ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ತಿಂಗಳಲ್ಲಿ ರೆಪೋ ದರವನ್ನು ಸತತ ಮೂರನೇ ಬಾರಿಗೆ ಹೆಚ್ಚಳ ಮಾಡಿದೆ. ಈ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರ ಹಾಗೂ ಫಿಕ್ಸೆಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ. ಈಗ ಕೆನರಾ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಶೇಕಡ 0.15ರಷ್ಟು ಅಧಿಕ ಮಾಡಿದೆ. ಇದರಿಂದಾಗಿ ಇಎಂಐ ಹೊರೆಯು ಹೆಚ್ಚಾಗಲಿದೆ.
ನ್ಯೂ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಕೆನರಾ ಬ್ಯಾಂಕ್ ಶೇಕಡ 0.15ರಷ್ಟು ಅಧಿಕ ಮಾಡಿದ್ದು, ಈ ನೂತನ ಬಡ್ಡಿದರವು ಸೆಪ್ಟೆಂಬರ್ 6, ಬುಧವಾರದಿಂದ ಜಾರಿಗೆ ಬಂದಿದೆ.
ಈ ಹಿಂದೆ ಎಂಸಿಎಲ್‌ಆರ್ ಶೇಕಡ 7.65 ಆಗಿತ್ತು, ಶೇಕಡ 0.15ರಷ್ಟು ದರ ಹೆಚ್ಚಳ ಮಾಡಿದ ಬಳಿಕ ಒಂದು ವರ್ಷದ ಅವಧಿಯ ಎಂಸಿಎಲ್ಆರ್ ಶೇಕಡ 7.75ಕ್ಕೆ ಏರಿಕೆಯಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಸಾಲಗಳು ಅಂದರೆ ಆಟೋ, ವೈಯಕ್ತಿಕ, ಗೃಹ ಸಾಲಗಳು ಒಂದು ವರ್ಷದ ಅವಧಿಗೆ ನಿಶ್ಚಿತವಾಗಿರುತ್ತದೆ. ಅದರಲ್ಲಿ ಬದಲಾವಣೆ ಇರುವುದಿಲ್ಲ.

ಕಳೆದ ತಿಂಗಳು ರೆಪೋ ದರ ಹೆಚ್ಚಳ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 5.4ಕ್ಕೆ ತಲುಪಿದೆ. ದೇಶದಲ್ಲಿ ಹಣದುಬ್ಬರವನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಆರ್‌ಬಿಯ ಹಲವು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ.
ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸತತ 10 ಬಾರಿಯೂ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್ ತಿಂಗಳಿನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆ ಬಳಿಕ ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿದೆ.
ಜುಲೈನಲ್ಲಿ ಸಾಲದ ಬಡ್ಡಿದರ ಹೆಚ್ಚಿಸಿದ್ದ ಕೆನರಾಬ್ಯಾಂಕ್
ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಜುಲೈ 7ರಿಂದ ಜಾರಿಗೆ ಬರುವಂತೆ ಕೆನರಾ ಬ್ಯಾಂಕ್ ಎಂಸಿಎಲ್‌ಆರ್ ಹಾಗೂ ರೆಪೊ ಲಿಂಕ್ಡ್ ಲೆಂಡಿಂಗ್ ದರ (RLLR) ಅನ್ನು ಹೆಚ್ಚಳ ಮಾಡಿದೆ. ಒಂದು ರಾತ್ರಿಯಿಂದ ಒಂದು ವರ್ಷದವರೆಗಿನ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ಕೆನರಾ ಬ್ಯಾಂಕ್ ತನ್ನ ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ದರವನ್ನು 50 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಿತ್ತು.


Click it and Unblock the Notifications