿದೆ. ಈಗ ಬೆಂಗಳೂರಿನಲ್ಲಿ ಶೀಘ್ರವೇ 100 ಬಿಎಂಟಿಸಿ ಇ ಬಸ್‌ಗಳು ಆರಂಭವಾಗಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಕೇಂದ್ರ ಸರಕಾರದ 'ಫೇಮ್-2' ಯೋಜನೆಯಡಿ ಬಿಎಂಟಿಸಿಯು ಗುತ್ತಿಗೆ ಆಧಾರದ ಮೇಲೆ ಖರೀದಿಸುತ್ತಿರುವ ಹವಾನಿಯಂತ್ರಣ ರಹಿತ 921 ವಿದ್ಯುತ್ ಚಾಲಿತ ಬಸ್‌ಗಳ ಪೈಕಿ, ಮೊದಲ ಹಂತದಲ್ಲಿ 100 ಬಸ್‌ಗಳು ಸಂಸ್ಥೆಗೆ ಲಭ್ಯವಾಗುತ್ತಿದೆ. ಈ ಬಸ್‌ಗಳಿಗೆ ಡಿಸೆಂಬರ್ 26 ರಂದು ಚಾಲನೆ ನೀಡಲಾಗುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಸೌಧದ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 100 ಎಲೆಕ್ಟ್ರಿಕ್ ಬಸ್‌ಗಳಿಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...
ಮೂರು ಹೊಸ ಬಸ್ ಮಾರ್ಗ
328-ಎಚ್‌ಎಫ್: ವರ್ತೂರು ಕೋಡಿಯಿಂದ ಬೂದಿಗೆರೆ ಕ್ರಾಸ್ ಮೂಲಕ ವೈಟ್‌ಫೀಲ್ಡ್ ಅಂಚೆ ಕಚೇರಿ, ಕಾಡುಗೋಡಿ ಮತ್ತು ಸೀಗೇಹಳ್ಳಿಗೆ ಹೊಸ ಬಸ್ ಮಾರ್ಗ ಆರಂಭವಾಗಲಿದೆ. ಈ ಮಾರ್ಗದಲ್ಲಿ ನಾಲ್ಕು ಬಸ್‌ಗಳು ಸಂಚರಿಸಲಿವೆ. ವರ್ತೂರು ಕೋಡಿಯಿಂದ ಮೊದಲ ಬಸ್ ಬೆಳಗ್ಗೆ 6.55ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 8.10ಕ್ಕೆ ಹೊರಡಲಿದೆ. ಬೂದಿಗೆರೆ ಕ್ರಾಸ್‌ನಿಂದ ಮೊದಲ ಬಸ್ ಬೆಳಗ್ಗೆ 6.25ಕ್ಕೆ ಹಾಗೂ ಕೊನೆಯ ಬಸ್ ರಾತ್ರಿ 9.10ಕ್ಕೆ ಹೊರಡಲಿದೆ.
328-ಎಚ್: ಬಿಡದಿ ಬಸ್ ನಿಲ್ದಾಣದಿಂದ ಬೈರಮಂಗಲ ಕ್ರಾಸ್, ಅಬ್ಬನಕುಪ್ಪೆ ಮತ್ತು ಕಂಚಗಾರನಹಳ್ಳಿ ಮೂಲಕ ಹಾರೋಹಳ್ಳಿ ಬಸ್ ನಿಲ್ದಾಣಕ್ಕೆ ಈ ಬಸ್ ಸಂಚಾರ ಮಾಡಲಿದೆ. ಈ ಮಾರ್ಗದಲ್ಲಿ ಎರಡು ಬಸ್‌ಗಳು ಸಂಚರಿಸಲಿವೆ. ಬಿಡದಿಯಿಂದ ಮೊದಲ ಬಸ್ ಬೆಳಗ್ಗೆ 6.25ಕ್ಕೆ ಮತ್ತು ಕೊನೆಯದು ರಾತ್ರಿ 9.45ಕ್ಕೆ ಸಂಚಾರ ಮಾಡಲಿದೆ. ಹಾರೋಹಳ್ಳಿಯಿಂದ ಮೊದಲ ಬಸ್ ಬೆಳಗ್ಗೆ 6.20ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 9.45ಕ್ಕೆ ಹೊರಡಲಿದೆ.
60-ಇ/8: ಬೃಂದಾವನ ನಗರದಿಂದ ಕುವೆಂಪು ನಗರಕ್ಕೆ (ಬಿಟಿಎಂ ಲೇಔಟ್) ಚಾಮರಾಜಪೇಟೆ, ಗಾಂಧಿ ಬಜಾರ್ ಮತ್ತು ಜಯನಗರ 4ನೇ ಬ್ಲಾಕ್ ಮೂಲಕ ಈ ಬಸ್ ಸಂಚಾರ ಮಾಡಲಿದೆ. ಈ ಮಾರ್ಗದಲ್ಲಿ ಒಂದು ಬಸ್ ಸಂಚರಿಸಲಿದೆ. ಬೃಂದಾವನ ನಗರದಿಂದ ಮೊದಲ ಸೇವೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.
2024ರಲ್ಲಿ ಒಟ್ಟಾಗಿ 821 ಬಸ್‌ಗಳ ಸೇರ್ಪಡೆ
2024ರ ವರ್ಷಾಂತ್ಯಕ್ಕೆ ಉಳಿದ 821 ಬಸ್‌ಗಳು ಸೇರಲಿದೆ. ಈ ಎಲ್ಲ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ 12 ವರ್ಷಗಳ ಅವಧಿಗೆ ಪಡೆಯಲಾಗುತ್ತಿದೆ. ಸಂಸ್ಥೆಯು ಈಗಾಗಲೇ 390 ಇವಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಟಾಟಾ ಕಂಪನಿಯ 100 ಬಸ್ ಸೇರ್ಪಡೆ ನಂತರ ಆ ಸಂಖ್ಯೆ 490ಕ್ಕೆ ಏರಿಕೆಯಾಗಲಿದೆ.


Click it and Unblock the Notifications